Advertisement

ವಿಶ್ವವಿಖ್ಯಾತ ಮೈಸೂರು ದಸರಾ ಮೂಲ “ಶ್ರೀರಂಗಪಟ್ಟಣ”, ಏನಿದರ ಇತಿಹಾಸ

09:53 AM Sep 29, 2019 | Nagendra Trasi |

ಮೈಸೂರು ದಸರಾ ಅಂದು ಶ್ರೀರಂಗಪಟ್ಟಣದಿಂದ ಮೈಸೂರು ಸಂಸ್ಥಾನದಲ್ಲಿ ಆರಂಭವಾಗಿರುವುದು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅದನ್ನು ಮುಂದುವರಿಸಿದ್ದು ಒಂದು ಕಾಲಘಟ್ಟ. 1805ರಲ್ಲಿ ಶುರುವಾಗಿ, 1969ರವರೆಗೂ ಬಹುಪಾಲು ಮಹಾರಾಜರೇ ಖುದ್ದಾಗಿ ದಸರಾ ನಡೆಸಿ, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದರು.

Advertisement

ಇವೆಲ್ಲಕ್ಕಿಂತ ಕುತೂಹಲಕಾರಿಯಾದ ವಿಷಯ ಏನೆಂದರೆ ಕೊನೆಯ ಮಹಾರಾಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ 1969ರಲ್ಲಿ ಕೊನೆಯದಾಗಿ ದಸರಾವನ್ನು ಸಂಭ್ರಮದಿಂದ ಆಚರಿಸಿದ್ದರು. 1970ರಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಬಿಟ್ಟಿದ್ದರು. ಹೌದು ಅದಕ್ಕೆ ಕಾರಣ ಅಂದಿನ ಪ್ರಧಾನಿ ಇಂದಿರಾಗಾಂಧಿ. ಯಾಕೆಂದರೆ 1947ರಲ್ಲಿ ಭಾರತ ಸ್ವತಂತ್ರವಾದ ಮೇಲೂ 1950ರವರೆಗೂ ಗಣರಾಜ್ಯವಾಗುವವರೆಗೂ ಮಹಾರಾಜರಾಗಿಯೇ ಉಳಿದಿದ್ದರು. ಭಾಷಾವಾರು ಪ್ರಾಂತ್ಯದ ಬಳಿಕ 1956ರಿಂದ 1964ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1969ರಲ್ಲಿ ಮಾಜಿ ಮಹಾರಾಜರ ಹೆಸರು ಮತ್ತು ರಾಜಧನವನ್ನು ನಿಲ್ಲಿಸಿ ಬಿಟ್ಟಿದ್ದರು. ಇದರಿಂದ ದೇಶದಲ್ಲಿ 560 ಮಾಜಿ ಮಹಾರಾಜರು ಇಂದಿರಾ ನಿಲುವಿನ ವಿರುದ್ಧ ಕೋರ್ಟ್ ಕಟಕಟೆ ಏರಲು ನಿರ್ಧರಿಸಿದ್ದರಂತೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಜಯಚಾಮರಾಜೇಂದ್ರ ಒಡೆಯರ್. ಸ್ವತಂತ್ರ ಭಾರತದಲ್ಲಿ ನಾನೊಬ್ಬ ಸಾಮಾನ್ಯ ಪ್ರಜೆ. ಹೀಗಾಗಿ ಜನಸಾಮಾನ್ಯನಾಗಿಯೇ ನಾವು ಬದುಕಬೇಕು ಎಂಬುದಾಗಿ ಹೇಳಿದ್ದರಂತೆ.

ಹೀಗೆ 1970ರಲ್ಲಿ ನಾನು ಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ, ದರ್ಬಾರನ್ನೂ ನಡೆಸುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದರಂತೆ. ಅಷ್ಟೇ ಅಲ್ಲ ಸಿಂಹಾಸನವನ್ನು ಅಂಬಾ ವಿಲಾಸ ಅರಮನೆಗೆ ಸ್ಥಳಾಂತರಿಸಿದ್ದರು. ಹೇಳಿ, ಕೇಳಿ ಮೈಸೂರು ನಗರಿ ಪ್ರಸಿದ್ಧಿಯಾಗಿದ್ದೇ ದಸರಾದಿಂದ..ಈಗ ಏಕಾಏಕಿ ದಸರಾ ನಿಂತು ಬಿಟ್ಟರೆ ಏನು ಕಥೆ ಎಂಬ ಚರ್ಚೆಯೂ ನಡೆದಿತ್ತು. ಕೊನೆಗೆ  ಕೆಲವು ಗಣ್ಯರು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಮರದ ಅಂಬಾರಿಯನ್ನು ಆನೆಯ ಮೇಲೆ ಇಟ್ಟು ಖಾಸಗಿ ದಸರಾ ಮೆರವಣಿಗೆ ನಡೆಸಿದ್ದರಂತೆ.

1970, 1971, 1972 ಹಾಗೂ 1973ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಸಿಂಹಾಸನದಲ್ಲಿ ಕುಳಿತುಕೊಳ್ಳದೇ ತಮ್ಮ ಪಟ್ಟದ ಕತ್ತಿಯನ್ನು ಇಟ್ಟು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದರಂತೆ. ಅಂಬಾರಿಯನ್ನೂ ಏರದೇ ಅಂಬಾರಿ ಹೊತ್ತ ಆನೆಯ ಹಿಂದೆ ಕಾರಿನಲ್ಲಿ ಬನ್ನಿ ಮಂಟಪದವರೆಗೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದರಂತೆ.

ಪ್ರವಾಸೋದ್ಯಮದಿಂದ ಮೈಸೂರು ವಂಚಿತವಾಗಲಿದೆ ಎಂಬ ಆತಂಕದಿಂದ 1971ರಲ್ಲಿಯೂ ಮೈಸೂರು ಜನರೇ ಸೇರಿಕೊಂಡು ದಸರಾ ನಡೆಸಿದ್ದರು. 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರಿಗೆ ಮೈಸೂರಿನ ಗಣ್ಯರು ಭೇಟಿ ಮಾಡಿ ದಸರಾ ನಡೆಸುವಂತೆ ಮನವಿ ಮಾಡಿದ್ದರಂತೆ. ಅದರಂತೆ ಜಯಚಾಮರಾಜೇಂದ್ರ ಒಡೆಯರ್ ಜೊತೆ ಮಾತನಾಡಿ ಚಿನ್ನದ ಅಂಬಾರಿಯನ್ನೇ ಆನೆಯ ಮೇಲೆ ಇಟ್ಟು ದಸರಾ ನಾಡಹಬ್ಬ ಎಂದು ಸರ್ಕಾರದಿಂದಲೇ ನಾಮಾಂಕಿತಗೊಂಡು ಪುನಃ ಚಾಲ್ತಿಗೆ ಬಂತು. ಅದೇ ಇಂದು ಆಚರಣೆಯಲ್ಲಿರುವ ಹಬ್ಬ.

Advertisement

ರಾಜ, ಮಹಾರಾಜರ ಕಾಲದಿಂದ ಆರಂಭವಾಗಿ, ಸ್ವಾತಂತ್ರ್ಯ ನಂತರದವರೆಗೂ ರಾಜವೈಭವದಲ್ಲಿ ನಡೆಯುತ್ತಿದ್ದ ಮೈಸೂರು ದಸರಾ ಇಂದು ರಾಜ, ಮಹಾರಾಜ ಇಲ್ಲದೇ ಪ್ರವಾಸೋದ್ಯಮದ ಭಾಗವಾಗಿ, ಹಲವು ಮಾರ್ಪಾಡುಗಳೊಂದಿಗೆ ನಡೆಯುವ ಮೂಲಕ ಪ್ರಸಿದ್ಧಿ ಪಡೆದಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next