Advertisement

World Cup ಅರ್ಹತಾ ಕೂಟ: ಲಂಕಾ ಚಾಂಪಿಯನ್‌

10:30 PM Jul 09, 2023 | Team Udayavani |

ಹರಾರೆ: ಅಜೇಯ ಅಭಿಯಾನಗೈದ ಶ್ರೀಲಂಕಾ ತಂಡ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದ ರೊಂದಿಗೆ ಬಹಳ ಗತ್ತಿನಿಂದಲೇ ಪ್ರಧಾನ ಸುತ್ತಿಗೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ರವಿವಾರದ ಫೈನಲ್‌ನಲ್ಲಿ ದಸುನ್‌ ಶಣಕ ಪಡೆ ನೆದರ್ಲೆಂಡ್ಸ್‌ಗೆ 128 ರನ್ನುಗಳ ಆಘಾತಕಾರಿ ಸೋಲುಣಿಸಿತು.

Advertisement

ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದರು. ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 47.5 ಓವರ್‌ಗಳಲ್ಲಿ 233ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ನೆದರ್ಲೆಂಡ್ಸ್‌ 23.3 ಓವರ್‌ಗಳಲ್ಲಿ 105ಕ್ಕೆ ಕುಸಿಯಿತು.

ಈ ಎರಡೂ ತಂಡಗಳು ಕ್ರಮವಾಗಿ 9ನೇ ಹಾಗೂ 10ನೇ ತಂಡಗಳಾಗಿ ವಿಶ್ವಕಪ್‌ ಪ್ರಧಾನ ಸುತ್ತಿನಲ್ಲಿ ಆಡಲಿವೆ. ಇದರೊಂದಿಗೆ ವಿಶ್ವಕಪ್‌ ವೇಳಾಪಟ್ಟಿ ಪರಿಪೂರ್ಣಗೊಂಡಿದೆ. ಹಾಗೆಯೇ ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ ತಂಡಗಳ ಗೈರು ಎದ್ದು ಕಾಣಲಿದೆ.

ಏಕೈಕ ಅರ್ಧ ಶತಕ
ಪಿಚ್‌ ಬೌಲಿಂಗ್‌ಗೆ ಸಹಕರಿಸುತ್ತಿದ್ದ ಕಾರಣ ಲಂಕೆಗೆ ಬಿರುಸಿನ ಬ್ಯಾಟಿಂಗ್‌ ಸಾಧ್ಯವಾಗಲಿಲ್ಲ. ಆದರೆ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಎಚ್ಚರಿಕೆಯ ಆಟವಾಡುವಲ್ಲಿ ಯಶಸ್ವಿ ಯಾದರು. ಆರಂಭಿಕರಾದ ಪಥುಮ್‌ ನಿಸ್ಸಂಕ (23), ಸಮರವಿಕ್ರಮ (19) 44 ರನ್‌ ಆಗುವಷ್ಟರಲ್ಲಿ ವಾಪಸಾದರು. ಆಗಲೇ 10 ಓವರ್‌ ಮುಗಿದಿತ್ತು. ಈ ಹಂತದಲ್ಲಿ ಕುಸಲ್‌ ಮೆಂಡಿಸ್‌ (43), ಸಹಾನ್‌ ಅರಚಿಗೆ ಸರ್ವಾಧಿಕ 57 ಮತ್ತು ಚರಿತ ಅಸಲಂಕ 36 ರನ್‌ ಮಾಡಿ ತಂಡದ ಹೋರಾಟವನ್ನು ಜಾರಿಯಲ್ಲಿರಿಸಿದರು. ವನಿಂದು ಹಸರಂಗ 29 ರನ್‌ ಕೊಡುಗೆ ಸಲ್ಲಿಸಿದರು.

ಎಡಗೈ ಬ್ಯಾಟರ್‌ ಸಹಾನ್‌ ಅರಚಿಗೆ ಏಕದಿನದಲ್ಲಿ ಮೊದಲ ಸಲ ಕ್ರೀಸ್‌ ಇಳಿದು 57 ರನ್‌ ಬಾರಿಸಿ ಮಿಂಚಿದರು (71 ಎಸೆತ, 4 ಬೌಂಡರಿ). ಇದು ಅವರ 2ನೇ ಪಂದ್ಯ. ಪದಾರ್ಪಣ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್‌ ಅವಕಾಶ ಲಭಿಸಿರಲಿಲ್ಲ.

Advertisement

ನೆದರ್ಲೆಂಡ್ಸ್‌ ಬೌಲಿಂಗ್‌ ಸರದಿ ಯಲ್ಲಿ ಲೋಗನ್‌ ವಾನ್‌ ಬೀಕ್‌, ರಿಯಾನ್‌ ಕ್ಲೀನ್‌, ವಿಕ್ರಮ್‌ಜೀತ್‌ ಸಿಂಗ್‌ ಮತ್ತು ಶಕಿಬ್‌ ಜುಲ್ಫಿಕರ್‌ ತಲಾ 2 ವಿಕೆಟ್‌ ಉಡಾಯಿಸಿ ಲಂಕೆಯನ್ನು ನಿಯಂತ್ರಿಸಿದರು.

ನೆದರ್ಲೆಂಡ್ಸ್‌ ಸರದಿಯಲ್ಲಿ ಎರಡಂಕೆಯ ಸ್ಕೋರ್‌ ದಾಖಲಿಸಿದ್ದು ಮೂವರು ಮಾತ್ರ. 33 ರನ್‌ ಮಾಡಿದ ಆರಂಭಕಾರ ಮ್ಯಾಕ್ಸ್‌ ಓಡೌಡ್‌ ಅವರದೇ ಹೆಚ್ಚಿನ ಗಳಿಕೆ. ಲೋಗನ್‌ ವಾನ್‌ ಬೀಕ್‌ 20, ವಿಕ್ರಮ್‌ಜೀತ್‌ ಸಿಂಗ್‌ 13 ರನ್‌ ಮಾಡಿದರು. ಮಹೀಶ್‌ ತೀಕ್ಷಣ 4, ದಿಲ್ಶನ್‌ ಮಧುಶಂಖ 3 ಮತ್ತು ವನಿಂದು ಹಸರಂಗ 2 ವಿಕೆಟ್‌ ಉರುಳಿಸಿ ಡಚ್ಚರನ್ನು ಮಗುಚಿದರು. ಸತತ 3 ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತ ಮಧುಶಂಖ ಪಂದ್ಯಶ್ರೇಷ್ಠರೆನಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-47.5 ಓವರ್‌ಗಳಲ್ಲಿ 233 (ಅರಚಿಗೆ 57, ಮೆಂಡಿಸ್‌ 43, ಅಸಲಂಕ 36, ಹಸರಂಗ 29, ನಿಸ್ಸಂಕ 23, ವಿಕ್ರಮ್‌ಜೀತ್‌ 12ಕ್ಕೆ 2, ವಾನ್‌ ಬೀಕ್‌ 40ಕ್ಕೆ 2, ಕ್ಲೀನ್‌ 42ಕ್ಕೆ 2, ಜುಲ್ಫಿಕರ್‌ 59ಕ್ಕೆ 2). ನೆದರ್ಲೆಂಡ್ಸ್‌ -23.3 ಓವರ್‌ಗಳಲ್ಲಿ 105 (ಓಡೌಡ್‌ 33, ವಾನ್‌ ಬೀಕ್‌ 20, ತೀಕ್ಷಣ 31ಕ್ಕೆ 4, ಮಧುಶಂಖ 18ಕ್ಕೆ 3, ಹಸರಂಗ 35ಕ್ಕೆ 2). ಪಂದ್ಯಶ್ರೇಷ್ಠ: ದಿಲ್ಶನ್‌ ಮಧುಶಂಖ.

Advertisement

Udayavani is now on Telegram. Click here to join our channel and stay updated with the latest news.

Next