Advertisement
ಕೊರೊನಾದ ಪ್ರಸ್ತುತ ಕಾಲಘಟ್ಟದಲ್ಲಂತೂ ಸೋಂಕು ಆತಂಕ ಪತ್ರಿಕಾ ವಿತರಕರ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸಿದೆ. ಲಾಕ್‌ಡೌನ್, ನೈಟ್ ಕಪ್ಯೂì, ಕಂಟೈನ್‌ಮೆಂಟ್ ಝೋನ್, ಸಾಮಾಜಿಕ ಅಂತರ, ಪೊಲೀಸರ ತಪಾಸಣೆ ಹೀಗೆ ಹಲವು ಅಡ್ಡಿ ಆತಂಕ ಗಳ ನಡುವೆಯೂ ತನ್ನ ಸುರಕ್ಷೆಯನ್ನು ಲೆಕ್ಕಿಸದೆ ಇವೆಲ್ಲವನ್ನೂ ನಿಭಾಯಿಸಿಕೊಂಡು ಓದುಗರಿಗೆ ಸುದ್ದಿಪತ್ರಿಕೆಗಳನ್ನು ತಲುಪಿಸುವ ಕಾರ್ಯವನ್ನು ಪತ್ರಿಕಾ ವಿತರಕರು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕಳೆದ 50 ವರ್ಷಗಳಿಂದ ಪತ್ರಿಕೆ ವಿತರಣೆ ಕಾಯಕವನ್ನು ಮಾಡಿಕೊಂಡು ಬಂದಿದ್ದೇನೆ. ಕೆಲವು ಸವಾಲುಗಳು, ಸಮಸ್ಯೆಗಳು ಎದುರಾಗಿವೆ. ಆದರೆ ಕೊರೊನಾ ಅವಧಿಯ ಆರಂಭದ ಒಂದು ವರ್ಷ ಎದುರಿಸಿದ ಪರಿಸ್ಥಿತಿ ನನ್ನ ಪೇಪರ್ ವಿತರಣೆ ವೃತ್ತಿ ಬದುಕಿನಲ್ಲಿ ಅತ್ಯಂತ ಕಠಿನ ಸವಾಲು ಆಗಿತ್ತು. ಆದರೆ ಬೆಳಗ್ಗೆ ಓದುಗರಿಗೆ ಸಮಯಕ್ಕೆ ಸರಿಯಾಗಿ ಸುದ್ದಿಪತ್ರಿಕೆಗಳನ್ನು ತಲುಪಿಸುವ ಬದ್ದತೆಯಲ್ಲಿ ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಕೊಂಡು ಕಾರ್ಯನಿರ್ವಹಿಸಿದ್ದೇನೆ ಎನ್ನುತ್ತಾರೆ ಮಂಗಳೂರಿನ ಹಿರಿಯ ಪತ್ರಿಕಾ ವಿತರಕ ದುರ್ಗೆಶ್ ಚೆಟ್ಟಿಯಾರ್. ಪೇಪರ್ ಮೂಲಕ ಕೊರೊನಾ ಸೋಂಕು ಹರಡುತ್ತದೆ ಎಂಬ ಅಪಪ್ರಚಾರದಿಂದಾಗಿ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಈ ವೇಳೆ ಪೇಪರ್ ವಿತರಕರನ್ನು ಗ್ರಾಹಕರು ಸಂದೇಹ ದೃಷ್ಟಿಯಿಂದ ನೋಡಿದ್ದು ಇದೆ. ಕೆಲವು ಮನೆ, ಫ್ಲಾಟ್‌ಗಳಿಗೆ ನಮ್ಮ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮಾನಸಿಕವಾಗಿ ತುಂಬಾ ನೋವು ಅನುಭವಿಸಿದ ಸಂದರ್ಭಗಳು ಇವೆ. ಇದು ತಪ್ಪು ಮಾಹಿತಿ ಎಂಬುದಾಗಿ ಸುದ್ದಿಮಾಧ್ಯಮಗಳಲ್ಲಿ, ತಜ್ಞರು ಸಾಕಷ್ಟು ವಿವರಣೆಗಳನ್ನು ನೀಡಿದ ಬಳಿಕ ಇದೀಗ ಸಮಸ್ಯೆ ಬಹುತೇಕ ಪರಿಹಾರವಾಗಿದೆ. ಇದಲ್ಲದೆ ಲಾಕ್‌ಡೌನ್ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ ಪೇಪರ್‌ಗಳನ್ನು ಹಾಕಲು ಬಹಳ ಪ್ರಯಾಸ ಪಡಬೇಕಾದ ಸಂದರ್ಭಗಳು ಎದುರಾಗಿತ್ತು ಎನ್ನುತ್ತಾರೆ ಅವರು.
Related Articles
ಪೇಪರ್ ವಿತರಣೆ ಕಾಯಕದಲ್ಲಿ ತೊಡಗಿಸಿ ಕೊಂಡು ಇದೀಗ 33 ವರ್ಷಗಳಾಗುತ್ತಾ ಬಂತು. ಈ ಅವಧಿಯಲ್ಲಿ ಒಂದಷ್ಟು ಜಟಿಲ ಪರಿಸ್ಥಿತಿ ಗಳು ಎದುರಾಗಿದ್ದವು. ಆದರೆ ಕೊರೊನಾ ಇವೆಲ್ಲವನ್ನು ಮೀರಿ ಪತ್ರಿಕೆ ವಿತರಣೆ ಮೇಲೆ ಪರಿಣಾಮಗಳನ್ನುಂಟು ಮಾಡಿತ್ತು ಎನ್ನುತ್ತಾರೆ ಮಂಗಳೂರಿನ ಇನ್ನೋರ್ವ ಹಿರಿಯ ಪತ್ರಿಕಾ ವಿತರಕ, ಕಂಕನಾಡಿಯ ರೇಣುಕಾರಾಜ್ ನ್ಯೂಸ್ ಏಜೆನ್ಸಿಯ ನಾಗರಾಜ ಅವರು.
Advertisement
ಪತ್ರಿಕೆಗಳ ಮೂಲಕ ಕೊರೊನಾ ಹರಡುತ್ತದೆ ಎಂಬ ತಪ್ಪು ಮಾಹಿತಿಗಳು ಹರಿದಾಡಲಾ ರಂಭಿಸಿದ ಪರಿಣಾಮ ವಿತರಣೆ ಹಾಗೂ ಹಣ ಸಂಗ್ರಹದ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಿದ್ದವು. ಈ ಬಗ್ಗೆ ಪತ್ರಿಕೆಗಳು ಸ್ಪಷ್ಟನೆ, ತಜ್ಞರ ಅಭಿಪ್ರಾಯಗಳನ್ನು ಪ್ರಕಟಿಸಿ ಜನರ ಸಂಶಯ ನಿವಾರಣೆ ಮಾಡಿದ್ದು ನಮಗೆ ತುಂಬಾ ಸಹಕಾರಿಯಾಯಿತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಜನಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟುಗಳು ಬಂದ್, ಪೇಪರ್ ಸ್ಟಾಲ್‌ಗಳನ್ನು ತೆರೆಯಲು ನಿರ್ಬಂಧಗಳು ಕೂಡಾ ನಮ್ಮ ಮೇಲೆ ಪರಿಣಾಮ ಬೀರಿತ್ತು. ಆದರೆ ಇವೆಲ್ಲವನ್ನು ನಿಭಾಯಿಸಿಕೊಂಡು ಸವಾಲುಗಳನ್ನು ಮೆಟ್ಟಿನಿಂತು ಪೇಪರ್ ವಿತರಣೆಯ ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎಂದವರು ವಿವರಿಸುತ್ತಾರೆ.
ವೃತ್ತಿ ಬದುಕು ಉತ್ತಮ“ಪತ್ರಿಕೆಗಳನ್ನು ಕಳೆದ 20 ವರ್ಷಗಳಿಂದ ವಿತರಿಸು ತ್ತಿದ್ದೇನೆ. ಇದು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ನಿರಂತರವಾಗಿ ಬೆಳಗ್ಗೆ ಬೇಗ ಏಳಬೇಕಾಗುತ್ತದೆ. ಇಲ್ಲವಾದರೆ ಆಲಸ್ಯ ಕಾಡುತ್ತಿತ್ತು. ನಾವು ಈ ಕೆಲಸ ಮಾಡುವುದರಿಂದ ಪ್ರತ್ಯೇಕ ದೈಹಿಕ ಕಸರತ್ತುಗಳು ಬೇಕಾಗಿಲ್ಲ. ನಮ್ಮ ಜೀವನಕ್ಕೆ ಪತ್ರಿಕಾ ವಿತರಣೆ ವೃತ್ತಿಯಿಂದ ಒಳ್ಳೆಯದಾಗಿದೆ’ ಎನ್ನುತ್ತಾರೆ ಉಡುಪಿಯ ಉದಯವಾಣಿ ಏಜೆಂಟ್ ಆಗಿರುವ ಹರಿಶ್ಚಂದ್ರ ಭಟ್ ಮಾರ್ಪಳ್ಳಿ ಅವರು.