Advertisement

ರಂಗುರಂಗಿನ ವಿಶ್ವಕಪ್‌; ಪಾಕಿಸ್ಥಾನಕ್ಕೆ ಲಕ್‌

03:59 AM May 21, 2019 | Team Udayavani |

ವಿಶ್ವಕಪ್‌ ಕ್ರಿಕೆಟಿನ ಮತ್ತೂಂದು ಜಂಟಿ ಆತಿಥ್ಯಕ್ಕೆ ನಿದರ್ಶನವಾದದ್ದು 1992ರ ಪಂದ್ಯಾವಳಿ. ಭಾರತ-ಪಾಕಿಸ್ಥಾನದ ಬಳಿಕ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವಿನ ಸರದಿಯಾಗಿತ್ತು. ಆಗಲೇ ಸ್ಪಾನ್ಸರ್‌ಶಿಪ್‌ ಮೂಲಕ ಭಾರೀ ಹೆಸರು ಮಾಡಿದ್ದ “ಬೆನ್ಸನ್‌ ಆ್ಯಂಡ್‌ ಹೆಜಸ್‌’ ಈ ಕೂಟದ ಉಸ್ತುವಾರಿ ವಹಿಸಿದ್ದರಿಂದ ಅದೇ ಹೆಸರಿನಿಂದ ಕರೆಯಲ್ಪಟ್ಟಿತು.

Advertisement

ಇದು ರಂಗುರಂಗಿನ ವಿಶ್ವಕಪ್‌. ಬಣ್ಣದ ಉಡುಗೆ, ಡೇ-ನೈಟ್‌ ಪಂದ್ಯಗಳು, ವೈಟ್‌ ಬಾಲ್‌, ರೌಂಡ್‌ ರಾಬಿನ್‌ ಲೀಗ್‌ ಮಾದರಿ… ಹೀಗೆ ಹತ್ತು ಹಲವು ವೈಶಿಷ್ಟ್ಯಗಳು ಕೂಟವನ್ನು ಸ್ಮರಣೀಯಗೊಳಿಸಿದವು. ಆದರೆ ಸತತವಾಗಿ ಕಾಡಿದ ಮಳೆ, ಇದಕ್ಕಾಗಿಯೇ ರೂಪಿಸಲಾದ ವಿಚಿತ್ರ ನಿಯಮ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಈ ನಡುವೆ ಅದೃಷ್ಟ ಸಂಪೂರ್ಣ ಬೆಂಬಲ ಪಡೆದ ಇಮ್ರಾನ್‌ ಖಾನ್‌ ನಾಯಕತ್ವದ ಪಾಕಿಸ್ಥಾನ ಮೊದಲ ಸಲ ವಿಶ್ವ ಸಾಮ್ರಾಟನಾಗಿ ಮೆರೆಯಿತು!

ಕೈ ಹಿಡಿದ ಮಳೆರಾಯ
ಸಾಧನೆಗಿಂತ ಮಿಗಿಲಾಗಿ ಅದೃಷ್ಟದ ಬಲದಿಂದ ಕಪ್‌ ಎತ್ತಿದ ತಂಡ ಪಾಕಿಸ್ಥಾನ. ಲೀಗ್‌ನಲ್ಲಿ ಪಾಕ್‌ ಆಟ ತೀರಾ ಸಾಮಾನ್ಯ ಮಟ್ಟದಲ್ಲಿತ್ತು. ವೆಸ್ಟ್‌ ಇಂಡೀಸ್‌, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನೇಟು ತಿಂದ ಇಮ್ರಾನ್‌ ಪಡೆ ಸೆಮಿಫೈನಲಿಗೆ ಏರಿದ್ದೇ ಒಂದು ಪವಾಡ. 8 ಪಂದ್ಯಗಳಿಂದ ಕೇವಲ 9 ಅಂಕಗಳನ್ನಷ್ಟೇ ಗಳಿಸಿ 4ನೇ ಸ್ಥಾನಿಯಾಗಿ ನಾಕೌಟ್‌ಗೆ ನೆಗೆದಿತ್ತು.

ಪಾಕಿಸ್ಥಾನಕ್ಕೆ ಲಕ್‌ ಹೊಡೆದದ್ದು ಇಂಗ್ಲೆಂಡ್‌ ಎದುರಿನ ಲೀಗ್‌ ಪಂದ್ಯ. ಇದರಲ್ಲಿ ಪಾಕ್‌ ಕೇವಲ 73 ರನ್ನಿಗೆ ಆಲೌಟ್‌ ಆಗಿತ್ತು. ಇಂಗ್ಲೆಂಡ್‌ ಗೆಲುವು ಖಾತ್ರಿಯಾಗಿತ್ತು. ಅಷ್ಟರಲ್ಲಿ ಮಳೆ ಸುರಿದು ಪಂದ್ಯವೇ ರದ್ದುಗೊಂಡಿತು. ಪಾಕಿಸ್ಥಾನ ಪಡೆದ ಈ ಒಂದು ಅಂಕವೇ ಸೆಮಿಫೈನಲ್‌ ಪ್ರವೇಶಕ್ಕೆ ನಿರ್ಣಾಯಕವಾದುದನ್ನು ಮರೆಯುವಂತಿಲ್ಲ. ಫೈನಲ್‌ನಲ್ಲಿ ಮತ್ತೆ ಇಂಗ್ಲೆಂಡನ್ನೇ ಎದುರಿಸಿ ಕಪ್‌ ಎತ್ತಿದ್ದೊಂದು ವಿಸ್ಮಯ.
ಇದಕ್ಕೂ ಮುನ್ನ ಮುನ್ನುಗ್ಗಿ ಬರುತ್ತಿದ್ದ ನ್ಯೂಜಿಲ್ಯಾಂಡನ್ನು ಸೆಮಿ ಫೈನಲ್‌ನಲ್ಲಿ ಕೆಡವಿದ್ದು ಪಾಕಿಸ್ಥಾನದ ಸಾಹಸಕ್ಕೆ ಸಾಕ್ಷಿಯಾಗಿತ್ತು. ಲೀಗ್‌ನಲ್ಲೂ ಅದು ಕಿವೀಸ್‌ಗೆ ಆಘಾತವಿಕ್ಕಿತ್ತು.

ಇಮ್ರಾನ್‌ ಕಪ್ತಾನನ ಆಟ
ಮೆಲ್ಬರ್ನ್ ಫೈನಲ್‌ನಲ್ಲಿ ಪಾಕ್‌ ಆರಂಭಿಕ ಕುಸಿತಕ್ಕೆ ಸಿಲುಕಿದರೂ ಚೇತ ರಿಸಿಕೊಂಡು 249 ರನ್‌ ಪೇರಿಸಿತು. ಸಾಮಾನ್ಯವಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬರುವ ಇಮ್ರಾನ್‌ ಖಾನ್‌ ಇಲ್ಲಿ ವನ್‌ಡೌನ್‌ನಲ್ಲೇ ಬಂದು ಕಪ್ತಾನನ ಆಟವಾಡಿದರು. ಪಂದ್ಯ ದಲ್ಲೇ ಸರ್ವಾಧಿಕ 72 ರನ್‌ ಬಾರಿಸಿ ಮಿಂಚಿದರು.

Advertisement

ಗ್ರಹಾಂ ಗೂಚ್‌ ಸಾರಥ್ಯದ ಇಂಗ್ಲೆಂಡ್‌ ಕೂಡ ಆರಂಭಿಕ ಆಘಾತಕ್ಕೆ ಸಿಲು ಕಿತು. ಮಧ್ಯಮ ಕ್ರಮಾಂಕದಲ್ಲಿ ನೀಲ್‌ ಫೇರ್‌ಬ್ರದರ್‌ ಹೋರಾಟ ಸಂಘಟಿಸಿದರು ಅಕ್ರಮ್‌ ಆಕ್ರಮಣದ ಮುಂದೆ ಆಂಗ್ಲರ ಆಟ ನಡೆಯಲಿಲ್ಲ. ಅದು 227ಕ್ಕೆ ಕುಸಿಯಿತು. ಸತತ 2ನೇ ಫೈನಲ್‌ನಲ್ಲೂ ದುರದೃಷ್ಟವೇ ಆಂಗ್ಲರ ಮೇಲೆ ಸವಾರಿ ಮಾಡಿದೊಂದು ವಿಪರ್ಯಾಸ!

ಹಲವು ವೈಶಿಷ್ಟ್ಯಗಳ ವಿಶ್ವಕಪ್‌
ಇದು ಹಲವು “ಮೊದಲು’ಗಳ ಮತ್ತೂಂದು ಜಂಟಿ ಆತಿಥ್ಯದ ವಿಶ್ವಕಪ್‌. ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಸೇರಿಕೊಂಡು ಏರ್ಪಡಿಸಿದ ರಂಗುರಂಗಿನ ಪಂದ್ಯಾವಳಿ. “ಬೆನ್ಸನ್‌ ಆ್ಯಂಡ್‌ ಹೆಜಸ್‌’ ಪ್ರಾಯೋಜಕತ್ವ ವಹಿಸಿದ್ದರಿಂದ ಅದೇ ಹೆಸರಲ್ಲಿ ಜನಪ್ರಿಯಗೊಂಡಿತು. ಇಲ್ಲಿನ ವೈಶಿಷ್ಟ್ಯಗಳಿಗೆ ಲೆಕ್ಕವಿಲ್ಲ!
– ಮೊದಲ ಬಾರಿಗೆ ವರ್ಣಮಯ ಉಡುಗೆಯಲ್ಲಿ ಕಾಣಿಸಿಕೊಂಡ ಕ್ರಿಕೆಟಿಗರು. ಹಡಗಿನ ಡೆಕ್‌ ಮೇಲೆ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭ.
– ಮೊದಲ ಸಲ ಹಗಲು-ರಾತ್ರಿ ಪಂದ್ಯಗಳ ಆಯೋಜನೆ.
– ಎರಡು ಹೊಸ ಚೆಂಡುಗಳ ಪ್ರಯೋಗ. ಎರಡೂ ತುದಿಯಿಂದ ಪ್ರತ್ಯೇಕ ಚೆಂಡುಗಳ ಬಳಕೆ. ಹೀಗಾಗಿ ಬಣ್ಣದ ಬದಲು ಬಿಳಿ ಚೆಂಡುಗಳ ಪ್ರಯೋಗ.
– ಗ್ರೂಪ್‌ ಹಂತದ ಲೀಗ್‌ ಪಂದ್ಯಗಳ ಬದಲು ಎಲ್ಲರೂ ಎಲ್ಲರ ವಿರುದ್ಧ ಆಡುವ ರೌಂಡ್‌ ರಾಬಿನ್‌ ಲೀಗ್‌ ಮಾದರಿಗೆ ಆದ್ಯತೆ.
– ಜಾಗತಿಕ ಕ್ರಿಕೆಟ್‌ ಬಹಿಷ್ಕಾರದಿಂದ ಮುಕ್ತಗೊಂಡ ದಕ್ಷಿಣ ಆಫ್ರಿಕಾ ರಂಗಪ್ರವೇಶ.
– ಮಳೆಯಿಂದ ಅಡಚಣೆಯಾದಾಗ ವಿಚಿತ್ರವೆನಿಸಿದ “ಮೋಸ್ಟ್‌ ಪ್ರೊಡಕ್ಟೀವ್‌ ಓವರ್ ಮೆಥಡ್‌’ ನಿಯಮ ಅಳವಡಿಕೆ.
– ಫೀಲ್ಡಿಂಗ್‌ ನಿರ್ಬಂಧ. ಮೊದಲ 15 ಓವರ್‌ಗಳಲ್ಲಿ ಕೇವಲ ಇಬ್ಬರಿಗಷ್ಟೇ ಸರ್ಕಲ್‌ನ ಹೊರಗೆ ಫೀಲ್ಡಿಂಗ್‌ ಮಾಡಲು ಅವಕಾಶ.
– ಸ್ಪಿನ್ನರ್‌ ದೀಪಕ್‌ ಪಟೇಲ್‌ ಅವರಿಂದ ಬೌಲಿಂಗ್‌ ಆರಂಭಿಸಿ
ಧಾರಾಳ ಯಶಸ್ಸು ಕಂಡ ನ್ಯೂಜಿಲ್ಯಾಂಡ್‌ ನಾಯಕ ಮಾರ್ಟಿನ್‌ ಕ್ರೋವ್‌.
– ಸಾಮಾನ್ಯ ತಂಡವೆನಿಸಿದ್ದ ಶ್ರೀಲಂಕಾದಿಂದ ಕೂಟದ ಸರ್ವಾಧಿಕ ಗಳಿಕೆ (313 ರನ್‌).

ದ.ಆಫ್ರಿಕಾವನ್ನು ಮುಳುಗಿಸಿದ ಮಳೆ ನಿಯಮ!
5ನೇ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಎಲ್ಲರನ್ನೂ ಕಾಡಿದ ಸಂಗತಿಯೆಂದರೆ ಅತೀ ವಿಚಿತ್ರವಾದ ಮಳೆ ನಿಯಮ. ಇಂದಿನ ಡಕ್‌ವರ್ತ್‌-ಲೂಯಿಸ್‌ ಮಾದರಿ ಗಿಂತ ಭಿನ್ನವಾದ ಈ “ಮೋಸ್ಟ್‌ ಪ್ರೊಡಕ್ಟೀವ್‌ ಓವರ್ ಮೆಥಡ್‌’ ದಕ್ಷಿಣ ಆಫ್ರಿಕಾವನ್ನು ಬಲಿ ಪಡೆದಿತ್ತು.

ದಕ್ಷಿಣ ಆಫ್ರಿಕಾ ಇದೇ ಮೊದಲ ಸಲ ವಿಶ್ವಕಪ್‌ ಆಡಲಿಳಿದಿತ್ತು. ಅಲ್ಲಿಯ ತನಕ ಆಸ್ಟ್ರೇಲಿಯವನ್ನು ಪ್ರತಿನಿಧಿಸುತ್ತ ಬಂದಿದ್ದ ಕೆಪ್ಲರ್‌ ವೆಸಲ್ಸ್‌ ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿ ತಂಡದ ನಾಯಕತ್ವ ವಹಿಸಿದ್ದರು.

ಒಂದು ಎಸೆತಕ್ಕೆ 22 ರನ್‌ ಗುರಿ!
ಲೀಗ್‌ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಟ ಅಮೋಘವಾಗಿತ್ತು. ಆದರೆ ಇಂಗ್ಲೆಂಡ್‌ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಮಳೆ ನಿಯಮ ವಿಲನ್‌ ಆಗಿ ಕಾಡಿತು. ದಕ್ಷಿಣ ಆಫ್ರಿಕಾ ಗೆಲುವಿಗೆ 13 ಎಸೆತಗಳಿಂದ 22 ರನ್‌ ಗಳಿಸಬೇಕಿದ್ದ ಸಂದರ್ಭದಲ್ಲಿ ಮಳೆ ಸುರಿಯಿತು. ಬಳಿಕ ಆಟಗಾರರೆಲ್ಲ ಅಂಗಳಕ್ಕೆ ಇಳಿದಾಗ 7 ಎಸೆತಗಳಿಂದ 22 ರನ್‌ ತೆಗೆಯುವ ಗುರಿ ನಿಗದಿಯಾಯಿತು. ಕೆಲವೇ ನಿಮಿಷದಲ್ಲಿ ಈ ಲೆಕ್ಕಾಚಾರ ತಪ್ಪೆಂದೂ, ದಕ್ಷಿಣ ಆಫ್ರಿಕಾ ಬರೀ ಒಂದು ಎಸೆತದಿಂದ 22 ರನ್‌ ಗಳಿಸಬೇಕಿದೆ ಎಂದು ಸ್ಕೋರ್‌ಬೋರ್ಡ್‌ ತೋರಿಸುತ್ತಿತ್ತು!

ಈ ನಿಯಮಕ್ಕೆ ಕ್ರಿಕೆಟ್‌ ವಿಶ್ವವೇ ದಂಗಾಯಿತು. ಎಲ್ಲರೂ ಹರಿಣಗಳ ಮೇಲೆ ಅನುಕಂಪ ತೋರಿದರು. ಆ ಒಂದು ಎಸೆತ ಎದುರಿಸಿದ ಮೆಕ್‌ಮಿಲನ್‌ ಸಿಂಗಲ್‌ ತೆಗೆದು ರಿಚರ್ಡ್‌ಸನ್‌ ಜತೆ ಭಾರವಾದ ಹೃದಯದೊಂದಿಗೆ ಮೈದಾನ ತೊರೆದರು!

ಭಾರತ-ಪಾಕಿಸ್ಥಾನ ಮೊದಲ ಪಂದ್ಯ
ಮಿಯಾಂದಾದ್‌ ಮಂಗನಾಟ!
3 ವಿಶ್ವಕಪ್‌ ಮುಗಿದರೂ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ಥಾನ ತಂಡಗಳು ಪರಸ್ಪರ ಎದುರಾಗಿರಲಿಲ್ಲ. ಇದಕ್ಕೆ ಕಾಲ ಕೂಡಿ ಬಂದದ್ದು 1992ರ ಕೂಟದಲ್ಲಿ. ಅದು ಸಿಡ್ನಿಯಲ್ಲಿ ನಡೆದ ಲೀಗ್‌ ಪಂದ್ಯ. ಇದು ಸುದ್ದಿಯಾದದ್ದು ಜಾವೇದ್‌ ಮಿಯಾಂದಾದ್‌ ಅವರ ಮಂಗನಾಟದಿಂದ!

ಭಾರತದ ಕೀಪರ್‌ ಕಿರಣ್‌ ಮೋರೆ ವಿಪರೀತ ಅಪೀಲು ಮಾಡುತ್ತಿದ್ದಾರೆ ಎಂಬುದು ಕ್ರೀಸ್‌ನಲ್ಲಿದ್ದ ಮಿಯಾಂದಾದ್‌ ದೂರು. ಸಚಿನ್‌ ತೆಂಡುಲ್ಕರ್‌ 25ನೇ ಓವರ್‌ ಎಸೆಯಲು ಬಂದಾಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಮಾಷೆಯೊಂದು ಸಂಭವಿಸಿತು.

ಮೋರೆ ಮತ್ತೆ ಅಪೀಲು!
ಮಿಯಾಂದಾದ್‌ ಆಗಷ್ಟೇ ಮೋರೆ ವಿರುದ್ಧ ಅಂಪಾಯರ್‌ಗೆ ದೂರು ಸಲ್ಲಿಸಿ ಬ್ಯಾಟಿಂಗಿಗೆ ಸಜ್ಜಾಗಿದ್ದರು. ಸಚಿನ್‌ ಎಸೆತವೊಂದನ್ನು ಕವರ್‌ ವಿಭಾಗದತ್ತ ಬಾರಿಸಿದರು. ಓಡಿದರೂ ರನ್‌ ಗಳಿಸುವುದು ಅಸಾಧ್ಯವಾಗಿತ್ತು. ಕೂಡಲೇ ವಾಪಸಾದರು. ಆಗ ಚೆಂಡನ್ನು ಪಡೆದ ಮೋರೆ ಸ್ಟಂಪ್ಸ್‌ ಎಗರಿಸಿ ರನೌಟ್‌ಗೆ ಅಪೀಲು ಮಾಡಿದರು.

ಇದು ರನೌಟ್‌ ಅಲ್ಲದಿದ್ದರೂ ಅಪೀಲು ಮಾಡಿದ್ದು ಮಿಯಾಂದಾದ್‌ ಅವರನ್ನು ಕೆರಳಿಸಿತು. ಅಷ್ಟೇ, ಬ್ಯಾಟನ್ನು ಎರಡೂ ಕೈಗಳಿಂದ ಅಡ್ಡವಾಗಿ ಹಿಡಿದ ಮಿಯಾಂದಾದ್‌ ಮೋರೆಯತ್ತ ತಿರುಗಿ ಮಂಗನಂತೆ ಮೂರು ಸಲ ಕುಪ್ಪಳಿಸಿದರು. ಮೋರೆಯನ್ನು ಅಣಕಿಸುವುದು ಅವರ ಉದ್ದೇಶವಾಗಿತ್ತು.

ಎಲ್ಲರಿಗೂ ಮಿಯಾಂದಾದ್‌ ಅವರ ಈ ಮಂಗನಾಟ ವಿಚಿತ್ರವಾಗಿ, ಅಷ್ಟೇ ತಮಾಷೆಯಾಗಿ ಕಂಡಿತು. 27 ವರ್ಷಗಳ ಆ ದೃಶ್ಯಾವಳಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ!

43 ರನ್‌ ಗೆಲುವು
ಪಾಕಿಸ್ಥಾನ ವಿರುದ್ಧದ ಈ ಪಂದ್ಯವನ್ನು ಭಾರತ 43 ರನ್ನುಗಳಿಂದ ಜಯಿಸಿತು. ಉಳಿದಂತೆ ಈ ಕೂಟದಲ್ಲಿ ಜಿಂಬಾಬ್ವೆಯನ್ನು ಸೋಲಿಸಿದ್ದಷ್ಟೇ ಭಾರತದ ಸಾಧನೆಯಾಗಿತ್ತು. ಶ್ರೀಲಂಕಾ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡಿತು. 9 ತಂಡಗಳ ನಡುವಿನ ಈ ಕೂಟದಲ್ಲಿ ಭಾರತ 7ನೇ ಸ್ಥಾನದೊಂದಿಗೆ ಕೂಟವನ್ನು ಮುಗಿಸಿತು.

ಭಾರತ ತಂಡ
ಮೊಹಮ್ಮದ್‌ ಅಜರುದ್ದೀನ್‌ (ನಾಯಕ), ಕೆ. ಶ್ರೀಕಾಂತ್‌, ಸಚಿನ್‌ ತೆಂಡುಲ್ಕರ್‌, ಸಂಜಯ್‌ ಮಾಂಜ್ರೆàಕರ್‌, ಪ್ರವೀಣ್‌ ಆಮ್ರೆ, ಅಜಯ್‌ ಜಡೇಜ, ವಿನೋದ್‌ ಕಾಂಬ್ಳಿ, ಕಪಿಲ್‌ದೇವ್‌, ರವಿಶಾಸಿŒ, ಕಿರಣ್‌ ಮೋರೆ, ಮನೋಜ್‌ ಪ್ರಭಾಕರ್‌, ಜಾವಗಲ್‌ ಶ್ರೀನಾಥ್‌, ವೆಂಕಟಪತಿ ರಾಜು, ಸುಬ್ರತೊ ಬ್ಯಾನರ್ಜಿ.

1992 ವಿಶ್ವಕಪ್‌ ಫೈನಲ್‌
ಮೆಲ್ಬರ್ನ್, ಮಾರ್ಚ್‌ 25

ಪಾಕಿಸ್ಥಾನ
ಅಮೀರ್‌ ಸೊಹೈಲ್‌ ಸಿ ಸ್ಟುವರ್ಟ್‌ ಬಿ ಪ್ರಿಂಗ್ಲ್ 4
ರಮೀಜ್‌ ರಾಜ ಎಲ್‌ಬಿಡಬ್ಲ್ಯು ಪ್ರಿಂಗ್ಲ್ 8
ಇಮ್ರಾನ್‌ ಖಾನ್‌ ಸಿ ಇಲ್ಲಿಂಗ್‌ವರ್ತ್‌ ಬಿ ಬೋಥಂ 72
ಜಾವೇದ್‌ ಮಿಯಾಂದಾದ್‌ ಸಿ ಬೋಥಂ ಬಿ ಇಲ್ಲಿಂಗ್‌ವರ್ತ್‌ 58
ಇಂಝಮಾಮ್‌ ಉಲ್‌ ಹಕ್‌ ಬಿ ಪ್ರಿಂಗ್ಲ್ 42
ವಾಸಿಮ್‌ ಅಕ್ರಮ್‌ ರನೌಟ್‌ 33
ಸಲೀಂ ಮಲಿಕ್‌ ಔಟಾಗದೆ 0
ಇತರ 32
ಒಟ್ಟು (6 ವಿಕೆಟಿಗೆ) 249
ವಿಕೆಟ್‌ ಪತನ: 1-20, 2-24, 3-163, 4-197, 5-249, 6-249.
ಬೌಲಿಂಗ್‌: ಡೆರೆಕ್‌ ಪ್ರಿಂಗ್ಲ್ 10-2-22-3
ಕ್ರಿಸ್‌ ಲೂಯಿಸ್‌ 10-2-52-0
ಇಯಾನ್‌ ಬೋಥಂ 7-0-42-1
ಫಿಲ್‌ ಡಿಫ್ರಿಟಸ್‌ 10-1-42-0
ರಿಚರ್ಡ್‌ ಇಲ್ಲಿಂಗ್‌ವರ್ತ್‌ 10-0-50-1
ಡರ್ಮಟ್‌ ರೀವ್‌ 3-0-22-0
ಇಂಗ್ಲೆಂಡ್‌
ಗ್ರಹಾಂ ಗೂಚ್‌ ಸಿ ಆಕಿಬ್‌ ಬಿ ಮುಷ್ತಾಕ್‌ 29
ಇಯಾನ್‌ ಬೋಥಂ ಸಿ ಮೊಯಿನ್‌ ಬಿ ಅಕ್ರಮ್‌ 0
ಅಲೆಕ್‌ ಸ್ಟುವರ್ಟ್‌ ಸಿ ಮೊಯಿನ್‌ ಬಿ ಆಕಿಬ್‌ 7
ಗ್ರೇಮ್‌ ಹಿಕ್‌ ಎಲ್‌ಬಿಡಬ್ಲ್ಯು ಮುಷ್ತಾಕ್‌ 17
ನೀಲ್‌ ಫೇರ್‌ಬ್ರದರ್‌ ಸಿ ಮೊಯಿನ್‌ ಬಿ ಆಕಿಬ್‌ 62
ಅಲನ್‌ ಲ್ಯಾಂಬ್‌ ಬಿ ಅಕ್ರಮ್‌ 31
ಕ್ರಿಸ್‌ ಯೂಯಿಸ್‌ ಬಿ ಅಕ್ರಮ್‌ 0
ಡರ್ಮಟ್‌ ರೀವ್‌ ಸಿ ರಾಜ ಬಿ ಮುಷ್ತಾಕ್‌ 15
ಡೆರೆಕ್‌ ಪ್ರಿಂಗ್ಲ್ ಔಟಾಗದೆ 18
ಫಿಲ್‌ ಡಿಫ್ರಿಟಸ್‌ ರನ್‌ಟ್‌ 10
ರಿಚರ್ಡ್‌ ಇಲ್ಲಿಂಗ್‌ವರ್ತ್‌ ಸಿ ರಾಜ ಬಿ ಇಮ್ರಾನ್‌ 14
ಇತರ 24
ಒಟ್ಟು (49.2 ಓವರ್‌ಗಳಲ್ಲಿನ ಆಲೌಟ್‌) 227
ವಿಕೆಟ್‌ ಪತನ: 1-6, 2-21, 3-59, 4-69, 5-141, 6-141, 7-180, 8-183, 9-208.
ಬೌಲಿಂಗ್‌: ವಾಸಿಮ್‌ ಅಕ್ರಮ್‌ 10-0-49-3
ಆಕಿಬ್‌ ಜಾವೇದ್‌ 10-2-27-2
ಮುಷ್ತಾಕ್‌ ಅಹ್ಮದ್‌ 10-1-41-3
ಇಜಾಜ್‌ ಅಹ್ಮದ್‌ 3-0-13-0
ಇಮ್ರಾನ್‌ ಖಾನ್‌ 6.2-0-43-1
ಅಮೀರ್‌ ಸೊಹೈಲ್‌ 10-0-49-0
ಪಂದ್ಯಶ್ರೇಷ್ಠ: ವಾಸಿಮ್‌ ಅಕ್ರಮ್‌

Advertisement

Udayavani is now on Telegram. Click here to join our channel and stay updated with the latest news.

Next