ಕುಂದಾಪುರ: ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇರುವುದನ್ನು ಮಣಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಬಹುಭಾಷಾ, ಬಹುಸಂಸ್ಕೃತಿಯ ನಮ್ಮ ನಾಡಿನಲ್ಲಿ ಪ್ರತಿಭಾಷೆಗೂ ಅದರದ್ದೇ ಸಂಸ್ಕೃತಿಯ ಹಿನ್ನೆಲೆ, ಗೌರವ ಇದೆ ಎಂದು ಸಹಾಯಕ ಕಮಿಷನರ್ ಡಾ| ಎಸ್.ಎಸ್. ಮಧುಕೇಶ್ವರ್ ಹೇಳಿದರು.
ಗುರುವಾರ ರಾತ್ರಿ ಕಲಾಕ್ಷೇತ್ರ- ಕುಂದಾಪುರ ವತಿಯಿಂದ, ದಶಮ ಸಂಭ್ರಮದ ಪ್ರಯುಕ್ತ ವಿಶ್ವದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕುಂದಾಪ್ರ ಕನ್ನಡಿಗರು ಸೇರಿ ಬಹುತೇಕ ಕಡೆ ಆಚರಿಸಿದ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಕುಂದಾಪುರದ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಭಾಷೆ ಎನ್ನುವುದು ಶಕ್ತಿಯೂ ಹೌದು, ಅಂತಶ್ಶಕ್ತಿಯೂ ಹೌದು. ಅಂತಸ್ಸತ್ವವೂ ಹೌದು. ಪ್ರತಿ ಮೂವತ್ತು ಕಿ.ಮೀ.ಗೊಮ್ಮೆ ಬದಲಾಗುವ ಭಾಷೆ, ಅದರ ಜತೆಗೆ ವೇಷಭೂಷಣ, ಸಂಸ್ಕೃತಿ ಬದಲಾಗುವುದು ಭಾರತದಲ್ಲಿ ಮಾತ್ರ ಎಂದರು.
ಕುಂದಾಪ್ರ ಕನ್ನಡದ ಇತಿಹಾಸ ಮತ್ತು ಅದು ನಡೆದು ಬಂದ ದಾರಿಯ ಬಗ್ಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ, ಭಾಷೆ ಮೂಲಸತ್ವವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕವಿದೆ. ಕುಂದಾಪ್ರ ಭಾಷೆಯ ಜತೆಗೆ ಬೇರೆ ಭಾಷೆಯ ಪದಗಳು ಮಿಶ್ರವಾಗುತ್ತಿವೆ. ಅಕಾಡೆಮಿ ಮಾಡಿದ ಕೂಡಲೇ ಭಾಷೆ ಬೆಳೆಯುವುದಿಲ್ಲ. ನಾವಾಡಿದರೆ ಮಾತ್ರ ಭಾಷೆ ಬೆಳೆಯುತ್ತದೆ. ಕುಂದಾಪ್ರ ಕನ್ನಡದ ಕಂಪು ಎಲ್ಲೆಡೆ ಹಬ್ಬಬೇಕು. ಏಕೆಂದರೆ ಕುಂದಾಪ್ರ ಕನ್ನಡ ಉದ್ಯೋಗದ ಭಾಷೆ ಅಲ್ಲ ಬದುಕಿನ ಭಾಷೆ, ನಮ್ಮೊಳಗಿನ ಭಾಷೆ. ಅಹಂಕಾರ ತೊರೆದರೆ ಈ ಭಾಷೆ ಸುಲಲಿತವಾಗುತ್ತದೆ ಎಂದರು.
ಅಪ್ಪಟ ಕುಂದಾಪ್ರ ಕನ್ನಡಿಗ ಸಾಲಿಗ್ರಾಮ ಗುಂಡ್ಮಿಯ ವಿನಯ ಕುಮಾರ್ ಕಬಿಯಾಡಿ ಮಾತೃ ಭಾಷೆಯ ಕುರಿತು ಮಾತನಾಡಿದರು.
ಮನೋರಂಜನೆಯ ಅಂಗವಾಗಿ ಕಲಾಸ್ಪೂರ್ತಿ ಕಲಾತಂಡ ಕುಂದಾಪ್ರ ಮತ್ತು ಹೇರಂಭಾ ಕಲಾವಿದರು ಸಾಲಿಗ್ರಾಮ ಇವರಿಂದ ಜಂಟಿಯಾಗಿ ಕುಂದಾಪ್ರ ಕನ್ನಡ ಭಾಷೆಯಲ್ಲಿ ಹಾಸ್ಯ ಪ್ರಧಾನ ನಾಟಕದ ಆಯ್ದ ಭಾಗಗಳ ಪ್ರದರ್ಶನ ನಡೆಯಿತು. ಅಶೋಕ ಸಾರಂಗ ಅವರ ತಂಡದಿಂದ ಗಾಯನ ನಡೆಯಿತು.ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ರಾಜೇಶ್ ಕಾವೇರಿ ನಿರ್ವಹಿಸಿದರು. ಪ್ರ. ಕಾರ್ಯದರ್ಶಿ ವಿಕ್ರಮ್ ಪೈ ವಂದಿಸಿದರು. ಕೌಶಿಕ್ ಯಡಿಯಾಳ್, ರಾಮಚಂದ್ರ ಪರಿಚಯಿಸಿದರು.