Advertisement

ವಿಶ್ವ ಡೌನ್‌ ಸಿಂಡ್ರೋಮ್‌ ದಿನ 2022- ಮಾರ್ಚ್‌ 21 : ಒಳಗೊಳ್ಳುವಿಕೆಯ ಅರ್ಥವೇನು?

10:52 PM Mar 26, 2022 | Team Udayavani |

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುವ ಭಾರತೀಯ ಮೂಲದ ಸಂಗೀತಗಾರ ಸುಜೀತ್‌ ದೇಸಾಯಿ, ಆಸ್ಟ್ರೇಲಿಯಾದ ವೃತ್ತಿಪರ ರೂಪದರ್ಶಿ ಮ್ಯಾಡಲೀನ್‌ ಸ್ಪುವರ್ಟ್‌, ಸ್ಪೇನ್‌ನ ನಟ ಪಾಬ್ಲೊ ಪಿನೆಡಾ ಅಥವಾ ಅಮೆರಿಕದ ಒಲಿಂಪಿಕ್‌ ಜಿಮ್ನಾಸ್ಟ್‌ ಚೆಲ್ಸಿಯಾ ವರ್ನರ್‌ ಬಗ್ಗೆ ನೀವು ಕೇಳಿದ್ದೀರಾ? ಇವರಲ್ಲಿ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿರುವುದೇನು ಎಂದು ನಿಮಗೆ ತಿಳಿದಿದೆಯೇ?

Advertisement

ಅವರೆಲ್ಲರೂ 21ನೆಯ, ಹೆಚ್ಚುವರಿ ವರ್ಣತಂತುವಿನ (ಕ್ರೋಮೋಸೋಮ್‌) ಇರುವಿಕೆಯಿಂದ ಉಂಟಾಗುವ ಡೌನ್‌ ಸಿಂಡ್ರೋಮ್‌ ಎಂಬ ಸ್ಥಿತಿಯನ್ನು ಹೊಂದಿದವರಾಗಿದ್ದಾರೆ. ಇದನ್ನು ಹೆಚ್ಚಾಗಿ ಟ್ರೈಸೋಮಿ 21 ಎಂದು ಕರೆಯುತ್ತಾರೆ. ಇದಕ್ಕೂ ಮಗುವಿನ ಜನನ ಪೂರ್ವದಲ್ಲಿ ಪೋಷಕರ ಕ್ರಿಯೆಗೂ ಯಾವ ಸಂಬಂಧವೂ ಇಲ್ಲ. ಹೆಚ್ಚುವರಿಯಾದ ಆನುವಂಶಿಕ ವಸ್ತುವು ಡೌನ್‌ ಸಿಂಡ್ರೋಮ್‌ನಲ್ಲಿ ಬೆಳವಣಿಗೆಯ ಬದಲಾವಣೆಗಳು ಮತ್ತು ದೈಹಿಕ ಲಕ್ಷಣಗಳಿಗೆ ಕಾರಣವಾಗುತ್ತದೆ. ಸ್ನಾಯುಗಳ ದೃಢತೆಯು ಕಡಿಮೆ ಇರುವುದು, ಗಿಡ್ಡ ನಿಲುವು, ಚಪ್ಪಟೆ ಮೂಗೇಣು, ಮೇಲ್ಮುಖ ವಾಲಿದ ಕಣ್ಣುಗಳು ಮತ್ತು ಹೊರಚಾಚಿದ ನಾಲಿಗೆ ಇವು ವಿಶೇಷವಾಗಿ ಡೌನ್‌ ಸಿಂಡ್ರೋಮ್‌ನಲ್ಲಿ ಕಂಡುಬರುವ ಸಾಮಾನ್ಯ ಗುಣಲಕ್ಷಣಗಳಾಗಿವೆ. ಬಹುಪಾಲು ಸಂದರ್ಭಗಳಲ್ಲಿ ಡೌನ್‌ ಸಿಂಡ್ರೋಮ್‌ ಸ್ಥಿತಿಯು ಬೌದ್ಧಿಕ ವಿಕಲತೆಗೆ ಕಾರಣವಾಗಿರುತ್ತದೆ. ಸೌಮ್ಯದಿಂದ ಮಧ್ಯಮ ಮಟ್ಟದ ಕಲಿಕಾ ನ್ಯೂನತೆಗಳು, ಬೆಳವಣಿಗೆಯಲ್ಲಿನ ವಿಳಂಬ, ದೃಷ್ಟಿ ಮತ್ತು ಶ್ರವಣ ಸಮಸ್ಯೆಗಳು ಇದಕ್ಕೆ ಸಂಬಂಧಿಸಿವೆ. ಹೃದಯಸಂಬಂಧಿ ತೊಂದರೆಗಳು, ಜೀರ್ಣಾಂಗವ್ಯೂಹ ಅಥವಾ ಜಠರಗರುಳಿನ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಡೌನ್‌ ಸಿಂಡ್ರೋಮ್‌ ಇರುವವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಈ ಸ್ಥಿತಿಯನ್ನು ಹೊಂದಿರುವ ಪ್ರತೀ ವ್ಯಕ್ತಿಯಲ್ಲಿಯೂ ಸಮಸ್ಯೆಗಳು ಬೇರೆ ಬೇರೆಯಾಗಿರಬಹುದು.

ವಿಶ್ವ ಡೌನ್‌ ಸಿಂಡ್ರೋಮ್‌ ದಿನವನ್ನು (World Down Syndrom Day-WDSD) ಪ್ರತೀ ವರ್ಷ ಮಾರ್ಚ್‌ 21ರಂದು ಆಚರಿಸಲಾಗುತ್ತದೆ. ಡೌನ್‌ ಸಿಂಡ್ರೋಮ್‌ ಕುರಿತಾಗಿ ಜಾಗೃತಿ ಮೂಡಿಸುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ. ವಿಶ್ವಸಂಸ್ಥೆಯು 2012ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಈ ದಿನವನ್ನು ಆಚರಿಸಿತು. 21ನೆಯ ವರ್ಣತಂತು ತ್ರಿಗುಣಗೊಳ್ಳುವುದರಿಂದಾಗಿ (ಟ್ರೈಸೋಮಿ) ಡೌನ್‌ ಸಿಂಡ್ರೋಮ್‌ ಉಂಟಾಗುತ್ತದೆ. ಆದ್ದರಿಂದ ಈ ಅನನ್ಯತೆಯನ್ನು ಸೂಚಿಸುವುದಕ್ಕಾಗಿಯೇ “ವಿಶ್ವ ಡೌನ್‌ ಸಿಂಡ್ರೋಮ್‌ ದಿನ’ವನ್ನು ವರ್ಷದ ಮೂರನೆಯ ತಿಂಗಳಿನ ಇಪ್ಪತ್ತೂಂದನೆಯ ದಿನದಂದು ನಿಗದಿಪಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಡೌನ್‌ ಸಿಂಡ್ರೋಮ್‌ನ ಪ್ರಮಾಣವು ಪ್ರತೀ 850-900 ಜೀವಂತ ಜನನಗಳಲ್ಲಿ ಒಂದರಂತೆ ಇದೆ. ಡೌನ್‌ ಸಿಂಡ್ರೋಮ್‌ ಇರುವ ಮಕ್ಕಳು ಇನ್ನಿತರ ಮಕ್ಕಳಂತೆಯೇ ಸ್ವತಂತ್ರವಾಗಿರಲು ಹಾಗೂ ತಮ್ಮ ಕಾಳಜಿಯನ್ನು ತಾವು ತೆಗೆದುಕೊಳ್ಳುವಂತಾಗಲು ಹೆಣಗಾಡಬಹುದು. ಇತರ ಮಕ್ಕಳಿಗೆ ಸುಲಭವಾಗಿ ಬಂದುಬಿಡುವ ಶೌಚಾಲಯದ ಬಳಕೆ, ಬಟ್ಟೆಬರೆ ಧರಿಸುವುದು ಮತ್ತು ಆಹಾರ ಸೇವಿಸುವಂತಹ ಚಟುವಟಿಕೆಗಳು ಈ ಮಕ್ಕಳಿಗೆ ಸಮಸ್ಯೆಯನ್ನೊಡಬಹುದು. ಸಮತೋಲನ ಸಾಧಿಸುವುದು, ನಡೆಯುವುದು, ಓಡುವುದು ಮತ್ತು ಜಿಗಿದಾಡುವುದೇ ಮೊದಲಾದ ಚಟುವಟಿಕೆಗಳನ್ನು ಕೈಗೊಳ್ಳಲು ಅವರಿಗೆ ಕಷ್ಟವಾಗುವುದಕ್ಕೆ ಚಲನೆಗೆ ಸಂಬಂಧಿಸಿದ ಸ್ಥೂಲ ಕೌಶಲಗಳ ಕೊರತೆಯನ್ನು ಅವರು ಹೊಂದಿರುವುದೇ ಕಾರಣ. ಸಂಜ್ಞಾತ್ಮಕ (ಇಟಜ್ಞಜಿಠಿಜಿvಛಿ) ಹಾಗೂ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದಾಗಿ ಡೌನ್‌ ಸಿಂಡ್ರೋಮನ್ನು ಹೊಂದಿರುವ ಮಕ್ಕಳಿಗೆ ಗುಂಡಿ ಹಾಕಿಕೊಳ್ಳುವುದು. ಪೆನ್ಸಿಲನ್ನು ಹಿಡಿದುಕೊಳ್ಳುವುದು, ಷೂಲೇಸ್‌ ಕಟ್ಟಿಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ಕಾರಣವೆಂದರೆ ಚಲನೆಗೆ ಸಂಬಂಧಿಸಿದ ಸೂಕ್ಷ್ಮ ಕೌಶಲಗಳ ಕೊರತೆ. ಅವರ ಕೈಬೆರಳುಗಳು ಕೂಡ ಗಿಡ್ಡದಾಗಿರುವುದರಿಂದ ಚಲನೆಗೆ ಸಂಬಂಧಿಸಿದ ಸೂಕ್ಷ್ಮ ಕೌಶಲಗಳನ್ನು ಕಲಿಯುವುದು ಅವರಿಗೆ ಇನ್ನಷ್ಟು ಕಷ್ಟವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ತಮ್ಮ ಸುತ್ತಮುತ್ತಲಿನ ಪರಿಸರದಿಂದ ತಾವು ಪಡೆದುಕೊಳ್ಳುವ ಸಂವೇದನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಹೆಣಗಾಡುತ್ತಾರೆ. ಬೆಳವಣಿಗೆಯ ಮೈಲಿಗಲ್ಲುಗಳನ್ನು ತಲುಪಲು, ಶಾಲಾ ಪಠ್ಯಕ್ರಮ ಮತ್ತು ಸಾಮಾಜಿಕ ಸಂಪರ್ಕಗಳಂತಹ ದೈನಂದಿನ ಸೌಲಭ್ಯಗಳನ್ನು ಪಡೆದು ಬಳಸಲು ಅವರಿಗೆ ಇತರ ಮಕ್ಕಳಿಗಿಂತ ಹೆಚ್ಚಿನ ಸಹಾಯ ಬೇಕಾಗಬಹುದು.

ಡೌನ್‌ ಸಿಂಡ್ರೋಮ್‌ ಇರುವ ವಯಸ್ಕರು ಬೌದ್ಧಿಕ ತೊಂದರೆಗಳಿಂದಾಗಿ ಸಂಕೀರ್ಣ ಕಾರ್ಯಗಳನ್ನು ಮಾಡಿ ಮುಗಿಸಲು ಕಷ್ಟಪಡಬಹುದು. ಮುಂದೆ ಜೀವನದಲ್ಲಿ ಸೂಕ್ತ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಕೂಡ ಅವರು ಹೆಣಗಬೇಕಾಗಬಹುದು. ಕುಟುಂಬಗಳಿಗೆ, ಡೌನ್‌ ಸಿಂಡ್ರೋಮ್‌ ಇರುವ ತಮ್ಮ ವಯಸ್ಕ ಸಂಬಂಧಿಗಳ ಕಾಳಜಿಯನ್ನು ತೆಗೆದುಕೊಳ್ಳಲು ಅಗತ್ಯವಿರುವ ಸೌಕರ್ಯಗಳು ಕೂಡ ಇಲ್ಲದಿರಬಹುದು.

ಡೌನ್‌ ಸಿಂಡ್ರೋಮ್‌ ಕುರಿತಾಗಿ ಕೆಲವು ತಪ್ಪು ತಿಳಿವಳಿಕೆಗಳಿದ್ದು, ಅವುಗಳನ್ನು ಹೋಗಲಾಡಿಸಬೇಕಾಗಿದೆ. ಉದಾಹರಣೆಗೆ, ಡೌನ್‌ ಸಿಂಡ್ರೋಮ್‌ ಇರುವವರು ಬಹಳ ಬೇಗ ಓದುವ ಕೌಶಲವನ್ನು ಬೆಳೆಸಿ ಕೊಳ್ಳಬಲ್ಲರು, ಉಕ್ತ ಹಾಗೂ ಲಿಖೀತ (ಹೇಳಿದ ಮತ್ತು ಬರೆಯಲಾದ) ಮಾತುಗಳನ್ನು ಗ್ರಹಿಸಬಲ್ಲರು ಎನ್ನುವುದು. ಇತರರ ಬಗ್ಗೆ ಆಳವಾದ ಸಹಾನುಭೂತಿಯನ್ನು ಹೊಂದಿರುವುದು (empathy), ಉತ್ತಮ ಸಾಮಾಜಿಕ ಕೌಶಲಗಳು, ಉತ್ತಮ ಅಲ್ಪಾವಧಿ ನೆನಪಿನ ಶಕ್ತಿ ಹಾಗೂ ನೋಡಿ ಕಲಿಯುವ ಕೌಶಲ ಇವು ಅವರ ಬಲಗಳಾಗಿವೆ.

Advertisement

ಕೌಶಲ ಕಲಿಯಲು ನೆರವು :

ಔದ್ಯೋಗಿಕ ಚಿಕಿತ್ಸಕರು ಡೌನ್‌ ಸಿಂಡ್ರೋಮ್‌ ಇರುವ ವಕ್ತಿಗಳಿಗೆ ಅವರ ಬದುಕಿನುದ್ದಕ್ಕೂ ಅಗತ್ಯವಾಗಿರುವ ಕೌಶಲಗಳನ್ನು ಕರಗತ ಮಾಡಿಕೊಳ್ಳಲು ನೆರವಾಗುತ್ತಾರೆ. ತಮ್ಮ ಕೆಲಸ-ಕಾರ್ಯಗಳನ್ನು ತಾವೇ  ಸ್ವತಂತ್ರವಾಗಿ ಮಾಡಿಕೊಳ್ಳುವುದು (ಸ್ವಯಂ ಕಾಳಜಿ ಕೌಶಲ) ಹೇಗೆ ಎನ್ನುವುದನ್ನು ಅವರು ಹೇಳಿಕೊಡುತ್ತಾರೆ. ಶಾಲೆಗೆ ಹೋಗಲು ಸಿದ್ಧರಾಗುವುದಕ್ಕೆ, ಆಟೋಟ ಹಾಗೂ ವಿರಾಮದ ವೇಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ಬೇಕಾದ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಾರೆ.

ಮಗು ಬಹಳ ಚಿಕ್ಕದಾಗಿರುವಾಗ, ಔದ್ಯೋಗಿಕ ಚಿಕಿತ್ಸಕರು ಮಗುವಿಗೆ ಆಹಾರವನ್ನು ಉಣಿಸಲು ತಾಯಿಗೆ ನೆರವಾಗಬಹುದು ಮತ್ತು ಮಕ್ಕಳು ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ನೆರವಾಗುವಂತೆ ಅವರನ್ನು ಹೇಗೆ, ಎಲ್ಲಿ, ಎಂತಹ ಭಂಗಿಯಲ್ಲಿ ಕೂರಿಸಬೇಕು ಎನ್ನುವುದನ್ನೆಲ್ಲ ತಿಳಿಸಿಕೊಡಬಹುದು. ಮಗು ಬೆಳೆದಂತೆಲ್ಲ ಚಿಕಿತ್ಸಕರು ಅವರ ಬಲವನ್ನು ಸುಧಾರಿಸಲು ಮತ್ತು ಸೂಕ್ತ ಸಮಯಕ್ಕೆ ಶಾಲೆಗೆ ಹೋಗುವುದನ್ನು ಆರಂಭಿಸುವುದಕ್ಕೆ ಅಗತ್ಯವಾದ ವಯೋಸೂಕ್ತ ಅರಿವಿನ (ಸಂಜ್ಞಾ) ಕೌಶಲಗಳನ್ನು ಪಡೆದುಕೊಳ್ಳಲು ನೆರವಾಗಬಹುದು.

ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಚಲನೆಗೆ ಸಂಬಂಧಿಸಿದ ಸ್ಥೂಲ ಮತ್ತು ಸೂಕ್ಷ್ಮ ಕೌಶಲಗಳನ್ನು ಉತ್ತಮಪಡಿಸಿಕೊಳ್ಳಲು, ವಿಶಿಷ್ಟ ಮೈಲಿಗಲ್ಲುಗಳನ್ನು ತಲುಪಲು, ಸ್ವಯಂ ಕಾಳಜಿಯ ಕೌಶಲಗಳಲ್ಲಿ ಭಾಗವಹಿಸುವಿಕೆಯನ್ನು ಸುಧಾರಿಸಿಕೊಳ್ಳಲು, ಶಾಲೆಗೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಮತ್ತು ಅಗತ್ಯ ಬಿದ್ದಲ್ಲಿ ಅವರ ಕಲಿಕೆಯನ್ನು ಸುಗಮಗೊಳಿಸಬಹುದಾದ ಅಳವಡಿಕೆಗಳನ್ನು ಒದಗಿಸುವ ಮೂಲಕ ನೆರವಾಗಬಹುದು.

ಡೌನ್‌ ಸಿಂಡ್ರೋಮ್‌ ಇರುವ ವಯಸ್ಕರೊಂದಿಗೆ ಕೆಲಸ ಮಾಡುವಾಗ ಔದ್ಯೋಗಿಕ ಚಿಕಿತ್ಸಕರು ಅವರಿಗೆ ವೃತ್ತಿಪೂರ್ವ ಮತ್ತು ವೃತ್ತಿ ಸಂಬಂಧಿ ತರಬೇತಿಯನ್ನು ಪಡೆಯಲು ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯ ಒದಗಿಸುತ್ತಾರೆ. ಅವರಿಗೆ ಎಂತಹ ಕಾರ್ಯಪರಿಸರವು ಅತ್ಯಂತ ಸೂಕ್ತವಾಗುತ್ತದೆ ಎಂಬುದನ್ನು ನಿರ್ಧರಿಸಲು, ಅವರಿಗೆ ಮೇಲ್ವಿಚಾರಣೆಯ ಆವಶ್ಯಕತೆ ಇದೆಯೇ ಅಥವಾ ಮೇಲ್ವಿಚಾರಣೆಯಿಲ್ಲದ ಪರಿಸರದಲ್ಲಿ ಅವರು ಕೆಲಸ ಮಾಡಬಲ್ಲರೇ ಎಂಬುದನ್ನು ತಿಳಿದುಕೊಳ್ಳಲು, ಸುರಕ್ಷಿತ ಕಾರ್ಯ ಪರಿಸರವನ್ನು ಅಭಿವೃದ್ಧಿಗೊಳಿಸಲು, ಕಾರ್ಯಾನುಕರಣೆಯನ್ನು (Work simulation) ಕೈಗೊಳ್ಳುತ್ತಾರೆ.

ಪ್ರೋತ್ಸಾಹ ನೀಡಿ :

ಡೌನ್‌ ಸಿಂಡ್ರೋಮ್‌ ಇರುವವರು ಅನೇಕ ತರಹದ ಪ್ರತಿಭೆಗಳನ್ನು ಹೊಂದಿದವರೂ ಆಗಿರುತ್ತಾರೆ. ಅದು ಕಾವ್ಯ-ಕವಿತೆಗಳಾಗಿರಬಹುದು, ಸೃಜನಶೀಲ ಕಲೆಗಳಿರಬಹುದು ಅಥವಾ ಇತರರ ಭಾವನೆಗಳನ್ನು ಓದುವುದೂ ಆಗಿರಬಹುದು. ಡೌನ್‌ ಸಿಂಡ್ರೋಮ್‌ ಇರುವವರು ಗುಂಪಿನ ಭಾಗವಾಗಿ ಮತ್ತು ಅನನ್ಯ ಪ್ರತಿಭೆಗಳನ್ನು ಹೊಂದಿರುವ ಪ್ರತ್ಯೇಕ ವ್ಯಕ್ತಿಯಾಗಿ ಎರಡೂ ತರಹದಲ್ಲಿ ಕಾಣಿಸಿಕೊಳ್ಳಲು ಬಯಸಬಹುದು. ಪೋಷಕರು ಮಕ್ಕಳ ಮೇಲೆ ಅತೀ ಹೆಚ್ಚಿನ ಒತ್ತಡವನ್ನು ಹೇರದೆ ಅವರನ್ನು ಪ್ರೋತ್ಸಾಹಿಸುವಂತೆ ನೋಡಿಕೊಳ್ಳಬೇಕು. ಮಕ್ಕಳು ತಮ್ಮ ಪ್ರತಿಭೆಯನ್ನು ಪೋಷಿಸಿಕೊಂಡು ಬರಲು ಅಗತ್ಯವಾದ ಮಾರ್ಗಗಳನ್ನು ಹುಡುಕಿಕೊಳ್ಳುವುದಕ್ಕೆ ಪೋಷಕರು ನೆರವಾಗಬಹುದು. ಉದಾಹರಣೆಗೆ, ಅವರು ಸಂಗೀತದಲ್ಲಿ ಆಸಕ್ತಿಯಿದ್ದವರಾಗಿದ್ದರೆ ಸೂಕ್ತವಾದ ಸಂಗೀತ ಶಿಕ್ಷಕರಿಂದ ಪಾಠ ಹೇಳಿಸುವುದು ಅವರಿಗೆ ಸಹಾಯ ಮಾಡುತ್ತದೆ. ಈ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದು ಮತ್ತು ಅವರು ತಮ್ಮ ಪ್ರತಿಭೆಗಳನ್ನು ಜಗತ್ತಿಗೆ ತೋರಿಸುವಂತೆ ಮಾಡುವುದು ಪೋಷಕರ ಮತ್ತು ಶಿಕ್ಷಕರ ಕೈಯಲ್ಲಿದೆ.

ಈ ವರ್ಷ ವಿಶ್ವ ಡೌನ್‌ ಸಿಂಡ್ರೋಮ್‌ ದಿನ 2022ರ ಪ್ರಧಾನ ವಿಷಯವು “”ಒಳಗೊಳ್ಳುವಿಕೆಯ ಅರ್ಥವೇನು?” ಎಂಬುದಾಗಿದೆ. ವಿಶ್ವಸಂಸ್ಥೆಯ ಪ್ರಕಾರ ಒಳಗೊಳ್ಳುವಿಕೆಯೆಂದರೆ, “ಸಮಾಜದಲ್ಲಿ ಸಂಪೂರ್ಣ ಹಾಗೂ ಪರಿಣಾಮಕಾರಿ ಪಾಲ್ಗೊಳ್ಳುವಿಕೆ ಹಾಗೂ ಸೇರ್ಪಡೆ’. ಇಂದು ವಿಶ್ವದೆಲ್ಲೆಡೆ ಡೌನ್‌ ಸಿಂಡ್ರೋಮ್‌ ಮತ್ತು ಇನ್ನಿತರ ಸಮಸ್ಯೆಗಳನ್ನು ಹೊಂದಿರುವವರಿಗೆ ಸಮಾಜದಲ್ಲಿ, ಬೇರೆಯವರ ಹೋಲಿಕೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅವಕಾಶಗಳನ್ನು ನೀಡಲಾಗುತ್ತಿಲ್ಲ. ಡೌನ್‌ ಸಿಂಡ್ರೋಮ್‌ ಇರುವ ಮಕ್ಕಳು ಮತ್ತು ವಯಸ್ಕರನ್ನು ಸಮಾಜದಲ್ಲಿ ಉತ್ತಮವಾಗಿ ಒಳಗೊಳ್ಳುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳಲ್ಲಿ ಕೂಡ ಔದ್ಯೋಗಿಕ ಚಿಕಿತ್ಸಕರು ಸಹಾಯ ಮಾಡಬಹುದು.

2016ರ ವಿಕಲ ಚೇತನರ ಹಕ್ಕುಗಳು ಕಾಯಿದೆಯ ಪ್ರಕಾರ ಭಾರತದಲ್ಲಿ “ಒಳಗೊಳ್ಳುವಿಕೆಯ ಶಿಕ್ಷಣ’ ಎಂದರೆ, ವೈಕಲ್ಯವನ್ನು ಹೊಂದಿರುವ ಮತ್ತು ಹೊಂದಿರದ ವಿದ್ಯಾರ್ಥಿಗಳು ಒಟ್ಟಿಗೇ ಕಲಿಯುವಂತಹ ಶಿಕ್ಷಣ ವ್ಯವಸ್ಥೆಯಾಗಿದೆ. ವಿಭಿನ್ನ ತರಹದ ವಿದ್ಯಾರ್ಥಿಗಳ ಕಲಿಕೆಯ ಅಗತ್ಯಗಳನ್ನು ಪೂರೈಸಲು ಸೂಕ್ತವಾಗುವ ರೀತಿಯಲ್ಲಿ ಕಲಿಕೆಯ ಮತ್ತು ಬೋಧನೆಯ ವ್ಯವಸ್ಥೆಯನ್ನು ಸೂಕ್ತವಾಗಿ ಅಳವಡಿಸಲಾಗಿರುತ್ತದೆ.

ಒಳಗೊಳ್ಳುವಿಕೆಯ ಶಿಕ್ಷಣವು ಡೌನ್‌ ಸಿಂಡ್ರೋಮ್‌ ಇರುವ ಮಕ್ಕಳನ್ನು ಸಂವೇದನಶೀಲರನ್ನಾಗಿಸುತ್ತದೆ ಮತ್ತು ಉದ್ಯೋಗಾವಕಾಶಗಳೂ ಸೇರಿದಂತೆ ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಸಮಾನತೆಯನ್ನು ಒದಗಿಸುತ್ತದೆ. ಅಧ್ಯಯನಗಳ ಪ್ರಕಾರ ಶಾಲೆಗಳಲ್ಲಿನ ಒಳಗೊಳ್ಳುವಿಕೆಯ ನೀತಿಗಳು ಡೌನ್‌ ಸಿಂಡ್ರೋಮ್‌ ಇರುವ ಮಕ್ಕಳಿಗೆ ಗರಿಷ್ಠ ಕಲಿಕಾ ಪರಿಸರವನ್ನು ಒದಗಿಸುವುದಾಗಿದೆ. ಕಾಲಾನಂತರದಲ್ಲಿ ಭಾಷಾ ಕೌಶಲವನ್ನು ಅಭಿವೃದ್ಧಿಪಡಿಸಲು ಮುಖ್ಯವಾಹಿನಿಯ ಶಾಲೆಗಳು ಪ್ರಯೋಜನಕಾರಿಯಾಗಿವೆ. ಇದಕ್ಕೆ ಶಾಲಾ ಆಡಳಿತ, ಶಿಕ್ಷಕರು, ಕುಟುಂಬದ ಸದಸ್ಯರು ಮತ್ತು ಇತರ ವಿದ್ಯಾರ್ಥಿಗಳ ನೆರವು ಅಗತ್ಯ. ಎಲ್ಲ ಮಕ್ಕಳೂ ಬಯಸುವ ಹಾಗೆ ಅವರನ್ನು ಗೌರವದಿಂದ, ನ್ಯಾಯಯುತವಾಗಿ, ಸಾಂಗತ್ಯಪೂರ್ಣವಾಗಿ ನಡೆಸಿಕೊಳ್ಳಬೇಕಿದೆ.

ಡೌನ್‌ ಸಿಂಡ್ರೋಮ್‌ ಇರುವ ವ್ಯಕ್ತಿಗಳು ವಯಸ್ಕರಾಗಿ ಸಮುದಾಯದಲ್ಲಿ ಸೇರಬೇಕಿದೆ, ಒಂದಾಗಬೇಕಿದೆ. ಇದನ್ನು ಕೆಲಸ ಮಾಡುವ ಜಾಗಗಳಲ್ಲಿ ಸಾಕಷ್ಟು ಸೂಕ್ತವಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮತ್ತು ಜನಸಮುದಾಯವನ್ನು ಈ ಕುರಿತು ಸಂವೇದನಶೀಲರನ್ನಾಗಿ ಮಾಡುವ ಮೂಲಕ ಸಾಧಿಸಬಹುದು.

ಡೌನ್‌ ಸಿಂಡ್ರೋಮ್‌ ಕುರಿತಾಗಿ, ಈ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳ ಬಲ, ಸಾಮರ್ಥ್ಯ ಮತ್ತು ತೊಂದರೆ, ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಹಾಗೂ ಸಮಾಜವನ್ನು ಹೆಚ್ಚು ಒಳಗೊಳ್ಳುವಂತಹದನ್ನಾಗಿ ಮಾಡುವ ಮೂಲಕ ಔದ್ಯೋಗಿಕ ಚಿಕಿತ್ಸಕರು ಅವರು ತೃಪ್ತಿಕರ ಮತ್ತು ಅರ್ಥಪೂರ್ಣ ಬದುಕನ್ನು ನಡೆಸಲು ಬೇಕಾದ ನೆರವನ್ನು ನೀಡಬಲ್ಲರು.

ಟ್ರಿಶಾ ಶೆಫಾಲಿ ಸಲ್ದಾನಾ,

ಪಿ. ಕೇಶವರಾಂ, ಸಿಂಧುಮುಖೀ ಎ.

ಎಂಒಟಿ ವಿದ್ಯಾರ್ಥಿಗಳು

****************************

ಕೌಶಿಕ್‌ ಸಾವು

ಅಸಿಸ್ಟೆಂಟ್‌ ಪ್ರೊಫೆಸರ್‌ – ಹಿರಿಯ ಶ್ರೇಣಿ,

ಅಕ್ಯುಪೇಶನಲ್‌ ತೆರಪಿ ವಿಭಾಗ,

ಎಂಸಿಎಚ್‌ಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next