Advertisement

ಆಸೀಸ್‌-ವಿಂಡೀಸ್‌ ಕದನ ರೋಮಾಂಚನ

12:31 AM Jun 06, 2019 | Sriram |

ನಾಟಿಂಗ್‌ಹ್ಯಾಮ್‌: ಈವರೆಗಿನ 11 ವಿಶ್ವಕಪ್‌ ಟ್ರೋಫಿಗಳಲ್ಲಿ ಏಳನ್ನು ತಮ್ಮ ನಡುವೆ ಹಂಚಿಕೊಂಡಿರುವ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ತಂಡಗಳು ಗುರುವಾರ ಈ ಕೂಟದ ರೋಮಾಂಚಕಾರಿ ಪಂದ್ಯವೊಂದಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆ ಇದೆ.

Advertisement

ವಿಶ್ವಕಪ್‌ ಕ್ರಿಕೆಟಿನ ಆರಂಭಿಕ ಕೂಟಗಳ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಮತ್ತು ಸರ್ವಾಧಿಕ 5 ಸಲ ಕಪ್‌ ಗೆದ್ದಿರುವ ಆಸ್ಟ್ರೇಲಿಯ ತಂಡಗಳೆರಡೂ ಕೂಟದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿವೆ. ಹೋಲ್ಡರ್‌ ಪಡೆ ಪಾಕಿಸ್ಥಾನವನ್ನು ನೂರೈದಕ್ಕೆ ಉಡಾಯಿಸಿ 7 ವಿಕೆಟ್‌ಗಳ ಜಯಭೇರಿ ಮೊಳಗಿಸಿ ಎಲ್ಲ ತಂಡಗಳಿಗೂ ಎಚ್ಚರಿಕೆಯೊಂದನ್ನು ರವಾನಿಸಿ ದರೆ, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಕೂಡ 7 ವಿಕೆಟ್‌ಗಳಿಂದ ಅಫ್ಘಾನಿಸ್ಥಾನವನ್ನು ಮಣಿಸಿದೆ. ಹೀಗಾಗಿ “ಟ್ರೆಂಟ್‌ಬ್ರಿಜ್‌’ ಮೇಲೆ ಗೆಲುವಿನ ಸವಾರಿ ಮಾಡುವ ತಂಡ ಯಾವುದೆಂಬ ಕುತೂಹಲ ಸಹಜ.

ಬಿಗ್‌ ಹಿಟ್ಟಿಂಗ್‌ ಬ್ಯಾಟಿಂಗ್‌ ಸರದಿ
ವೆಸ್ಟ್‌ ಇಂಡೀಸ್‌ ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಹತಾ ಕೂಟದಲ್ಲಿ ಆಡುವಸಂಕಟಕ್ಕೆ ಸಿಲುಕಿತ್ತು. ಆದರೆ ಏಕದಿನಕ್ಕೆ ಹೇಳಿ ಮಾಡಿಸಿದಂಥ ಪಡೆಯನ್ನೇ ಹೊಂದಿದೆ. ಸ್ಫೋಟಕ ಹಾಗೂ ಬಿಗ್‌ ಹಿಟ್ಟಿಂಗ್‌ ಬ್ಯಾಟಿಂಗ್‌ ಸರದಿ ಕೆರಿಬಿಯನ್‌ ಪಡೆಯ ಸ್ಪೆಷಾಲಿಟಿ. ಇವರಲ್ಲಿ ಗೇಲ್‌ ಈಗಾಗಲೇ ಬಿರುಸಿನ ಆಟದ ಝಲಕ್‌ ಒಂದನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ ಹೋಪ್‌, ಹೆಟ್‌ಮೈರ್‌, ಪೂರನ್‌, ರಸೆಲ್‌ ಸಿಡಿದು ನಿಂತರೆ ವಿಂಡೀಸರನ್ನು ತಡೆಯುವುದು ಸುಲಭವಲ್ಲ.

ಆದರೆ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ಗಳನ್ನು ನಂಬುವುದು ಕಷ್ಟ. “ಬದ್ಧತೆ’ ಎಂಬುದು ಈ ಆಟಗಾರರಿಂದ ಮಾರು ದೂರ. ಸೀರಿಯಸ್‌ನೆಸ್‌ ಎಂಬುದು ಇಲ್ಲವೇ ಇಲ್ಲ. ಹೀಗಾಗಿ ಒಂದು ಪಂದ್ಯದಲ್ಲಿ ಪ್ರಚಂಡ ಪ್ರದರ್ಶನ ನೀಡಿದರೆ, ಇನ್ನೊಂದರಲ್ಲಿ ಅಷ್ಟೇ ಕಳಪೆ ಆಟವಾಡುತ್ತಾರೆ. ಪಾಕ್‌ ವಿರುದ್ಧ ತೋರಿದಂಥ ಪ್ರದರ್ಶನವನ್ನೇ ಮುಂದುವರಿಸಿದರೆ ಕಾಂಗರೂ ಪಡೆಗೆ ಗಂಡಾಂತರ ಎದುರಾಗುವುದರಲ್ಲಿ ಅನುಮಾನವಿಲ್ಲ.

ಕಾಂಗರೂಗಳಿಗೆ ಸವಾಲು
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಅಫ್ಘಾನಿ ಸ್ಥಾನ ಯಾವುದೇ ಸವಾಲಾಗಿ ಪರಿಣಮಿಸಲಿಲ್ಲ. ಹೀಗಾಗಿ ವೆಸ್ಟ್‌ ಇಂಡೀಸ್‌ ವಿರುದ್ಧ ಕಾಂಗರೂಗಳ ನೈಜ ಸಾಮರ್ಥ್ಯ ಏನೆಂಬುದು ಅರಿವಿಗೆ ಬರಲಿದೆ.

Advertisement

“ನಮ್ಮ ಗೇಮ್‌ಪ್ಲ್ರಾನ್‌ಗೆ ತಕ್ಕಂತೆ ಆಡಿದರೆ, ರಣತಂತ್ರವನ್ನು ಕಾರ್ಯರೂಪಕ್ಕಿಳಿಸಿದರೆ ವೆಸ್ಟ್‌ಇಂಡೀಸನ್ನು ಖಂಡಿತವಾಗಿಯೂ ತಡೆಯ ಬಲ್ಲೆವು. ಆದರೆ ವಿಂಡೀಸ್‌ ಅತ್ಯಂತ ಅಪಾಯ ಕಾರಿ ತಂಡ. ಆಕ್ರಮಣಕಾರಿ ಬ್ಯಾಟಿಂಗ್‌ ಹಾಗೂ ಘಾತಕ ಬೌಲಿಂಗ್‌ ಸರದಿಯನ್ನು ಅವರು ಹೊಂದಿದ್ದಾರೆ. ಅಷ್ಟೇ ದೌರ್ಬಲ್ಯವನ್ನೂ ಹೊಂದಿದ್ದಾರೆ’ ಎಂಬುದು ಆಸ್ಟ್ರೇಲಿಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

ಆಸ್ಟ್ರೇಲಿಯ:
ಆರನ್‌ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಉಸ್ಮಾನ್‌ ಖ್ವಾಜಾ, ಸ್ಟೀವನ್‌ ಸ್ಲಿತ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಆ್ಯಡಂ ಝಂಪ.

ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌, ಶೈ ಹೋಪ್‌, ಡ್ಯಾರನ್‌ ಬ್ರಾವೊ, ನಿಕೋಲಸ್‌ ಪೂರನ್‌, ಶಿಮ್ರನ್‌ ಹೆಟ್‌ಮೈರ್‌, ಆ್ಯಂಡ್ರೆ ರಸೆಲ್‌, ಜಾಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಆ್ಯಶೆ ನರ್ಸ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

Advertisement

Udayavani is now on Telegram. Click here to join our channel and stay updated with the latest news.

Next