ಬೆಂಗಳೂರು: ಹಾಲನ್ನು ಅಮೃತ ಎಂದು ಕರೆಯುವುದು ವಾಡಿಕೆಯಲ್ಲಿದೆಯಾದರೂ ಹಾಲು ಒಂದು ಪರಿಪೂರ್ಣ ಆಹಾರವಾಗಿದೆ. ಉತ್ತಮ ಆರೋಗ್ಯಕ್ಕೆ ಅತ್ಯವಶ್ಯವಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಮಾರುಕಟ್ಟೆ ನಿರ್ದೇಶಕ ಎಂ.ಟಿ.ಕುಲಕರ್ಣಿ ತಿಳಿಸಿದ್ದಾರೆ.
ಕೆಎಂಎಫ್ ಮತ್ತು ಬೆಂಗಳೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಕೇಂದ್ರ ಕಚೇರಿಯಲ್ಲಿ ಜೂ.1 ರಂದು ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಹಾಗೂ ಜನಸಾಮಾನ್ಯರಲ್ಲಿ ಹಾಲಿನಲ್ಲಿರುವ ಪೌಷ್ಟಿಕಾಂಶಗಳ ಮಹತ್ವದ ಅರಿವು ಮೂಡಿಸಲು ಕೆಎಂಎಫ್ ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳು ಮತ್ತು ಘಟಕಗಳು ಕಳೆದ ಎಂಟು ವರ್ಷಗಳಿಂದ ಜೂ.1ರಂದು ವಿಶ್ವ ಹಾಲು ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಾ ಬರುತ್ತಿವೆ. ಈ ಬಾರಿ ವಿಕಲಚೇತನ ಮಕ್ಕಳಿಗೆ ಹಾಲು, ಸಿಹಿ ವಿತರಣೆ ಹಾಗೂ ಚೀಸ್ ರೆಸಿಪಿ ಸ್ಪರ್ಧೆ ಏರ್ಪಡಿಸುವ ಮೂಲಕ ಆಚರಿಸಲಾಗಿದೆ ಎಂದರು.
ಮಕ್ಕಳಿಗೆ ಹಾಲು ವಿತರಣೆ: ಸಮರ್ಥನಂ ಇನ್ಸ್‌ಟಿಟ್ಯೂಟ್ ಫಾರ್ ಡಿಸೆಬಲ್ಡ್‌ನ ಮಕ್ಕಳಿಗೆ ನಂದಿನಿ ಸುವಾಸಿತ ಹಾಲು ಮತ್ತು ಸಿಹಿ ಉತ್ಪನ್ನಗಳನ್ನು ವಿತರಿಸಿ, ವಿಶ್ವ ಹಾಲು ದಿನವನ್ನು ಅರ್ಥಪೂರ್ಣವಾಗಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ಮಹಾಂತೇಶ್ ಹಾಗೂ 500ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಚೀಸ್ ಬಳಕೆ ಬಗ್ಗೆ ಅರಿವು ಸ್ಪರ್ಧೆ: ಮಾರುಕಟ್ಟೆಗೆ ಪರಿಚಯಿಸಿರುವ ನಂದಿನಿ ಚೆಡ್ಡಾರ್ ಚೀಸ್, ಪ್ರೊಸೆಸ್ಡ್ ಚೀಸ್ ಕ್ಯೂಬ್ಸ್, ಚೀಸ್ ಸ್ಲೆ$çಸ್, ಮೊಜ್ಜಾರೆಲ್ಲಾ ಚೀಸ್, 5 ವಿವಿಧ ಸುವಾಸಿತ ಸ್ಪ್ರೆಡ್ ಚೀಸ್‌ಗಳ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಹಾಮಂಡಳಿಯಲ್ಲಿ ಸಿಬ್ಬಂದಿಗೆ ಚೀಸ್ ರೆಸಿಪಿ ಸ್ಪರ್ಧೆ ಏರ್ಪಡಿಸಿತ್ತು. ಒಟ್ಟು 22 ತಂಡಗಳು ಭಾಗವಹಿಸಿದ್ದು ಮೂರು ತಂಡಗಳು ವಿಜೇತರಾಗಿದ್ದವು.
ಕಾರ್ಯಕ್ರಮದಲ್ಲಿ ಬೆಂಗಳೂರು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ ಗೋಪಾಲ್, ಪಶು ಸಂಗೋಪನೆ ನಿರ್ದೇಶಕ ಡಾ.ಡಿ.ಎನ್.ಹೆಗಡೆ, ಮದರ್ ಡೇರಿ ನಿರ್ದೇಶಕ ಬಿ.ಸತ್ಯನಾರಾಯಣ್, ಆಡಳಿತ ನಿರ್ದೇಶಕ ಬಿ.ಎಂ.ಸುರೇಶ್ ಕುಮಾರ್, ವಿತ್ತ ನಿರ್ದೇಶಕ ರಮೇಶ್ ಕುಣ್ಣೂರ್ ಹಾಗೂ ಕಹಾಮದ ಹಿರಿಯ ಅಧಿಕಾರಿಗಳು ಮತ್ತು ವಿಶೇಷ ಅತಿಥಿ ಆಹಾರ ತಜ್ಞೆ ಶ್ರೀಮತಿ ಜಯಲಕ್ಷ್ಮೀ ಭಾಗವಹಿಸಿದ್ದರು.