Advertisement

ಲಂಕೆಯನ್ನು ಮಣಿಸಲು ಆಸ್ಟ್ರೇಲಿಯ ಸಜ್ಜು

12:39 AM Jun 15, 2019 | Team Udayavani |

ಲಂಡನ್‌: ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವನ್ನು 41 ರನ್ನುಗಳಿಂದ ಬಗ್ಗುಬಡಿದ ಆಸ್ಟ್ರೇಲಿಯ ತಂಡವು ಏಶ್ಯ ಖಂಡದ ಇನ್ನೊಂದು ತಂಡವಾದ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ.

Advertisement

ಸಂಕಷ್ಟದಲ್ಲಿ ಶ್ರೀಲಂಕಾ
ಓವಲ್‌ನಲ್ಲಿ ನಡೆಯಲಿರುವ ಈ ಪಂದ್ಯ ಶ್ರೀಲಂಕಾಕ್ಕೆ ಮಹತ್ವದ ಪಂದ್ಯವಾಗಿದೆ. ಜೂ. 4ರಂದು ಅಫ್ಘಾನಿಸ್ಥಾನಎದುರಿಸಿದ ಬಳಿಕ ಆಡಿದ ಎರಡು ಪಂದ್ಯಗಳನ್ನು ಮಳೆಯಿಂದ ಕಳೆದುಕೊಂಡ ಶ್ರೀಲಂಕಾ ಸಂಕಷ್ಟದಲ್ಲಿದೆ. ಇನ್ನೂ ಈ ಪಂದ್ಯವೂ ಮಳೆಯಿಂದ ರದ್ದುಗೊಂಡರೆ ಲಂಕಾಕ್ಕೆ ಮುಂದಿನ ಹಾದಿ ಕಠಿನವಾಗಲಿದೆ.

ವಿಶ್ವಕಪ್‌ನಲ್ಲಿ ಬಲಾಬಲದ ಲೆಕ್ಕಾಚಾರದಲ್ಲಿ ಆಸೀಸ್‌ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ ಆಸ್ಟ್ರೇಲಿಯಕ್ಕೆ ಹೆಚ್ಚಿನ ಅವಕಾಶ ಎನ್ನಲಡ್ಡಿಯಿಲ್ಲ. ಆದರೆ ಲಂಕಾದ ಮಾಲಿಂಗ ಅವರ ಘಾತಕ ಬೌಲಿಂಗ್‌ ದಾಳಿಯನ್ನು ಕೂಡ ಮರೆಯುವಂತಿಲ್ಲ. ಈ ಪಂದ್ಯದಲ್ಲಿ ಮಾಲಿಂಗ ತಮ್ಮ ಹಳೆಯ ಫಾರ್ಮ್ಗೆ ಮರಳಿದರೆ ಶ್ರೀಲಂಕಾ ಗೆಲುವು ಸಾಧಿಸಬಹುದು.

ಆಸ್ಟ್ರೇಲಿಯ ಬಲಿಷ್ಠ
ಆಸ್ಟ್ರೇಲಿಯ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿದ್ದು ಗೆಲ್ಲುವ ಫೇವರಿಟ್‌ ತಂಡವಾಗಿ ಗುರುತಿಸಿದೆ. ಪ್ರಚಂಡ ಬ್ಯಾಟಿಂಗ್‌ ಫಾರ್ಮ್ಗೆ ಮರಳಿರುವ ನಾಯಕ ಆರನ್‌ ಫಿಂಚ್‌ ತಂಡಕ್ಕೆ ಹೆಚ್ಚು ಬಲತುಂಬಿದ್ದಾರೆ. ಇನ್ನೂ ಆಸೀಸ್‌ನ ಆರಂಭಿಕರು ಅಪಾಯಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಫಿಂಚ್‌, ವಾರ್ನರ್‌ ಎದುರಾಳಿ ಬೌಲರ್‌ಗಳ ಬೆಂಡೆತ್ತಿ ಬೃಹತ್‌ ಮೊತ್ತದ ಜತೆಯಾಟ ಆಡುತ್ತಿದ್ದಾರೆ. ಇದಕ್ಕೆ ಪಾಕಿಸ್ಥಾನದ ವಿರುದ್ಧದ ಪಂದ್ಯವೇ ಸಾಕ್ಷಿ. ಮಧ್ಯಮ ಕ್ರಮಾಂಕದಲ್ಲಿ ಸ್ಮಿತ್‌, ಮ್ಯಾಕ್ಸ್‌ ವೆಲ್‌, ಅಲೆಕ್ಸ್‌ ಕ್ಯಾರಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಒಟ್ಟಾರೆಯಾಗಿ ಆಸ್ಟ್ರೇಲಿಯ ಹೆಚ್ಚು ಸಂತುಲಿತ ತಂಡವಾಗಿದೆ. ಒತ್ತಡವನ್ನು ನಿಭಾಯಿಸಿ ಹೇಗೆ ಪಂದ್ಯವನ್ನಾಡಬೇಕು ಎಂಬುದು ಕಾಂಗರೂ ಪಡೆಗೆ ಕರಗತ. ಇನ್ನೂ ಬೌಲಿಂಗ್‌ ವಿಭಾಗದಲ್ಲಿ ಮಿಚೆಲ್‌ ಸ್ಟಾರ್ಕ್‌, ಕೇನ್‌ ರಿಚರ್ಡ್‌ಸನ್‌, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥ ರಿದ್ದಾರೆ.

ಲಂಕಾದಲ್ಲಿ ಸ್ಥಿರತೆಯ ಕೊರತೆ
ಶ್ರೀಲಂಕಾ ಸರದಿಯಲ್ಲಿ ಅಲ್ಲಲ್ಲಿ ಅನುಭವಿ ಆಟಗಾರರು ಕಾಣಸಿಗುತ್ತಾರಾದರೂ ಯಾರ ಮೇಲೂ ನಂಬಿಕೆ ಇಡುವಂತಿಲ್ಲ. ಮ್ಯಾಚ್‌ ವಿನ್ನರ್‌ ಆಟಗಾರನಂತೂ ಇಲ್ಲವೇ ಇಲ್ಲ. ಯಾವ ಬ್ಯಾಟ್ಸ್‌ ಮನ್‌ ಕೂಡ ಫಾರ್ಮ್ನಲ್ಲಿಲ್ಲ. ಕಿವೀಸ್‌ ಮತ್ತು ಅಫ್ಘಾನಿಸ್ಥಾನದ ಎದುರಿನ ಪಂದ್ಯದಲ್ಲಿ ಪೂರ್ತಿ 50 ಓವರ್‌ ನಿಭಾಯಿಸುವಲ್ಲಿ ಲಂಕಾ ವಿಫ‌ಲವಾಗಿದೆ. ಬೌಲಿಂಗ್‌ ವಿಭಾಗ ಲೆಕ್ಕದ ಭರ್ತಿಗೆಂಬಂತಿದೆ.ಲಸಿತ ಮಾಲಿಂಗ ಕೂಡ ಮೋಡಿ ಮಾಡುವುದನ್ನು ಮರೆತಿದ್ದಾರೆ. ಇನ್ನೂ ಬ್ಯಾಟಿಂಗ್‌ನಲ್ಲಿ ಒಂದು ಹಂತದವರೆಗೆ ಉತ್ತಮ ಆಟವಾಡಿ ಬೃಹತ್‌ ಮೊತ್ತ ಪೇರಿಸುವ ಸೂಚನೆ ನೀಡಿ ಹಠಾತ್‌ ಕುಸಿತ ಕಾಣುತ್ತಿರುದರಿಂದ ಲಂಕಾ ಮೇಲೆ ನಿರೀಕ್ಷೆ ಇಡುವುದು ಕಷ್ಟಕರವಾಗಿದೆ. ನುವಾನ್‌ ಪ್ರದೀಪ್‌ ಗಾಯಾಳಾಗಿರುವುದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next