ಚನ್ನಪಟ್ಟಣ: ಪ್ರವಾಸೋದ್ಯಮ ಇಲಾಖೆಯಿಂದ ಕಣ್ವ ಜಲಾಶಯ ಬಳಿ 10 ಕೋಟಿ ರೂ. ವೆಚ್ಚದಲ್ಲಿ ವಿಶ್ವ ದರ್ಜೆಯ ಮಕ್ಕಳ ಉದ್ಯಾನವನ ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಹೇಳಿದರು.
ಮುಖ್ಯಮಂತ್ರಿಗಳೊಂದಿಗೆ ಕಣ್ವ ಜಲಾಶಯ ಬಳಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದ ಬಳಿಕ ಮಾತನಾಡಿ, 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಈಗಾಗಲೇ 2 ಕೋಟಿ ರೂ.ಗಳನ್ನು ಚಿಲ್ಡರ್ನ್ ವಲ್ಡ್ರ್ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು.
10 ಕೋಟಿ ಪ್ರಸ್ತಾವನೆಯಲ್ಲಿ ಉಳಿದ 8 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಈ ಕೂಡಲೇ ಈ ಕಾಮಗಾರಿಗೆ ಟೆಂಡರ್ ಕರೆಯಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ. ರೇಷ್ಮೆ ಬೆಲೆ ಹೆಚ್ಚಿಸಲು ರೇಷ್ಮೆಯ ಹದಿನೈದು ಉಪ ಉತ್ಪನ್ನಗಳ ತಯಾರಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.ಚನ್ನಪಟ್ಟಣದಲ್ಲಿನ ಕೆಎಸ್‌ಐಸಿ ಹಳೆ ಕಟ್ಟಡಗಳ ನವೀಕರಣ ಜತೆಗೆ ಒಂದು ಲಕ್ಷ ಸೀರೆ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಆ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನೀಗಿಸುವ ಜತೆಗೆ ರೇಷ್ಮೆ ಉತ್ಪನ್ನಗಳ ಹೆಚ್ಚು ತಯಾರಿಸಿ ರೇಷ್ಮೆ ಉತ್ಪಾದಕರಿಗೂ ಅನುಕೂಲ ಮಾಡಿಕೊಡಲಾಗುವುದು. ಮೈಸೂರಿನಲ್ಲಿಯು ಸಹ ಕೆಎಸ್‌ಐಸಿ ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗುವುದು. ಇದಕ್ಕೆ 100 ಕೋಟಿ ರೂ. ಮೀಸಲಿಡಲಾಗುವುದು ಎಂದರು.
ರೇಷ್ಮೆ ಆಯೋಗದ ಕಾರ್ಯದರ್ಶಿಯೊಂದಿಗೆ ಮಂಗಳವಾರ ಸಂಜೆ ಸಭೆ ನಡೆಸಲಾಗುತ್ತಿದ್ದು, ರೇಷ್ಮೆ ದರ ಹೆಚ್ಚಿಸುವ ಸಂಬಂಧ ಚರ್ಚೆ ಮಾಡಲಾಗುವುದು, ರೇಷ್ಮೆ ಮಾರುಕಟ್ಟೆಯಲ್ಲಿ ಅನ್‌ಲೈನ್ ಮೂಲಕ ರೈತರಿಗೆ ಪೇಮೆಂಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಸಂಜೆಯೊಳಗೆ ಪೆಮೇಂಟ್ ನೀಡುವಲ್ಲಿ ತೊಡಕಾಗಿದೆ. ರೇಷ್ಮೆ ಹರಾಜು ಮುನ್ನವೇ ಅಕೌಂಟ್‌ಗಳಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗುವುದು ಹಾಗೆಯೇ ರೇಷ್ಮೆ ಮಾರುಕಟ್ಟೆಗಳನ್ನು ಆಧುನೀ ಕರಣಗೊಳಿಸಲಾಗುವುದು ಎಂದರು. ಪ್ರವಾಸೋದ್ಯಮ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.