Advertisement
ಲಂಡನ್ನಿನ “ಕೆನ್ನಿಂಗ್ಟನ್ ಓವಲ್’ನಲ್ಲಿ ಈ ಮುಖಾಮುಖೀ ಸಾಗಲಿದೆ.ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾ ಆಂಗ್ಲರೆದುರು ತನ್ನ ಆರ್ಭಟ ತೋರ್ಪಡಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಫೀಲ್ಡಿಂಗ್ ಹೊರತುಪಡಿಸಿ ತಂಡದ ಬ್ಯಾಟಿಂಗ್, ಬೌಲಿಂಗ್ ನಿರೀಕ್ಷಿತ ಎತ್ತರಕ್ಕೆ ಏರಿರಲಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ಇಂಗ್ಲೆಂಡ್ ಪಡೆ ಆಫ್ರಿಕಾಗಿಂತ ಹೆಚ್ಚು ಬಲಿಷ್ಠವಾಗಿದ್ದುದು. ಅದು ಎಲ್ಲ ವಿಭಾಗಗಳಲ್ಲೂ ಡು ಪ್ಲೆಸಿಸ್ ಪಡೆಯನ್ನು ಮೀರಿ ನಿಂತಿತು.ಈ ಸೋಲಿನ ಆಘಾತದಿಂದ ಕೂಡಲೇ ಹೊರಬೇಕಿರುವ ದಕ್ಷಿಣ ಆಫ್ರಿಕಾ ರವಿವಾರ ಓವಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಾರಮ್ಯ ಮೆರೆಯುವುದು ಅನಿವಾರ್ಯ. ಇಲ್ಲಿಯೂ ಎಡವಿದರೆ ಆಫ್ರಿಕಾದ ಮುಂದಿನ ಹಾದಿ ಕಠಿನಗೊಳ್ಳಲಿದೆ.
ಬಲಾಬಲದ ಲೆಕ್ಕಾಚಾರದಲ್ಲಿ ಬಾಂಗ್ಲಾದೇಶಕ್ಕಿಂತ ದಕ್ಷಿಣ ಆಫ್ರಿಕಾ ಮೇಲುಗೈ ಹೊಂದಿದೆ. ಆದರೆ ಸಾಮರ್ಥ್ಯದಲ್ಲಿ ಮೊರ್ತಜ ಪಡೆಯೂ ಕಡಿಮೆ ಏನಿಲ್ಲ. ಕೂಟದ ಅಪಾಯಕಾರಿ ತಂಡವೆಂದೇ ಬಾಂಗ್ಲಾವನ್ನು ಗುರುತಿಸಲಾಗುತ್ತಿದೆ. ಈ ಕೂಟದಲ್ಲಿ ದೊಡ್ಡ ತಂಡಗಳನ್ನು ಮಣಿಸಿ ಏರುಪೇರಿನ ಫಲಿತಾಂಶ ದಾಖಲಿಸುವ ತಂಡವೊಂದಿದ್ದರೆ ಅದು ಬಾಂಗ್ಲಾದೇಶ. ಹಿಂದಿನ ಕೂಟಗಳಲ್ಲಿ ಇಂಥದೇ ಅನಿರೀಕ್ಷಿತ ಫಲಿತಾಂಶ ದಾಖಲಿಸಿದ ಹಿರಿಮೆ ಈ ಏಶ್ಯನ್ ತಂಡಕ್ಕಿದೆ. 2007ರಲ್ಲಿ ಭಾರತವನ್ನು, ಕಳೆದ ಸಲ ಇಂಗ್ಲೆಂಡನ್ನು ಬಹಳ ಬೇಗ ಕೂಟದಿಂದ ಹೊರದಬ್ಬಿ ಸುದ್ದಿಯಾಗಿತ್ತು. ಈ ಬಾರಿ ಬಾಂಗ್ಲಾಕ್ಕೆ ಆಹಾರವಾಗುವವರು ಯಾರು ಎಂಬುದು ಸದ್ಯದ ಕುತೂಹಲ!
Related Articles
ಡು ಪ್ಲೆಸಿಸ್ ಪಡೆಯ ಒತ್ತಡದ ಲಾಭವನ್ನು ಎತ್ತಲು ಸಾಧ್ಯವಾದದ್ದೇ ಆದರೆ ಬಾಂಗ್ಲಾದೇಶ ತನ್ನ ಮೊದಲ ಮುಖಾಮುಖೀಯಲ್ಲೇ ಅಚ್ಚರಿಯ ಫಲಿತಾಂಶ ವೊಂದನ್ನು ದಾಖಲಿಸಬಹುದು. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್, ಐರ್ಲೆಂಡ್ ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆದ ಹೆಗ್ಗಳಿಕೆ ಬಾಂಗ್ಲಾದೇಶದ್ದಾಗಿದೆ.
Advertisement
ಆರಂಭದಲ್ಲೇ ಬಲಿಷ್ಠ ಎದುರಾಳಿನಾಯಕ ಮೊರ್ತಜೆ ಪ್ರಕಾರ ಆರಂಭದ 3 ಪಂದ್ಯಗಳಲ್ಲೇ ಬಲಿಷ್ಠ ತಂಡಗಳು ಎದುರಾದುದರಿಂದ ತಂಡದ ಮೇಲೆ ಒತ್ತಡ ತೀವ್ರವಾಗಿದೆ. ದಕ್ಷಿಣ ಆಫ್ರಿಕಾ ಬಳಿಕ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡನ್ನು ಎದುರಿಸಬೇಕಿದೆ. ಇವರೆದುರು ಸಕಾರಾತ್ಮಕ ಫಲಿತಾಂಶ ದಾಖಲಿಸುವುದು ಅಷ್ಟು ಸುಲಭವಲ್ಲ ಎಂಬುದು ಮೊರ್ತಜ ಅಭಿಪ್ರಾಯ. ಬಾಂಗ್ಲಾದ ಬ್ಯಾಟಿಂಗ್ ಲೈನ್‌ಅಪ್ ಸಾಕಷ್ಟು ಬಲಿಷ್ಠವಾಗಿಯೇ ಇದೆ. ಆದರೆ ಅನುಭವಿ ಆರಂಭಕಾರ ತಮಿಮ್ ಇಕ್ಬಾಲ್ ಗಾಯಾಳಾಗಿರುವುದೊಂದು ಹೊಡೆತ. ಆದರೆ ತಂಡದ ಬೌಲಿಂಗ್ ಸಾಮಾನ್ಯ. ಇದು ದಕ್ಷಿಣ ಆಫ್ರಿಕಾಕ್ಕೆ ಲಾಭವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ಆಫ್ರಿಕಾ ಬೌಲಿಂಗ್ ಘಾತಕ
ಸೋಲಿನಿಂದ ಆತ್ಮವಿಮರ್ಶೆ ಮಾಡಿಕೊಂಡು, ತಪ್ಪುಗಳನ್ನು ನಿವಾರಿಸಿಕೊಂಡು ಕಣಕ್ಕಿಳಿಯುವ ಯೋಜನೆ ದಕ್ಷಿಣ ಆಫ್ರಿಕನ್ನರದು. ಬಾಂಗ್ಲಾ ಹುಲಿಗಳನ್ನು ಬೇಟೆಯಾಡಲು ಪ್ರತ್ಯೇಕ ರಣತಂತ್ರವನ್ನು ರೂಪಿಸಿರುವ ಹರಿಣಗಳ ಪಡೆ, ಕ್ರಿಕೆಟ್ ವಿಶ್ಲೇಷಕರ ನೆಚ್ಚಿನ ತಂಡವಾಗಿದೆ. ಇವರ ಘಾತಕ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲುವುದು ಬಾಂಗ್ಲಾಕ್ಕೆ ಸಾಧ್ಯವಿಲ್ಲ ಎಂಬುದು ಇವರ ಲೆಕ್ಕಾಚಾರ. ಸಂಭಾವ್ಯ ತಂಡಗಳು
ದಕ್ಷಿಣ ಆಫ್ರಿಕಾ:
ಕ್ವಿಂಟನ್ ಡಿ ಕಾಕ್, ಹಾಶಿಮ್ ಆಮ್ಲ, ಐಡನ್ ಮಾರ್ಕ್‌ರಮ್, ಫಾ ಡು ಪ್ಲೆಸಿಸ್ (ನಾಯಕ), ರಸ್ಸಿ ವಾನ್ ಡರ್ ಡುಸೆನ್, ಜೆಪಿ ಡ್ಯುಮಿನಿ, ಡ್ವೇನ್ ಪ್ರಿಟೋರಿಯಸ್, ಆ್ಯಂಡಿಲ್ ಫೆಲುಕ್ವಾಯೊ, ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್.
ಬಾಂಗ್ಲಾದೇಶ:
ತಮಿಮ್ ಇಕ್ಬಾಲ್/ಮೊಹಮ್ಮದ್ ಮಿಥುನ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಶಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಂ, ಮಹಮದುಲ್ಲ, ಮೊಸದೆಕ್ ಹೊಸೇನ್, ಮಶ್ರಫೆ ಮೊರ್ತಜ (ನಾಯಕ), ಮೊಹಮ್ಮದ್ ಸೈಫುದ್ದೀನ್, ರುಬೆಲ್ ಹೊಸೇನ್, ಮುಸ್ತಫಿಜುರ್ ರಹಮಾನ್.