Advertisement

23ಕ್ಕೆ ವಿಶ್ವ ಲಿಂಗಾಯತ ಪರಿಷತ್‌ ಅಸ್ತಿತ್ವಕ್ಕೆ

06:40 AM Jan 14, 2018 | Team Udayavani |

ಬೆಂಗಳೂರು: ವೀರಶೈವ ಮಹಾಸಭಾಗೆ ಪರ್ಯಾಯವಾಗಿ “ವಿಶ್ವ ಲಿಂಗಾಯತ ಪರಿಷತ್‌’ ಸ್ಥಾಪನೆಗೆ ಲಿಂಗಾಯತ ಹೋರಾಟ ವೇದಿಕೆ ಮುಂದಾಗಿದೆ.

Advertisement

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಂಗಾಯತ ಹೋರಾಟ ವೇದಿಕೆ ಸಂಚಾಲಕ ಎಸ್‌.ಎಂ. ಜಾಮದಾರ್‌, ವೀರಶೈವ ಮಹಾಸಭಾಗೆ ಪರ್ಯಾಯವಾಗಿ ವಿಶ್ವ ಲಿಂಗಾಯತ ಪರಿಷತ್‌ ಸ್ಥಾಪನೆಗೆ ಕರಡು ಸಿದ್ದವಾಗಿದ್ದು, ಜನವರಿ 23 ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಕಳೆದ ಎಂಟು ತಿಂಗಳಿನಿಂದ ವೀರಶೈವ ಮಹಾಸಭಾವನ್ನು  ನಮ್ಮೊಂದಿಗೆ ಒಟ್ಟಿಗೆ ಕೊಂಡೊಯ್ಯಲು ಪ್ರಯತ್ನ ನಡೆಸಿದೆವು. ಆದರೆ, ಅವರು ಮೂರು ಪ್ರಮುಖ ವಿಷಯಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ, ಲಿಂಗಾಯತರ ಧರ್ಮ ಗ್ರಂಥ ವಚನಗಳು ಹಾಗೂ ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ ಎನ್ನುವುದನ್ನು ಮಹಾಸಭಾ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಪ್ರತ್ಯೇಕ ಪರಿಷತ್‌ ಸ್ಥಾಪನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ವಿಶ್ವ ಲಿಂಗಾಯತ ಪರಿಷತ್‌ ಕರಡು ಅಂತಿಮ ರೂಪ ಬಿಡುಗಡೆ ಮಾಡಿದ ನಂತರ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು. ವೀರಶೈವ ಮಹಾಸಭಾದಲ್ಲಿರುವವರು ಅನೇಕರು ನಮ್ಮೊಂದಿಗಿದ್ದಾರೆ. ವೀರಶೈವವು ಲಿಂಗಾಯತ ಧರ್ಮದ ಒಳ ಪಂಗಡ ಆಗಿರುವುದರಿಂದ ಈಗಲೂ ವೀರಶೈವ ಮಹಾಸಭಾ ನಮ್ಮೊಂದಿಗೆ ಬಂದರೆ ಸ್ವಾಗತವಿದೆ. ಪಂಚಾಚಾರ್ಯರ ಬಗ್ಗೆ ನಮಗೆ ಗೌರವಿದೆ. ಅವರು ಪ್ರತಿಷ್ಠೆ ಬಿಟ್ಟು ಪ್ರತ್ಯೇಕ ಧರ್ಮದ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸ್ಥಾಪನೆಯಾಗಿರುವ ಬಸವ ಸೇನೆ ವಿಶ್ವ ಲಿಂಗಾಯತ ಪರಿಷತ್ತಿನ ಯುವ ಘಟಕವಾಗಲಿದೆ. ವೈದ್ಯರು, ವಿಜ್ಞಾನಿಗಳು, ಸಾಫ್ಟವೇರ್‌ ಎಂಜನೀಯರ್‌ಗಳು, ಶಿಕ್ಷಣ ತಜ್ಞರು ಎಲ್ಲರನ್ನೊಳಗೊಂಡ ತಜ್ಞರ ಘಟಕವನ್ನೂ ಆರಂಭಿಸಲಾಗುವುದು. ಹೊರ ರಾಜ್ಯ ಹಾಗೂ ವಿದೇಶದಲ್ಲಿರುವ ಲಿಂಗಾಯತ ಸಂಘಟನೆಗಳು ಪರಿಷತ್‌ನ ಭಾಗವಾಗಲಿವೆ ಎಂದರು.

Advertisement

ತಜ್ಞರ ಸಮಿತಿಗೆ ವಿರೋಧವಿಲ್ಲ:
ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಕಾಲಾವಕಾಶ ಕೇಳಿರುವುದಕ್ಕೆ ನಮ್ಮದೇನು ಆಕ್ಷೇಪವಿಲ್ಲ. ಒಂದು ಧರ್ಮ ಘೋಷಣೆಗೆ ಸಾಕಷ್ಟು ಸಮಯದ ಅಗತ್ಯವಿದೆ. ನಾವು ತಜ್ಞರ ಸಮಿತಿಯ ವರದಿಗಾಗಿ ಕಾಯುವುದಿಲ್ಲ. ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ತಜ್ಞರ ಸಮಿತಿ ಯಾವಾಗ ಬೇಕಾದರೂ ವರದಿ ನೀಡಲಿ ಎಂದು ಹೇಳಿದರು.

ಲಿಂಗಾಯತ ಹೋರಾಟ ವೇದಿಕೆಯಿಂದ ಈಗಾಗಲೇ ತಜ್ಞರ ಸಮಿತಿಗೆ ಅಗತ್ಯ ದಾಖಲೆಗಳನ್ನು ನೀಡಿದ್ದೇವೆ. ಸಮಿತಿ ಹೆಚ್ಚಿನ ದಾಖಲೆ ಕೇಳಿದರೆ ನೀಡಲು ಸಿದ್ದರಿದ್ದೇವೆ. ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ಜನವರಿ 23 ಕ್ಕೆ ಬೆಂಗಳೂರಿನಲ್ಲಿ ಸಭೆ
ವಿಶ್ವ ಲಿಂಗಾಯತ ಪರಿಷತ್‌ ಸ್ಥಾಪನೆ ಕುರಿತು ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅಂತಿಮ ಕರಡು ಪ್ರಕಟಿಸುವ ಕುರಿತು ಸಭೆ ನಡೆಸಲಾಗುವುದು. ಅಂದಿನ ಸಭೆಗೆ ಎಲ್ಲಾ ಜಿಲ್ಲೆಗಳ ಲಿಂಗಾಯತ ಮುಖಂಡರನ್ನು ಆಹ್ವಾನಿಸಲಾಗುವುದು. ನಂತರ ಜಿಲ್ಲಾ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಲಿಂಗಾಯತ ಹೋರಾಟ ವೇದಿಕೆಯ ಸಂಯೋಜಕ ಡಾ. ಜಯಣ್ಣ ಹೇಳಿದರು. ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವ ಶಂಕರಪ್ಪ ಮನೆಯ ಮುಖ್ಯಸ್ಥರಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ಕುಸ್ತಿ ನಡೆದಿದೆ ನೋಡುತ್ತಿದ್ದೇವೆ ಎನ್ನುವುದು ಸರಿಯಲ್ಲ. ಮನೆಯ ಮುಖ್ಯಸ್ಥರು ಸರಿಯಾಲ್ಲದಿರುವುದರಿಂದ ಎಲ್ಲ ಗೊಂದಲಕ್ಕೆ ಕಾರಣವಾಗಿ ಎಂದು ಅವರು ಹೇಳಿದರು. ಜಿ.ಬಿ. ಪಾಟೀಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next