ಬೆಂಗಳೂರು: ಅತ್ತಿಗುಪ್ಪೆ ಸುತ್ತಮುತ್ತಲಿನ ಪ್ರದೇಶ ಪ್ರವೇಶಿಸಿದವರಿಗೆ ತಾನು ಸಿಲಿಕಾನ್ ಸಿಟಿಯಲ್ಲಿದ್ದೇವೋ ಅಥವಾ ಕುಂದಾಪುರದ ಗ್ರಾಮೀಣ ಭಾಗದಲ್ಲಿದ್ದೇವೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರೂ ಕುಂದ ಕನ್ನಡದ ಸಡಗರ, ನಗರದಲ್ಲಿನ ಕುಂದ ಕನ್ನಡ ಕಲರವ ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ವಿಶೇಷ ಮೆರುಗು ನೀಡಿತ್ತು.
ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಕುಂದಾಪ್ರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಹೋಳಿ ಕುಣಿತ ವೇಷಭೂಷಣ ತೊಟ್ಟ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಿದರು. ಇನ್ನು ಬಂಟರ ಸಂಘದ ಆವರಣದಲ್ಲಿ ಯಕ್ಷಗಾನ, ಕಂಬಳ ಕ್ರೀಡೆ ಪ್ರತಿಬಿಂಬಿಸುವ ಹಾಗೂ ಗ್ರಾಮೀಣ ಬದುಕು ಬಿಂಬಿಸುವ ಕಲಾಕೃತಿ ಇಡಲಾಗಿತು. ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಗ್ರಾಮೀಣ ಕ್ರೀಡೆ ಸೊಬಗು: ಗ್ರಾಮೀಣ ಕ್ರೀಡೆ ನೋಡುಗರಿಗೆ ಮನೋರಂಜನೆಯನ್ನು ನೀಡಿತ್ತು. ಸುಮಾರು 1,000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದರು. 6ವರ್ಷದ ಮಕ್ಕಳಿಂದ ಹಿಡಿದು 70ವರ್ಷದ ಹಿರಿಯರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಮಕ್ಕಳಿಗಾಗಿ ಆಯೋಜಿಸಿದ್ದ ಸೈಕಲ್ ಟೈರ್ ಸ್ಪರ್ಧೆಯಲ್ಲಿ 6ರಿಂದ 14ವರ್ಷದೊಳಗಿನ ಮಕ್ಕಳು ಸಂಭ್ರಮದಿಂದ ಭಾಗವಹಿಸಿದರು. ಹೂವು ನೆಯ್ಯುವುದು, ಮಹಿಳೆಯರಿಗಾಗಿ ಹಲಸಿನ ಕೊಟ್ಟೆ ಕೊಟ್ಟುವುದು, ಮಡ್ಲ್ ನೆಯ್ಯುವುದು ಸ್ಪರ್ಧೆ, ಇನ್ನೂ ದಂಪತಿಗಳಿಗಾಗಿ ಅಡಿಕೆ ಹಾಳೆ ಓಟ ಹಾಗೂ ಹಣೆಬೊಂಡ ಓಟ, ಗಿರ್ಗಿಟ್ಲೆ, ಚಿತ್ರಕಲೆ, ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಿತು. ಎಲ್ಲರೂ ವಯಸ್ಸಿನ ಅಂತರವನ್ನು ಮರೆತು ಭಾವಹಿಸಿದರು.
ಹಳ್ಳಿ ಊಟದ ಸ್ವಾದ!: ಕುಂದಗನ್ನಡಿಗರು ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳ ರಾಜ್ಯಗಳ ಜನರು ಕುಂದಾಪ್ರ ದಿನಾಚರಣೆಗೆ ಬಂದಿರುವುದು ವಿಶೇಷ ಮೆರುಗು ನೀಡಿತ್ತು. ನುರಿತ ಬಾಣಸಿಗರಿಂದ ಸ್ಥಳದಲ್ಲಿ ಹಾಲುಬಾಯಿ, ಕೊಟ್ಟೆ ಕಡಬು, ಗೋಲಿಬಜೆ, ಬನ್ಸ್, ಎಳ್ ಬಾಯ್ರ್, ಹೆಸ್ರು ಬಾಯ್ರ್ ವಿವಿಧ ಪಾನಕ, ಹಬ್ಬದೂಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ನಿ ಸಾರು, ಹಬ್ಬ ತಿಂಡಿಗಳಾದ ಚಿಲೇಬಿ, ಮಿಠಾಯಿ ಸೇರಿದಂತೆ ಇತರೆ ಖಾದ್ಯಗಳನ್ನು ಸೇವಿಸಲು ಅವಕಾಶ ಕಲ್ಪಿಸಲಾಗಿತ್ತು.
ವಿಶೇಷ ರೀತಿಯಲ್ಲಿ ಉದ್ಘಾಟನೆ: ವಿಶ್ವ ಕುಂದಾಪ್ರ ಕನ್ನಡ ಲೋಗೋ ಹೊಂದಿರುವ ಫೋಟೋವನ್ನು ಮರದಿಂದ ನಿರ್ಮಿಸಲಾದ ಚಿಕ್ಕ ತೇರಿನಲ್ಲಿಟ್ಟು ವಾದ್ಯಗಳೊಂದಿಗೆ ಬರ ಮಾಡಿಕೊಳ್ಳಲಾಯಿತು. ಬಳಿಕ ಅದನ್ನು ಸಾಂಪ್ರದಾಯಿಕ ಉಡುಗೆ ಹಾಕಿಕೊಂಡ ಅತಿಥಿಗಳು ಶಿಂಗಾರದ ಹೂವಿನ ಗೊನೆಯೊಂದಿಗೆ ಸಭಾಂಗಣಕ್ಕೆ ತಂದರು.
ಸಂಜೆ ಜನಸಾಗರ: ಕಾರ್ಯಕ್ರಮ ಬೆಳಗ್ಗೆ 9ರಿಂದ ಪ್ರಾರಂಭಗೊಂಡು ಸಂಜೆ 9ರವರೆಗೆ ನಡೆಯಿತು. ನಡು ನಡುವೆ ಹಬ್ಬಕ್ಕೆ ಮಳೆ ಅಡ್ಡಿಯುಂಟು ಮಾಡಿದರೂ ಜನರ ಉತ್ಸಾಹ ಮಾತ್ರ ಕಡಿಮೆ ಆಗಿರಲಿಲ್ಲ. ಚಿತ್ರನಟ ರಿಷಬ್ ಶೆಟ್ಟಿ, ಉಪೇಂದ್ರ ಅವರ ಆಗಮನ ಕಾರ್ಯಕ್ರಮ ಹೆಚ್ಚಿನ ಮೆರಗು ನೀಡಿತ್ತು. ಸಂಜೆ ವೇಳೆ ಬಂಟರ ಭವನ ಸಭಾಂಗಣ ದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು. ಗಂಟೆಗಟ್ಟಲೇ ಕುಂದಕನ್ನಡವರು ನಿಂತುಕೊಂಡು ಕಾರ್ಯಕ್ರಮಗಳನ್ನು ವೀಕ್ಷಿಸಿರುವುದು ಕಂಡು ಬಂತು.
ಮೆಟ್ರೋ-ಬಸ್‌ಗಳಲ್ಲಿ ಕುಂದಕನ್ನಡದ ಕಂಪು
ಸಾಮಾನ್ಯವಾಗಿ ಬೆಂಗಳೂರು ಬಸ್ ಮೆಟ್ರೋಗಳಲ್ಲಿ ಹೆಚ್ಚಾಗಿ ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚಾಗಿ ಕಾಣ ಸಿಗುತ್ತದೆ. ಆದರೆ ಭಾನುವಾರ ಅತ್ತಿಗುಪ್ಪೆ ಮಾರ್ಗದ ಮೆಟ್ರೋ, ಸಾರ್ವ ಜನಿಕ ಸಾರಿಗೆಯಲ್ಲಿ ಕುಂದ ಕನ್ನಡ ಮಾತು ಗಳು ಕೇಳಿ ಬಂತು. ಪರಿಚಯವಿಲ್ಲದ ಮುಖ ಗಳು ಒಬ್ಬರನೊಬ್ಬರು ನೋಡಿ ಮುಗುಳು ನಗೆ ಬೀರಿ “ನಾವ್ ಕುಂದಾಪ್ರದವರು, ವಿಶ್ವ ಕುಂದಾಪ್ರ ಹಬ್ಬಕ್ಕೆ ಬಂದಿದ್ದ ನೀವ್’ ಎನ್ನುವ ಮಾತುಗಳು ಕೇಳಿ ಬಂತು. ಅಲ್ಲದೆ ಕುಂದಾಪ್ರ ಕನ್ನಡ ಹಬ್ಬದಲ್ಲಿ ಎಲ್ಲರೂ ಕುಂದಾಪುರದವರೇ ಇದ್ದ ಕಾರಣ ಸಂತೋಷದಿಂದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು
ಶಿಕ್ಷಕರ ನೇಮಕಾತಿಗೆ ರಿಷಬ್ ಶೆಟ್ಟಿ ಮನವಿ
ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ, ಕುಂದಾಪುರ ಹಾಗೂ ಬೆಂಗಳೂರಿನ ನಡುವೆ ಉತ್ತಮ ನಂಟಿದೆ. ನಮಗೆ ಜೀವ ನೀಡಿದ್ದು ಕುಂದಾಪ್ರ, ಜೀವನ ಕೊಟ್ಟಿದ್ದು ಬೆಂಗಳೂರು. ಇಲ್ಲಿಗೆ ನಾವು ಬದುಕು ಕಟ್ಟಿಕೊಳ್ಳಲು ಬಂದಿದ್ದೇವೆ. ಆದರೂ ಭಾಷೆ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ಕುಂದಾಪುರ ಭಾಷೆಯಲ್ಲಿ ಮಾತನಾಡಿದರೆ ಕೊಚ್ಚಕ್ಕಿ ಅನ್ನಕ್ಕೆ ಮೀನ್ ಸಾರು ಹಾಕಿ ಊಟ ಮಾಡಿದಷ್ಟು ಸಂತೋಷ ಸಿಗುತ್ತದೆ. ಸರ್ಕಾರಿ ಶಾಲೆ ಮೊದಲ ಪ್ರಾಮುಖ್ಯತೆ ನೀಡಿ, ಅಗತ್ಯವಿರುವ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಮಾಧ್ಯಮದ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು.
ಕೊಚ್ಚಕ್ಕಿ ಗಂಜಿ ನೆನೆದ ಉಪೇಂದ್ರ
ಹ್ಯಾಂಗಿದ್ರಿ ಎಲ್ಲ, ನಿಜ ಹೇಳು ಬೇಕು ಅಂದ್ರೆ, ನಾನು ಹುಟ್ಟಿದ್ದು ಬೆಂಗಳೂರು. ನಮ್ಮ ಅಪ್ಪ ಅಮ್ಮ ಹುಟ್ಟಿದ್ದು ಕುಂದಾಪುರದ ತೆಕಟ್ಟೆ. ಚಿಕ್ಕ ವಯಸ್ಸಿನಲ್ಲಿ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಇಂದಿಗೂ ನೆನಪು ಹೋಗುತ್ತಿಲ್ಲ. ಅಡಿಕೆ ಹಾಳಿ, ಕ್ವಾಟಿ, ಕೊಚ್ಚಕ್ಕಿ ಗಂಜಿ, ಮಿಡಿ ಉಪ್ಪಿನಕಾಯಿ, ಮೊದಲ ಬಾರಿ ಸಮುದ್ರ ನೋಡಿದ್ದು ಇನ್ನೂ ಕಣ್ಣು ಕಟ್ಟಿದ ಹಾಗೆ ಇದೆ. ಇಷ್ಟೊಂದು ಕುಂದಾಪ್ರದ ವರನ್ನು ನೋಡತ್ತೀನಿ ಅನ್ಕೊಂಡಿರಲಿಲ್ಲ. ಮತ್ತೆ ಮತ್ತೆ ಕರ್ರಿ ಬತ್ತೆ ನಾನ್ ಎಂದು ಚಿತ್ರ ನಿರ್ದೇಶಕ, ನಟ ಉಪೇಂದ್ರ ಸಂಭಾಷಣೆ ನಡೆಸಿದರು.
ಆರು ತಿಂಗಳು ಕುಂದಾಪುರ ಪ್ರದೇಶದಲ್ಲಿ ಕೆಲಸ ಮಾಡಿದ್ದೆ, ಕುಂದಾಪುರದ ಭಾಷೆಯಲ್ಲಿ ಒಂದು ವೇಗ, ಒಂದು ಜೋರು ಇದೆ. ಕುಂದಾಪುರದವರ ಯಶಸ್ಸಿಗೆ ಅವರ ಭಾಷೆ ಕಾರಣ. ಕುಂದಾಪುರದ ಜನರು ತಮ್ಮ ಮಕ್ಕಳಿಗೆ ಕುಂದಾಪ್ರ ಭಾಷೆ ಕಲಿಸಿ ಮಾತನಾಡುವಂತೆ ಮಾಡಬೇಕು.-
ರಾಜ್ ಬಿ. ಶೆಟ್ಟಿ, ನಟ-ನಿರ್ದೇಶಕ
ಬೆಂಗಳೂರಿಗೆ ಬಂದಾಗ ಯಾವ ಊರು ಎಂದರೆ ಮೊದಲು ಮಂಗಳೂರು ಎನ್ನುತ್ತಿದ್ದೆವು. ಮಂಗಳೂರಲ್ಲಿ ಎಲ್ಲಿ ಎಂದಾಗ ಉಡುಪಿ ಎನ್ನುತ್ತಿದ್ದೆವು, ಬಳಿಕ ಕುಂದಾಪುರ ಎನ್ನುತ್ತಿದ್ದೆವು. ಈಗ ಬಸ್ರೂರು ಎನ್ನುತ್ತೇವೆ. ಎಲ್ಲಿ ಕೇಳಿದರೆ ಕುಂದಾಪುರ ಎನ್ನುತ್ತೇವೆ ಹೀಗೆ ಬದಲಾವಣೆ ಆಗಿದೆ. ನೀವೆಲ್ಲ ಕುಂದಾಪುರ ಕನ್ನಡ ಮಾತನಾಡಲು ಹಿಂಜರಿಯಬೇಡಿ.-
ರವಿ ಬಸ್ರೂರು, ಖ್ಯಾತ ಸಂಗೀತ ನಿರ್ದೇಶಕ
ನಾನು ಬೆಂಗಳೂರಲ್ಲೇ ಹುಟ್ಟಿ ಇಲ್ಲೇ ಬೆಳೆದರೂ ಕುಂದಾಪುರ ಕನ್ನಡ ಮಾತಾಡುತ್ತಿರುವುದಕ್ಕೆ ನನ್ನ ತಂದೆ-ತಾಯಿಯೇ ಕಾರಣ. ಇಲ್ಲಿರುವ ತಾಯಂದಿರು ತಮ್ಮ ಮಕ್ಕಳಿಗೆ ಕುಂದಾಪುರ ಕನ್ನಡ ಭಾಷೆ ಕಲಿಸಿ ಅಂತ ಕೇಳುತ್ತೇನೆ.-
ಪ್ರಮೋದ್ ಶೆಟ್ಟಿ ನಟ