Advertisement

ಆಫ್ರಿಕಾ,ಅಫ್ಘಾನ್‌ಗೆ ಗೆಲುವಿನ ಗುರಿ

12:44 AM Jun 15, 2019 | Team Udayavani |

ಲಂಡನ್‌: ಈ ಬಾರಿಯ ವಿಶ್ವಕಪ್‌ನಲ್ಲಿ ತೀರ ಕಳಪೆ ಪ್ರದರ್ಶನ ತೋರಿದ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ಶನಿವಾರ ಕಾರ್ಡಿಫ್ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.

Advertisement

ಅಫ್ಘಾನಿಸ್ಥಾನ ಆಡಿದ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 4 ಪಂದ್ಯಗಳಲ್ಲಿ 3 ಪಂದ್ಯ ಸೋತು ಒಂದು ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಕೇವಲ 1 ಅಂಕ ಸಂಪಾದಿಸಿದೆ. ಕೊನೆಯ ಪಕ್ಷ ಈ ಪಂದ್ಯವನ್ನಾದರೂ ಗೆದ್ದು ಗೆಲುವಿನ ಹಳಿ ಏರಲು ದಕ್ಷಿಣ ಆಫ್ರಿಕಾ ಎದುರು ನೋಡುತ್ತಿದೆ.
ಮುಂದಿನ ಹಂತಕ್ಕೇರಲು ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಇಲ್ಲಿ ಗೆಲುವಿನ ಖಾತೆ ತೆರೆದರೆ ಮಾತ್ರ ಮುನ್ನಡೆ ಯುವ ಅವಕಾಶ ಜೀವಂತವಾಗಿರಿಸಲು ಸಾಧ್ಯ. ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ ಬಲಿಷ್ಠ ತಂಡವಾಗಿರುವ ದ. ಆಫ್ರಿಕಾ ಗೆಲ್ಲುವ ಫೇವರಿಟ್‌ ತಂಡವೆನಿಸಿದೆ.

ದ. ಆಫ್ರಿಕಾ ಕೈ ಹಿಡಿಯದ ಲಕ್‌
ದಕ್ಷಿಣ ಆಫ್ರಿಕಾ ತಂಡ ಹೆಚ್ಚು ಬಲಿಷ್ಠವಾಗಿದ್ದರೂ ಏನನ್ನೂ ಸಾಧಿಸದೇ ಹೋದ ತಂಡವಾಗಿ ಈ ಬಾರಿಯ ವಿಶ್ವಕಪ್‌ ಕೂಟದಲ್ಲಿ ಗುರುತಿಸಿಕೊಂಡಿದೆ. ತಂಡದ ಯಾವುದೇ ಬ್ಯಾಟ್ಸ್‌ ಮನ್‌ ಮಿಂಚುತ್ತಿಲ್ಲ ಎಂಬುದೇ ಅಚ್ಚರಿ. ಡಿ ಕಾಕ್‌, ಡು ಪ್ಲೆಸಿಸ್‌, ಆಮ್ಲ, ಡುಸೆನ್‌ ಅವರೆಲ್ಲ ಸಿಡಿದು ನಿಂತರಷ್ಟೇ ಆಫ್ರಿಕಾದ ಮೇಲೆ ನಂಬಿಕೆ ಇಡಬಹುದು. ಇನ್ನೂ ಬೌಲಿಂಗ್‌ ವಿಭಾಗದಲ್ಲಿ ಇಮ್ರಾನ್‌ ತಾಹಿರ್‌, ರಬಾಡ ಘಾತಕ ಬೌಲಿಂಗ್‌ ದಾಳಿ ನಡೆಸುತ್ತಿಲ್ಲ. ಡೇಲ್‌ ಸ್ಟೇನ್‌ ಗಾಯಾಳಾಗಿ ಹೊರಬಿದ್ದದ್ದು, ಲುಂಗಿ ಎನ್‌ಗಿಡಿ ಇನ್ನೂ ಚೇತರಿಸದಿರುವುದು ಬೌಲಿಂಗ್‌ ವಿಭಾಗವನ್ನು ದುರ್ಬಲಗೊಳಿಸಿದೆ ಎನ್ನಬಹುದು. ಇದನ್ನೆಲ್ಲ ಮರೆತು ಮತ್ತೆ ಗೆಲುವಿನ ಹಾದಿ ಹಿಡಿಯಲು ಪ್ಲೆಸಿಸ್‌ ಪಡೆ ಸಂಪೂರ್ಣ ಯೋಜನೆಯೊಂದಿಗೆ ಮೈದಾನಕ್ಕಿಳಿಯಬೇಕಾಗಿದೆ.

ಅಫ್ಘಾನ್‌ಗೆ ರಶೀದ್‌- ನಬಿ ಬಲ
ಬ್ಯಾಟಿಂಗ್‌ ಲೈನ್‌ಅಪ್‌ ಕೈಕೊಡುತ್ತಿರುವುದು ಅಫ್ಘಾನಿಸ್ಥಾನಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಅಗ್ರ ಕ್ರಮಾಂಕದ ಆಟಗಾರರು ಇನ್ನೂ ಬ್ಯಾಟಿಂಗ್‌ ಜೋಶ್‌ ತೋರುವಲ್ಲಿ ವಿಫ‌ಲವಾಗಿದ್ದಾರೆ. ಈ ಪಂದ್ಯದಲ್ಲಾದರೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದೇ ಆದರೆ ತಂಡ ಬೃಹತ್‌ ರನ್‌ ಪೇರಿಸುವಲ್ಲಿ ಅನುಮಾನವಿಲ್ಲ .

ಬೌಲಿಂಗ್‌ನಲ್ಲಿ ಸ್ಪಿನ್‌ ವಿಭಾಗ ಹೆಚ್ಚು ಘಾತಕ. ರಶೀದ್‌-ನಬಿ ಜೋಡಿಯನ್ನು ನಿಭಾಯಿಸುವುದು ಸುಲಭವಲ್ಲ. ಆದರೆ ವೇಗದ ಬೌಲಿಂಗ್‌ ಸಾಧಾರಣ ಮಟ್ಟದಲ್ಲಿದೆ. ಒಟ್ಟಾರೆಯಾಗಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ತೋರಿದ್ದೇ ಆದಲ್ಲಿ ಅಫ್ಘಾನ್‌ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ ಎನ್ನಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next