Advertisement
‘ಆಸ್ಟಿಯೊ’ ಎಂದರೆ ಮೂಳೆಗಳಿಗೆ ಸಂಬಂಧಿಸಿದ ಮತ್ತು ʼಪೊರೋಸಿಸ್’ ಎಂದರೆ ರಂಧ್ರಗಳು ಎಂದರ್ಥ. ಹೀಗಾಗಿ ʼಆಸ್ಟಿಯೊಪೊರೋಸಿಸ್’ ಎಂದರೆ ರಂಧ್ರವಿರುವ ಮೂಳೆಗಳು. ನಮ್ಮ ಮೂಳೆಯೊಳಗೆ ಸ್ಪಂಜಿನಂಥ ವಸ್ತುವಿರುತ್ತದೆ. ಈ ಸ್ಪಾಂಜ್ ರಂಧ್ರಗಳನ್ನು ಹೊಂದಿರುತ್ತದೆ, ಇವುಗಳು ದೊಡ್ಡದಾಗಬಹುದು ಅಥವಾ ರಂಧ್ರಗಳ ಸಂಖ್ಯೆಯು ಹೆಚ್ಚಾಗಬಹುದು. ಇದರ ಪರಿಣಾಮಗಿ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚುತ್ತದೆ. ಆಸ್ಟಿಯೊಪೊರೋಸಿಸ್ ಬಾಧಿತರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದಾಗ, ಕಡಿಮೆ ಎತ್ತರದಿಂದ ಬಿದ್ದರೂ ಅಥವಾ ನಿಂತ ಸ್ಥಳದಿಂದ ಜಾರಿದರೂ, ಮೂಳೆ ಮುರಿತಕ್ಕೆ ಒಳಗಾಗುವ ಸಂಭವವಿರುತ್ತದೆ.
Related Articles
ಮೂಳೆಯು ಒಂದು ಜೀವಂತ ಅಂಗಾಂಶವಾಗಿದ್ದು, ಹಳೆಯ ಮೂಳೆಗಳು ಸ್ವತಃ ನಷ್ಟವಾಗಿ ಹೊಸ ಮೂಳೆ ಸ್ವತಃ ಮರುನಿರ್ಮಾಣಗೊಳ್ಳುತ್ತವೆ. ಈ ಪ್ರಕ್ರಿಯೆ ಯೌವನಾವಸ್ಥೆಯಲ್ಲಿ ತ್ವರಿತವಾಗಿ ನಡೆಯುತ್ತದೆ. ಮೂಳೆ ನಷ್ಟವಾಗುವುದಕ್ಕಿಂತ ಶೀಘ್ರವಾಗಿ ಹೊಸ ಮೂಳೆಗಳು ಬೆಳೆಯುತ್ತವೆ. ಆದರೆ ವಯಸ್ಸಾದಂತೆ ಈ ಪ್ರಕ್ರಿಯೆ ನಿಧಾನವಾಗಿ, ಹಳೆಯ ಮೂಳೆ ಅಂಗಾಂಶಗಳ ನಷ್ಟವಾಗುವಿಕೆಗೆ ಹೋಲಿಸಿದರೆ ಹೊಸ ಮೂಳೆಗಳ ರಚನೆಯು ನಿಧಾನಗೊಳ್ಳುತ್ತದೆ. ಹೀಗಾಗಿ ಮೂಳೆ ದ್ರವ್ಯರಾಶಿ ಮತ್ತು ಸಾಂದ್ರತೆ ಕಡಿಮೆಯಾಗಿ ಮೂಳೆಸವಕಳಿ ಉಂಟಾಗುತ್ತದೆ.
Advertisement
ಆಸ್ಟಿಯೊಪೊರೋಸಿಸ್ ಮತ್ತು ದುರ್ಬಲತೆ ಮುರಿತಗಳ ಜಾಗತಿಕ ಪರಿಣಾಮಗಳ ಅಂಕಿಅಂಶಗಳುವಿಶ್ವಾದ್ಯಂತ, ಪ್ರತೀ ಮೂರು ಸೆಕೆಂಡಿಗೆ ಒಬ್ಬ ವ್ಯಕ್ತಿಗೆ ಮೂಳೆಸವಕಳಿಯಿಂದ (Osteoporosis) ಮೂಳೆ ಮುರಿತ ಸಂಭವಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. 50 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಲ್ಲಿ ಒಬ್ಬರು ಮತ್ತು ಐದು ಪುರುಷರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಇದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮೂಳೆಸವಕಳಿಯಿಂದ ಉಂಟಾಗುವ ಮೂಳೆ ಮುರಿತಗಳು ಮಧುಮೇಹ, ಹೃದಯಾಘಾತ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಇತರ ಅನೇಕ ಕಾಯಿಲೆಗಳಿಗಿಂತ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುವಂತೆ ಮಾಡುತ್ತವೆ.
- ಆಸ್ಟಿಯೊಪೊರೋಸಿಸ್: ಜಾಗತಿಕವಾಗಿ ಅಂದಾಜು 500 ದಶಲಕ್ಷ ಪುರುಷರು ಮತ್ತು ಮಹಿಳೆಯರನ್ನು ತೀವ್ರವಾಗಿ ಬಾಧಿಸುತ್ತಿದೆ.
- ಶೇ. 6.4 ಪುರುಷರು ಮತ್ತು ಶೇ. 21.2 ಮಹಿಳೆಯರು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಾರೆ.
- ವಾರ್ಷಿಕ ಸುಮಾರು 37 ದಶಲಕ್ಷ ಜನರಿಗೆ ಮೂಳೆ ಸವಕಳಿಯಿಂದ ಮೂಳೆ ಮುರಿತ ಉಂಟಾಗುತ್ತದೆ.
ಪ್ರತೀ ವರ್ಷ ಲಕ್ಷಾಂತರ ವಯಸ್ಸಾದವರು ಜಾರಿ ಬೀಳುವುದರಿಂದ ಅಪಾಯಕಾರಿ ಸೊಂಟದ ಮೂಳೆ ಮುರಿತವನ್ನು ಅನುಭವಿಸುತ್ತಾರೆ. ಅನೇಕರು ಮಣಿಕಟ್ಟು, ಭುಜ, ಸೊಂಟ ಅಥವಾ ಬೆನ್ನುಮೂಳೆಯ ಮುರಿತಗಳಿಂದಾಗಿ ತೀವ್ರ ನೋವಿನಿಂದ ಬಳಲುತ್ತಾರೆ. ಈ ಎಲ್ಲ ಮೂಳೆ ಮುರಿತಗಳು ಆಕಸ್ಮಿಕವಲ್ಲ; ಇವುಗಳಿಗೆ ಮೂಲ ಕಾರಣ ಮೂಳೆಸವಕಳಿ ಆಗಿರುವ ಸಾಧ್ಯತೆಯಿದೆ.
ಮೂಳೆಸವಕಳಿಗೆ ಸರಿಯಾಗಿ ರೋಗನಿರ್ಣಯ ಮಾಡದೆ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಒದಗಿಸದಿದ್ದರೆ, ಮೂಳೆಸವಕಳಿಯಿಂದ ಒಮ್ಮೆ ಮೂಳೆ ಮುರಿತ ಅನುಭವಿಸಿದ ವ್ಯಕ್ತಿಯು ಭವಿಷ್ಯದಲ್ಲಿ ಮತ್ತೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗುತ್ತದೆ.
- ಒಮ್ಮೆ ಮೂಳೆಸವಕಳಿಯಿಂದ ಮೂಳೆ ಮುರಿತ ಅನುಭವಿಸಿದ ಜನರಲ್ಲಿ ಸರಿಸುಮಾರು ಅರ್ಧದಷ್ಟು ಜನರು ಮತ್ತೂಮ್ಮೆ ಮುರಿತಕ್ಕೆ ಒಳಗಾಗುತ್ತಾರೆ.
- ಮೊದಲನೆಯ ಸಲ ಮೂಳೆ ಮುರಿತ ಉಂಟಾಗುವವರಿಗೆ ಮುಂದೆ ಮತ್ತೆ ಮೂಳೆ ಮುರಿತವಾಗುವ ಅಪಾಯವೂ ಹೆಚ್ಚಿರುತ್ತದೆ.
- ಹೊಸದಾಗಿ ಬೆನ್ನುಮೂಳೆ ಮುರಿತ ಅನುಭವಿಸಿದ ನಾಲ್ಕು ಮಹಿಳೆಯರಲ್ಲಿ ಒಬ್ಬರು ಒಂದು ವರ್ಷದೊಳಗೆ ಮತ್ತೂಮ್ಮೆ ಮೂಳೆ ಮುರಿತವನ್ನು ಅನುಭವಿಸುತ್ತಾರೆ.
- ಸರಿಯಾದ ರೋಗನಿರ್ಣಯ ಮತ್ತು ಮುಂಚಿತ ಚಿಕಿತ್ಸೆಯೊಂದಿಗೆ ಈ ಅಪಾಯವನ್ನು ತಡೆಯಲು ಪ್ರಯತ್ನಿಸಬೇಕು
ಮೂಳೆಸವಕಳಿಯಿಂದ ಉಂಟಾಗುವ ಮುರಿತಗಳ ಪರಿಣಾಮಗಳು ಅತ್ಯಂತ ಗಂಭೀರವಾಗಬಹುದು. ಈ ಮುರಿತಗಳಿಂದಾಗಿ ದೀರ್ಘಕಾಲದ ನೋವು, ನಿಶ್ಚಲತೆ ಮತ್ತು ಅಂಗವೈಕಲ್ಯ ಉಂಟಾಗುವುದರಿಂದ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಬೇರೆಯವರ ಮೇಲೆ ಅವಲಂಬನೆಯು ಹೆಚ್ಚಾಗುತ್ತದೆ. ಮೂಳೆ ಮುರಿತಗಳ ಎಚ್ಚರಿಕೆಯ ಚಿಹ್ನೆಗಳು
ಸೊಂಟದ ಮೂಳೆ ಮುರಿತಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು ಅರ್ಧದಷ್ಟು ರೋಗಿಗಳು ಈ ಹಿಂದೆ ಯಾವುದಾದರೂ ಒಂದು ರೀತಿಯ ಮೂಳೆ ಮುರಿತಕ್ಕೆ ಒಳಗಾಗಿರುತ್ತಾರೆ. ಯಾವಾಗಲೂ ಮೊದಲ ಮುರಿತವು ಎಚ್ಚರಿಕೆಯ ಸಂಕೇತವಾಗಿರುತ್ತದೆ! ಇದನ್ನು ತತ್‌ಕ್ಷಣಕ್ಕೆ ಮೂಳೆ ಸವಕಳಿ ಎಂದು ರೋಗನಿರ್ಣಯ ಮಾಡಿದರೆ ನಿರ್ವಹಣೆ ಮತ್ತು ಚಿಕಿತ್ಸೆ ಸುಲಭವಾಗಿರುತ್ತದೆ. ವಾಸ್ತವವೆಂದರೆ ಬಹುತೇಕ ಸಂದರ್ಭಗಳಲ್ಲಿ ಮೂಳೆಮುರಿತವುಂಟಾದಾಗ, ಅದು ಮೂಳೆಸವಕಳಿಯಿಂದಲೇ ಉಂಟಾಗಿದೆ ಎಂದು ಗುರುತಿಸಲಾಗುವುದಿಲ್ಲ. ಇದರಿಂದ ರೋಗಿಗಳು ಮುಂದೆ ಹೆಚ್ಚಿನ ಅಪಾಯವನ್ನು ಅನುಭವಿಸಬೇಕಾಗುತ್ತದೆ. ಮುರಿತದ ಅಪಾಯವನ್ನು ಶೇ. 30-70ರಷ್ಟು ಕಡಿಮೆ ಮಾಡುವ ಪರಿಣಾಮಕಾರಿ ಔಷಧಗಳಿದ್ದರೂ ಶೇ. 80ಕ್ಕಿಂತ ಹೆಚ್ಚು ಮುರಿತದ ರೋಗಿಗಳು ಮೂಳೆಸವಕಳಿ ತಪಾಸಣೆ ಅಥವಾ ಚಿಕಿತ್ಸೆಗೆ ಒಳಗಾಗಿರುವುದಿಲ್ಲ.
ನೀವು 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷದವರಾಗಿದ್ದರೆ ಮತ್ತು ಈ ಹಿಂದೆ ಮೂಳೆ ಮುರಿತಕ್ಕೆ ಒಳಗಾಗಿದ್ದರೆ ಮೂಳೆ ಖನಿಜ ಸಾಂದ್ರತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದಲ್ಲದೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಎಫ್ಆರ್‌ಎಎಕ್ಸ್ ಕ್ಯಾಲ್ಕುಲೇಟರ್ ಮುಖಾಂತರ ಸ್ವತಃ ನಿಮ್ಮ ಅಪಾಯದ ಮಟ್ಟವನ್ನು ತಿಳಿದುಕೊಳ್ಳಬಹುದು. ನೀವು ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಕಂಡುಬಂದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರನ್ನು ಭೇಟಿ ಮಾಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆಯಬಹುದು. ಅಪಾಯ ಉಂಟು ಮಾಡುವ ಅಂಶಗಳ ಬಗ್ಗೆ ಎಚ್ಚರದಿಂದಿರಿ
ಮೂಳೆಸವಕಳಿ ಮತ್ತು ಅದರಿಂದ ಉಂಟಾಗುವ ಮೂಳೆ ಮುರಿತವನ್ನು ತಡೆಯಲು ಕೆಲವು ಅಪಾಯಕಾರಿ ಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ: ಎತ್ತರದ ನಷ್ಟ: 3 ಸೆಂ.ಮೀ. ಅಥವಾ 1 ಇಂಚು ಎತ್ತರ ಕಡಿಮೆಯಾಗುವುದು. ಬೇಗ ಋತುಬಂಧ: 45 ವರ್ಷಕ್ಕಿಂತ ಮೊದಲು ಋತುಬಂಧಗೊಳ್ಳುವುದು. ದೀರ್ಘಾವಧಿಯ ಗ್ಲುಕೊಕಾರ್ಟಿಕಾಯ್ಡ ಅಥವಾ ಸ್ಟಿರಾಯ್ಡ ಚಿಕಿತ್ಸೆ: ಆಸ್ಟಿಯೊಪೊರೋಸಿಸ್ ಅಪಾಯವು ಸ್ಟಿರಾಯ್ಡಗಳ ಪ್ರಮಾಣ, ತೆಗೆದುಕೊಳ್ಳುವ ಸಮಯ ಮತ್ತು ಇತರ ಅಂಶಗಳೊಂದಿಗೆ ಹೆಚ್ಚಾಗುತ್ತದೆ.
- ಮೂಳೆಸವಕಳಿಯ ಕುಟುಂಬ ಇತಿಹಾಸ: ಕುಟುಂಬದಲ್ಲಿ ಮೂಳೆಸವಕಳಿಯುಂಟಾ ಗುವ ಹಿನ್ನಲೆ ಇದ್ದರೆ ಮುರಿತದ ಅಪಾಯ ಹೆಚ್ಚಾಗಿರುತ್ತದೆ.
- ರುಮಟಾಯ್ಡ್ ಸಂಧಿವಾತ: ಈ ಕಾಯಿಲೆ ಇತರ ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನೂ ಹೆಚ್ಚಿಸುತ್ತದೆ.
- ಪುರುಷರಲ್ಲಿ ಪ್ರಾಥಮಿಕ/ಮಾಧ್ಯಮಿಕ ಹೈಪೊಗೊನಾಡಿಸಮ್: ಪುರುಷರಲ್ಲಿ ಹಾರ್ಮೋನ್ ಸಮತೋಲನದ ಸಮಸ್ಯೆಗಳು.
- ಕಡಿಮೆ ತೂಕ: ಬಾಡಿ ಮಾಸ್ ಇಂಡೆಕ್ಸ್ 19 ಕೆ.ಜಿ. /ಎಂಪಿಗಿಂತ ಕಡಿಮೆ ಇದ್ದರೆ.
- ಜೀವನಶೈಲಿ ಅಂಶಗಳು: ಧೂಮಪಾನ, ಅತಿಯಾದ ಆಲ್ಕೋಹಾಲ್ ಸೇವನೆ, ಕಡಿಮೆ ದೈಹಿಕ ಚಟುವಟಿಕೆ, ಮತ್ತು ಕಡಿಮೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಟ್ಟಗಳು.