Advertisement

World Cup: ಹ್ಯಾಟ್ರಿಕ್‌ ಹಾದಿಯಲ್ಲಿ ಹರಿಣಗಳ ಓಟ

11:54 PM Oct 16, 2023 | Team Udayavani |

ಧರ್ಮಶಾಲಾ: ಈ ವಿಶ್ವಕಪ್‌ನಲ್ಲಿ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್‌ ಗೆಲುವಿನ ಗುರಿಯೊಂದಿಗೆ ಮಂಗಳವಾರ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಸುಂದರ ಗಿರಿಧಾಮ ಧರ್ಮಶಾಲಾದಲ್ಲಿ ಈ ಮುಖಾಮುಖಿ ಏರ್ಪಡಲಿದ್ದು, ಟೆಂಬ ಬವುಮ ಪಡೆ ತುಂಬು ಉತ್ಸಾಹದಲ್ಲಿದೆ. ಆದರೆ ಈ ಉತ್ಸಾಹಕ್ಕೆ ಮಳೆ ತಣ್ಣೀರೆರಚುವ ಸಾಧ್ಯತೆಯೂ ಇದೆ.

Advertisement

ಇನ್ನೊಂದೆಡೆ ಸ್ಕಾಟ್‌ ಎಡ್ವರ್ಡ್ಸ್‌ ನೇತೃತ್ವದ ನೆದರ್ಲೆಂಡ್ಸ್‌ ಎರಡರಲ್ಲೂ ಸೋಲನುಭವಿಸಿದೆ. ಸೋಮವಾರದ ಪಂದ್ಯಕ್ಕೂ ಮೊದಲು ಅಂಕಪಟ್ಟಿಯಲ್ಲಿ 5 ಬಾರಿಯ ಚಾಂಪಿಯನ್ಸ್‌ ಆಸ್ಟ್ರೇಲಿಯಕ್ಕಿಂತ ಮೇಲಿತ್ತು! ಅಫ್ಘಾನಿಸ್ಥಾನ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಹೊಡೆದುರುಳಿಸಿದಂತೆ ಡಚ್ಚರ ಪಡೆ ಹರಿಣಗಳನ್ನು ಬೆಚ್ಚಿಬೀಳಿಸೀತೇ ಎಂಬುದೊಂದು ದೂರದ ನಿರೀಕ್ಷೆ.

ಎರಡು ದೊಡ್ಡ ಗೆಲುವು
ಸದಾ “ಚೋಕರ್’ ಹಣೆಪಟ್ಟಿಯನ್ನು ಅಂಟಿಸಿಕೊಂಡೇ ಇರುವ ದಕ್ಷಿಣ ಆಫ್ರಿಕಾ ಈ ಬಾರಿ ಇದನ್ನು ಕಿತ್ತೆಸೆಯಲು ಪಣತೊಟ್ಟಂತಿದೆ. ಹರಿಣಗಳ ಆರಂಭವೇ ಅತ್ಯಂತ ಅಬ್ಬರದಿಂದ ಕೂಡಿತ್ತು. ಹೊಸದಿಲ್ಲಿಯಲ್ಲಿ ಆಡಲಾದ ಶ್ರೀಲಂಕಾ ಎದುರಿನ ಮೊದಲ ಮುಖಾಮುಖೀಯಲ್ಲಿ ದಕ್ಷಿಣ ಆಫ್ರಿಕಾ ಪೇರಿಸಿದ ರನ್‌ ಅಷ್ಟಿಷ್ಟಲ್ಲ, 5 ವಿಕೆಟಿಗೆ 428. ಇದು ವಿಶ್ವಕಪ್‌ ಇತಿಹಾಸದ ಗರಿಷ್ಠ ಮೊತ್ತವಾಗಿ ದಾಖಲಾಯಿತು. ಲಂಕಾ ಸುಲಭದಲ್ಲೇನೂ ಶರಣಾಗಲಿಲ್ಲ. ಮುನ್ನೂರರ ಗಡಿ ದಾಟಿ ಬಂದ ಲಂಕೆಯ ಸೋಲಿನ ಅಂತರ 102 ರನ್‌.

ದಕ್ಷಿಣ ಆಫ್ರಿಕಾದ ಈ ಅಬ್ಬರ ಇಲ್ಲಿಗೇ ನಿಲ್ಲಲಿಲ್ಲ. 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನೂ ಅಟ್ಟಾಡಿಸಿ ಸೋಲಿಸಿತು. ಅಂತರ ಇನ್ನೂ ಹೆಚ್ಚು, 134 ರನ್‌. ಹೀಗಿರುವಾಗ ದಕ್ಷಿಣ ಆಫ್ರಿಕಾಕ್ಕೆ ನೆದರ್ಲೆಂಡ್ಸ್‌ ಯಾವ ಲೆಕ್ಕ! ಆದರೆ ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆ ಅಗತ್ಯ. ರವಿವಾರ ಅಫ್ಘಾನ್‌ ಪಡೆ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಹೊಡೆದು ಉರುಳಿಸಲಿಲ್ಲವೇ?! ಈ ಫ‌ಲಿತಾಂಶ ಕೂಟದ ಎಲ್ಲ ಬಲಿಷ್ಠ ತಂಡಗಳಿಗೊಂದು ಎಚ್ಚರಿಕೆಯ ಗಂಟೆ.

ಡಿ ಕಾಕ್‌ ಸತತ ಶತಕ
ಈ ಕೂಟದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಅತ್ಯಂತ ಬಲಿಷ್ಠವಾಗಿ ಗೋಚರಿಸುತ್ತದೆ. ವಿಶ್ವಕಪ್‌ ಬಳಿಕ ವಿದಾಯ ಘೋಷಿಸಲಿರುವ ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಅವರಂತೂ ಸತತ 2 ಶತಕ ಬಾರಿಸಿ ಸಿಂಹಸ್ವಪ್ನರಾಗಿ ಗೋಚರಿಸಿದ್ದಾರೆ. ಲಂಕಾ ವಿರುದ್ಧ 100, ಆಸ್ಟ್ರೇಲಿಯ ವಿರುದ್ಧ 109 ರನ್‌ ಹೊಡೆದ ಹೆಗ್ಗಳಿಕೆ ಈ ಆರಂಭಿಕನದ್ದು. ನೆದರ್ಲೆಂಡ್ಸ್‌ ವಿರುದ್ಧ ಶತಕಗಳ ಹ್ಯಾಟ್ರಿಕ್‌ ಸಾಧಿಸಿದರೂ ಅಚ್ಚರಿ ಇಲ್ಲ!

Advertisement

ಶ್ರೀಲಂಕಾ ವಿರುದ್ಧ ರಸ್ಸಿ ವಾನ್‌ ಡರ್‌ ಡುಸೆನ್‌ (108), ಐಡನ್‌ ಮಾರ್ಕ್‌ರಮ್‌ (54 ಎಸೆತಗಳಿಂದ 106) ಕೂಡ ಸೆಂಚುರಿ ಸಿಡಿಸಿದ್ದರು. ಟೆಂಬ ಬವುಮ, ಹೆನ್ರಿಕ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ಕೂಡ ಅಪಾಯಕಾರಿ ಬ್ಯಾಟರ್. ಬಹುಶಃ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಲಭಿಸಿದರೆ ದಕ್ಷಿಣ ಆಫ್ರಿಕಾದಿಂದ ಇನ್ನೊಂದು ಪ್ರಚಂಡ ಪ್ರದರ್ಶನವನ್ನು ನಿರೀಕ್ಷಿಸಲಡ್ಡಿಯಿಲ್ಲ.

ದಕ್ಷಿಣ ಆಫ್ರಿಕಾದ ಬೌಲಿಂಗ್‌ ಕೂಡ ಅತ್ಯಂತ ಘಾತಕ. ಶ್ರೀಲಂಕಾವೇನೋ ಎದುರಿಸಿ ನಿಂತಿತು, ಆದರೆ ಆಸ್ಟ್ರೇಲಿಯ ಸಂಪೂರ್ಣ ನೆಲಕಚ್ಚಿತು. 40.5 ಓವರ್‌ಗಳಲ್ಲಿ 177ಕ್ಕೆ ಆಲೌಟ್‌ ಆಯಿತು. ರಬಾಡ, ಎನ್‌ಗಿಡಿ, ಜಾನ್ಸೆನ್‌, ಕೇಶವ್‌ ಮಹಾರಾಜ್‌, ಶಮ್ಸಿ ಅವರನ್ನು ಎದುರಿಸಿ ನಿಲ್ಲುವುದು ನೆದರ್ಲೆಂಡ್ಸ್‌ಗೆ ಸುಲಭವಲ್ಲ.

ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಮುಗ್ಗರಿಸಿರುವ ನೆದರ್ಲೆಂಡ್ಸ್‌ ಬಳಿಯೂ ಉತ್ತಮ ಆಟಗಾರರಿದ್ದಾರೆ. ಬಾಸ್‌ ಡಿ ಲೀಡ್‌, ಮ್ಯಾಕ್ಸ್‌ ಓ’ಡೌಡ್‌, ವಿಕ್ರಮ್‌ಜೀತ್‌ ಸಿಂಗ್‌ ಇವರಲ್ಲಿ ಪ್ರಮುಖರು. ನೋಡೋಣ… ಇವರೆಲ್ಲ ದಕ್ಷಿಣ ಆಫ್ರಿಕಾದ ಪ್ರಬಲ ಸವಾಲನ್ನು ಹೇಗೆ ಎದುರಿಸಿ ನಿಲ್ಲುತ್ತಾರೆ ಎಂದು!

Advertisement

Udayavani is now on Telegram. Click here to join our channel and stay updated with the latest news.

Next