Advertisement
ಟನ್‌ಬ್ರಿಜ್ ವೆಲ್ಸ್ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ಮುನ್ನುಗ್ಗಿ ಬಂದಿತ್ತು. ಸುನೀಲ್ ಗಾವಸ್ಕರ್, ಶ್ರೀಕಾಂತ್, ಮೊಹಿಂದರ್, ಸಂದೀಪ್ ಪಾಟೀಲ್ ಮತ್ತು ಯಶ್ಪಾಲ್ ಶರ್ಮ- ಈ 5 ವಿಕೆಟ್ 17 ರನ್ ಆಗುವಷ್ಟರಲ್ಲಿ ಉದುರಿದಾಗ ಭಾರತದ ಸ್ಥಿತಿ ಚಿಂತಾಜನಕವಾಗಿತ್ತು. ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 13 ರನ್ನುಗಳಿಂದ ಮಣಿಸಿದ ಡಂಕನ್ ಫ್ಲೆಚರ್ ಪಡೆ ಭಾರತವನ್ನೂ ದಿಂಡುರುಳಿಸುವ ಯೋಜನೆಯಲ್ಲಿತ್ತು. ಎಲ್ಲರೂ ಕಪಿಲ್ ಪಡೆಯ ಆಸೆ ಬಿಟ್ಟಿದ್ದರು. ಎಲ್ಲರ ಮನೆ ಯಲ್ಲೂ ರೇಡಿಯೋ ಆಫ್ ಆಗಿದ್ದವು!
ಆದರೆ ಕಪ್ತಾನ ಕಪಿಲ್‌ದೇವ್ ಯೋಜ ನೆಯೇ ಬೇರೆ ಇತ್ತು. ಅವರು ಬ್ಯಾಟಿಂಗ್ ಸುಂಟರಗಾಳಿಯಾದರು. ಏಕಾಂಗಿಯಾಗಿ ಹೋರಾಡಿ ಏಕದಿನ ಕ್ರಿಕೆಟಿನ ಬ್ಯಾಟಿಂಗ್ ಜೋಶ್ ಎಂಥದೆಂಬುದನ್ನು ಮೊದಲ ಸಲ ಜಗತ್ತಿನ ಮುಂದೆ ಅನಾವರಣ ಗೊಳಿಸಿದರು. ಕಪಿಲ್ ಕೊಡುಗೆ 138 ಎಸೆತಗಳಿಂದ ಅಜೇಯ 175 ರನ್! ಸಿಡಿಸಿದ್ದು 16 ಬೌಂಡರಿ, 6 ಸಿಕ್ಸರ್. ಅವರಿಗೆ ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ ಅಮೋಘ ಬೆಂಲವಿತ್ತರು. ಭಾರತದ ಮೊದಲ ಏಕದಿನ ಶತಕವೇ ವಿಶ್ವದಾಖಲೆ!
ಇದು ಭಾರತೀಯ ಏಕದಿನ ಇತಿಹಾಸದ ಪ್ರಪ್ರಥಮ ಶತಕ. ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. ಆದರೆ ಅಂದು ಟಿವಿ ಸಿಬಂದಿಗಳ ಮುಷ್ಕರದಿಂದ ಇದರ ದೃಶ್ಯಾವಳಿ ಮಾತ್ರ ದಾಖಲಾಗಲಿಲ್ಲ. ಆದರೇನಂತೆ, ಕಪಿಲ್‌ದೇವ್ ಅವರ ಈ ಅಮೋಘ ಬ್ಯಾಟಿಂಗ್ ಸಾಹಸ ಇಂದಿಗೂ ಅಂದಿನ ಕ್ರಿಕೆಟ್ ಅಭಿಮಾನಿಗಳ ಕಣ್ಮುಂದೆ ಸುಳಿದಾಡುತ್ತಲೇ ಇದೆ. ಇದಕ್ಕೆ ಗುರುವಾರ 37ನೇ ವರ್ಷದ ಸಂಭ್ರಮ!