Advertisement
ವಿಪರ್ಯಾಸವೆಂದರೆ ಈ ಭೂಮಿಯ ಮೇಲಿರುವ ಬೇರಾವುದೇ ಜೀವಿಗಿಂತ ಹೆಚ್ಚು ಪರಿಸರಕ್ಕೆ ಹಾನಿ ಮಾಡಿರುವ, ಮಾಡಲಿರುವ ನಾವು ವರ್ಷದಲ್ಲೊಂದು ದಿನ ಮಾತ್ರ ಪ್ರಕೃತಿಯೆಡೆಗೆ ಕಾಳಜಿ ತೋರಿಸಲು “ವಿಶ್ವ ಪರಿಸರ ದಿನ” ಆಚರಿಸುತ್ತೇವೆ. ಪ್ರತಿ ವರ್ಷ ಜೂನ್ ೫ರಂದು ನಾವು ಹೇಳುವ, ಕೇಳುವ ಮಾತುಗಳನ್ನು ಪಾಲಿಸಿದರೂ ಸಾಕು ನಮ್ಮಿಂದ ಪ್ರಕೃತಿಗಾಗುವ ಹಾನಿಯ ಪ್ರಮಾಣ ಕಡಿಮೆಯಾಗಬಹುದೇನು.
Related Articles
Advertisement
ಕೋವಿಡ್ ತಂದೊಡ್ಡಿದ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಆಡಳಿತ ವರ್ಗದವರು ಕಾರ್ಖಾನೆಗಳಿಗೆ, ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹೋಗಿ ಅರಣ್ಯ ಪ್ರದೇಶವನ್ನೋ, ನೈಸರ್ಗಿಕವಾಗಿ ಹಲವು ಜೀವಿಗಳಿಗೆ ಆಸರೆಯಾಗಿರುವ ಬಯಲು ಜಾಗಗಳನ್ನೋ “ನಿರುಪಯುಕ್ತ” ಎಂಬ ಹೆಸರಿನಲ್ಲಿ ಉದ್ಯಮಿಗಳಿಗೆ ನೀಡಿದರೆ ಇನ್ನಷ್ಟು ಅನಾಹುತ, ಅಸಮತೋಲನ ಉಂಟಾಗುವುದು ನಿಶ್ಚಿತ. ಇಂತಹ ಸೂಕ್ಷ್ಮತೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಅಂತೆಯೇ, ಪರಿಸರ ದಿನಾಚರಣೆಯ ಹೊತ್ತಿನಲ್ಲಿ ತೆಗೆದುಕೊಳ್ಳಬೇಕಾಗಿರುವ ಇನ್ನೊಂದು ಮಹತ್ವದ ನಿರ್ಧಾರವೆಂದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸಹಜ ಅರಣ್ಯ, ಗೋಮಾಳಗಳಿದ್ದ ಜಾಗವೀಗ ಅಕೇಶಿಯಾ, ನೀಲಗಿರಿ ತೋಪುಗಳಾಗಿ ದಶಕಗಳುರುಳಿವೆ. ಈಗ ಕೆಲವೆಡೆ ಅವುಗಳನ್ನು ಖಾಸಗೀಕರಣ ಮಾಡುವ ಗಾಳಿಸುದ್ದಿಯೂ ಇದೆ.
ಆದರೆ, ಸರ್ಕಾರ ಪರಿಸರ ಕಾಳಜಿ ಹೊಂದಿರುವುದೇ ಆದಲ್ಲಿ ಅದಷ್ಟೂ ಭೂಮಿಯನ್ನು ತನ್ನ ವಶದಲ್ಲೇ ಉಳಿಸಿಕೊಂಡು ಅಕೇಶಿಯಾ, ನೀಲಗಿರಿಯಂತಹ ಮರಗಳನ್ನು ತೆಗೆದು ಆಯಾ ಪ್ರದೇಶಕ್ಕೆ ಸೂಕ್ತವಾದ ಕಾಡು ವೃಕ್ಷಗಳನ್ನು, ಹಣ್ಣಿನ ಮರಗಳನ್ನು ಬೆಳೆಸುವತ್ತ ಗಮನಹರಿಸಲೇ ಬೇಕು.
ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ನಿಲ್ಲಬೇಕೆಂದರೆ ಕೋಟ್ಯಂತರ ರುಪಾಯಿಗಳನ್ನು ಸುರಿದು ಬೇಲಿ ಕಟ್ಟುವುದೋ, ಕಾಲುವೆ ನಿರ್ಮಿಸುವುದೋ ಮಾಡಿದರೆ ಸಾಲದು. ವನ್ಯಜೀವಿಗಳಿಗೆ ಕಾಡಿನಲ್ಲೇ ನೀರು, ಆಹಾರ ದೊರಕುವಂತೆ ಮಾಡಬೇಕಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ನೆಪಕ್ಕೊಂದು ಗಿಡನೆಟ್ಟು ಪರಿಸರ ದಿನಾಚರಣೆ ಆಚರಿಸಿ ಕೈ ತೊಳೆದುಕೊಳ್ಳುವ ಬದಲು. ಅರ್ಥಪೂರ್ಣ ಹಾಗೂ ಅತ್ಯವಶ್ಯಕ ಕ್ರಮಗಳನ್ನು ಕೈಗೊಂಡು ಪರಿಸರ ಕಾಳಜಿ ವ್ಯಕ್ತಪಡಿಸುವುದು ಸೂಕ್ತ.
– ಸ್ಕಂದ ಆಗುಂಬೆ, ಎಸ್‌ಡಿಎಂ ಕಾಲೇಜು ಉಜಿರೆ