Advertisement

ಇಂದು ವಿಶ್ವ ಪರಿಸರ ದಿನಾಚರಣೆ

09:54 PM Jun 04, 2019 | mahesh |

“ನಮಗೆ ಇರುವುದೊಂದೇ ಭೂಮಿ- ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ’ ಎಂಬುದು ಸಾರ್ವತ್ರಿಕವಾದ ಆಶಯ. ಪರಿಸರ ಮಾಲಿನ್ಯ ಜಗತ್ತನ್ನು ಅತ್ಯಂತ ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳುವುದೇ ಮಹತ್ವದ ಕರ್ತವ್ಯವಾಗಿದೆ. ಈ ಆಶಯದೊಂದಿಗೆ, ಜನಜಾಗೃತಿಯ ಅಭಿಯಾನಕ್ಕೆ ಪ್ರತೀ ವರ್ಷ ಜೂನ್‌ 5ರಂದು ಆಚರಣೆಯಾಗುವ ವಿಶ್ವ ಪರಿಸರ ದಿನವು ಸ್ಫೂರ್ತಿಯಾಗಿದೆ. ವಿಶ್ವಸಂಸ್ಥೆಯು 70ರ ದಶಕದಲ್ಲಿ ಈ ಅಭಿಯಾನವನ್ನು ಆರಂಭಿಸಿತು.

Advertisement

ವಿಶ್ವಸಂಸ್ಥೆಯು ಸುರಕ್ಷತಾ ಪರಿಸರ ಭದ್ರತಾ ಹಾಗೂ ಆರೋಗ್ಯಪೂರ್ಣ ಭವಿಷ್ಯದ ಉದ್ದೇಶದಿಂದ “ಮಾನವ ಪರಿಸರಕ್ಕೆ ಸ್ಟಾಕ್‌ ಹೋಂ ಸಮ್ಮೇಳನ’ವನ್ನು 1972ರಲ್ಲಿ ಏರ್ಪಡಿಸಿತು. ಪರಿಸರ ಸಂರಕ್ಷಣೆಗೆ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿತು. 1974ರಲ್ಲಿ ಜೂನ್‌ 5ರ ಘೋಷಣೆಯಾಯಿತು.

ಪರಿಶುದ್ಧ ಪರಿಸರವನ್ನು ರೂಪಿಸಲು ಇದು ಜನತೆಯ ಅಭಿಯಾನವಾಗಬೇಕೆಂದು ಘೋಷಿಸಲಾಯಿತು. ಪರಿಸರ ಸಂಬಂಧಿತ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ; ಈ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು ಈ ಅಭಿಯಾನದ ಕಾರ್ಯವಾಯಿತು. ಸ್ವಚ್ಚ ಮತ್ತು ಸುಂದರ ಪರಿಸರವೆಂಬುದು ಧ್ಯೇಯವಾಯಿತು.

ಸುಂದರವಾದ ಭೂಮಿ
ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಿ, ಸುಂದರವಾದ ಭೂಮಿಯನ್ನು ಸಮಗ್ರ ಹಿತಾಸಕ್ತಿಯ ರಕ್ಷಣೆಗಾಗಿ ರೂಪಿಸಲು ಈ ವಿಶ್ವ ಪರಿಸರ ದಿನ ಆಚರಣೆಯು ಪ್ರೇರೇಪಿಸುತ್ತದೆ.

ಆರೋಗ್ಯಪೂರ್ಣ ಪರಿಸರದ ಮಹತ್ವದ ಅರಿವು ಮೂಡಿಸುವುದು, ಪರಿಸರ ಸಹ್ಯವಾದ ಅಭಿವೃದ್ಧಿ ಕಾರ್ಯಗಳಿಗಷ್ಟೇ ಜಗತ್ತಿನಾದ್ಯಂತ ಆದ್ಯತೆ ನೀಡುವುದು, ಜನತೆ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಇತ್ಯಾದಿ ಆಶಯಗಳಿವೆ. ಪರಿಸರ ಸಂಬಂಧಿತ ಸಂಗತಿಗಳ ಬಗ್ಗೆ ಜನತೆ ಸದಾ ಜಾಗೃತರಾಗಿರಬೇಕು; ಸುಭದ್ರ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಪರಿಸರ ಸಂರಕ್ಷಣೆ ಮುಖ್ಯವಾಗಿರುತ್ತದೆ ಎಂಬ ತಿಳುವಳಿಕೆಯ ಪ್ರಸರಣವನ್ನು ಕೂಡಾ ನಡೆಸಲಾಗುತ್ತಿದೆ.

Advertisement

ಕೆನ್ಯಾದ ನೈರೋಬಿಯದಲ್ಲಿ ಕೇಂದ್ರ ಹೊಂದಿರುವ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ಈ ದಿನದ ಅಭಿಯಾನವನ್ನು ನಿರ್ವಹಿಸುತ್ತದೆ. ಸಸಿಗಳನ್ನು ನೆಡುವುದು, ವಿದ್ಯಾರ್ಥಿ- ಯುವ ಜನತೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರ- ಕ್ವಿಜ್‌ ಮುಂತಾದ ಸ್ಪರ್ಧೆಗಳು ಪರಿಸರ ಜಾಗೃತಿಯ ವಿಷಯದೊಂದಿಗೆ ನಡೆಯುತ್ತದೆ. ಜಾಗೃತಿ ಕಾರ್ಯಾಗಾರಗಳಿಗೆ ಆದ್ಯತೆ ನೀಡಲಾಗುತ್ತದೆ. ಪರಿಸರ ಹಾಗೂ ಹವಾಮಾನ ಬದಲಾವಣೆಯಂತಹ ಸಂಗತಿಗಳ ಬಗ್ಗೆ ಗಮನ ಸೆಳೆಯಲಾಗುತ್ತದೆ.

ಭಾರತದ ಆತಿಥ್ಯ
ಪ್ರತೀ ವರ್ಷ ವಿಶ್ವ ಪರಿಸರ ದಿನಾಚರಣೆಗೆ ನಿರ್ದಿಷ್ಟವಾದ ಧ್ಯೇಯವನ್ನು ಘೋಷಿಸಲಾಗುತ್ತದೆ. 2018ರಲ್ಲಿದು “ಪ್ಲಾಸ್ಟಿಕ್‌ ಮಾಲಿನ್ಯ ನಿವಾರಿಸಿ’ ಎಂಬುದಾಗಿತ್ತು. ಭಾರತ ಇದರ ಆತಿಥೇಯ ರಾಷ್ಟ್ರವಾಗಿತ್ತು. ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂಬ ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. “ನಮ್ಮ ನಿಸರ್ಗವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಬೇಕು. ನಮ್ಮ ವನ್ಯಜೀವಿಗಳು, ಪರಿಸರದ ರಕ್ಷಣೆಯಾಗಬೇಕು. ಪ್ಲಾಸ್ಟಿಕ್‌ನ ಘೋರ ಪರಿಣಾಮಗಳಿಂದ ಜಗತ್ತಿನ ರಕ್ಷಣೆಯಾಗಬೇಕು’ ಎಂದು ಅಭಿಯಾನ ಸಾಗಿತು. ಅಂದಹಾಗೆ, 2022 ರೊಳಗೆ ಭಾರತವನ್ನು ಪ್ಲಾಸ್ಟಿಕ್‌ ಮುಕ್ತ ದೇಶವನ್ನಾಗಿ ಮಾಡುವ ಪ್ರತಿಜ್ಞೆಯನ್ನು ಭಾರತ ಸರಕಾರ ಕೈಗೊಂಡಿದೆ.

2019ರ ಧ್ಯೇಯವಾಕ್ಯ: “ವಾಯು ಮಾಲಿನ್ಯವನ್ನು ನಿವಾರಿಸಿ’ (ಬೀಟ್‌ ಏರ್‌ ಪೊಲ್ಯೂಶನ್‌), ಚೀನಾ ಅತಿಥೇಯ ದೇಶವಾಗಿದೆ.

ಸಂಶೋಧನಾ ಲೇಖನವೊಂದರ ಪ್ರಕಾರ: “ವ್ಯಾಪಕ ಅರ್ಥದಲ್ಲಿ ಪರಿಸರವೆಂದರೆ ಭೂಮಿ, ನೀರು, ಹವಾಮಾನಗಳನ್ನು ಒಳಗೊಂಡ ಭೌತಿಕ ಅಥವಾ ಬಾಹ್ಯ ಪರಿಸರವಷ್ಟೇ ಅಲ್ಲ; ದೇಹದೊಳಗಿನ ಆಂತರಿಕ ಪರಿಸರವನ್ನು- ಮಾನವನನ್ನು ಒಳಗೊಂಡಿರುವ ಸಾಮಾಜಿಕ ಪರಿಸರ ಸಹಿತ ಸೇರಿಸಿಕೊಳ್ಳಬಹುದು.

ಜೈವಿಕವಾಗಿ ಸಸ್ಯ, ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಬಾಹ್ಯ ಕಾರಣಗಳ ಒಟ್ಟು ರೂಪ ಪರಿಸರ. ಜೀವಿಗಳೊಂದಿಗೆ ಪರಿಸರ, ಚೈತನ್ಯ, ವಸ್ತುಗಳ ವಿನಿಮಯ ನಡೆಯುತ್ತಲೇ ಇರುತ್ತದೆ. ಈ ದೃಷ್ಟಿಯಿಂದ, ಒಂದು ಪ್ರದೇಶದ ಜೀವನ ಸಮುದಾಯ, ನೀರು, ನೆಲ, ಉಷ್ಣತೆ, ಆದ್ರìತೆ, ಬೆಳಕು, ಸಮುದ್ರ ಮಟ್ಟ, ಆಹಾರ ಒದಗಣೆ ಇತ್ಯಾದಿ ಎಲ್ಲವೂ ಪರಿಸರದ ವ್ಯಾಪ್ತಿಗೆ ಬರುತ್ತದೆ. ಪರಿಸರಕ್ಕೆ ಅನುಗುಣವಾಗಿ ಜೀವಿಗಳ ವರ್ತನೆ, ಹೊಂದಾಣಿಕೆಗಳಲ್ಲಿ ವೈವಿಧ್ಯವಿದೆ. ಪರಿಸರಕ್ಕೆ ತಕ್ಕಂತೆ ಜೀವಿಗಳ ದೇಹ ರಚನೆ, ಸಂತಾನೋತ್ಪತ್ತಿ, ಬೆಳವಣಿಗೆ, ಆತ್ಮರಕ್ಷಣೆ, ವರ್ತನೆಗಳಲ್ಲಿ ಹೊಂದಾಣಿಕೆಗಳು ನಡೆಯುತ್ತವೆ. ಆದ್ದರಿಂದ, ಈ ಭೂಮಿ ಒಂದೇ ಮತ್ತು ಪರಿಸರವು ಒಂದೇ. ಈ ಪರಿಸರವನ್ನು ರಕ್ಷಿಸುತ್ತಾ ಈ ಭೂಮಿಯನ್ನು ರಕ್ಷಿಸುವುದು ಪವಿತ್ರವಾದ ಕರ್ತವ್ಯ.

ಸಂ: ಎಂಪಿ

Advertisement

Udayavani is now on Telegram. Click here to join our channel and stay updated with the latest news.

Next