ಸಿಂಗಾಪುರ: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಭಾರತದ ಜಿಎಂ ಡಿ. ಗುಕೇಶ್ ಮತ್ತು ಚೀನದ ಜಿಎಂ, ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ನಡುವಿನ ಬುಧವಾರದ 13ನೇ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ. ಇದರೊಂದಿಗೆ ಇಬ್ಬರೂ ತಲಾ 6.5 ಅಂಕ ಗಳಿಸಿ ಸಮಬಲದ ಹೋರಾಟದೊಂದಿಗೆ ಮುಂದುವರಿದಿದ್ದಾರೆ.
ಗುಕೇಶ್ ಗೆಲುವಿನಾಸೆಗೆ ತಣ್ಣೀರು
ಬುಧವಾರ ಬಿಳಿ ಕಾಯಿಯೊಂದಿಗೆ ಆಡಿದ ಡಿ. ಗುಕೇಶ್ ಮತ್ತು ಕಪ್ಪು ಕಾಯಿಯೊಂದಿಗೆ ಆಡಿದ ಲಿರೆನ್ ತಮ್ಮ 68ನೇ ನಡೆಯಲ್ಲಿ ಪಂದ್ಯವನ್ನು ಡ್ರಾಗೊಳಿಸಿಕೊಂಡರು. 43ನೇ ನಡೆಯ ವರೆಗೂ ಗುಕೇಶ್ ಪಂದ್ಯವನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದರು. ಆದರೆ 44ನೇ ನಡೆಯ ವೇಳೆ ರಾಣಿಯನ್ನು ಚತುರವಾಗಿ ನಡೆಸಿದ ಲಿರೆನ್, ಗುಕೇಶ್ ಅವರ ಗೆಲುವಿನ ಸಾಧ್ಯತೆಗೆ ತಣ್ಣೀರೆರಚಿದರು.
14 ಪಂದ್ಯಗಳ ಈ ಸರಣಿಯ ಕೊನೆಯ ಪಂದ್ಯ ಗುರುವಾರ ನಡೆಯಲಿದ್ದು, ಗೆದ್ದವರು ವಿಶ್ವ ಚಾಂಪಿಯನ್‌ಶಿಪ್ ಕಿರೀಟ ಏರಿಸಿಕೊಳ್ಳಲಿದ್ದಾರೆ. ಪಂದ್ಯ ಡ್ರಾಗೊಂಡರೆ ಶುಕ್ರವಾರ ಟೈಬ್ರೇಕರ್ ನಡೆಯಲಿದೆ.
13ರಲ್ಲಿ 9 ಪಂದ್ಯಗಳು ಡ್ರಾಗೊಂಡಿದ್ದು, ಗುಕೇಶ್- ಲಿರೆನ್ ತಲಾ 2 ಪಂದ್ಯ ಗೆದ್ದಿದ್ದಾರೆ. ಒಟ್ಟು 14 ಪಂದ್ಯಗಳಲ್ಲಿ ಮೊದಲು 7.5 ಅಂಕ ತಲುಪು ವವರು ವಿಜೇತರಾಗುತ್ತಾರೆ.
ಗುಕೇಶ್ ಗೆದ್ದರೆ ಅತೀ ಕಿರಿಯ ವಿಶ್ವ ಚಾಂಪಿ ಯನ್ ಎಂಬ ದಾಖಲೆ ನಿರ್ಮಾಣವಾಗಲಿದೆ. ಈಗಿನ ದಾಖಲೆ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಹೆಸರಿನಲ್ಲಿದೆ. 1985ರಲ್ಲಿ 22 ವರ್ಷದವರಾಗಿದ್ದ ಕ್ಯಾಸ್ಪರೋವ್, ತಮ್ಮದೇ ದೇಶದ ಅನಾಟೊಲಿ ಕಾರ್ಪೋವ್ ವಿರುದ್ಧ ಗೆದ್ದಿದ್ದರು.