ಶಿವಮೊಗ್ಗ: ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆ ಪ್ರಾಧಿಕಾರಗಳ ಅಧ್ಯಕ್ಷ ಮುಸ್ತಾಫ್ ಹುಸೇನ್ ಸೈಯದ್ ಅಜೀಜ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
1948ರಲ್ಲಿ ಮಾನವ ಹಕ್ಕುಗಳ ಬಗ್ಗೆ ಕಾನೂನು ಜಾರಿಗೆ ಬಂದಿತು. ಮೂಲಭೂತ ಹಕ್ಕುಗಳು ಎಷ್ಟು ಮುಖ್ಯವೋ ಮಾನವ ಹಕ್ಕುಗಳು ಕೂಡಾಪ್ರತಿಯೊಬ್ಬರಿಗೂ ಅಷ್ಟೇ ಮುಖ್ಯ. ಪ್ರತಿಯೊಬ್ಬರು ಕೂಡಾ ನಿರಂತರವಾಗಿ ಈ ಹಕ್ಕುಗಳನ್ನು ಪಡೆದುಕೊಂಡಿರುತ್ತಾರೆ ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ| ಕೆ.ಎಲ್. ಸರಸ್ವತಿ ಮಾತನಾಡಿ, ಮಾನವ ಹಕ್ಕುಗಳ ಬಗ್ಗೆ ಇಂದಿಗೂ ಸಹ ಜಾಗೃತಿಮೂಡಿಸುವಂತಹ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದಕೆಲ ತಿಂಗಳಿನಿಂದ ಈ ಕಾರ್ಯ ನಡೆಯುತ್ತಿಲ್ಲ.ಆದರೂ ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಈಕಾರ್ಯ ನಡೆಸಲಾಗುತ್ತಿದೆ ಎಂದರು. ಮಾನವಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಜಿ. ಅನುರಾಧ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜೆ.ಎಂ. ಮಾನವ ಹಕ್ಕುಗಳರಾಜ್ಯ ಕಾರ್ಯದರ್ಶಿ ಪ್ರದೀಪ್ ಮಿತ್ತಲ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಬಳ್ಳೇಕೆರೆ ಸಂತೋಷ್, ವಕೀಲರ ಸಂಘದ ಅಧ್ಯಕ್ಷ ಎನ್. ದೇವೇಂದ್ರಪ್ಪ, ಹಿರಿಯ ವಕೀಲ ಹಾಲಸಿದ್ದಪ್ಪ, ಮಾನವ ಹಕ್ಕುಗಳಸಮಿತಿ ಜಿಲ್ಲಾ ಉಪಾಧ್ಯಕ್ಷ ಎ.ಆರ್. ರವಿಕುಮಾರ್ ಇದ್ದರು. ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ|ರಾಜೇಶ್ ಸುರಗೀಹಳ್ಳಿ, ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ| ಎಚ್.ಟಿ. ಶೇಖರ್, ಪತ್ರಕರ್ತರಾದ ಜಿ.ಸಿ. ಸೋಮಶೇಖರ್, ವಿ. ಜಗದೀಶ್ ಹಾಗೂ ಪ್ರೈವೇಟ್ ಎಂಪ್ಲಾಯ್ ಮೆಂಟ್ ಬ್ಯೂರೋದ ಸುರೇಶ್ ಕೆ. ಬಾಳೆಗುಂಡಿ, ಗುಪ್ತವಾರ್ತೆಯ ದಿವಾಕರ್ ಕಾಮತ್, ಹೆಡ್‌ಕಾನ್ಸ್ ಟೇಬಲ್ ಇಂದ್ರೇಶ್ ಅವರನ್ನು ಸನ್ಮಾನಿಸಲಾಯಿತು.
ಮನುಷ್ಯ ಹುಟ್ಟಿನಿಂದ ಅಂತ್ಯದವರೆಗೆ ಸಂತೋಷವಾಗಿ, ಸುಖಮಯವಾಗಿ ಹಾಗೂ ಎಲ್ಲಾ ವ್ಯವಸ್ಥೆಗಳನ್ನು ಪಡೆದು ಜೀವನ ನಡೆಸಿದನೆಂದರೆ ಆತ ಮಾನವ ಹಕ್ಕುಗಳನ್ನು ಪಡೆದಿದ್ದಾನೆಂದೇಅರ್ಥ. ಎಲ್ಲಿ ಇವುಗಳಿಗೆ ಚ್ಯುತಿ ಬರುತ್ತದೋ ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನು ಅರಿಯಬಹುದಾಗಿದೆ.
–ಎಂ.ಎಲ್.ವೈಶಾಲಿ, ಜಿಪಂ ಸಿಇಒ