Advertisement
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 9 ವಿಕೆಟಿಗೆ 367 ರನ್ ಪೇರಿಸಿ ಸವಾಲೊಡ್ಡಿದರೆ, ಪಾಕಿಸ್ಥಾನ 45.3 ಓವರ್‌ಗಳಲ್ಲಿ 305ಕ್ಕೆ ಆಲೌಟ್ ಆಯಿತು. ಇದು 4 ಪಂದ್ಯಗಳಲ್ಲಿ ಆಸ್ಟ್ರೇಲಿಯಕ್ಕೆ ಒಲಿದ 2ನೇ ಜಯ. ಪಾಕಿಸ್ಥಾನ 4 ಪಂದ್ಯಗಳಲ್ಲಿ 2ನೇ ಸೋಲನುಭವಿಸಿತು.
ಆಸ್ಟ್ರೇಲಿಯದ ಸರದಿಯನ್ನು 2 ವಿಭಾಗಗಳಾಗಿ ವಿಂಗಡಿಸಬಹುದು. 34ನೇ ಓವರ್ ತನಕ ಡೇವಿಡ್ ವಾರ್ನರ್-ಮಿಚೆಲ್ ಮಾರ್ಷ್ ಜೋಡಿಯ ಬ್ಯಾಟಿಂಗ್ ಅಬ್ಬರ. ಇಲ್ಲಿಂದ ಮುಂದೆ ಪಾಕಿಸ್ಥಾನಿ ಬೌಲರ್‌ಗಳ ತಿರುಗೇಟು. ಅರ್ಥಾತ್, ಆಸೀಸ್ ನೋಲಾಸ್ 259, ಬಳಿಕ 104 ರನ್ ಅಂತರದಲ್ಲಿ 9 ವಿಕೆಟ್ ಪತನ. ಆದರೆ ವಾರ್ನರ್-ಮಾರ್ಷ್ ಜೋಡಿ ಆಗಲೇ ಶತಕ ಬಾರಿಸಿ ರನ್ ಪರ್ವತ ಏರಿ ನಿಂತಿದ್ದರಿಂದ ಪಾಕ್ ಬೌಲರ್‌ಗಳ ಪ್ರಯತ್ನದಿಂದ ಯಾವ ಲಾಭವೂ ಆಗಲಿಲ್ಲ.
Related Articles
Advertisement
ವಾರ್ನರ್-ಮಾರ್ಷ್ 203 ಎಸೆತಗಳ ಜತೆಯಾಟ ನಡೆಸಿದರು. ವಾರ್ನರ್ 21ನೇ, ಮಾರ್ಷ್ 2ನೇ ಶತಕ ಹೊಡೆದು “ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್ಭಟಿಸಿದರು. ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಆಯಿತು. ವಾರ್ನರ್ 43ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 163 ರನ್ ಬಾರಿಸಿದರು. ಈ ಎಡಗೈ ಬ್ಯಾಟರ್‌ನ ಅಬ್ಬರದ ವೇಳೆ 14 ಬೌಂಡರಿ, 9 ಸಿಕ್ಸರ್ ಸಿಡಿಯಿತು. ಇದು ಅವರ 21ನೇ ಏಕದಿನ ಶತಕ. ಪಾಕಿಸ್ಥಾನ ವಿರುದ್ಧ ಸತತ ನಾಲ್ಕನೆಯದು!
ಮಿಚೆಲ್ ಮಾರ್ಷ್ 2ನೇ ಸೆಂಚುರಿಯೊಂದಿಗೆ ತಮ್ಮ ಬರ್ತ್‌ಡೇಯನ್ನು ಅದ್ಧೂರಿಯಾಗಿಯೇ ಆಚರಿಸಿದರು. ಇವರ ಗಳಿಕೆ 109 ಎಸೆತಗಳಿಂದ 121 ರನ್. ಸಿಡಿಸಿದ್ದು 10 ಬೌಂಡರಿ ಹಾಗೂ 9 ಸಿಕ್ಸರ್. ಈ ಆರಂಭಿಕರಿಬ್ಬರೇ ಸೇರಿಕೊಂಡು 18 ಸಿಕ್ಸರ್, 24 ಬೌಂಡರಿ ಬಾರಿಸಿ ವಿಜೃಂಭಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಆರಂಭಿಕರಿಬ್ಬರೂ ಶತಕ ದಾಖಲಿಸಿದ 4ನೇ ನಿದರ್ಶನ ಇದಾಗಿದೆ. ವಾರ್ನರ್-ಮಾರ್ಷ್ ಜೋಡಿಯ ಬ್ಯಾಟಿಂಗ್ ಅಬ್ಬರದ ವೇಳೆ ಹತ್ತಾರು ದಾಖಲೆಗಳು ನಿರ್ಮಾಣಗೊಂಡವು.
ಪಾಕಿಸ್ಥಾನ ಮೊದಲ ಯಶಸ್ಸಿಗೆ 34ನೇ ಓವರ್ ತನಕ ಕಾಯಬೇಕಾಯಿತು. ಎಡಗೈ ಪೇಸರ್ ಅಫ್ರಿದಿ ಈ ಓವರ್‌ನ ಸತತ ಎಸೆತಗಳಲ್ಲಿ ಮಾರ್ಷ್ ಮತ್ತು ಮ್ಯಾಕ್ಸ್‌ವೆಲ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ಥಾನವನ್ನು ಉಸಿರಾಡುವಂತೆ ಮಾಡಿದರು. ಆದರೆ ಶದಾಬ್ ಖಾನ್ ಬದಲು ಅವಕಾಶ ಪಡೆದು ಮೊದಲ ಪಂದ್ಯ ಆಡಲಿಳಿದ ಉಸಾಮ ಮಿರ್ ಅಷ್ಟೇ ದುಬಾರಿಯಾದರು. ಇವರ 9 ಓವರ್‌ಗಳಲ್ಲಿ 82 ರನ್ ಸೋರಿ ಹೋಯಿತು. ಅಷ್ಟೇ ಅಲ್ಲ, ಆರಂಭದಲ್ಲೇ ವಾರ್ನರ್ ಅವರ ಕ್ಯಾಚ್ ಬಿಡುವ ಮೂಲಕ ತಮ್ಮ ಏಕದಿನ ಪ್ರವೇಶವನ್ನು ಕಹಿಗೊಳಿಸಿದರು. ಆಗ ವಾರ್ನರ್ ಕೇವಲ 10 ರನ್ ಮಾಡಿದ್ದರು, ಆಸೀಸ್ ಮೊತ್ತ 22 ರನ್ ಆಗಿತ್ತು. ಅಫ್ರಿದಿಗೆ ವಿಕೆಟ್ ನಷ್ಟವಾಯಿತು. ವಾರ್ನರ್ ಈ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡರು.