Advertisement

ಮೂಲ ಟ್ರೋಫಿಯ ವಿಶ್ವದರ್ಶನ

06:00 AM Jun 05, 2018 | Team Udayavani |

ಮಾಸ್ಕೊ: ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳನ್ನು ಸಂಚರಿಸಿದ ಪ್ರತಿಷ್ಠಿತ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಟ್ರೋಫಿ ಆತಿಥೇಯ ನಾಡಿಗೆ ಮರಳಿದೆ. ಮಾಸ್ಕೋದಲ್ಲಿ ಈ ಟ್ರೋಫಿಗೆ ಕ್ರೀಡಾಪ್ರಿಯರಿಂದ ಹಾಗೂ ವಿಶ್ವಕಪ್‌ ಸಂಘಟಕರಿಂದ ಅದ್ದೂರಿಯ ಸ್ವಾಗತ ಸಿಕ್ಕಿದೆ. 

Advertisement

ಕಳೆದ 9 ತಿಂಗಳ ವಿಶ್ವ ಸಂಚಾರದ ಬಳಿಕ ಟ್ರೋಫಿ ಮಾಸ್ಕೋಗೆ ಆಗಮಿಸಿದ್ದಕ್ಕಾಗಿ ವಿಶೇಷ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಮಾಸ್ಕೊ ಮೇಯರ್‌ ಸರ್ಗೆಯಿ ಸೊಬ್ಯಾನಿನ್‌, ಸ್ಥಳೀಯ ಸಂಘಟನಾ ಸಮಿತಿಯ ನಿರ್ದೇಶಕ ಜನರಲ್‌ ಅಲೆಕ್ಸಿ ಸೊರೊಕಿನ್‌, ಕೂಟದ ಅಂಬಾಸಡರ್‌ ಲಿಯಾಸಾನ್‌ ಯುಟಿಯಶೇವಾ, 1990ರ ಫಿಫಾ ವಿಶ್ವಕಪ್‌ ಚಾಂಪಿಯನ್‌ ತಂಡದ ಲೋಥರ್‌ ಮ್ಯಾಥ್ಯೂಸ್‌ (ಜರ್ಮನಿ) ಮೊದಲಾದವರು ಸಂಭ್ರಮಕ್ಕೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಮಾಧ್ಯಮದವರಿಗೆ, ಯುವ ಆ್ಯತ್ಲೀಟ್‌ಗಳಿಗೆ, ಅತಿಥಿಗಳಿಗೆ ಮಾಸ್ಕೊ ಹಾಗೂ ಆಸುಪಾಸಿನ ಸಾರ್ವಜನಿಕರಿಗೆಲ್ಲ ಹತ್ತಿರದಿಂದ ಟ್ರೋಫಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಫಿಫಾ ಪ್ರಕಾರ, ವಿಶ್ವಕಪ್‌ನ “ಮೂಲ ಟ್ರೋಫಿ’ಯನ್ನು ಇಷ್ಟೊಂದು ಹತ್ತಿರದಿಂದ ನೋಡುವ, ಇದರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಲಭಿಸಿದ್ದು ಇದೇ ಮೊದಲು. ಇಲ್ಲವಾದರೆ ಮೂಲ ಟ್ರೋಫಿಯನ್ನು ಕೇವಲ ಜ್ಯೂರಿಚ್‌ ಮ್ಯೂಸಿಯಂನಲ್ಲಷ್ಟೇ ಕಾಣಬೇಕಿತ್ತು. ಜರ್ಮನಿಯಲ್ಲಿ ನಡೆದ 2006ರ ವಿಶ್ವಕಪ್‌ ಪಂದ್ಯಾವಳಿ ಸಂದರ್ಭದಲ್ಲಿ ಮೊದಲ ಬಾರಿಗೆ ಮೂಲ ಟ್ರೋಫಿಯ ವಿಶ್ವ ಸಂಚಾರ ಮೊದಲ್ಗೊಂಡಿತ್ತು. ಅಂದು 29 ದೇಶಗಳನ್ನು ಸುತ್ತಾಡಿತ್ತು.

ಮಾಸ್ಕೊ ಕ್ರೀಡಾ ರಾಜಧಾನಿ 
“ಮಾಸ್ಕೊ ಒಂದು ಕ್ರೀಡಾ ರಾಜಧಾನಿ. 1980ರ ಒಲಿಂಪಿಕ್ಸ್‌ ಕೂಟವನ್ನು ಇಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಬಹಳಷ್ಟು ವಿಶ್ವ ಚಾಂಪಿಯನ್ನರನ್ನು ಸೃಷ್ಟಿಸಿದ ಗುಣ ಇಲ್ಲಿನ ಮಣ್ಣಿಗಿದೆ. ಮುಂದಿನ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯನ್ನೂ ಯಶಸ್ವಿಯಾಗಿ ನಡೆಸಿಕೊಡುವ ವಿಶ್ವಾಸ ನಮ್ಮದು’ ಎಂಬುದಾಗಿ ಮಾಸ್ಕೊ ಮೇಯರ್‌ ಈ ಸಂದರ್ಭದಲ್ಲಿ ಹೇಳಿದರು.

ವಿಶ್ವಕಪ್‌ ಟ್ರೋಫಿಯ ಸಂಚಾರ ಕಳೆದ ಸೆ. 9ರಿಂದ ಆರಂಭವಾಗಿತ್ತು. ಡಿಸೆಂಬರ್‌ ತನಕ ಇದು ರಶ್ಯದಲ್ಲೇ ಸುತ್ತಾಡಿ, ಬಳಿಕ ಎಲ್ಲ ಖಂಡಗಳ ಸುಮಾರು 50 ದೇಶಗಳನ್ನು ಸುತ್ತಾಡಿ ಮರಳಿ ಮಾಸ್ಕೋಗೆ ಆಗಮಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next