ಜೀವನದಲ್ಲಿ ನಂಬಿಕೆಯೇ ಎಲ್ಲಾ. ನಂಬಿಕೆ ಜೀವನವನ್ನು ಸಮತೋಲನದಲ್ಲಿಡುತ್ತದೆ.ಈ ನಂಬಿಕೆ ಸಮತೋಲನ ಮೊದಲು ನಮಗೆ ಹೇಳಿಕೊಡುವುದು ಬಾಲ್ಯದ ಸೈಕಲ್. ಸೈಕಲ್ ಎಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ನೆನಪಿನ ಪುಟಗಳು ತೆರೆಯುತ್ತಾ ಹೋಗುತ್ತದೆ.
ಬಾಲ್ಯದಲ್ಲಿ ನಮ್ಮ ಬಳಿ ಸೈಕಲ್ ಇದೆ ಎಂದರೆ ನಮಗೆ ಅದೊಂದು ಬೆಲೆಬಾಳುವ ಆಸ್ತಿ. ದೀಪಾವಳಿಯಂದು ಪಟಾಕಿ ಹೊಡೆಯುವ ಸಂಭ್ರಮಕ್ಕಿಂತ ನಮ್ಮ ಸೈಕಲ್ ಗೆ ಪೂಜೆ ಮಾಡಿಸುವ ಖುಷಿಯೇ ಹೆಚ್ಚು. ಈಗ ಜೀವನದಲ್ಲಿ ಬೀಳಬಾರದು ಎಂದು ಯತ್ನಿಸುವ ನಾವು, ಸೈಕಲ್ ಕಲಿಯುವಾಗ ಖಂಡಿತಾ ಬಿದ್ದಿರುತ್ತೇವೆ.
ನಮ್ಮದು ಹಳ್ಳಿ ಪ್ರದೇಶವಾಗಿದ್ದರಿಂದ ಎಲ್ಲೆಲ್ಲೂ ಸೈಕಲ್ ನದ್ದೆ ಕಾರುಬಾರು. ನಾನು ಅಪ್ಪ ತಂದುಕೊಟ್ಟ ಸೆಕೆಂಡ್ ಹ್ಯಾಂಡ್ ಸೈಕಲ್ ಏರಿಕೊಂಡು ಹೋಗುತ್ತಿದ್ದರೆ, ಅಂಬಾರಿಯಲ್ಲಿ ಹೋಗುವ ಸಂಭ್ರಮ. ಒಮ್ಮೆ ನಾನು ಮತ್ತು ನನ್ನ ಗೆಳೆಯ ಸೈಕಲನ್ನು ರಸ್ತೆಯಲ್ಲಿ ಬಿಟ್ಟು ಗದ್ದೆಯಂಚಿನಲ್ಲಿ ಓಡಿಸಲು ಹೊರಟೆವು. ಗದ್ದೆಯ ನಡುವಿನಲ್ಲಿರುವ ವಿದ್ಯುತ್ ಕಂಬವನ್ನು ಮುಟ್ಟಿ ಬರಬೇಕು ಎಂಬುದು ನಮ್ಮ ಗುರಿ, ನಾವು ಆರಿಸಿದ ಗದ್ದೆ ಎತ್ತರವಾಗಿತ್ತು,ತಪ್ಪಿದರೆ ಬೀಳುವುದು ಹತ್ತು ಅಡಿ ಆಳವಿರುವ ಗದ್ದೆಗೆ. ಕಂಬ ಸಮೀಪಿಸಿದಂತೆ ಆಯಾ ತಪ್ಪಿದ ನಾನು ಸೈಕಲಿನೊಂದಿಗೆ 10 ಅಡಿ ಆಳದ ಗದ್ದೆಗೆ ಬಿದ್ದೆ. ಸವಾರಿಸಿಕೊಂಡು ಎದ್ದಾಗ ತಿಳಿಯಿತು, ಸೈಕಲ್ ನ ಹ್ಯಾಂಡಲ್ ಬಾರ್ ತಾಗಿ ಕಾಲಿಗೆ ಗಾಯವಾಗಿತ್ತು ಅಂತ. ನೋವಲ್ಲಿ ಸೈಕಲ್ ತಳ್ಳಿಕೊಂಡು ಮನೆ ಸೇರಿದಾಗ ಇನ್ನು ಸೈಕಲ್ ಸವಾಸ ಬೇಡ ಅನಿಸಿತ್ತು.ಎರಡು ದಿನದಲ್ಲಿ ಗೆಳೆಯರ ಸೈಕಲ್ ಬೆಲ್ ಕೇಳುತ್ತಿದ್ದಂತೆ ನೋವೆಲ್ಲ ಮಾಯವಾಗಿ ಪುನಃ ಸೈಕಲ್ ಏರಿ ಗದ್ದೆಯ ನಡುವಿನ ಕಂಬ ಮುಟ್ಟಿ ನನ್ನ ಗುರಿ ತಲುಪಿದ್ದೆ.
ಇಂದು ಒಮ್ಮೊಮ್ಮೆ ಜೀವನದಲ್ಲಿ ಸೋತಾಗ ಮೇಲೇಳಲು ಅವರಿವರ ಮಾತು, ‘ಮೋಟಿವೇಷನಲ್ ವಿಡಿಯೋ’ಗಳನ್ನು ನೋಡುತ್ತೇವೆ, ಅದೆಲ್ಲ ಬಿಟ್ಟು ಒಮ್ಮೆ ನೆನಪಿಸಿಕೊಳ್ಳಿ ಸೈಕಲ್ ಕಲಿಯುವಾಗ ಬಿದ್ದ ನಾವು ಎದ್ದು ಮೈಕೊಡವಿ ಛಲದಿಂದ ಪುನಃ ಸೈಕಲ್ ಏರುತ್ತಿದ್ದೆವು. ಸೈಕಲ್ ನಿಂದ ನಾವು ಕಲಿತ ಸಮತೋಲನವೇ ಜೀವನದ ಯಶಸ್ಸಿನ ರಹಸ್ಯ.
ಪೂಜಾ
ತೃತೀಯ ಬಿ.ಎ
ಎಂ.ಜಿ.ಎಂ. ಕಾಲೇಜು
ಉಡುಪಿ