ಸೌತಾಂಪ್ಟನ್: ಈ ವಿಶ್ವಕಪ್ ಪಂದ್ಯಾ ವಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಬಹು ದೊಡ್ಡ ನಿರೀಕ್ಷೆಯೆಂದರೆ ದಕ್ಷಿಣ ಆಫ್ರಿಕಾ ಯಾವಾಗ ಗೆಲುವಿನ ಖಾತೆ ತೆರೆದೀತು ಎಂಬುದು! ಹರಿಣಗಳ ಪಡೆ ವಿಶ್ವಕಪ್ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಸೋಲುಂಡು ಅಫ್ಘಾನ್‌ಸ್ಥಾನದ ಸಾಲಿನಲ್ಲಿ ಕಾಣಿಸಿಕೊಂಡಿದೆ.
ಸೋಮವಾರ “ಹ್ಯಾಂಪಶೈರ್ ಬೌಲ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಕೂಟದ 4ನೇ ಪಂದ್ಯವನ್ನು ಆಡಲಿದೆ. ಡು ಪ್ಲೆಸಿಸ್ ಪಡೆಗೆ ಇದು “ಡೂ ಆರ್ ಡೈ’ ಮ್ಯಾಚ್ ಆಗಿದ್ದು, ಇದನ್ನೂ ಕಳೆದುಕೊಂಡರೆ ಸೆಮಿಫೈನಲ್ ಬಾಗಿಲು
ಬಹುತೇಕ ಮುಚ್ಚಲಿದೆ.
ನಾಕೌಟ್ ಪ್ರವೇಶಿಸಲು ತಂಡವೊಂದು ಕನಿಷ್ಠ 5 ಗೆಲುವು ಸಾಧಿಸುವುದು ಅನಿವಾರ್ಯ. ಆಗ ಉಳಿದ ಐದೂ ಪಂದ್ಯಗಳನ್ನು ಗೆಲ್ಲಬೇಕಾದ ತೀವ್ರ ಒತ್ತಡ ಆಫ್ರಿಕಾ ಮೇಲೆ ಬೀಳಲಿದೆ. ಅಲ್ಲದೇ ಅತ್ಯುತ್ತಮ ರನ್‌ರೇಟ್ ಅಗತ್ಯವೂ ಇದೆ. ಹೀಗಾಗಿ ಈ ಪಂದ್ಯದಿಂದಲೇ ಗೆಲ್ಲುತ್ತ ಹೋದರಷ್ಟೇ ದಕ್ಷಿಣ ಆಫ್ರಿಕಾಕ್ಕೆ ಉಳಿಗಾಲ.
ಆಫ್ರಿಕಾ ಎಲ್ಲ ಇದ್ದೂ ಏನನ್ನೂ ಸಾಧಿಸದೇ ಹೋದ ತಂಡ. ಡೇಲ್ ಸ್ಟೇನ್ ಗಾಯಾಳಾಗಿ ಹೊರಬಿದ್ದದ್ದು, ಲುಂಗಿ ಎನ್‌ಗಿಡಿ ಇನ್ನೂ ಚೇತರಿಸದಿದ್ದುದು ಬೌಲಿಂಗ್ ವಿಭಾಗವನ್ನು ಬುರ್ಬಲಗೊಳಿಸಿರಬಹುದು, ಆದರೆ ಬ್ಯಾಟ್ಸ್‌ಮನ್‌ಗಳೇಕೆ ವಿಶ್ವಕಪ್ ಜೋಶ್ ತೋರಿಸುತ್ತಿಲ್ಲ ಎಂಬುದೇ ಅಚ್ಚರಿ. ಡಿ ಕಾಕ್, ಡು ಪ್ಲೆಸಿಸ್, ಆಮ್ಲ, ಡುಸೆನ್ ಅವರೆಲ್ಲ ಸಿಡಿದು ನಿಂತರಷ್ಟೇ ಆಫ್ರಿಕಾದ ಮೇಲೆ ನಂಬಿಕೆ ಇಡಬಹುದು.
ವಿಂಡೀಸ್ ಹೆಚ್ಚು ಬಲಿಷ್ಠ
ಆಫ್ರಿಕಾಕ್ಕೆ ಹೋಲಿಸಿದರೆ ವೆಸ್ಟ್ ಇಂಡೀಸ್ ನಿಸ್ಸಂಶಯವಾಗಿಯೂ ಹೆಚ್ಚು ಬಲಿಷ್ಠ. ಆದರೆ ಗಂಭೀರವಾಗಿ ಆಡದಿರುವುದೇ ಇವರ ದೊಡ್ಡ ಸಮಸ್ಯೆ. ಮನಸ್ಸು ಮಾಡಿದ್ದರೆ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಉರುಳಿಸಬಹುದಿತ್ತು. ಆದರೆ “ಒಟ್ಟಾರೆ ಬ್ಯಾಟಿಂಗ್’ ಇದಕ್ಕೆ ಮುಳುವಾಯಿತು. ಈ ಪಂದ್ಯ ಗೆದ್ದರೆ ಹೋಲ್ಡರ್ ಪಡೆ ಕೂಟದಲ್ಲಿ ಬಹು ದೂರ ಸಾಗುವುದರಲ್ಲಿ ಅನುಮಾನವಿಲ್ಲ.