Advertisement

ವಿಂಡೀಸ್‌-ಕಿವೀಸ್‌ ಕಾಳಗ

01:08 AM Jun 22, 2019 | Sriram |

ಮ್ಯಾಂಚೆಸ್ಟರ್‌: ದಕ್ಷಿಣ ಆಫ್ರಿಕಾವನ್ನು ಕೆಡವಿದ ಖುಷಿಯಲ್ಲಿರುವ ನ್ಯೂಜಿಲ್ಯಾಂಡ್‌ ಮತ್ತು ಅಸ್ಥಿರ ವೆಸ್ಟ್‌ ಇಂಡೀಸ್‌ ಶನಿವಾರದ ಹಗಲು-ರಾತ್ರಿ ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.

Advertisement

ವಿಶ್ವಕಪ್‌ ಕೂಟದ ಅಜೇಯ ತಂಡವಾಗಿ ಗುರುತಿಸಿ ಕೊಂಡಿರುವ ನ್ಯೂಜಿಲ್ಯಾಂಡ್‌ ಈ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಯೋಜನೆಯಲ್ಲಿದೆ. ಇನ್ನೊಂದೆಡೆ ವೆಸ್ಟ್‌ ಇಂಡೀಸ್‌ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆಲ್ಲದಿದ್ದರೆ ಉಳಿಗಾಲವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಕಿವೀಸ್‌ ಸೈಲೆಂಟ್‌ ಕಿಲ್ಲರ್‌
“ಸೈಲೆಂಟ್‌ ಕಿಲ್ಲರ್‌’ ಆಗಿ ಗುರುತಿಸಿಕೊಂಡಿರುವ ನ್ಯೂಜಿ ಲ್ಯಾಂಡ್‌ ಈ ಕೂಟದಲ್ಲಿ ಶಿಸ್ತಿನ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಸದ್ಯದ ಚಿಂತೆಯೆಂದರೆ ಆರಂಭಿಕರ ಫಾರ್ಮ್ನದ್ದು. ಕಾಲಿನ್‌ ಮುನ್ರೊ, ಮಾರ್ಟಿನ್‌ ಗಪ್ಟಿಲ್‌ ಲಯದಲ್ಲಿಲ್ಲ. ಇವರು ಬಿರುಸಿನ ಆಟಕ್ಕಿಳಿದರೆ ಕಿವೀಸ್‌ ಮತ್ತಷ್ಟು ಅಪಾಯಕಾರಿ ಎನಿಸಲಿದೆ.

ನಾಯಕ ಕೇನ್‌ ವಿಲಿಯಮ್ಸನ್‌ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಶತಕ ಬಾರಿಸಿ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದಾರೆ. ಟೇಲರ್‌, ಗ್ರ್ಯಾಂಡ್‌ಹೋಮ್‌ ಮತ್ತಿಬ್ಬರು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು. ಬೌಲ್ಟ್, ಸ್ಯಾಂಟ್ನರ್‌, ಹೆನ್ರಿ, ಫ‌ರ್ಗ್ಯುಸನ್‌, ನೀಶಮ್‌ ಅವರಿಂದ ಕಿವೀಸ್‌ ಬೌಲಿಂಗ್‌ ದಾಳಿ ಹೆಚ್ಚು ಘಾತಕವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.

ವಿಂಡೀಸ್‌ಗೆ ಸ್ಥಿರತೆಯ ಕೊರತೆ
ವೆಸ್ಟ್‌ ಇಂಡೀಸ್‌ ಸಶಕ್ತ ತಂಡವಾದರೂ ಸ್ಥಿರತೆಯ ಕೊರತೆ ಕಾಡುತ್ತಿದೆ. ಬಾಂಗ್ಲಾ ವಿರುದ್ಧ ಮುನ್ನೂರರ ಗಡಿ ದಾಟಿಯೂ ಸೋತದ್ದು ಇದಕ್ಕೊಂದು ಉತ್ತಮ ನಿದರ್ಶನ. ಕ್ರಿಸ್‌ ಗೇಲ್‌ ಬ್ಯಾಟಿಂಗ್‌ ಮರೆತವರಂತೆ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ ಆ್ಯಂಡ್ರೆ ರಸೆಲ್‌ ಕೂಡ ಹೊಡಿಬಡಿ ಆಟ ಆಡುತ್ತಿಲ್ಲ. ಹೋಪ್‌, ಹೆಟ್‌ಮೈರ್‌, ಹೋಲ್ಡರ್‌, ಬ್ರಾತ್‌ವೇಟ್‌ ಸಿಡಿದರೆ ತಂಡ ಬೃಹತ್‌ ಸ್ಕೋರ್‌ ದಾಖಲಿಸಬಹುದು. ಆದರೆ ಬೌಲಿಂಗ್‌ ಮೇಲೆ ಇದೇ ಭರವಸೆ ಇಡಲಾಗದು.

Advertisement

ಸಂಭಾವ್ಯ ತಂಡಗಳು
ನ್ಯೂಜಿಲ್ಯಾಂಡ್‌: ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌/ ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಬ್ಲಿಂಡೆಲ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಜೇಮ್ಸ್‌ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಟ್ರೆಂಟ್‌ ಬೌಲ್ಟ್, ಟಿಮ್‌ ಸೌಥಿ, ಐಶ್‌ ಸೋಧಿ.

ವೆಸ್ಟ್‌ ಇಂಡೀಸ್‌: ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶೈ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರನ್‌ ಹೆಟ್‌ಮೈರ್‌, ಆ್ಯಂಡ್ರೆ ರಸೆಲ್‌, ಜಾಸನ್‌ ಹೋಲ್ಡರ್‌ (ನಾಯಕ), ಡ್ಯಾರನ್‌ ಬ್ರಾವೊ, ಒಶೇನ್‌ ಥಾಮಸ್‌, ಶೆಲ್ಡನ್‌ ಕಾಟ್ರೆಲ್‌, ಶಾನನ್‌ ಗ್ಯಾಬ್ರಿಯಲ್‌/ ಕಾರ್ಲೊಸ್‌ ಬ್ರಾತ್‌ವೇಟ್‌.

Advertisement

Udayavani is now on Telegram. Click here to join our channel and stay updated with the latest news.

Next