Advertisement

ಅಫ್ಘಾನ್‌ಗೆ ಆಘಾತವಿಕ್ಕಲು ಕೊಹ್ಲಿ ಪಡೆ ಸಜ್ಜು

12:41 PM Jun 23, 2019 | Team Udayavani |

ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯ ನೆಚ್ಚಿನ ಹಾಗೂ ಅಜೇಯ ತಂಡವಾಗಿರುವ ಭಾರತ ಶನಿವಾರ ಸೌತಾಂಪ್ಟನ್‌ನಲ್ಲಿ ತನ್ನ 5ನೇ ಪಂದ್ಯವನ್ನು ಭಾರೀ ಉಲ್ಲಾಸ ಹಾಗೂ ಉತ್ಸಾಹದಿಂದ ಆಡಲಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಪಾಕಿಸ್ಥಾನವನ್ನು ನೆಲಕ್ಕುರುಳಿಸಿದ ಸಂಭ್ರಮ ಒಂದೆಡೆಯಾದರೆ, ಮುಂದಿನ ಎದುರಾಳಿ ದುರ್ಬಲ ಅಫ್ಘಾನಿಸ್ಥಾನ ಎಂಬುದು ಮತ್ತೂಂದು ಕಾರಣ!

Advertisement

ಭಾರತ ಈ ವರೆಗೆ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ ಮತ್ತು ಬದ್ಧ ಎದುರಾಳಿ ಪಾಕಿಸ್ಥಾನಕ್ಕೆಲ್ಲ ಕೊಹ್ಲಿ ಪಡೆ ಈಗಾಗಲೇ ಸೋಲಿನ ರುಚಿ ತೋರಿಸಿದೆ. ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯವನ್ನು ಮಳೆ ನುಂಗಿತು. ಅಫ್ಘಾನ್‌ ಪಂದ್ಯಕ್ಕೆ ಮಳೆಯ ಸಾಧ್ಯತೆ ಇಲ್ಲ. ಹೀಗಾಗಿ ಟೀಮ್‌ ಇಂಡಿಯಾ ದೊಡ್ಡ ಜಯದೊಂದಿಗೆ ತನ್ನ ರನ್‌ರೇಟ್‌ ಹೆಚ್ಚಿಸಿಕೊಳ್ಳಲು ಮುಂದಾಗ ಬೇಕಿದೆ.

ಅಫ್ಘಾನ್‌ಗೆ ಏನಾಯಿತು?
ಈ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನ ಉತ್ತಮ ಪ್ರದರ್ಶನದೊಂದಿಗೆ ಗಮನ ಸೆಳೆಯಲಿದೆ ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಅನುಭವದ ಕೊರತೆ ಇದ್ದರೂ ದಿಟ್ಟ ಆಟಕ್ಕೇನೂ ಅಡ್ಡಿಯಾಗದೆಂಬುದು ಅನೇಕರ ಲೆಕ್ಕಾಚಾರವಾಗಿತ್ತು. ಆದರೆ ಗುಲ್ಬದಿನ್‌ ನೈಬ್‌ ಪಡೆ ಸ್ಪಷ್ಟ ಗುರಿಯೇ ಇಲ್ಲದಂತೆ ಆಡುತ್ತಿದೆ. ಐದರಲ್ಲೂ ಸೋತು ಕೂಟದಿಂದ ನಿರ್ಗಮಿಸಿದೆ.

ಇನ್ನೇನು ವಿಶ್ವಕಪ್‌ ಬಂತು ಎನ್ನುವಾಗಲೇ ಅಸYರ್‌ ಅಫ್ಘಾನ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು, ಆರಂಭಕಾರ ಮೊಹಮ್ಮದ್‌ ಶಾಜಾದ್‌ ಗಾಯಾಳಾಗಿ ಹೊರಬಿದ್ದದ್ದು, ಹೊಂದಾಣಿಕೆಯ ಕೊರತೆ, ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ ಅವರ ಬೌಲಿಂಗ್‌ ಸಂಪೂರ್ಣ ನೆಲಕಚ್ಚಿದ್ದು ಹಾಗೂ ತಂಡದ ಒಳಜಗಳ…. ಇವೆಲ್ಲ ಸೇರಿ ಅಫ್ಘಾನಿಸ್ಥಾನವನ್ನು ನೆಲಕ್ಕೆ ಕೆಡವಿದೆ. ಕಳೆದುಕೊಳ್ಳುವುದೇನೂ ಇಲ್ಲದಿದ್ದರೂ ಈ ತಂಡವಿನ್ನು ಗೆಲುವಿನ ಮುಖ ಕಾಣುವುದು ಅಷ್ಟರಲ್ಲೇ ಇದೆ.

ಅಫ್ಘಾನ್‌ ಬಗ್ಗೆ ಎಚ್ಚರಿಕೆ ಅಗತ್ಯ
ಪಾಕಿಸ್ಥಾನ ವಿರುದ್ಧ ತೋರಿದ ಜೋಶ್‌ ಮುಂದುವರಿಸಿದ್ದೇ ಆದಲ್ಲಿ ಅಫ್ಘಾನಿಸ್ಥಾನವಷ್ಟೇ ಅಲ್ಲ, ಯಾವ ಎದುರಾಳಿಯೂ ಭಾರತಕ್ಕೆ ಸಾಟಿಯಾಗದು. ಅಂದಮಾತ್ರಕ್ಕೆ ಅಫ್ಘಾನ್‌ ಪಡೆಯನ್ನು ಲಘುವಾಗಿ ಪರಿಗಣಿಸುವುದು ತಪ್ಪು. ಕಳೆದ ವರ್ಷದ ಏಶ್ಯ ಕಪ್‌ ಪಂದ್ಯದಲ್ಲಿ ಅದು ಭಾರತವನ್ನು ಸೋಲಿಸುವ ಹಂತಕ್ಕೆ ಬಂದಿತ್ತು. ಇದನ್ನು ಟೈ ಮಾಡಿಕೊಳ್ಳುವ ಮೂಲಕ ಭಾರತದ ಮರ್ಯಾದೆ ಉಳಿಸಿಕೊಂಡಿತ್ತು.

Advertisement

ವಿಜಯ್‌ ಶಂಕರ್‌ ಅನುಮಾನ
ಆಲ್‌ರೌಂಡರ್‌ ವಿಜಯ್‌ ಶಂಕರ್‌ ಗಾಯದ ಸುಳಿಯಲ್ಲಿದ್ದಾರೆ. ಅಫ್ಘಾನ್‌ ವಿರುದ್ಧ ಆಡುವುದು ಇನ್ನೂ ಖಚಿತಪಟ್ಟಿಲ್ಲ. ಇದರಿಂದ ಚಿಂತೆಯೇನೂ ಇಲ್ಲ. ಈಗಾಗಲೇ ಇಂಗ್ಲೆಂಡಿಗೆ ಧಾವಿಸಿ ಬಂದಿರುವ ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌ ರೇಸ್‌ನಲ್ಲಿದ್ದಾರೆ. ಒಬ್ಬ ಸ್ಪಿನ್ನರ್‌ಗೆ ವಿಶ್ರಾಂತಿ ನೀಡಿ ರವೀಂದ್ರ ಜಡೇಜ ಅವರನ್ನು ಆಡಿಸುವ ಇರಾದೆಯೂ ಇದೆ.

ಒಂದೆರಡು ಬದಲಾವಣೆ…
ಅಫ್ಘಾನ್‌ ವಿರುದ್ಧ ಭಾರತ ತಂಡದಲ್ಲಿ ಒಂದು ಬದಲಾವಣೆ ಅನಿವಾರ್ಯ. ಗಾಯಾಳು ಭುವನೇಶ್ವರ್‌ ಕುಮಾರ್‌ ಬದಲು ಮೊಹಮ್ಮದ್‌ ಶಮಿ ಬೌಲಿಂಗ್‌ ನೇತೃತ್ವ ವಹಿಸಲಿದ್ದಾರೆ. ಇದು ಈ ವಿಶ್ವಕಪ್‌ನಲ್ಲಿ ಶಮಿ ಅವರ ಮೊದಲ ಪಂದ್ಯವಾಗಲಿದೆ. ಶಿಖರ್‌ ಧವನ್‌ ಸ್ಥಾನವನ್ನು ಕೆ.ಎಲ್‌. ರಾಹುಲ್‌ ಈಗಾಗಲೇ ಯಶಸ್ವಿಯಾಗಿ ತುಂಬಿದ್ದಾರೆ. ಪಾಕ್‌ ಎದುರು ಮೊಹಮ್ಮದ್‌ ಆಮಿರ್‌ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ರೋಹಿತ್‌ಗೆ ಅಮೋಘ ಸ್ಟಾಂಡ್‌ ಕೊಟ್ಟದ್ದೆಲ್ಲ ರಾಹುಲ್‌ ಆತ್ಮವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಿದೆ. 2 ಶತಕ ಬಾರಿಸಿರುವ ರೋಹಿತ್‌ ಶರ್ಮ ಅವರಂತೂ “ಪ್ರೈಮ್‌ ಫಾರ್ಮ್’ನಲ್ಲಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಆಸೀಸ್‌ ಮತ್ತು ಪಾಕ್‌ ವಿರುದ್ಧ ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

ದುಬಾೖ ಪಂದ್ಯದ ರೋಮಾಂಚನ
ಕಳೆದ ವರ್ಷ ದುಬಾೖಯಲ್ಲಿ ನಡೆದ ಭಾರತ-ಅಫ್ಘಾನ್‌ ನಡುವಿನ ಏಶ್ಯ ಕಪ್‌ ಸೂಪರ್‌-4 ಪಂದ್ಯ ಅತ್ಯಂತ ರೋಚಕವಾಗಿತ್ತು. ಇನ್ನೇನು ಭಾರತ ಸೋತೇ ಬಿಟ್ಟಿತು ಎನ್ನುವಾಗ ಟೈ ಮಾಡಿಕೊಂಡು ನಿಟ್ಟುಸಿರೆಳೆದಿತ್ತು!

ಮೊಹಮ್ಮದ್‌ ಶಾಜಾದ್‌ ಅವರ 124 ರನ್‌ ಸಾಹಸದಿಂದ ಅಫ್ಘಾನ್‌ 8ಕ್ಕೆ 252 ರನ್‌ ಮಾಡಿದರೆ, ಭಾರತ 49.5 ಓವರ್‌ಗಳಲ್ಲಿ 252ಕ್ಕೆ ಆಲೌಟ್‌ ಆಯಿತು. ರಶೀದ್‌ ಖಾನ್‌ ಪಾಲಾದ ಅಂತಿಮ ಓವರಿನಲ್ಲಿ ಗೆಲುವಿಗಾಗಿ 7 ರನ್‌ ಅಗತ್ಯವಿತ್ತು. ಸ್ಕೋರ್‌ ಸಮನಾದ ಬಳಿಕ 5ನೇ ಎಸೆತದಲ್ಲಿ ರವೀಂದ್ರ ಜಡೇಜ ಬೌಲ್ಡ್‌ ಆದರು.

ಸೌತಾಂಪ್ಟನ್‌ನಲ್ಲೂ ಅಫ್ಘಾನಿಸ್ಥಾನ ಇಂಥದೇ ಜಿದ್ದಾಜಿದ್ದಿ ಹೋರಾಟ ನಡೆಸೀತೇ? ಸಾಧ್ಯತೆ ಕಡಿಮೆ!

ಭಾರತ-ಅಫ್ಘಾನ್‌ ಪಂದ್ಯ
ಟೈ ಆದಾಗ…
ಭಾರತ ಮತ್ತು ಅಫ್ಘಾನಿಸ್ಥಾನ ತಂಡಗಳು ಈವರೆಗೆ 2 ಏಕದಿನ ಪಂದ್ಯಗಳಲ್ಲಷ್ಟೇ ಮುಖಾಮುಖೀಯಾಗಿವೆ. ಇವೆರಡೂ ಏಶ್ಯ ಕಪ್‌ ಟೂರ್ನಿಯ ಪಂದ್ಯಗಳಾಗಿದ್ದವು. 2014ರ ಢಾಕಾ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನ್‌ 45.2 ಓವರ್‌ಗಳಲ್ಲಿ 159ಕ್ಕೆ ಕುಸಿದರೆ, ಭಾರತ 32.2 ಓವರ್‌ಗಳಲ್ಲಿ 2 ವಿಕೆಟಿಗೆ 160 ರನ್‌ ಮಾಡಿತ್ತು. ಅಜಿಂಕ್ಯ ರಹಾನೆ (56), ಶಿಖರ್‌ ಧವನ್‌ (60) ಮೊದಲ ವಿಕೆಟಿಗೆ 121 ರನ್‌ ಪೇರಿಸಿದ್ದರು. ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ರವೀಂದ್ರ ಜಡೇಜ (30ಕ್ಕೆ 4), ಆರ್‌. ಅಶ್ವಿ‌ನ್‌ (31ಕ್ಕೆ 3) ಮತ್ತು ಶಮಿ (50ಕ್ಕೆ 2).

ಭಾರತ
ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ವಿಜಯ್‌ ಶಂಕರ್‌/ರಿಷಭ್‌ ಪಂತ್‌/ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌, ಎಂ. ಎಸ್‌. ಧೋನಿ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌, ಮೊಹಮ್ಮದ್‌ ಶಮಿ, ಚಾಹಲ್‌, ಬುಮ್ರಾ.

ಅಫ್ಘಾನಿಸ್ಥಾನ
ಗುಲ್ಬದಿನ್‌ ನೈಬ್‌ (ನಾಯಕ), ಹಜ್ರತುಲ್ಲ ಜಜಾಯ್‌, ರಹಮತ್‌ ಶಾ, ಹಶ್ಮತುಲ್ಲ
ಶಾಹಿದಿ, ಅಸYರ್‌ ಅಫ್ಘಾನ್‌, ಮೊಹಮ್ಮದ್‌ ನಬಿ, ನಜೀಬುಲ್ಲ ಜದ್ರಾನ್‌, ರಶೀದ್‌ ಖಾನ್‌, ಇಕ್ರಮ್‌ ಅಲಿ ಖೀಲ್, ದೌಲತ್‌ ಜದ್ರಾನ್‌, ಮುಜೀಬ್‌ ಉರ್‌ ರೆಹಮಾನ್‌.

ನಾವು ಯಾವುದೇ ಎದುರಾಳಿಯನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಆಸ್ಟ್ರೇಲಿಯವಿರಲಿ, ಅಫ್ಘಾನ್‌ ಇರಲಿ… ಎಲ್ಲರಿಗೂ ಒಂದೇ ರೀತಿಯ ಗೌರವ ಕೊಡುತ್ತೇವೆ.
-ಜಸ್‌ಪ್ರೀತ್‌ ಬುಮ್ರಾ

Advertisement

Udayavani is now on Telegram. Click here to join our channel and stay updated with the latest news.

Next