ಆಕೆ ಛಲ ಬಿಡದ ಆಟಗಾರ್ತಿ. ಪ್ರತೀ ಪಂದ್ಯ ಗೆಲ್ಲಬೇಕೆಂದು ಹೋರಾಡುವ ದಿಟ್ಟೆ, ಆದರೂ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪ್ರಶಸ್ತಿ ಮಾತ್ರ ಮರೀಚಿಕೆಯೇ ಆಗಿತ್ತು. ಕಳೆದ ಎರಡು ಬಾರಿ ಫೈನಲ್ ಗೆ ಬಂದರೂ ಎದುರಾಳಿಯು ಸ್ವರ್ಣ ಕಿರೀಟ ತೊಡುವುದನ್ನೇ ನೋಡಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ಎದುರಾಳಿಗೆ ಯಾವ ಕ್ಷಣದಲ್ಲೂ ಅವಕಾಶವೇ ನೀಡದೇ ಆಡಿ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಅಂಗಳದಲ್ಲಿ ಮೆರೆದಾಡಿದರು. ಪುಸರ್ಲ ವೆಂಕಟ ಸಿಂಧು ಈಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್.
ರವಿವಾರ ಬಸೆಲ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಿಂಧು, ವಿಶ್ವ ಶ್ರೇಷ್ಠ ಅಟಗಾರ್ತಿ ಜಪಾನಿನ ನೊಜೋಮಿ ಒಕುಹಾರಾರನ್ನು ಕೇವಲ 38 ನಿಮಿಷಗಳ ಆಟದಲ್ಲಿ ಸೋಲಿಸಿ ಹಳೇಯ ಸೋಲಿಗೆ ಸೇಡು ತೀರಿಸಿದರು. 2017ರ ವಿಶ್ವ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸಿಂಧು ಇದೇ ನೊಜೊಮಿ ಒಕುಹಾರಾ ವಿರುದ್ದದ ಸೋಲನುಭವಿಸಿದ್ದರು. ಅಂದು ಬೇಸರದಿಂದ ಕೋರ್ಟ್ ಬಿಟ್ಟು ನಡೆದಿದ್ದ ಸಿಂಧು ಈ ಬಾರಿ ಸ್ವರ್ಣ ಮುಕುಟದೊಂದಿಗೆ ಭಾರತದ ಧ್ವಜವನ್ನು ಸ್ವಿಸ್ ನೆಲದಲ್ಲಿ ಹಾರಾಡುವಂತೆ ಮಾಡಿದರು.
2009ರಲ್ಲಿ ಸಬ್ ಜೂನಿಯರ್ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದ ಪಿ.ವಿ. ಸಿಂಧು ಎಂಬ ಹೈದರಾಬಾದ್ ನ ಹುಡುಗಿಯ ವಿಶ್ವ ಚಾಂಪಿಯನ್ ಆಗುವ ಪಯಣ ಸುಖದ ಹಾದಿಯಲ್ಲ. ಅದು ಹತ್ತು ವರ್ಷದ ಕಠಿಣ ತಪಸ್ಸು. 2013ರ ಮಲೇಶ್ಯಾ ಓಪನ್, ಮಕಾವ್ ಗ್ರಾಂಡ್ ಪಿಕ್ಸ್, 2014ರ ಕಾಮನ್ ವೆಲ್ತ್ ಸೆಮಿ ಮಫೈನಲ್ ಪ್ರವೇಶ, ವಿಶ್ವ ಚಾಂಪಿಯನ್ ಶಿಪ್ ಕಂಚು, 2015ರಲ್ಲಿ ಮತ್ತೆ ಮಕಾವ್ ಗ್ರಾಂಡ್ ಪಿಕ್ಸ್ ಕಿರೀಟ, 2016ರ ಒಲಿಂಪಿಕ್ಸ್ ಬೆಳ್ಳಿ ಪದಕ. ಹೀಗೆ ಎಷ್ಟೂ ಪದಕ ಗೆದ್ದರೂ ಸಿಂಧುಗೆ ವಿಶ್ವ ಚಾಂಪಿಯನ್ ಶಿಪ್ ಕಿರೀಟ ಮಾತ್ರ ಕೈಗೆಟುಕದ ಮುತ್ತಾಗಿತ್ತು.
2017ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೇರಿದರೂ ಅಲ್ಲಿ ನೊಜೊಮಿ ಒಕುಹಾರಾ ವಿರುದ್ದ ಕಠಿಣ ಹೋರಾಟ ನೀಡಿದರೂ ಪ್ರಶಸ್ತಿ ಮಾತ್ರ ಜಪಾನಿ ಆಟಾಗಾರ್ತಿಯ ಪಾಲಾಗಿತ್ತು. 2018ರ ಚಾಂಪಿಯನ್ ಶಿಪ್ ನಲ್ಲಿ ಮತ್ತೆ ಅದೇ ಜಪಾನಿ ಆಟಗಾರ್ತಿ ಸಿಂಧು ಎದುರಾಳಿಯಾಗಿ ಸಿಕ್ಕರು. ಆದರೆ ಈ ಬಾರಿ ಕ್ವಾರ್ಟರ್ ಫೈನಲ್ ನಲ್ಲಿ. 21-17, 21-19ರ ನೇರ ಸೆಟ್ ಗಳಿಂದ ಒಕುಹಾರಾರನ್ನು ಸೋಲಿಸಿದ ಸಿಂಧು ಮತ್ತೆ ಫೈನಲ್ ಗೇರಿದರು. ಈ ಬಾರಿ ಖಂಡಿತ ಚಾಂಪಿಯನ್ ಆಗುತ್ತಾರೆಂದು ಭಾರತೀಯ ಕ್ರೀಡಾಭಿಮಾನಿಗಳು ನಿರೀಕ್ಷೆ ಇಟ್ಟಿದ್ದರು. ಆದರೆ 2017ರಲ್ಲಿ ಇಂಡಿಯನ್ ಓಪನ್ ನಲ್ಲಿ ತಾನು ಸೋಲಿಸಿದ್ದ ಕ್ಯಾರೋಲಿನಾ ಮರಿನ್ ವಿರುದ್ಧ ಸೋತು ಮತ್ತೆ ಬೆಳ್ಳಿಪದಕಕ್ಕೆ ತೃಪ್ತಿ ಪಡಬೇಕಾಯಿತು.
ಹೀಗೆ ಹತ್ತು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಸಾಧನೆಯಿಂದ ಇಂದು ಭಾರತದ ಹೆಮ್ಮೆಯ ಪಿ.ವಿ ಸಿಂಧು ವಿಶ್ವ ಚಾಂಪಿಯನ್ ಆಗಿ ಮೂಡಿದ್ದಾರೆ.