Advertisement

ಅಫ್ಘಾ ನ್‌-ಲಂಕಾ: ಕಾರ್ಡಿಫ್ ನಲ್ಲಿ ಕಾಡುವವರು ಯಾರು?

01:32 AM Jun 04, 2019 | Sriram |

ಕಾರ್ಡಿಫ್: ವಿಶ್ವಕಪ್‌ ಕೂಟದ ಅಪಾಯಕಾರಿ ಹಾಗೂ “ಅಂಡರ್‌ ಡಾಗ್ಸ್‌’ ತಂಡವೆಂದು ಗುರುತಿಸಿಕೊಂಡಿರುವ ಅಫ್ಘಾನಿಸ್ಥಾನ ಮತ್ತು ತನ್ನ ದೌರ್ಬಲ್ಯವನ್ನು ತೆರೆದಿರಿಸಿದ ಶ್ರೀಲಂಕಾ ತಂಡಗಳು ಮಂಗಳವಾರ ಮಹತ್ವದ ಲೀಗ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಕಾರ್ಡಿಫ್ ನಲ್ಲಿ ಯಾರು ಯಾರನ್ನು ಕಾಡಲಿದ್ದಾರೆ ಎಂಬುದೊಂದು ಕುತೂಹಲ.

Advertisement

ಅಫ್ಘಾನ್‌ ಮತ್ತು ಲಂಕಾ ತಂಡಗಳೆರಡೂ ತಮ್ಮ ಮೊದಲ ಲೀಗ್‌ ಪಂದ್ಯದಲ್ಲಿ ಸೋತಿವೆ. ಹೀಗಾಗಿ ಇಲ್ಲಿ ಒಂದು ತಂಡ ಗೆಲುವಿನ ಖಾತೆ ತೆರೆಯುವುದು ನಿಶ್ಚಿತ. ಏಶ್ಯದ ಈ ತಂಡಗಳಲ್ಲಿ ಅದೃಷ್ಟ ಯಾರ ಕೈ ಹಿಡಿದೀತು ಎಂಬುದು ಎಲ್ಲರ ನಿರೀಕ್ಷೆ.

ಆಸೀಸ್‌ ಎದುರು ನಿರೀಕ್ಷಿತ ಫ‌ಲಿತಾಂಶ
ಗುಲ್ಬದಿನ್‌ ನೈಬ್‌ ಸಾರಥ್ಯದ ಅಫ್ಘಾನಿಸ್ಥಾನ ತಂಡಕ್ಕೆ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಎದುರಾಗಿತ್ತು. ಹೀಗಾಗಿ ಫ‌ಲಿತಾಂಶವನ್ನು ಮೊದಲೇ ಊಹಿಸಲಾಗಿತ್ತು. ಇಲ್ಲಿ ಯಾವುದೇ ಅಚ್ಚರಿ, ಅನಿರೀಕ್ಷಿತ ಅಥವಾ ಪವಾಡವಾಗಲೀ ಸಂಭವಿಸಲಿಲ್ಲ. ಆಸ್ಟ್ರೇಲಿಯ ಹೇಗೆ ಗೆಲ್ಲಬೇಕಿತ್ತೋ ಹಾಗೇ ಗೆದ್ದು ಬಂತು. ಅಫ್ಘಾನ್‌ ಸೋಲಬೇಕಾದ ರೀತಿಯಲ್ಲೇ ಸೋತಿತು.

ಆದರೆ ಈ ಕೂಟದಲ್ಲಿ 200 ರನ್‌ ಗಡಿ ದಾಟಿದ ಏಶ್ಯದ ಮೊದಲ ತಂಡವೆಂಬ ಹೆಗ್ಗಳಿಕೆ ಅಫ್ಘಾನ್‌ ಪಾಲಾದುದನ್ನು ಮರೆಯುವಂತಿಲ್ಲ. ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ 105 ಮತ್ತು 136 ರನ್‌ ಗಳಿಸಿ ಬ್ಯಾಟಿಂಗ್‌ ಬರಗಾಲ ಅನುಭವಿಸಿದ್ದವು. ಲಂಕೆಗಂತೂ ಎದುರಾಳಿ ನ್ಯೂಜಿಲ್ಯಾಂಡಿನ ಒಂದೂ ವಿಕೆಟ್‌ ಕೀಳಲು ಸಾಧ್ಯವಾಗಿರಲಿಲ್ಲ. ಆದರೆ ಅಫ್ಘಾನ್‌ ಕಾಂಗರೂ ಪಡೆಯ 3 ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾಗಿತ್ತು.

50 ಓವರ್‌
ನಿಲ್ಲುವುದೇ ಕಷ್ಟ !
ಶ್ರೀಲಂಕಾ ಸರದಿಯಲ್ಲಿ ಅಲ್ಲಲ್ಲಿ ಅನುಭವಿ ಆಟಗಾರರು ಕಾಣಸಿಗುತ್ತಾರಾದರೂ ಯಾರ ಮೇಲೂ ನಂಬಿಕೆ ಇಡುವಂತಿಲ್ಲ. ಮ್ಯಾಚ್‌ ವಿನ್ನರ್‌ ಆಟಗಾರ ನಂತೂ ಇಲ್ಲವೇ ಇಲ್ಲ. ಯಾವ ಬ್ಯಾಟ್ಸ್‌ಮನ್‌ ಕೂಡ ಫಾರ್ಮ್ನಲ್ಲಿಲ್ಲ. ಒಂದು ಅಭ್ಯಾಸ ಪಂದ್ಯ ಹಾಗೂ ಕಿವೀಸ್‌ ಎದುರಿನ ಮೊದಲ ಪಂದ್ಯದಲ್ಲಿ ಪೂರ್ತಿ 50 ಓವರ್‌ ನಿಭಾಯಿಸುವಲ್ಲಿ ಲಂಕಾ ವಿಫ‌ಲವಾಗಿದೆ. ಬೌಲಿಂಗ್‌ ವಿಭಾಗ ಲೆಕ್ಕದ ಭರ್ತಿಗೆಂಬಂತಿದೆ. ಲಸಿತ ಮಾಲಿಂಗ ಕೂಡ ಮೋಡಿ ಮಾಡುವುದನ್ನು ಮರೆತಿದ್ದಾರೆ. ಲಂಕಾ ಮೇಲೆ ನಿರೀಕ್ಷೆ ಇಡುವುದಾದರೂ ಹೇಗೆ?!

Advertisement

ಅಫ್ಘಾನ್‌ ಮೇಲುಗೈ ಸಾಧ್ಯತೆ
ಮಂಗಳವಾರದ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಕೂಟದಲ್ಲಿ ಮುಂದುವರಿಯಬೇಕಾದರೆ ಇಲ್ಲಿ ಗೆಲುವಿನ ಖಾತೆ ತೆರೆಯಬೇಕಾದುದು ಅನಿವಾರ್ಯ.

ಮೇಲ್ನೋಟಕ್ಕೆ ಅಫ್ಘಾನ್‌ ತಂಡದ ಸಾಮರ್ಥ್ಯ ತುಸು ಹೆಚ್ಚು ಎಂದು ಊಹಿಸಲಾಗಿದೆ. ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಉತ್ತಮವಾಗಿದೆ. ಬೌಲಿಂಗ್‌ನಲ್ಲಿ ಸ್ಪಿನ್‌ ವಿಭಾಗ ಹೆಚ್ಚು ಘಾತಕ. ರಶೀದ್‌-ನಬಿ ಜೋಡಿಯನ್ನು ನಿಭಾಯಿಸುವುದು ಸುಲಭವಲ್ಲ. ಆದರೆ ವೇಗದ ಬೌಲಿಂಗ್‌ ಹೇಳಿಕೊಳ್ಳುವಂತಿಲ್ಲ. ಆಸೀಸ್‌ ವಿರುದ್ಧ ಆರಂಭಿಕರಿಬ್ಬರೂ ಶೂನ್ಯಕ್ಕೆ ಔಟಾಗಿದ್ದರು. ಆದರೆ ಹಿಂದೆ ಎಷ್ಟೋ ಸಲ ಇವರು ಪಂದ್ಯವನ್ನು ಗೆಲ್ಲಿಸಿಕೊಟ್ಟ ನಿದರ್ಶನಗಳಿವೆ. ಲಂಕಾ ವಿರುದ್ಧ ಉತ್ತಮ ಆರಂಭ ಒದಗಿಸುವ ನಿರೀಕ್ಷೆ
ಹೊಂದಿದ್ದಾರೆ.

ಸಂಭಾವ್ಯ ತಂಡಗಳು
ಶ್ರೀಲಂಕಾ
ದಿಮುತ್‌ ಕರುಣರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಲ್‌ ಪೆರೆರ, ಕುಸಲ್‌ ಮೆಂಡಿಸ್‌, ಧನಂಜಯ ಡಿ ಸಿಲ್ವ, ಏಂಜೆಲೊ ಮ್ಯಾಥ್ಯೂಸ್‌, ಜೀವನ್‌ ಮೆಂಡಿಸ್‌/ಜೆಫ್ರಿ ವಾಂಡರ್ಸೆ, ತಿಸರ ಪೆರೆರ, ಇಸುರು ಉದಾನ, ಸುರಂಗ ಲಕ್ಮಲ್‌, ಲಸಿತ ಮಾಲಿಂಗ.

ಅಫ್ಘಾನಿಸ್ಥಾನ
ಮೊಹಮ್ಮದ್‌ ಶಾಜಾದ್‌, ಹಜ್ರತುಲ್ಲ ಜಜಾರಿ, ರಹಮತ್‌ ಶಾ, ಹಶ್ಮತುಲ್ಲ ಶಾಹಿದಿ, ಮೊಹಮ್ಮದ್‌ ನಬಿ, ಗುಲ್ಬದಿನ್‌ ನೈಬ್‌ (ನಾಯಕ), ನಜೀಬುಲ್ಲ ಜದ್ರಾನ್‌, ರಶೀದ್‌ ಖಾನ್‌, ದೌಲತ್‌ ಜದ್ರಾನ್‌, ಮುಜೀಬ್‌ ಉರ್‌ ರಹಮಾನ್‌, ಹಮೀದ್‌ ಹಸನ್‌.

Advertisement

Udayavani is now on Telegram. Click here to join our channel and stay updated with the latest news.

Next