Advertisement
ಕ್ಯಾನ್ಸರ್ ಬಂದರೆ ಸಾವು ಖಚಿತ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ರೋಗಿಯನ್ನು ಗುಣಪಡಿಸಲು ಸಾಧ್ಯವಿದೆ. ಕ್ಯಾನ್ಸರ್ ರೋಗಿಗಳು ಕೂಡ ಸಾವನ್ನು ಗೆದ್ದು ಎಲ್ಲರಂತೆ ಜೀವನ ನಡೆಸಬಹುದು. ಆದರೆ ಇದೇ ವೇಳೆ ಕ್ಯಾನ್ಸರ್ ಬಾರದ ಹಾಗೆ ತಡೆಯುವುದು ಅತೀ ಮುಖ್ಯ.
Related Articles
Advertisement
“ಕ್ಯಾನ್ಸರನ್ನು ನಾನು ಜಯಿಸಿದ್ದೇನೆ; ಯಾರೂ ಜಯಿಸಬಹುದು’ :
“ಕ್ಯಾನ್ಸರ್ ಬಂದಾಗ ಮಾನಸಿಕವಾಗಿ ಕುಗ್ಗಬೇಡಿ. ಧೈರ್ಯ ತಾಳಿ, ಆತ್ಮವಿಶ್ವಾಸದಿಂದ ಇದ್ದು ವೈದ್ಯರಲ್ಲಿ ನಂಬಿಕೆ ಇಟ್ಟು ಚಿಕಿತ್ಸೆ ಪಡೆಯಿರಿ. ಗೆದ್ದೇ ಗೆಲ್ಲುತ್ತೀರಿ, ಭರವಸೆಯ ಹೊಂಗಿರಣಗಳು ನಿಮ್ಮ ಬಾಳನ್ನು ಮತ್ತೆ ಪ್ರಕಾಶಿಸುವಂತೆ ಮಾಡುತ್ತವೆ…’
ಎಳೆಯ ಪ್ರಾಯದಲ್ಲೇ ಕ್ಯಾನ್ಸರ್‌ಗೆ ತುತ್ತಾದರೂ ಎದೆಗುಂದದೆ ಆತ್ಮವಿಶ್ವಾಸದಿಂದ ಎದುರಿಸಿ ಇದೀಗ ಯಶಸ್ವಿ ಬದುಕು ಕಟ್ಟಿಕೊಂಡಿರುವ ಜೆಸ್ಸೆಲ್ ವಿಯೋಲ ಡಿ’ಸೋಜಾ ಅವರ ಆತ್ಮವಿಶ್ವಾಸದ ಮಾತುಗಳು ಇವು. ಮಂಗಳೂರಿನ ಬೆಂದೂರು ನಿವಾಸಿ ಜೆಸ್ಸೆಲ್ ಸಾಮಾಜಿಕ ಜಾಲತಾಣದಲ್ಲಿ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
“ನನಗೆ ಆಗ 15 ವರ್ಷ. 10ನೇ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ಗಂಟಲು ನೋವು ಕಾಣಿಸಿಕೊಂಡಾಗ ಅಮ್ಮನಿಗೆ ತಿಳಿಸಿದೆ. ಅಮ್ಮ ನಿರ್ಲಕ್ಷಿಸದೆ ವೈದ್ಯರಲ್ಲಿ ಕರೆದುಕೊಂಡು ಹೋದರು. ವೈದ್ಯರು ತಪಾಸಣೆ ಮಾಡಿ ಗಂಟಲಿನ ಭಾಗದ ಅಂಶವನ್ನು ತೆಗೆದು ಪರೀಕ್ಷೆಗೆ ಕಳುಹಿಸಿದರು. ಅದರ ವರದಿ 2 ದಿನಗಳಲ್ಲಿ ಬಂತು. ಅಲ್ಟ್ರಾಸೌಂಡ್ ಮಾಡಿದರು. ನನಗೆ ಗಂಟಲಿನ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಮೂರನೇ ಹಂತದಲ್ಲಿದೆ ಎಂದು ವೈದ್ಯರು ಹೇಳಿದಾಗ ನನ್ನ ಬದುಕು ಇಲ್ಲಿಗೆ ಮುಗಿದು ಹೋಯಿತು ಎಂದು ಭಾವಿಸಿ ಮೌನವಾಗಿ ರೋದಿಸಿದೆ.
ಕ್ಯಾನ್ಸರ್ ಎಂದಾಕ್ಷಣ ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ಈ ಸ್ಥಿತಿ ಎದುರಾಗುತ್ತದೆ. ನನ್ನ ಅಮ್ಮ, ಸಂಬಂಧಿಕರು, ಸಹಪಾಠಿಗಳು, ಶಿಕ್ಷಕರು, ವೈದ್ಯರು ನನಗೆ ಧೈರ್ಯ ತುಂಬಿದರು. ವರದಿ ಬಂದ ಎರಡು ದಿನಗಳಲ್ಲೇ ನನಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ರೋಗ ಬಂದಿರುವ ವಿಚಾರ ತಿಳಿದದ್ದು ಫೆಬ್ರವರಿಯಲ್ಲಿ. ಎಪ್ರಿಲ್‌ನಲ್ಲಿ ಪರೀಕ್ಷೆ ಇತ್ತು. ಹಾಸಿಗೆಯಲ್ಲಿ ಮಲಗಿದ್ದೆ. ಎಸೆಸೆಲ್ಸಿ ಪರೀಕ್ಷೆ ಬರೆಯಬೇಕು ಎಂಬ ನನ್ನ ಮನದಾಸೆಗೆ ಎಲ್ಲರೂ ಒತ್ತಾಸೆಯಾದರು. ಶಿಕ್ಷಕರು, ಸಹಪಾಠಿಗಳು ಓದಿ ಹೇಳುತ್ತಿದ್ದುದನ್ನು ನಾನು ಮನನ ಮಾಡಿ ಕೊಳ್ಳುತ್ತಿದ್ದೆ. ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ’ ಎಂದು ವಿವರಿಸುತ್ತಾರೆ ಅವರು.
“ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕ ಪದವಿ ಮುಗಿಸಿ ಎಂಬಿಎ ಮಾಡಿದೆ. ಮದುವೆಯಾಗಿ 7 ವರ್ಷಗಳಾಗಿವೆ. ನೆಮ್ಮದಿಯ ಬದುಕು ಸಾಗಿಸುತ್ತಿದ್ದೇನೆ. ಇದರ ಜತೆಗೆ 2019ರ ಮನಪಾ ಚುನಾವಣೆಯಲ್ಲಿ ನಗರದ ಬೆಂದೂರು ವಾರ್ಡ್ ನಿಂದ ಚುನಾವಣೆಗೂ ಸ್ಪರ್ಧಿಸಿದ್ದೆ’ ಎಂದು ತನ್ನ ಬಾಳ ಪಯಣವನ್ನು ಬಿಚ್ಚಿಡುತ್ತಾರೆ ಜೆಸ್ಸೆಲ್.
ಕ್ಯಾನ್ಸರ್ ಬಗೆಗೆ ಜನರಲ್ಲಿರುವ ಭಯವನ್ನು ನಿವಾರಿಸಬೇಕು. ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಹೊಸ ಜೀವನದತ್ತ ಮುಖ ಮಾಡಬೇಕು. ಚೇತರಿಸಿ ಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕಾಗಿ ನನ್ನಂತೆ ಕ್ಯಾನ್ಸರ್ ಜಯಿಸಿದ ಅನೇಕರ ಯಶೋಗಾಥೆ ಗಳ ಮೂಲಕ ಅವರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದೇನೆ. -ಜೆಸ್ಸೆಲ್ ಡಿ’ಸೋಜಾ
……………………………………………………………………………………………………….
ಪ್ರತೀ ವರ್ಷ ತಪಾಸಣೆ ಅಗತ್ಯ :
ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗವನ್ನು ಪ್ರಾಥಮಿಕ ಹಂತದಲ್ಲಿ ಗುಣಪಡಿಸಲು ಸಾಧ್ಯವಿದೆ. 40 ವರ್ಷದ ಮೇಲಂತೂ ಪ್ರತೀ ವರ್ಷ ಇಡೀ ದೇಹದ ತಪಾಸಣೆ ಮಾಡಿಸಬೇಕು. ಇದರಿಂದ ದೇಹದಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೆ ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯ. ಕ್ಯಾನ್ಸರ್ ಸಂಬಂಧಿತ ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಧೈರ್ಯದಿಂದ ಎದುರಿಸಿದರೆ ಯಾವುದೇ ರೋಗ ಅರ್ಧಕ್ಕರ್ಧ ಗುಣವಾಗುತ್ತದೆ. ಕ್ಯಾನ್ಸರ್ ತಡೆಗಟ್ಟಿ ಸ್ವಸ್ಥ ಸಮಾಜವನ್ನು ರೂಪಿಸೋಣ. – ಡಾ| ವೆಂಕಟರಮಣ ಕಿಣಿ, ರೇಡಿಯೇಶನ್ ಆಂಕಾಲಜಿ ತಜ್ಞರು, ಮಂಗಳೂರು
……………………………………………………………………………………………………….
“ಸಾವಿನ ಭಯ ಇರಲಿಲ್ಲ, ಕ್ಯಾನ್ಸರ್ ಗೆಲ್ಲುತ್ತೇನೆಂಬ ವಿಶ್ವಾಸವಿತ್ತು’ :
“ಆತ್ಮವಿಶ್ವಾಸ ಮತ್ತು ಧೈರ್ಯ ಇದ್ದರೆ ಯಾವುದೇ ರೋಗವನ್ನು ಗೆಲ್ಲಬಹುದು ಎನ್ನುವುದಕ್ಕೆ ನಾನು ಉದಾಹರಣೆ. ಕಳೆದ ಮೂರು ವರ್ಷಗಳ ಹಿಂದೆ ಬಾಯಿಯ ಕ್ಯಾನ್ಸರ್‌ಗೆ ಒಳ ಗಾಗಿದ್ದ ನಾನು ಈಗ ಶೇ.90ರಷ್ಟು ಗುಣಮುಖ ನಾಗಿದ್ದೇನೆ. ಇದಕ್ಕೆ ಮುಖ್ಯ ಕಾರಣ ನಾನು ಕ್ಯಾನ್ಸರ್‌ನಿಂದ ಗೆದ್ದೇ ಗೆಲ್ಲುತ್ತೇನೆ’ ಎಂಬ ವಿಶ್ವಾಸ ಎನ್ನುತ್ತಾರೆ ವಾಸ್‌ಲೇನ್‌ನ ಧರ್ಮೇಂದ್ರ ಶೆಟ್ಟಿ.
2018ರ ಜೂನ್ ತಿಂಗಳಿನಲ್ಲಿ ನನ್ನ ಬಾಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿತ್ತು. ಬಯೋಸ್ ಚೆಕ್‌ಅಪ್ ಮಾಡಿದಾಗ ಬಾಯಿ ಕ್ಯಾನ್ಸರ್ ಎಂದು ತಿಳಿದು ಬಂತು. ಸಾಮಾನ್ಯ ವಾಗಿ ಗುಟ್ಕಾ ಸೇವನೆ, ಧೂಮ ಪಾನ ಇದ್ದವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನನಗೂ ಈ ಹಿಂದೆ ಆ ಅಭ್ಯಾಸ ಇತ್ತು. ಆದರೆ ಸದ್ಯ ಈ ರೀತಿಯ ಯಾವುದೇ ಚಟ ಇಲ್ಲ. ಕಾನ್ಸರ್ ಎಂದು ತಿಳಿದ ಬಳಿಕ ಖಚಿತ ಪಡಿಸಿ ಕೊಳ್ಳಲು ಪೆಟ್ ಸ್ಕ್ಯಾನ್ ಮಾಡಿಸ ಲಾಯಿತು. ಆಗಲೂ ಪಾಸಿಟಿವ್ ರಿಪೋರ್ಟ್ ಬಂತು. ಬಳಿಕ ವೈದ್ಯರು ಸರ್ಜರಿ ಮಾಡಲು ಸೂಚಿಸಿದರು.
ಬಾಯಿಯ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ಅಂದರೆ ಅನೇಕರಲ್ಲಿ ಸಾಮಾನ್ಯವಾಗಿ ಭಯ ಇರುತ್ತದೆ. ಮುಖದ ಅಂದ ಕೆಡುತ್ತದೆ ಎಂಬ ಭಾವನೆಯೂ ಇರುತ್ತದೆ. ಆದರೆ ನಾನು ಯಾವುದೇ ರೀತಿಯಲ್ಲಿ ಎದೆಗುಂದಲಿಲ್ಲ. ಸಾವಿನ ಭಯ ನನಗಿರಲಿಲ್ಲ. ಕ್ಯಾನ್ಸರ್‌ನಿಂದ ಗುಣಮುಖನಾಗುತ್ತೇನೆ ಎಂಬ ದೃಢ ವಿಶ್ವಾಸ ಇತ್ತು. ವೈದ್ಯರು ಕೂಡ ನನ್ನಲ್ಲಿ ನಂಬಿಕೆ ಹುಟ್ಟಿಸಿದರು. ಕೊನೆಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು. ಈಗ ಶೇ.90ರಷ್ಟು ಗುಣಮುಖನಾಗಿದ್ದೇನೆ. ಸದ್ಯ ಪ್ರತೀ ಆರು ತಿಂಗಳಿಗೊಮ್ಮೆ ವೈದ್ಯರಿಂದ ಚೆಕ್‌ಅಪ್ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ಕೂಡ ಎಲ್ಲರಂತೆ ಬದುಕು¤ದ್ದೇನೆ.
……………………………………………………………………………………………………….
ಐದು ವರ್ಷ ಡೆಡ್‌ಲೈನ್ :
ಒಮ್ಮೆ ಕ್ಯಾನ್ಸರ್ ತಗಲಿ ಶಸ್ತ್ರಚಿಕಿತ್ಸೆಯ ಬಳಿಕ ಐದು ವರ್ಷಗಳ ಕಾಲ ಮತ್ತೆ ಯಾವುದೇ ಕ್ಯಾನ್ಸರ್ ಲಕ್ಷಣ ಇಲ್ಲದಿದ್ದರೆ ಮತ್ತೆ ಅವರು ಕ್ಯಾನ್ಸರ್ ಮುಕ್ತರಾದಂತೆ. ನಾನು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೂರು ವರ್ಷಗಳಿಂದ ಈ ರೀತಿಯ ಯಾವುದೇ ಲಕ್ಷಣಗಳಿಲ್ಲ. ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖನಾಗುತ್ತೇನೆ ಎಂಬ ವಿಶ್ವಾಸ ಇದೆ. ಇದಕ್ಕೆ ಕುಟುಂಬ ಸದಸ್ಯರು, ಸ್ನೇಹಿತರು ಕೂಡ ಸಾಥ್ ನೀಡುತ್ತಿದ್ದಾರೆ. ಕ್ಯಾನ್ಸರ್ ಬಂದರೆ ಯಾರು ಕೂಡ ಭಯ ಪಡಬೇಕಿಲ್ಲ. ಈಗ ತಂತ್ರಜ್ಞಾನ ಬದಲಾಗಿದೆ. ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಇದ್ದು, ರೋಗ ಗುಣಪಡಿಸಬಹುದು. ಆದರೆ ನಮ್ಮ ಯೋಚನೆ ಧನಾತ್ಮಕವಾಗಿರಬೇಕು.
“ಗುಣಮುಖನಾಗುತ್ತೇನೆ ಎನ್ನುವ ಆತ್ಮಸ್ಥೈರ್ಯ ಇರಲಿ’ :
“ಕ್ಯಾನ್ಸರ್ ಒಂದು ಮಾರಕ ಕಾಯಿಲೆ ಆಗಿರಬಹುದು, ಆದರೆ ಅದರ ಬಗ್ಗೆ ಚಿಂತೆ ಮಾಡುವುದನ್ನು ಬಿಡಿ. ತಾನು ಗುಣಮುಖನಾಗುತ್ತೇನೆ ಎಂಬ ಧೈರ್ಯ ಇರಲಿ. ಜತೆಗೆ ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸಿ, ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ…’
ಇದು ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖ ಹೊಂದುತ್ತಿರುವ ಕಾಸರಗೋಡು ಜಿಲ್ಲೆಯ 58 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಹಿತನುಡಿ.
ಅವರಿಗೆ 2021 ನವೆಂಬರ್‌ನಲ್ಲಿ ಗಂಟಲಿನಲ್ಲಿ ಸಣ್ಣ ಬಾವು ಕಂಡು ಬಂದಿತ್ತು. ಕ್ರಮೇಣ ಕಾಲಿನ ಭಾಗದಲ್ಲಿಯೂ ಅದೇ ರೀತಿಯ ಬಾವುಗಳು ಕಂಡು ಬಂದು ಅಲ್ಲಿ ನೋವಿನ ಅನುಭವವಾಗುತ್ತಿತ್ತು. ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಚುಚ್ಚು ಮದ್ದು ಕೊಟ್ಟರು. ಇದರಿಂದ ನೋವು ಕಡಿಮೆಯಾದರೂ ಬಾವು ಹಾಗೆಯೇ ಇತ್ತು. ಮತ್ತೆ ವೈದ್ಯರಿಗೆ ತೋರಿಸಿದಾಗ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಿದರು. ಹಾಗೆ ಅಲ್ಲಿನ ಆಸ್ಪತ್ರೆಯಲ್ಲಿಯೇ ಎರಡೂ ಬಾವುಗಳ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಂದು ಬಾವು ಸಮಸ್ಯಾತ್ಮಕವಾಗಿರುವುದನ್ನು ವೈದ್ಯರು ಗಮನಿಸಿದರು. ಇದರ ಮಾದರಿ ಯನ್ನು ದಿಲ್ಲಿಯ ಆಸ್ಪತ್ರೆಗೆ ಕಳು ಹಿಸಿಕೊಡಲಾಯಿತು. ಅಲ್ಲಿನ ತಜ್ಞ ವೈದ್ಯರು ನೀಡಿದ ವೈದ್ಯಕೀಯ ವರದಿಯಲ್ಲಿ ಇದು ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಬಾವು ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರ ಗೋಡಿನ ವೈದ್ಯರ ಶಿಫಾರಸಿನಂತೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಒಂದು ವಾರ ಚಿಕಿತ್ಸೆ ಪಡೆದರು. ಕಿಮೊ ಥೆರಪಿ ಯನ್ನು ಮಾಡಿ ಚುಚ್ಚುಮದ್ದು ಹಾಗೂ ಇತರ ಔಷಧ ಗಳನ್ನು ನೀಡಲಾಗಿದ್ದು, ಇದೀಗ ತಿಂಗಳಿಗೊಮ್ಮೆ ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಬಹುತೇಕ ಗುಣಮುಖರಾಗಿದ್ದಾರೆ.
ತಿಂಗಳಿಗೊಮ್ಮೆ ಚುಚ್ಚುಮದ್ದು ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ ವಾರ ಕಾಲ ಬಾಯಿ ರುಚಿ ಸ್ವಲ್ಪ ಕಡಿಮೆ ಇರುತ್ತದೆ. ಮತ್ತೆ ಎಲ್ಲವೂ ಸರಿ ಹೋಗುತ್ತದೆ. ಈ ಒಂದು ವಾರದ ಅವಧಿಯಲ್ಲಿ ಆಗುತ್ತಿರುವ ಅನನುಕೂಲತೆಗಳನ್ನು ಅನಿವಾರ್ಯವಾಗಿ ಸಹಿಸಿಕೊಂಡು ಬರುತ್ತಿದ್ದೇನೆ ಎಂದವರು ಹೇಳುತ್ತಾರೆ.
ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಪತ್ನಿ ಗೃಹಿಣಿಯಾಗಿದ್ದು, ಪುತ್ರಿಯರು ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ವೈದ್ಯರು ಎರಡು ವರ್ಷ ಕಾಲ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಬೇಕು ಹಾಗೂ ಜಾಗ್ರತೆಯಿಂದ ಇರುವಂತೆ ಸೂಚಿಸಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ತಾನು ಈಗ ಕೂಲಿ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲಿ ಮಾಡಲೇಬೇಕಾದ ಅಲ್ಪ ಸ್ವಲ್ಪ ಕೃಷಿ ಸಂಬಂಧಿತ ಕೆಲಸ ಮಾಡು ತ್ತಿರುತ್ತೇನೆ. ಉಳಿದಂತೆ ಸಹಜ ಜೀವನ ನಡೆಸುತ್ತಿದ್ದೇನೆ. ವೈದ್ಯರ ಸಲಹೆಯಂತೆ ಔಷಧ, ಆಹಾರಸೇವನೆ ಮಾಡುತ್ತಿದ್ದು ಈಗ ಯಾವುದೇ ಸಮಸ್ಯೆ ಇಲ್ಲ ಎಂದವರು ಹೇಳುತ್ತಾರೆ.
ಕ್ಯಾನ್ಸರ್ ಕಾಯಿಲೆ ಇದೆ ಎನ್ನುವ ಚಿಂತೆಯೇ ನನಗಿಲ್ಲ. ಗುಣಮುಖ ಹೊಂದುತ್ತೇನೆ ಎಂಬ ಧೈರ್ಯ ನನಗಿದೆ. ವೈದ್ಯರ ಮೇಲೆ ಭರವಸೆ ಇದೆ. ವೈದ್ಯರು ನೀಡುವ ಸಲಹೆ, ಮಾರ್ಗದರ್ಶನವನ್ನು ಪಾಲಿ ಸುತ್ತಾ, ಅವರು ಸೂಚಿಸುವ ಔಷಧ ಗಳನ್ನು ತೆಗೆದುಕೊಂಡು ನೆಮ್ಮದಿ ಯಿಂದ ಇದ್ದೇನೆ. ನಾನು ಆತ್ಮ ಸ್ಥೈರ್ಯ ದಿಂದ ಇರು ವುದರಿಂದ ನನ್ನ ಕುಟುಂಬವೂ ಹೆಚ್ಚು ಆತಂಕದಲ್ಲಿಲ್ಲ.
-ಮಂಗಳೂರು ಬ್ಯೂರೋ