ಬೆಂಗಳೂರು: ಪ್ರತಿಯೊಬ್ಬರೂ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳಲು ಮುಂದಾಗಬೇಕು. ಎಷ್ಟೇ ಕಾನೂನು ಮಾಡಿದರೂ ಜಾಗೃತಿ ಇಲ್ಲದಿದ್ದರೆ ವ್ಯರ್ಥ. ಮನುಷ್ಯ ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿ ನಾಶ ನಮ್ಮ ನಾಶ. ಹೀಗಾಗಿ ಪ್ರಕೃತಿಯ ಜತೆಗೆ ನಾವು ಬೆಳೆಯಬೇಕು, ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ – 2023ನ್ನು ಉದ್ಘಾಟಿಸಿದ ಬಳಿಕ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪರಿಸರ ಉಳಿಸುವುದು, ಕಾಡು ಬೆಳೆಸುವುದು ಮತ್ತು ಉಳಿಸುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯ ಅಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪ್ರಕೃತಿ ಉಳಿಸುವ ಜವಾಬ್ದಾರಿಯಿದೆ. ಪೂರ್ವಿಕರು ಪರಿಸರದ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದರು. ಹಿಂದೆ ಒಂದು ಮರ ಕಡಿದರೆ ಹತ್ತು ಸಸಿ ನೆಡುತ್ತಿದ್ದರು. ಕಾಡು ಬೆಳೆಸುವುದು ನಮ್ಮ ಕರ್ತವ್ಯ. ಪ್ರಕೃತಿ ಮತ್ತು ಮನುಷ್ಯ ಒಂದನ್ನೊಂದು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಲಮಿತಿ ಯೋಜನೆ ಹಾಕಿಕೊಳ್ಳಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅರಣ್ಯ ಇಲಾಖೆ ಕಾಲಮಿತಿಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಬುದ್ಧಿವಂತಿಕೆ, ವಿದ್ಯಾವಂತಿಕೆ ಇಲ್ಲದಿದ್ದರೂ ಪ್ರಜ್ಞಾವಂತಿಕೆ ಮತ್ತು ಸಾಮಾನ್ಯ ಜ್ಞಾನ ಇರಬೇಕು ಎಂದು ಹೇಳಿದರು. ಆ ಲೆಕ್ಕ, ಡಿಕೆ ಲೆಕ್ಕ, ಶೇ. 40 ಲೆಕ್ಕ ಎಲ್ಲ ಬದಿಗಿಡಿ. ಜನ ನಮ್ಮನ್ನು ಭಾರೀ ನಿರೀಕ್ಷೆ ಇಟ್ಟುಕೊಂಡು ಆರಿಸಿದ್ದಾರೆ. ಅವರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕು. ಅದರಂತೆ ಅರಣ್ಯ ಇಲಾಖೆ ಕೂಡ ವೃತ್ತಿಪರವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಶಾಲಾ ಮಕ್ಕಳನ್ನು ಬಳಸಿ ಹಾದಿ ಬೀದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಯೋಜನೆ ಮಾಡಿ. ಖಾಸಗಿ ಸಂಸ್ಥೆಗಳು ತಮ್ಮ ಕಾಂಪೌಂಡ್‌ನೊಳಗೆ ಗಿಡ ನೆಡುವುದು ಮಾತ್ರವಲ್ಲ. ಕಾಂಪೌಂಡ್‌ನ ಹೊರಗೆ ಬೇರೆ ಪ್ರದೇಶಗಳಲ್ಲಿ ಗಿಡ ನೆಡುವುದು ಮತ್ತು ಸಂರಕ್ಷಿಸುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
Related Articles
5 ಕೋಟಿ ಸಸಿ ನೆಡುವ ಯೋಜನೆ
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಪರಿಸರ ರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಆದರೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರ ಕಾಪಾಡಿದರೆ ಅದು ನಮ್ಮನ್ನು ಕಾಪಾಡಲಿದೆ ಎಂದರು. ಪ್ರತಿ ವರ್ಷ ಇಲಾಖೆಯಿಂದ 2 ಕೋಟಿ ಗಿಡ ಮತ್ತು ಸಂಘ ಸಂಸ್ಥೆಗಳಿಂದ 2.50 ಕೋಟಿ ಸಸಿಗಳನ್ನು ನೆಡಲಾಗುತ್ತದೆ. ಸರಕಾರದಿಂದ ಮುಂದಿನ ದಿನಗಳಲ್ಲಿ 5 ಕೋಟಿ ಸಸಿಗಳನ್ನು ನೆಡಲು ಮುಂದಾಗುತ್ತೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿಂದೆ ನೆಟ್ಟ ಸಸಿಗಳು ಏನಾಗಿವೆ, ಎಷ್ಟು ಉಳಿದಿವೆ, ಎಂಬು ದನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಸಾಧಕರಿಗೆ ಪರಿಸರ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ 2022-23ಯನ್ನು ಬೆಂಗಳೂರಿನ ಹಾರೋಹಳ್ಳಿ ಪಾಳ್ಯದ ಮಂಜುನಾಥ್ ಎಚ್.ಎಂ., ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹೊಸಹೆರವಟ್ಟಾದ ಡಾ| ಎಂ.ಡಿ.ಸುಭಾಶ್ ಚಂದ್ರನ್, ಬಾಗಲಕೋಟೆಯ ಬೀಳಗಿ ತಾಲೂಕಿನ ಯಡಹಳ್ಳಿಯ ಡಾ| ಎಂ.ಆರ್.ದೇಸಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಹಾಸನದ ಬೇಲೂರಿನ ಹಗರೆಯ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್, ರಾಯಚೂರಿನ ಸಿಂಧನೂರಿನ ನಟರಾಜ ಕಾಲನಿಯ ವನಸಿರಿ ಫೌಂಡೇಷನ್‌ಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 1 ಲಕ್ಷ ರೂ. ಒಳಗೊಂಡಿದೆ.