Advertisement
ದಿನೇಶ್ ಕಾರ್ತಿಕ್‌ಗೆ ಬಾಗಿಲು ಬಂದ್ಭಾರತ ತಂಡ ಪ್ರವೇಶಿಸಿ 14 ವರ್ಷ ಕಳೆದಿದ್ದರೂ, ಒಂದು ವಿಶ್ವಕಪ್ ಆಡುವುದಕ್ಕೆ ದಿನೇಶ್ ಕಾರ್ತಿಕ್‌ಗೆ ಸಾಧ್ಯವಾಗಿರಲಿಲ್ಲ. ಮೊನ್ನೆ ಮುಗಿದ ವಿಶ್ವಕಪ್‌ನಲ್ಲಿ ಅವರು ಆಡಲಿಳಿದು ಕಡೆಗೂ ಆ ಕೊರಗನ್ನು ನಿವಾರಿಸಿಕೊಂಡರು. ಆದರೆ ಇದೇ ವಿಶ್ವಕಪ್ ಅವರ ಅಂತಾರಾಷ್ಟ್ರೀಯ ಕ್ರಿಕೆಟಿನ ಕೊನೆಯ ಪಂದ್ಯ ಎನ್ನುವಂತಾಗಿದ್ದು ಮಾತ್ರ ವಿಪರ್ಯಾಸ. ಕೂಟದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಲ್ಲಿ ವಿಫಲವಾದರು. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯಂತ ಅಗತ್ಯ ಸಂದರ್ಭದಲ್ಲಿ ಬಡ್ತಿ ಪಡೆದು ಬಂದ ಅವರು, ವೈಫಲ್ಯ ಅನುಭವಿಸಿದರು. ಮೊದಲೇ ದಿನೇಶ್ ಕಾರ್ತಿಕ್‌ರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಿದ್ದನ್ನು ಹಲವರು ಪ್ರಶ್ನಿಸಿದ್ದರು. ಅವರ ವೈಫಲ್ಯದ ನಂತರ ಆ ಟೀಕೆ ಇನ್ನೂ ತೀವ್ರವಾಯಿತು. ಈಗ ದಿನೇಶ್ ಪಾಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮುಕ್ತಾಯವಾಗಿದೆ ಎಂದು ಹೇಳುವುದು ಬೇಸರದ ಸಂಗತಿಯಾದರೂ, ಅದು ಸತ್ಯ. 2018ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ಸರಣಿ ಅಂತಿಮ ಪಂದ್ಯದಲ್ಲಿ ಅವರು ಬಾಂಗ್ಲಾದೇಶದ ವಿರುದ್ಧ ಅತ್ಯದ್ಭುತವಾಗಿ ಆಡಿ ತಂಡವನ್ನು ಗೆಲ್ಲಿಸಿದ್ದರು. ಅಲ್ಲಿ ಭಾರತ ಗೆಲ್ಲುತ್ತದೆಂದು ಯಾರೂ ನಿರೀಕ್ಷೆಯೇ ಮಾಡಿರಲಿಲ್ಲ. ಅಂತಹ ಅಸಾಮಾನ್ಯ ನೆನಪನ್ನು ಕೊಟ್ಟಿರುವ ಕ್ರಿಕೆಟಿಗ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪೂರ್ಣ ಅನುಭವದೊಂದಿಗೆ ಹೊರನಡೆಯಬೇಕಾಗಿದೆ. ಇದು ಜೀವನ ಮನುಷ್ಯರಿಗೆ ಕೊಡುವ ಕಹಿ ಸತ್ಯ ಅದನ್ನು ಒಪ್ಪಿಕೊಳ್ಳಲೇಬೇಕು.
ಬಹಳ ನಿರೀಕ್ಷೆಯಿಂದ ತಮಿಳುನಾಡಿನ ಆಲ್‌ರೌಂಡರ್ ವಿಜಯ್ ಶಂಕರ್‌ರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅವರು ಬೌಲಿಂಗ್‌ನಲ್ಲಿ ನೆರವಾಗುವುದರ ಜೊತೆಗೆ, ಮಧ್ಯಮ ಕ್ರಮಾಂಕದ ನಂಬಿಕಸ್ತ ಬ್ಯಾಟ್ಸ್‌ಮನ್ ಆಗುತ್ತಾರೆ ಎನ್ನುವುದು ಲೆಕ್ಕಾಚಾರವಾಗಿತ್ತು. ಆದರೆ ಅವರು ಎರಡರಲ್ಲೂ ವಿಫಲರಾದರು. ಕಡೆಗೆ ಕಾಲೆºರಳಿಗೆ ಗಾಯ ಮಾಡಿಕೊಂಡು, ಕೂಟದಿಂದ ಹೊರಹೋದರು. ಒಂದು ವೇಳೆ ಅವರಿಗೆ ಗಾಯವಾಗದಿದ್ದರೂ, ಅವರು ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನವಿತ್ತು. ವಿಶ್ವಕಪ್ ಅವರ ಪಾಲಿಗೆ ಮಹತ್ವದ ವೇದಿಕೆಯಾಗಿತ್ತು. ಅಲ್ಲಿ ಸಂಪೂರ್ಣ ವಿಫಲಗೊಂಡು, ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಬಹುತೇಕ ಮುಗಿಸಿಕೊಂಡಿದ್ದಾರೆ. ಇನ್ನು ಪವಾಡ ನಡೆದರಷ್ಟೇ ಅವರು ತಂಡಕ್ಕೆ ಮರಳಬಹುದು! ಅನುಮಾನದಲ್ಲಿದೆ ಕೇದಾರ್ ಜಾಧವ್ ಭವಿಷ್ಯ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಕೇದಾರ್ ಜಾಧವ್ ಪ್ರವೇಶಿಸಿದ್ದು 2014ರಲ್ಲಿ. ಇದುವರೆಗೆ 65 ಏಕದಿನವಾಡಿ 1254 ರನ್ ಗಳಿಸಿದ್ದಾರೆ. ಈ ಆಟಗಾರನ ಏಕದಿನ ಕ್ರಿಕೆಟ್‌ನಲ್ಲಿ ಯಾವ ಮಹತ್ವದ ಸಾಧನೆ ಮಾಡಿದ್ದಾರೆಂದು ಬಹುಶಃ ಯಾರ ನೆನಪಿನಲ್ಲೂ ಇರಲು ಸಾಧ್ಯವಿಲ್ಲ. ಆದರೆ ನಿರಂತರವಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಈ ವಿಶ್ವಕಪ್ ಮುಗಿದಾಗ ಕೇದಾರ್ ಕಥೆಯೂ ಮುಗಿಯಿತು ಎಲ್ಲರೂ ಊಹಿಸಿದ್ದರು. ಆದರೆ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ! ಇತ್ತೀಚೆಗೆ ಮುಗಿದ ವಿಶ್ವಕಪ್‌ನಲ್ಲಿ ಅವರು ಹಲವು ಪಂದ್ಯಗಳಲ್ಲಿ ಆಡಲೂ ಅವಕಾಶ ಪಡೆಯಲಿಲ್ಲ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೇದಾರ್ ಮಿಂಚಿದರೆ ಅವರು ಮುಂದೆ ಮತ್ತೆ ಆಯ್ಕೆಯಾಗುವ ಕನಸು ಕಾಣಬಹುದು. ಇಲ್ಲದೇ ಹೋದರೆ ಇಲ್ಲಿಗೆ ಅವರ ಆಟವೂ ಮುಗಿಯುತ್ತದೆ.
Related Articles
ರವೀಂದ್ರ ಜಡೇಜ ಅವರದ್ದೊಂದು ಅದ್ಭುತ ಕಥೆ. ಧೋನಿ ತಂಡದ ನಾಯಕತ್ವ ಬಿಟ್ಟ ಮೇಲೆ, ಅವರು ಟೆಸ್ಟ್ ತಂಡದ ಖಾಯಂ ಆಟಗಾರರಾಗಿದ್ದರು. ಏಷ್ಯಾಕಪ್‌ನಲ್ಲಿ ಅನಿರೀಕ್ಷಿತವಾಗಿ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದು ಮಿಂಚಿದರು. ಮತ್ತೆ ಈ ತಂಡದಲ್ಲಿ ಆಯ್ಕೆಯಾಗತೊಡಗಿದರು. ಆದರೆ ಅವರ ಸ್ಥಾನವೇನು ಗಟ್ಟಿಯಾಗಿರಲಿಲ್ಲ. ಆದರೆ ಈ ಬಾರಿ ವಿಶ್ವಕಪ್‌ನಲ್ಲಿ, ಭಾರತವಾಡಿದ ಕಡೆಯ ಲೀಗ್ ಪಂದ್ಯದಲ್ಲಿ ಆಡಲು ರವೀಂದ್ರ ಜಡೇಜ ಆಡಲು ಅವಕಾಶ ಪಡೆದರು. ಅದಾದ ನಂತರ ಸೆಮಿಫೈನಲ್‌ನಲ್ಲಿ ಅವರು ಅಮೋಘವಾಗಿ ಬ್ಯಾಟಿಂಗ್ ಮಾಡಿ, 77 ರನ್ ಗಳಿಸಿ ಭಾರತವನ್ನು ಫೈನಲ್‌ಗೇರಿಸುವ ಭರವಸೆ ಮೂಡಿಸಿದ್ದರು. ಈ ಪಂದ್ಯದ ನಂತರ ಮುಗಿದೇ ಹೋಗಿದ್ದ ಅವರ ಸೀಮಿತ ಓವರ್‌ಗಳ ಭವಿಷ್ಯ ಮತ್ತೆ ಪುನರಾರಂಭಗೊಂಡಿದೆ. ಅವರಿಗೆ ಮರು ಜನ್ಮ ಸಿಕ್ಕಿದೆ.
Advertisement