Advertisement

ಧರೆಗೆ ದೊಡ್ಡವರು : ಇವರೇ ಬೇರೆ, ಇವರ ಲೈಫ್ ಸ್ಟೈಲೇ ಬೇರೆ

03:42 PM Apr 22, 2022 | Team Udayavani |

ನಾವು- ನೀವೆಲ್ಲ ನಿಂತಿರುವ ಭೂ ಗ್ರಹಕ್ಕೆ ಇಂದು ವಿಶೇಷ ದಿನ. ಇದುವೇ “ವಿಶ್ವ ಭೂಮಿ ದಿನ’. ನಮ್ಮ ದೈನಂದಿನ ಜೀವನಶೈಲಿ ಭೂಮಿಗೆಷ್ಟು ಅಪಾಯ ತಂದೊಡುತ್ತಿದೆ ಎಂಬುದನ್ನು ಇಂದು ಯಾರೂ ಯೋಚಿಸುತ್ತಿಲ್ಲ. ಆದರೆ, ಇಲ್ಲಿ ಕೆಲವು ಸಾಧಕರಿದ್ದಾರೆ. ಇವರ ವಿಶಿಷ್ಟ ಜೀವನಶೈಲಿ ಭೂಮಿಯನ್ನು ಹಸನಾಗಿಸುತ್ತಿದೆ…

Advertisement

ಝೀರೋ ವೇಸ್ಟ್‌ ವೆಡ್ಡಿಂಗ್‌
ಊಹಿಸಿ… ಒಂದು ಮದುವೆಯಿಂದ ಭೂಮಿಗೆ ಎಸೆಯುವ ತ್ಯಾಜ್ಯವೆಷ್ಟು? ಕ್ವಿಂಟಾಲ್‌ ಅಥವಾ ಟ®ನ್‌ ಅಲ್ಲವೇ? ಆದರೆ ವಾಣಿ ಮೂರ್ತಿ ಎಂಬ ಪರಿಸರಪ್ರೇಮಿ ತಮ್ಮ ಇಬ್ಬರು ಮಕ್ಕಳ ಮದುವೆ ಮಾಡಿರುವುದು ಝೀರೋ ವೇಸ್ಟ್‌ ವೆಡ್ಡಿಂಗ್‌ ಪರಿಕಲ್ಪನೆಯಲ್ಲಿ! ನೈಸರ್ಗಿಕ ವಸ್ತುಗಳಿಂದಲೇ ಮಂಟಪ ಅಲಂಕಾರ, ಮರುಬಳಸಬಹುದಾದ ಬಟ್ಟೆ, ಸ್ಟೀಲ್‌ ತಟ್ಟೆ- ಲೋಟಗಳಿಗಷ್ಟೇ ಮದುವೆಯಲ್ಲಿ ಜಾಗ. ಟಿಶ್ಶೂ ಇಲ್ಲ, ಪೇಪರ್‌ ಲೋಟ- ಪ್ಲಾಸ್ಟಿಕ್‌ ಲೋಟಗಳಿಲ್ಲ, ಬೊಕ್ಕೆಗಳಿಗೆ ಕಡ್ಡಾಯ ನಿಷೇಧ. ಆಹ್ವಾನ ಪತ್ರಿಕೆ ಮುದ್ರಿಸಲೂ ಇಲ್ಲ. ಬಂಧುಗಳ ಮೊಬೈಲ್‌ಗೆ ಡಿಜಿಟಲ್‌ ಪತ್ರಿಕೆ ರವಾನಿಸಿ, ಕಾಗದವನ್ನೂ ಉಳಿಸಿದ್ದರು!

ಟರ್ನಿಂಗ್‌ ಪಾಯಿಂಟ್‌: ಬೆಂಗಳೂರೆಂಬ ಅತ್ಯಾಧುನಿಕ ನಗರ ತಾನು ತಿಂದೆಸೆದ ತ್ಯಾಜ್ಯಗಳನ್ನು ಹೊರದಬ್ಬುವುದು ಮಾವಳ್ಳಿಪುರ ಎಂಬ ಪುಟ್ಟ ಗ್ರಾಮಕ್ಕೆ. ಒಮ್ಮೆ ವಾಣಿ ಆ ಹಳ್ಳಿಗೆ ಹೋಗಿದ್ದರು. ಎಲ್ಲೆಲ್ಲೂ ಕಸದ ರಾಶಿ ಸೃಷ್ಟಿಸಿದ್ದ ಮೌಂಟ್‌ ಎವರೆಸ್ಟ್‌ಗಳು. ಒಣಕಸದೊಟ್ಟಿಗೆ ಹಸಿಕಸವೂ ಬೆರೆತು, ಅಲ್ಲಿ ಸೃಷ್ಟಿಯಾದ ಗ್ರೀನ್‌ಹೌಸ್‌ ಗ್ಯಾಸ್‌ ಮತ್ತು ರಾಸಾಯನಿಕ ದ್ರವಗಳು ಮಣ್ಣು, ಜಲ ಮತ್ತು ವಾತಾವರಣವನ್ನೇ ಕಲುಷಿತಗೊಳಿಸಿದ್ದವು. ಇದರ ಪಕ್ಕದಲ್ಲೇ ಕೆಲವು ರೈತರು ತರಕಾರಿ, ಸೊಪ್ಪು ಬೆಳೆದು, ಅದೇ ಬೆಂಗಳೂರಿಗೆ ಕಳುಹಿಸುತ್ತಿದ್ದರು!
“ಅಂದರೆ, ನಾವು ಎಸೆಯುವ ಕಸ ನಮ್ಮದೇ ಕಿಚನ್‌ಗೆ, ನಮ್ಮದೇ ತಟ್ಟೆಗೆ ಪುನಃ ಬರುತ್ತಿದೆ!’ ಎಂಬ ಸತ್ಯ ಅರಿತ ವಾಣಿಮೂರ್ತಿ, ಅಂದಿನಿಂದಲೇ ಹಸಿಕಸಗಳ ಕಾಂಪೋಸ್ಟ್‌ ಬಗ್ಗೆ ಜಾಗೃತಿ ಮೂಡಿಸತೊಡಗಿದರು. ಸ್ವತ್ಛಗ್ರಹ ಕಲಿಕಾ ಕೇಂದ್ರ ತೆರೆದರು. ತ್ಯಾಜ್ಯ ನಿರ್ವಹಣೆ, ತಾರಸಿ ಕೃಷಿ ಕುರಿತ ಇವರ ವಿಡಿಯೊಗಳು ಲಕ್ಷಾಂತರ ವೀಕ್ಷಣೆ ಪಡೆಯುತ್ತಿವೆ. ಕಾಂಕ್ರೀಟ್‌ ನಗರದಲ್ಲಿದ್ದೇ “ವರ್ಮ್ ಕ್ವೀನ್‌’ ಎಂಬ ಖ್ಯಾತಿಗೂ ಪಾತ್ರರು. ವಾಣಿ ಅವರ ಈ ಎಲ್ಲ ಮಹತ್ಕಾರ್ಯಗಳಿಗೆ ಸ್ನೇಹಿತೆ ಮೀನಾಕ್ಷಿ ಭರತ್‌ ಪ್ರೇರಣೆ. ಮೀನಾಕ್ಷಿ ಅವರಂತೆಯೇ ವಾಣಿ ಅವರೂ ತಾವು ಹೋದಲ್ಲೆಲ್ಲ ಸ್ಟೀಲ್‌ ತಟ್ಟೆ, ಚಮಚ, ಸ್ಟೀಲ್‌ ಲೋಟಗಳನ್ನು ಕಡ್ಡಾಯವಾಗಿ ಜತೆಗೊಯ್ಯುತ್ತಾರೆ. ತಮ್ಮಿಂದ ಯಾವುದೇ ತ್ಯಾಜ್ಯ ಭೂಮಿಗೆ ಬೀಳಬಾರದು ಎಂಬುದೇ ಇವರ ಕಾಳಜಿ.

ಚಿಂದಿ ಪ್ಲಾಸ್ಟಿಕ್‌ನಿಂದ ಅರಳಿದ ಚೆಂದದ ಸೂರು
ಮನೆ ಕಟ್ಟಬೇಕಾದರೆ ಕಲ್ಲು, ಮರಳು, ಸಿಮೆಂಟ್‌ ಅಗತ್ಯವಾಗಿ ಬೇಕು. ಆದರೆ, ಮಂಗಳೂರಿನ ಪಚ್ಚನಾಡಿಯಲ್ಲಿರುವ ಒಂದು ಮನೆ ಬಹಳ ವಿಶೇಷ. ಕಸದ ತೊಟ್ಟಿಗೆ ಹಾಕಲಾಗುವ ತ್ಯಾಜ್ಯದಿಂದ ಆಯ್ದ ಚಿಂದಿ ಪ್ಲಾಸ್ಟಿಕ್‌ಗಳೇ ಈ ಮನೆಗೆ ಆಧಾರ!

ಹೌದು. ಕಾಂಕ್ರೀಟ್‌ ಅಡಿಪಾಯದ ಮೇಲೆ ನಿಂತಿರುವ ಈ ಮನೆಯ ಗೋಡೆಗೆ 1,500 ಕಿಲೋ ಪ್ಲಾಸ್ಟಿಕ್‌ ಬಳಸಲಾಗಿದೆ. ರಾಜ್ಯದಲ್ಲಿಯೇ ಇದು ಮೊದಲ ಪ್ರಯೋಗ. 350 ಚದರ ಅಡಿಯ ಮನೆಯನ್ನು ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಶನ್‌ ಸಂಸ್ಥೆಯು ಮಂಗಳೂರು ಪಾಲಿಕೆಯ ನಿವೃತ್ತ ಪೌರ ಕಾರ್ಮಿಕೆ ಕಮಲಾಗೆ ಉಚಿತವಾಗಿ ನಿರ್ಮಿಸಿಕೊಟ್ಟಿದೆ. ಬಾಳಿಕೆ, ಸ್ಥಿರತೆ, ಗುಣಮಟ್ಟಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಂಶೋಧನೆ ಕೈಗೊಂಡೇ ಮನೆ ಕಟ್ಟಲಾಗಿದೆ. ಸಂಗ್ರಹಿಸಿದ ತ್ಯಾಜ್ಯರೂಪದ ಪ್ಲಾಸ್ಟಿಕ್‌ಗಳನ್ನು ಗುಜರಾತ್‌ನಲ್ಲಿ ಕಂಪ್ರಸ್‌ ಮಾಡಿಸಿ, ಅದರಲ್ಲಿನ ದುರ್ವಾಸನೆ ತೆಗೆಸಲಾಗಿತ್ತು. ನಂತರ ಅದಕ್ಕೆ ರಾಸಾಯನಿಕ ಬಳಸಿ, ಪ್ಯಾನೆಲ್‌ಗ‌ಳನ್ನು ತಯಾರಿಸಲಾಗಿತ್ತು. 8 ಎಂಎಂನಿಂದ 20 ಎಂಎಂವರೆಗಿನ ಪ್ಯಾನೆಲ್‌ಗ‌ಳಿಗೆ ಕಬ್ಬಿಣದ ಫ್ಯಾಬ್ರಿಕೇಶನ್‌ ಸ್ಪರ್ಶ ನೀಡಿ, ಮನೆ ಕಟ್ಟಲಾಗಿದೆ. ಗಾಳಿಗೂ ಜಗ್ಗದೆ, ಮಳೆಗೂ ಮುರಿಯದೆ ಸುರಕ್ಷಿತವಾಗಿರುವ ಈ ಮನೆ 30 ವರ್ಷ ಬಾಳಿಕೆ ಬರುತ್ತದಂತೆ. “ನನ್ನ ಜೋಪಡಿ ಮುರಿದು ಬಿದ್ದಿತ್ತು. ಅಂಥ ಸಂಕಷ್ಟದ ಸಮಯದಲ್ಲಿ ಫೌಂಡೇಶನ್‌ನವರು ಮನೆ ಕಟ್ಟಿಕೊಟ್ಟಿದ್ದಾರೆ. ಮನೆ ಗಟ್ಟಿಮುಟ್ಟಾಗಿದೆ’ ಅಂತಾರೆ, ಮನೆಯೊಡತಿ ಕಮಲಾ.

Advertisement

ಪ್ಲಾಸ್ಟಿಕ್‌ ಹೆಕ್ಕುವ “ಇಳೆ’ ಗೆಳೆಯರು
ಶಿವಮೊಗ್ಗದಿಂದ ಹೊರಡುವ ತೀರ್ಥಹಳ್ಳಿ ರಸ್ತೆ ಎಂದರೆ, ಪ್ರವಾಸಿಗರಿಗೆ ಸ್ವರ್ಗ. ದಟ್ಟಕಾಡು, ತಣ್ಣನೆ ಹರಿಯುವ ತುಂಗೆ, ಹಚ್ಚಹಸುರಿನ ಬೆಟ್ಟ, ಸಕ್ಕರೆಬೈಲಿನ ಆನೆ, ಗಾಜನೂರು ಡ್ಯಾಂ, ಮಂಡಗದ್ದೆಯ ಪಕ್ಷಿಕಾಶಿ…ಸ್ವರ್ಗಕ್ಕೆ ಕಿಚ್ಚು ಹತ್ತಿಸುವ ಎಲ್ಲ ಸಂಗತಿಗಳೂ ಇಲ್ಲಿ ಸಾಲು ಸಾಲಾಗಿವೆ. ಇದನ್ನು ನೋಡಿ ಮೈಮರೆಯುವ ಪ್ರವಾಸಿಗರು, ಆ ಸ್ಥಳಗಳಲ್ಲಿ ನೀರಿನ ಬಾಟಲಿ, ಕೂಲ್‌ಡ್ರಿಂಕ್ಸ್‌- ಮದ್ಯದ ಬಾಟಲಿ, ಬಿಸ್ಕೆಟ್‌ ಪೊಟ್ಟಣದ ಕವರ್‌ಗಳನ್ನೆಲ್ಲ ಎಸೆದು ರಂಪ ಮಾಡಿ ಹೋಗಿರುತ್ತಾರೆ.
ಸ್ವರ್ಗದ ಗರ್ಭದೊಳಗೆ ಸೃಷ್ಟಿಯಾಗುತ್ತಿರುವ ನರಕ ಕಂಡು ಗಾಜನೂರು ಸಮೀಪದ ಮೇಲಿನಕೊಪ್ಪದ ಪರಿಸರ ಪ್ರೇಮಿ ರಶ್ಮಿ ರಾವ್‌ಗೆ ಆತಂಕವಾಯಿತು.

“ಛೇ ಇದನ್ನು ಕ್ಲೀನ್‌ ಮಾಡೋರು ಒಬ್ರೂ ಇಲ್ವಲ್ಲ’ ಅಂತ ಒಂದಿನ ಬಯ್ದರು, ಎರಡನೇ ದಿನವೂ ಬಯ್ದರು… ಆದರೆ, ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಮೂರನೇ ದಿನ ಇವರೇ ಸ್ವತಃ ತಮ್ಮೊಂದಿಗೆ ಪತಿ ಸುನಿಲ್‌, ಮಗಳು ಸ್ವರಾಳನ್ನು ಕರೆದೊಯ್ದು, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸತೊಡಗಿದರು. ಇವರ ಈ ಕಾರ್ಯ ಗಮನಿಸಿದ ಸುಪ್ರೀಮ್‌ ಬಜಾಜ್‌ ಶಿವಮೊಗ್ಗ, ನೇಚರ್‌ ಫ‌ಸ್ಟ್‌ ಮತ್ತು ಗ್ರೀನ್‌ ಲೈವ್ಸ್‌ ಸಂಸ್ಥೆಗಳು ಕೈಜೋಡಿಸಿದವು. ಭೂಮಿಯನ್ನು ಸ್ವತ್ಛಗೊಳಿಸುವುದಕ್ಕಾಗಿಯೇ “ಇಳೆ’ ಎಂಬ ಸಂಸ್ಥೆ ಕಟ್ಟಿದ್ದಾರೆ, ರಶ್ಮಿ.

ಗಣಿನಾಡಿನ ಮಣ್ಣಿನ ಡಾಕ್ಟರ್‌ ಕಥೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ವಿಶ್ವೇಶ್ವರ ಸಜ್ಜನ್‌, ಕಳೆದೆರಡು ದಶಕದಿಂದ ಸಾವಯವ ಅದರಲ್ಲೂ ಕಾಡು ಕೃಷಿ ಮಾಡುತ್ತಾ, ಬೆಳೆದ ಉತ್ಪನ್ನಗಳನ್ನು ತಾವೇ ಮೌಲ್ಯವರ್ಧನೆ ಮತ್ತು ಮಾರಾಟ ಮಾಡಿ ಬದುಕು ರೂಪಿಸಿಕೊಂಡಿದ್ದಾರೆ. ಸಜ್ಜನ್‌ ಅವರಿಗೆ “ಮಣ್ಣಿನ’ ಸಂಗ ಹೆಜ್ಜೇನ ಸವಿದಂತೆ. ಮಣ್ಣೇ ಇವರಿಗೆ ಸರ್ವಸ್ವ.

ಇತರರನ್ನೂ ಪರಿಸರ ಸ್ನೇಹಿ ಕೃಷಿ ಪದ್ಧತಿಗೆ ಪ್ರೇರೇಪಿಸಿ, ಕಾಡು ಕೃಷಿಕರ ದೊಡ್ಡ ಪಡೆಯನ್ನೇ ಕಟ್ಟಿದ್ದಾರೆ. ಮಣ್ಣಿನ ಫ‌ಲವತ್ತತೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಗ ಕೈಗೊಂಡಿದ್ದಾರೆ. ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. ವಿಷಯುಕ್ತ ಆಹಾರ ಕಡಿಮೆಗೊಳಿಸುವುದಕ್ಕಾಗಿ ಭೂಮಿಗೆ ಬಲ ತುಂಬಿ, ರೈತರ ಆದಾಯ ಹೆಚ್ಚಿಸಲು ಇವರ ಪಡೆ ಅವಿರತ ಶ್ರಮಿಸುತ್ತಿದೆ. 2019ರಲ್ಲಿ, ಇವರ ಈ ಸಾಧನೆ ಕಂಡು ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿತ್ತು.

ನಾವು ನಿಂತಿರೋದು, ಟೂತ್‌ಬ್ರಶ್‌ಗಳ ಮೇಲೆ!
ನಮ್ಮ ನಿತ್ಯದ ಶಾಪಿಂಗ್‌ನಲ್ಲಿ, ಭೂಮಿಗೆ ತ್ಯಾಜ್ಯವಾಗುವ ವಸ್ತುಗಳನ್ನು ನಾವೆಷ್ಟು ಖರೀದಿಸುತ್ತಿದ್ದೇವೆ ಎಂಬ ಪುಟ್ಟ ಅರಿವು ನಮಗ್ಯಾರಿಗೂ ಇಲ್ಲ. ಬೆಳಗೆದ್ದು ನಾವು ಕೈಹಿಡಿವ ಒಂದು ಪುಟ್ಟ ಟೂತ್‌ಬ್ರಶ್‌ನಿಂದ ಹಿಡಿದು ನಾವು ನಿತ್ಯ ಬಳಸುವ ಪ್ರತೀ ವಸ್ತುವೂ ಭೂಮಿಗೆ ಉಪಯೋಗಿಯೇ ಆಗಿರಬೇಕು ಎನ್ನುವ ಪಾಲಿಸಿ, ಬೆಂಗಳೂರಿನ ಸಹರ್‌ ಮಾನ್ಸೂನ್‌ ಎಂಬ ಯುವತಿಯದ್ದು. “ಪ್ರತೀ ವರ್ಷ 4.7 ಶತಕೋಟಿ ಟೂತ್‌ಬ್ರಶ್‌ಗಳು ತ್ಯಾಜ್ಯವಾಗಿ ಭೂಮಿಗೆ ಸೇರುತ್ತಿವೆ. ಇದು ಭೂಮಿಯಲ್ಲಿ ಕರಗಲು 200-700 ವರ್ಷಗಳ ವರೆಗೆ ತಗಲುತ್ತವೆ. ಈಗ ನಾವೆಲ್ಲೇ ಕುಳಿತಿದ್ದರೂ ನಮ್ಮ ಕಾಲಿನ ಕೆಳಗೆ ಡೀಕಾಂಪೋಸ್ಟ್‌ ಆಗದ ಟೂತ್‌ಬ್ರಶ್‌ ಇದ್ದೇ ಇದೆ’ ಎನ್ನುವ ಮಾನ್ಸೂನ್‌, ಭೂಮಿಗೆ ಅಪಾಯಕಾರಿಯಾದ ಇಂಥ ವಸ್ತುಗಳಿಗೆ ಪರ್ಯಾಯ ಮಾರುಕಟ್ಟೆ ರೂಪಿಸಲು “ಬೇರ್‌ ನೆಸೆಸ್ಸಿಟೀಸ್‌’ ಅಂತಲೇ ಒಂದು ಸಂಸ್ಥೆ ತೆರೆದಿದ್ದಾರೆ. ಶೂನ್ಯ ತ್ಯಾಜ್ಯ, ಆರ್ಗಾನಿಕ್‌ ಮತ್ತು ರಾಸಾಯನಿಕ ರಹಿತ ಉತ್ಪನ್ನಗಳನ್ನು ಮಾರುವುದು ಇದರ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next