Advertisement

ವಿಂಡೀಸ್‌ ಎದುರಾಳಿ: ಅಚ್ಚರಿಗೆ ಕಾದಿದೆ ಬಾಂಗ್ಲಾ

02:41 AM Jun 17, 2019 | Sriram |

ಟೌಂಟನ್‌: ವಿಶ್ವಕಪ್‌ ಇತಿಹಾಸದಲ್ಲಿ ಈವರೆಗೆ ವೆಸ್ಟ್‌ ಇಂಡೀಸನ್ನು ಮಣಿಸದ ಬಾಂಗ್ಲಾ ದೇಶ ಸೋಮವಾರ ಟೌಂಟನ್‌ ಪಂದ್ಯದಲ್ಲಿ ಅಚ್ಚರಿಯ ಫ‌ಲಿತಾಂಶವೊಂದನ್ನು ದಾಖಲಿಸುವ ಹುರುಪಿನಲ್ಲಿದೆ.

Advertisement

ಈವರೆಗೆ ಎರಡೂ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, ಒಂದನ್ನಷ್ಟೇ ಗೆದ್ದಿವೆ. ಒಂದ ರಲ್ಲಿ ಸೋತಿವೆ. ಉಳಿದೊಂದು ಪಂದ್ಯವನ್ನು ಮಳೆ ನುಂಗಿದೆ. ಎರಡೂ ತಂಡ ಗಳು ತಲಾ 3 ಅಂಕ ಹೊಂದಿವೆಯಾದರೂ ರನ್‌ರೇಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಮುಂದಿದೆ.

ಬಲಿಷ್ಠ ಪಡೆಯನ್ನು ಹೊಂದಿದ್ದರೂ ತೀರಾ ಸಾಮಾನ್ಯ ಪ್ರದರ್ಶನ ನೀಡುತ್ತಿರುವ ವೆಸ್ಟ್‌ ಇಂಡೀಸ್‌ ತನ್ನ ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡಿಗೆ ಶರಣಾದ ಒತ್ತಡದಲ್ಲಿದೆ. ಜೋ ರೂಟ್ ವಿಂಡೀಸಿನ ಬೇರನ್ನೇ ಕಡಿದು ಹಾಕಿದ್ದರು. ವೆಸ್ಟ್‌ ಇಂಡೀಸ್‌ ಕೇವಲ 212 ರನ್ನಿಗೆ ಕುಸಿದು 8 ವಿಕೆಟ್ ಸೋಲನ್ನು ಆಹ್ವಾನಿಸಿಕೊಂಡಿತ್ತು. ಈ ಹಿನ್ನಡೆಯಿಂದ ಪಾರಾಗಬೇಕಾದರೆ ಬಾಂಗ್ಲಾ ವಿರುದ್ಧ ಭರ್ಜರಿ ಪ್ರದರ್ಶನ ನೀಡುವುದು ಅನಿವಾರ್ಯ.

ಬಾಂಗ್ಲಾದೇಶ ಹೆಚ್ಚು ಅನುಭವಿ ಆಟಗಾರರಿಂದ ಕೂಡಿರುವ ತಂಡ. ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಬಿಸಿ ಮುಟ್ಟಿಸಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಅನುಭವಿಸಿದ್ದು ಕೇವಲ 2 ವಿಕೆಟ್ ಅಂತರದ ಸೋಲು. ಇದೇ ಜೋಶ್‌ ತೋರ್ಪಡಿಸಿದರೆ ವಿಂಡೀಸ್‌ ವಿರುದ್ಧ ಮೇಲುಗೈ ಸಾಧಿಸುವುದು ಅಸಾಧ್ಯವೇನಲ್ಲ. ಆದರೆ ನಿರ್ಣಾಯಕ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸುವುದನ್ನು ಕಲಿಯಬೇಕಿದೆ.

ವಿಂಡೀಸ್‌ ಅಸ್ಥಿರ ಪ್ರದರ್ಶನ
ವೆಸ್ಟ್‌ ಇಂಡೀಸ್‌ ಯಾವ ಹಂತದಲ್ಲಿ ಯಾವ ರೀತಿಯ ಪ್ರದರ್ಶನ ನೀಡೀತು ಎಂಬುದನ್ನು ಊಹಿಸುವುದು ಸುಲಭವಲ್ಲ. ವನ್‌ಡೇ ಸ್ಪೆಷಲಿಸ್ಟ್‌ಗಳನ್ನು ಹೊಂದಿದ್ದರೂ ಕೆಲವೊಮ್ಮೆ ತೀರಾ ಸಾಮಾನ್ಯ ಆಟವಾಡಿ ಟೀಕೆಗೆ ಗುರಿಯಾಗುತ್ತದೆ. ಇದಕ್ಕೆ ಇಂಗ್ಲೆಂಡ್‌ ಎದುರಿನ ಪಂದ್ಯವೇ ಸಾಕ್ಷಿ. ಈ ಅಸ್ಥಿರ ಆಟದಿಂದ ಹೊರಬಂದರಷ್ಟೇ ಹೋಲ್ಡರ್‌ ಪಡೆ ಈ ಕೂಟದಲ್ಲಿ ಮುಂದುವರಿದೀತು.

Advertisement

ಸಂಭಾವ್ಯ ತಂಡಗಳು
ವೆಸ್ಟ್‌ ಇಂಡೀಸ್‌: ಕ್ರಿಸ್‌ ಗೇಲ್, ಎವಿನ್‌ ಲೆವಿಸ್‌, ಶೈ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರನ್‌ ಹೆಟ್ಮೈರ್‌, ಜಾಸನ್‌ ಹೋಲ್ಡರ್‌ (ನಾಯಕ), ಆ್ಯಂಡ್ರೆ ರಸೆಲ್, ಕಾರ್ಲೋಸ್‌ ಬ್ರಾತ್‌ವೇಟ್, ಒಶೇನ್‌ ಥಾಮಸ್‌, ಶಾನನ್‌ ಗ್ಯಾಬ್ರಿಯಲ್, ಶೆಲ್ಡನ್‌ ಕಾಟ್ರೆಲ್.

ಬಾಂಗ್ಲಾದೇಶ‌: ತಮಿಮ್‌ ಇಕ್ಬಾಲ್, ಸೌಮ್ಯ ಸರ್ಕಾರ್‌, ಶಕಿಬ್‌ ಅಲ್ ಹಸನ್‌, ಮುಶ್ಫಿಕರ್‌ ರಹೀಂ, ಮೊಹಮ್ಮದ್‌ ಮಿಥುನ್‌/ಶಬ್ಬೀರ್‌ ರಹಮಾನ್‌, ಮಹಮದುಲ್ಲ, ಮೊಸದ್ದೆಕ್‌ ಹೊಸೈನ್‌, ಮೊಹಮ್ಮದ್‌ ಸೈಫ‌ುದ್ದೀನ್‌/ರುಬೆಲ್ ಹೊಸೈನ್‌, ಮೆಹಿದಿ ಹಸನ್‌, ಮಶ್ರಫೆ ಮೊರ್ತಜ (ನಾಯಕ), ಮುಸ್ತಫಿಜುರ್‌ ರಹಮಾನ್‌.

Advertisement

Udayavani is now on Telegram. Click here to join our channel and stay updated with the latest news.

Next