ನ್ಯೂಯಾರ್ಕ್: ಎಸ್ತೋನಿಯಾದ ಕಯಾ ಕನೆಪಿ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅರ್ಹತಾ ಸುತ್ತಿನ ಮೂಲಕ ಬಂದು ನ್ಯೂಯಾರ್ಕ್ ರ್ಯಾಕೆಟ್ ಸಮರದ ಅಂತಿಮ ಎಂಟರ ಸುತ್ತು ತಲುಪಿದ ವಿಶ್ವದ ಕೇವಲ 2ನೇ ಆಟಗಾರ್ತಿ ಎಂಬುದು ಕನೆಪಿ ಹೆಗ್ಗಳಿಕೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿವರು 418ರಷ್ಟು ಕೆಳಗಿನ ಸ್ಥಾನದಲ್ಲಿರುವ ಕಯಾ ಕನೆಪಿ ಸೋಮವಾರ ರಾತ್ರಿಯ ಸ್ಪರ್ಧೆಯಲ್ಲಿ ರಶ್ಯದ ಡರಿಯಾ ಕಸತ್ಕಿನಾ ಅವರನ್ನು 6-4, 6-4 ಅಂತರದಿಂದ ಮಣಿಸಿದರು. ಕಸತ್ಕಿನಾ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು.
32ರ ಹರೆಯದ, ಮಾಜಿ ನಂ. 15 ಆಟಗಾರ್ತಿಯಾಗಿರುವ ಕಯಾ ಕನೆಪಿ ಕಾಣುತ್ತಿರುವ 6ನೇ ಕ್ವಾರ್ಟರ್ ಫೈನಲ್ ಇದಾಗಿದೆ. ಯುಎಸ್ ಓಪನ್‌ನಲ್ಲಿ ಎರ ಡನೆಯದು. 2010ರಲ್ಲಿ ಮೊದಲ ಸಲ ಈ ಹಂತ ತಲುಪಿದ್ದರು. ಆದರೆ ಕನೆಪಿ ಈವರೆಗಿನ ಯಾವುದೇ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಕ್ವಾರ್ಟರ್ ಫೈನಲ್ ಗಡಿ ದಾಟಿಲ್ಲ. ಈ ಬಾರಿ ಇನ್ನೊಂದು ಹೆಜ್ಜೆ ಮುಂದಿಡಬೇಕಾದರೆ ಅವರು ಅಮೆರಿಕದ ಮ್ಯಾಡಿಸನ್ ಕೇಯ್ಸ ವಿರುದ್ಧ ಮೇಲುಗೈ ಸಾಧಿಸಬೇಕಿದೆ.
15ನೇ ಶ್ರೇಯಾಂಕದ ಮ್ಯಾಡಿಸನ್ ಕೇಯ್ಸ ಉಕ್ರೇನಿನ 4ನೇ ಶ್ರೇಯಾಂಕಿತ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅವರ ಕ್ವಾರ್ಟರ್ ಫೈನಲ್ ಓಟಕ್ಕೆ ಅಡ್ಡಿಯಾದರು. ಕೇಯ್ಸ ಗೆಲುವಿನ ಅಂತರ 7-6 (7-2), 1-6, 6-4. ಸ್ವಿಟೋಲಿನಾ ಈವರೆಗೆ ಯುಎಸ್ ಓಪನ್‌ನಲ್ಲಿ 8ರ ಸುತ್ತು ಪ್ರವೇಶಿ ಸಿಲ್ಲ. ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ಸ್ವಿಟೋಲಿನಾ ಅವರ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್ ಸಾಧನೆ.
ಪ್ಲಿಸ್ಕೋವಾ-ವಾಂಡೆವೇಗ್ ಅಮೆರಿಕದ 25ರ ಹರೆಯದ ಕೊಕೊ ವಾಂಡೆವೇಗ್ ಕೂಡ ತವರಿನ ಟೆನಿಸ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಮುಟ್ಟಿದರು. ಜೆಕ್ ಆಟಗಾರ್ತಿ ಲೂಸಿ ಸಫರೋವಾ ವಿರುದ್ಧ ವಾಂಡೆವೇಗ್ 6-4, 7-6 (7-2) ಅಂತರದ ಜಯ ಸಾಧಿಸಿದರು. ವಾಂಡೆವೇಗ್ ಅವರಿನ್ನು ವಿಶ್ವದ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಸವಾಲವನ್ನು ಎದುರಿಸಬೇಕಿದೆ. ಇನ್ನೊಂದು ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಜೆನ್ನಿಫರ್ ಬ್ರಾಡಿ ವಿರುದ್ಧ 6-1, 6-0 ಅಂತರದ ಸುಲಭ ಜಯ ಸಾಧಿಸಿದರು.
ಅಮೆರಿಕದ ನಾಲ್ವರು
ಮ್ಯಾಡಿಸನ್ ಕೇಯ್ಸ ಹಾಗೂ ಕೊಕೊ ವಾಂಡೆವೇಗ್ ಅವರ ಗೆಲುವಿನಿಂದ ಅಮೆರಿಕದ ನಾಲ್ವರು ಆಟಗಾರ್ತಿಯರು ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದಂತಾಗಿದೆ. ಉಳಿದಿಬ್ಬರೆಂದರೆ ವೀನಸ್ ವಿಲಿಯಮ್ಸ್ ಮತ್ತು ಸ್ಲೋನ್ ಸ್ಟೀಫನ್ಸ್. ಆದರೆ ಈ ನಾಲ್ವರು ಪರಸ್ಪರ ಮುಖಾಮುಖೀ ಆಗದಿರುವುದು ಕ್ವಾರ್ಟರ್ ಫೈನಲ್ ಅಚ್ಚರಿ!