“ಏ.. ನಿನ್ನ ಸೈಕಲ್ ಚಕ್ರ ತಿರುಗ್ತಾ ಉಂಟು ನೋಡು..” ಎಂದು ಹೇಳುತ್ತಾ ಭಾಷಾ ನಡೆದು ಹೋದರು. ನಾನು ಒಂದು ಕ್ಷಣ ಗಾಬರಿ ಬಿದ್ದೆ. ಕೆಳಗೆ ನೋಡಿದೆ. ಹೌದು, ನನ್ನ ಸೈಕಲ್ ಚಕ್ರ ತಿರುಗುತ್ತಲೇ ಇದೆ. ಮತ್ತೆ? ಮತ್ತೇನು? ತಮಾಷೆಗೆ ನಗುತ್ತಾ ಸೈಕಲ್ ಮೆಟ್ಟಿದೆ. ಮುಂದೆ ಹೋದೆ.
ಸೈಕಲ್ ಕಲಿಕೆಯ ಬಾಲ್ಯದ ದಿನಗಳು ಹೆಚ್ಚು ವಿಶೇಷವಾದ್ದೇ ಇಂತಹ ನೆನಪುಗಳಿಂದ. ನಂತರದ ದಿನಗಳಲ್ಲಿ ಈ “ಏ.. ನಿನ್ನ ಸೈಕಲ್ ಚಕ್ರ ತಿರುಗ್ತಾ ಉಂಟು ನೋಡು..” ಎಂಬ ವಾಕ್ಯವನ್ನು ಅದೆಷ್ಟು ಬಾರಿ ನೆನಪಿಸಿಕೊಂಡಿದ್ದೇನೆ, ಇತರ ಸಣ್ಣ ಮಕ್ಕಳಿಗೆ ಹೇಳಿ ನಾನು ದೊಡ್ಡ ಜನ ಎಂದು ಹಲ್ಲುಕಿಸಿದು ನಕ್ಕಿದ್ದೇನೆ. ಹೆಮ್ಮೆ ಪಟ್ಟುಕೊಂಡಿದ್ದೇನೆ. ಗೊತ್ತಿಲ್ಲ.
ಬಾಲ್ಯದಿಂದ ಗಮನಿಸಿ ನೋಡಿದರೆ, ನನ್ನ ಸೈಕಲ್ ಆಸೆ ಬದಲಾಗುವಲ್ಲಿ ಚಕ್ರದ ಲೆಕ್ಕವೂ ಒಂದು ಕಾರಣವಾಗಿದೆ. ಇದು ನಿಮ್ಮ ನೆನಪು, ಅನುಭವವೂ ಆಗಿರಬಹುದು :
ಮೊದಲಿಗೆ ಬಣ್ಣದ ಮೂರು ಚಕ್ರದ ಸೈಕಲ ಮೇಲೆ ಕಣ್ಣು. ನಂತರ ಎರಡು ಚಕ್ರದ ಸೈಕಲಿನ ಮೇಲೆ ಆಸೆ. ಅದನ್ನು ಕಲಿಯಲು ಮತ್ತೆರಡು ಚಕ್ರದ ಜೋಡಿಕೆ. ಅಂದರೆ ನಾಲ್ಕು ಚಕ್ರದ ಸೈಕಲ್. ಈ ಹಂತದಲ್ಲಿ ಸೀರಿಯಸ್ಸಾಗಿ ಸೈಕಲ್ ಕಲಿಕೆ. ಕೊನೆಗೂ ಎರಡು ಚಕ್ರದಲ್ಲಿ ಸೈಕಲ್ ಓಡಿಸುವ ಸಾಮರ್ಥ್ಯ ಸಿದ್ಧಿ.
ಮುಂದಿನದು ಒಂದು ಚಕ್ರದಲ್ಲಿ ಸೈಕಲ್ ಓಡಿಸುವ ಹುಚ್ಚಾಟ! ಕೈ ಬಿಟ್ಟು ಸೈಕಲ್ ಬಿಡುವುದು, ಉಲ್ಟಾ ಪಲ್ಟಾ ಸರ್ಕಸುಗಳು.. ಇತ್ಯಾದಿಯ ಬಳಿಕ ಒಂದು ಚಕ್ರದಲ್ಲಿ ಸೈಕಲ್ ಓಡಿಸುವ ಪ್ರಯತ್ನ ಗುಟ್ಟಾಗಿ ಆಗಿಹೋಗುತ್ತದೆ. ಒಂದೆರಡು ಬಾರಿ ಬಿದ್ದು ತಾಗಿಸಿಕೊಂಡಾಗ, ಸ್ವಲ್ಪವೇ ದೊಡ್ಡವರಾದಂತೆ ಅನಿಸಿದಾಗ ಈ ಎಲ್ಲಾ ಸರ್ಕಸುಗಳು ನಿಲ್ಲುತ್ತವೆ.
ಕೊನೆಗೂ ಖುಷಿ ಕೊಡುವುದು ಗಾಳಿಯಲ್ಲಿ ತೇಲಿದಂತೆ ಹಗುರಾಗಿ ಚಲಿಸುವ ಎರಡು ಚಕ್ರದ ಸೈಕಲು. ಮತ್ತು ಅದರ ಮೇಲೆ ಕುಳಿತ ನಾನು ಚಕ್ರವರ್ತಿ!
– ಗಣಪತಿ ದಿವಾಣ