Advertisement

ವಿಶ್ವ ಪರಿಸರ ದಿನ: ವಿಶಿಷ್ಟ ಕಾರ್ಯಕ್ರಮ ಆಯೋಜನೆ

11:36 AM Jun 01, 2018 | |

ಬೀದರ: ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲಾದ್ಯಂತ ಅರ್ಥ ಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹತ್ತು- ಹಲವು ನವನವೀನ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು.

Advertisement

ಈ ವರ್ಷ ದೇಶಾದ್ಯಂತ ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಅಂತೆಯೇ ಈ ವರ್ಷ ಪ್ಲಾಸ್ಟಿಕ್‌ ಮಾಲಿನ್ಯ ನಿಷೇಧಿಸುವ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ದಿಟ್ಟ ಹೆಜ್ಜೆ ಇಡಬೇಕಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧಿಸುವ ನಿಟ್ಟಿನಲ್ಲಿ ನಗರಸಭೆ ತನ್ನ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು.

ಈಗಿರುವ ಪ್ಲಾಸ್ಟಿಕನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಎಲ್ಲಿ ಕೂಡ ಪ್ಲಾಸ್ಟಿಕ್‌ ಕಾಣದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಶಾಲೆಗಳಲ್ಲಿ ಪರಿಸರ ದಿನ: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ರೂಪಿಸಲಾಗುವ ಎಲ್ಲ ಕಾರ್ಯಕ್ರಮಗಳು ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲಿ ಜೂನ್‌ 5ರಂದು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಮತ್ತು ಇನ್ನಿತರ ಸ್ಪರ್ಧೆ ನಡೆಸಿ ಪ್ರತಿ ಶಾಲೆಯಲ್ಲಿ ಪ್ರತ್ಯೇಕ ಬಹುಮಾನ ನೀಡುವ ವ್ಯವಸ್ಥೆ ಮಾಡಿಸಿ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶ ಶಿರಹಟ್ಟಿಮಠ ಅವರಿಗೆ ನಿರ್ದೇಶನ ನೀಡಿದರು.

ಚಿತ್ರಕಲಾ ಸ್ಪರ್ಧೆ: ನಗರದಲ್ಲಿರುವ ವಿವಿಧ ಚಿತ್ರಕಲಾ ಕಾಲೇಜುಗಳ ಸಹಯೋಗದಲ್ಲಿ, ಆಸಕ್ತ ಚಿತ್ರಕಲಾವಿದರಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸ್ಪರ್ಧೆಯಲ್ಲಿ ಯಾರಾದರು ಕೂಡ ಪಾಲ್ಗೊಳ್ಳಬಹುದಾಗಿದೆ. 

Advertisement

ಬೀದಿನಾಟಕ-ಸಂಗೀತ ಸಂಜೆ: ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ತಿಳಿವಳಿಕೆ ನೀಡಬೇಕಿದೆ. ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವುದು ಹೇಗೆ ಅನ್ನುವುದರ ಬಗ್ಗೆ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಲಾವಿದರಿಂದ ಬೀದಿನಾಟಕ ನಡೆಸುವ ವ್ಯವಸ್ಥೆ ಮಾಡಬೇಕು. ಜತೆಗೆ ಪರಿಸರ ಗೀತೆಗಳು ಹಾಗೂ ಸಂಗೀತದ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಸಂಗೀತ ಸಂಜೆ ಕಾರ್ಯಕ್ರಮದ ಏರ್ಪಾಡು ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಎನ್‌ಎಸ್‌ಎಸ್‌-ಎನ್‌ಸಿಸಿ ತಂಡಗಳು: ದಿನಾಚರಣೆ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ತಂಡಗಳನ್ನು ಬಳಸಿಕೊಳ್ಳಬೇಕು. ಇಕೋ ಕ್ಲಬ್‌ ರಚಿಸಬೇಕು. ಕೋಳಾರ ಕೈಗಾರಿಕಾ ಪ್ರದೇಶ, ಹುಮನಾಬಾದ್‌ ಕೈಗಾರಿಕಾ
ಪ್ರದೇಶ, ಪಾಪನಾಶ ದೇವಾಲಯ, ಖರೇಜ್‌ ಪ್ರದೇಶ ಸೇರಿದಂತೆ ಆಯ್ಕೆ ಮಾಡಿಕೊಂಡ ಸ್ಥಳಗಳಿಗೆ ಭೇಟಿ ನೀಡಿದ
ತಂಡಗಳು ಬಳಿಕ ಆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಯಿತು. ಈ ತಂಡಗಳಲ್ಲಿ ವಿಜ್ಞಾನ ಶಿಕ್ಷಕರು ಕಡ್ಡಾಯ
ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಯಿತು.

ನಾನು ಪ್ಲಾಸ್ಟಿಕನ್ನು ಬಳಸುವುದಿಲ್ಲ. ನಮ್ಮ ಮನೆಯಲ್ಲಿ ಶೌಚಾಲಯ ಕಟ್ಟಲು ತಿಳಿಸುತ್ತೇನೆ. ನೀರನ್ನು ಮಿತವಾಗಿ ಬಳಸುತ್ತೇನೆ ಎನ್ನುವ ಅಂಶಗಳನ್ನೊಳಗೊಂಡ ಪ್ರತಿಜ್ಞಾವಿಧಿಯನ್ನು ಒಂದು ವಾರ ಸಮಯ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಮಾಡಿಸಬೇಕು ಎಂದು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಯಿತು.

ಪೌರಾಯುಕ್ತ ಮನೋಹರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಗಳು, ಐಟಿಐ ಪ್ರಾಚಾರ್ಯ ಶಿವಶಂಕರ ಠೊಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ರಾಜಶೇಖರ ವಟಗೆ, ವಾರ್ತಾ ಇಲಾಖೆ ಅಧಿಕಾರಿ ಗವಿಸಿದ್ದಪ್ಪ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next