Advertisement
ಯಾರೇ ಇರಲಿ, ಹೇಗೇ ಇಲಿ ಎಲ್ಲರ ದೇಹದಲ್ಲೂ ಇರುವ ರಕ್ತ ಒಂದೇ. ಇದೇ ಕಾರಣಕ್ಕೆ ರಕ್ತ ಎಂದರೆ ಜೀವದ್ರವ್ಯ. ಜಗತ್ತಿನಾದ್ಯಂತ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಮಂದಿ ರಕ್ತದ ತೀರಾ ಅಗತ್ಯದಲ್ಲಿರುತ್ತಾರೆ. ಸಾವಿರಾರು ಮಂದಿ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಿರುತ್ತಾರೆ. ಇವರ ಅಗತ್ಯಗಳನ್ನು ಪೂರೈಸಲು ಸಮಾಜದಲ್ಲಿ ರಕ್ತದಾನಿಗಳ ಒಂದು ಗುಂಪು ನಿರ್ಮಾಣವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ “ಯುವಿ ಫ್ಯೂಷನ್’ ವಿಭಾಗ’ ಮೊದಲು ರಕ್ತದಾನ ಮಾಡಿದವರ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಅವುಗಳಲ್ಲಿ ಆಯ್ದವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ರಕ್ತದಾನ ಮಹಾದಾನ. ಸಾಕಷ್ಟು ಜನರಿಗೆ ರಕ್ತದಾನ ಮಾಡಿದವರು ದೇವರಿದ್ದಂತೆ. ಒಂದು ಜೀವವನ್ನು ಉಳಿಸುವ ಈ ಕಾರ್ಯದಿಂದ ಆಗುವ ಸಂತೋಷವನ್ನು ಅನುಭವಿಸಿಯೇ ತಿಳಿಯಬೇಕು. ಆರೋಗ್ಯಯುತ ವ್ಯಕ್ತಿಯೊಬ್ಬ 18ರಿಂದ 60 ವರ್ಷದ ವರೆಗೆ ಯಾವುದೇ ವ್ಯಕ್ತಿ 50ಕ್ಕಿಂತ ಹೆಚ್ಚು ತೂಕ ಇರುವವರು 450 ಎಂ.ಎಲ್. ನಷ್ಟು ರಕ್ತವನ್ನು ಕೊಡಬಹುದು. ಆಗಾಗ ರಕ್ತದಾನ ಮಾಡುವುದರಿಂದ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ. ಜತೆಗೆ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದರಿಂದ ನಮ್ಮ ಮನಸ್ಸಿಗೆ ಸಂತೃಪ್ತ ಭಾವವಾಗುತ್ತದೆ.
– ಹರ್ಷ ಎಚ್.ಆರ್. ಮೇಲಂತಬೆಟ್ಟು, ಬೆಳ್ತಂಗಡಿ
* ರಕ್ತದಾನ ಜೀವನದ ಶ್ರೇಷ್ಠ ದಾನ
ರಕ್ತದಾನಕ್ಕೆ ತುಂಬಾ ಮಹತ್ವವಿದೆ. ಜೀವನದಲ್ಲಿ ಯಾವ ದಾನ ಮಾಡದಿದ್ದರೂ ಜೀವ ಉಳಿಸುವ ರಕ್ತದಾನ ಮಾಡು ಎನ್ನುತ್ತಾರೆ ಹಿರಿಯರು. ನಾನು ದ್ವಿತೀಯ ವರ್ಷದ ಡಿಗ್ರಿ ಓದುತ್ತಿರುವ ಸಂದರ್ಭ ಅದು. ಅಜ್ಜಿಯೊಬ್ಬರು ರಕ್ತವಿಲ್ಲದೇ ನಿಶ್ಯಕ್ತಿಯಿಂದ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ಸಂಬಂಧಿಕರು ನಮ್ಮ ಸರಕಾರಿ ಕಲಾ ಕಾಲೇಜಿಗೆ ರಕ್ತದಾನ ಮಾಡುವವರಿದ್ದರೆ ಮುಂದೆ ಬನ್ನಿ ಎಂದು ಕೇಳಿಕೊಂಡು ಬಂದರು. ಆದರೆ ಯಾವ ತರಗತಿಯಲ್ಲೂ ರಕ್ತದಾನಿಗಳು ಸಿಗಲಿಲ್ಲ, ಸಂಬಂಧಿಕರು ಯೋಚನೆ ಮಾಡುತ್ತ ಕಾರಿಡಾರಿನಲ್ಲಿ ಕುಳಿತಿದ್ದರು. ಆ ದಿನ ನಾನು ಕಾಲೇಜಿಗೆ ತಡವಾಗಿ ಬಂದಿದ್ದೆ. ‘ಒಂದು ಅಜ್ಜಿಗೆ ಶೀಘ್ರವಾಗಿ ರಕ್ತ ಬೇಕಾಗಿದೆ. ನೀನು ಕೊಡುತ್ತೀಯಾ’ ನನ್ನ ಸ್ನೇಹಿತ ಎಂದು ಕೇಳಿದ. ನಾನು ಆ ತನಕ ರಕ್ತದಾನ ಎಂದೂ ಮಾಡಿರಲಿಲ್ಲ. ಅಜ್ಜಿಯ ಪ್ರಾಣ ಉಳಿಸುವ ಸಲುವಾಗಿ ರಕ್ತದಾನಕ್ಕೆ ಒಪ್ಪಿ ಸಂಬಂಧಿಕರ ಮುಖದಲ್ಲಿ ಸ್ವಲ್ಪ ನಗು ತರಿಸಿದೆ. ಆಸ್ಪತ್ರೆಗೆ ಹೋಗಿ ಅಜ್ಜಿಗೆ ರಕ್ತದಾನ ಮಾಡಿದೆ. ಅಜ್ಜಿ ಸಂತೋಷಗೊಂಡು ‘ನೂರುಕಾಲ ಬಾಳು ಮಗನೆ’ ಎಂದರು. ನನ್ನ ಮೊದಲ ರಕ್ತ ದಾನದಿಂದ ಸಂತೋಷವಾಗಿ ಹೆಮ್ಮೆಯಿಂದ ಹೊರಬಂದೆ.
– ಸಂಪತ್ ಶೈವ, ಸಂತಫಿಲೋಮಿನಾ ಕಾಲೇಜು, ಮೈಸೂರು
Related Articles
ನಾನು ಮೊದಲ ಬಾರಿ ರಕ್ತದಾನ ಮಾಡಿದ್ದು ಪದವಿಯ ಮೊದಲನೇ ವರ್ಷದಲ್ಲಿ. 18 ವರ್ಷ ತುಂಬುವುದಕ್ಕೆ ಕಾಯುತ್ತಿದ್ದೆ. ರಕ್ತದಾನ ಮಾಡಬೇಕೆಂಬುದು ಚಿಕ್ಕಂದಿನಿಂದ ನನಗಿದ್ದ ಕನಸಾಗಿತ್ತು. ಮೊದಲ ಬಾರಿ ರಕ್ತದಾನ ಮಾಡುವಾಗ, ಸ್ವಲ್ಪ ಭಯ ಇತ್ತು. ಸುಮಾರು ಮೂರು ನಾಲ್ಕು ಬಾರಿ ಸೂಜಿ ಚುಚ್ಚಿದ ನಂತರ ರಕ್ತ ಚಲಿಸಲು ಪ್ರಾರಂಭಿಸಿತು. ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂಬ ಹೆಮ್ಮೆಯೂ ಆಗಿತ್ತು. ಈ ವರೆಗೆ ಮೂರು ಬಾರಿ ರಕ್ತದಾನ ಮಾಡಿದ್ದೇನೆ. ಇನ್ನಷ್ಟು ಮಾಡಲು ಉತ್ಸುಕಳಾಗಿದ್ದೇನೆ.
- ಪ್ರಜ್ಞಾ ಹೆಬ್ಬಾರ್, ಪುತ್ತೂರು
*
ಮೊದಲ ರಕ್ತದಾನದ ಅನುಭವ
ಅಮ್ಮನಿಗೆ ಹುಷಾರಿಲ್ಲದೇ ಆಸ್ಪತ್ರೆಗೆ ಸೇರಿಸಿದಾಗ ದೇಹದಲ್ಲಿ ರಕ್ತ ಕಡಿಮೆಯಾಗಿದೆ ಅಂದಾಗ ನಮಗೆಲ್ಲಿಲ್ಲದ ಆತಂಕ. ನಮ್ಮ ಮನೆಯಲ್ಲಿ ಎಲ್ಲರ ರಕ್ತದ ಗುಂಪು ಬೇರೆ ಆಗಿದ್ದರಿಂದ ನಮ್ಮ ರಕ್ತ ಬಳಕೆಯಾಗಲಿಲ್ಲ. ಆದರೆ ಅಲ್ಲಿದ್ದ ಬೇರೆ ರೋಗಿಗೂ ರಕ್ತ ಬೇಕಾಗಿತ್ತು. ನಾನು ರಕ್ತ ಹೊಂದಾಣಿಕೆ ಮಾಡುವ ಮಾಡುವ ಸಂಕಷ್ಟದಲ್ಲಿರುವಾಗ ಸಿಸ್ಟರ್ ಬಂದು “ನಿಮ್ಮ ಎರಡೂ ಕುಟುಂಬದವರಿಗೂ ರಕ್ತ ಬೇಕಾಗಿರುವದರಿಂದ ನಿಮ್ಮ ರಕ್ತ ಹೊಂದುವುದಾದರೆ ರಕ್ತವನ್ನು ಹಂಚಿಕೊಳ್ಳಬಹುದು. ಅದಕ್ಕೆ ಅಗತ್ಯವಿರುವ ತಪಾಸಣೆ ನಾವು ಮಾಡುತ್ತೇವೆ’ ಎಂದರು. ಆಗ ನನಗೆ ಜೀವ ಬಂದಂತಾಯಿತು. ಹೀಗೆ ಅಂದು ತುರ್ತಾಗಿ ಮೊದಲ ಬಾರಿ ರಕ್ತದಾನ ಮಾಡಿಕೊಂಡೆ. ಜೀವ, ಜೀವನ ಇದರ ಜತೆಗಿನ ಸಹಾಯ ಮತ್ತೂಂದಿಲ್ಲ ಎಂಬುದರ ಅರಿವು ಸಿಕ್ಕಿತು. ಅಂದಿನ ಪಾಠ ಇವತ್ತಿಗೂ ಪಾಲಿಸುತ್ತಿದ್ದೇನೆ.
– ಸಂಗಮೇಶ ಸಜ್ಜನ, ರಾಜಾಜಿನಗರ, ಬೆಂಗಳೂರು.
*
ಪುಣ್ಯ ಕಾರ್ಯ
ನಾನು ಮೊದಲನೆ ಬಾರಿ ರಕ್ತದಾನ ಮಾಡಿದ್ದು ಕಾಲೇಜು ದಿನಗಳಲ್ಲಿ. ಮೊದಲನೆ ಬಾರಿ ಆದ್ದರಿಂದ ಏನೋ ಒಂಥರ ಭಯ, ಆದರೆ ರಕ್ತನೀಡಿದ ಬಳಿಕ ತುಂಬಾ ಖುಷಿಯಾಯಿತು. ಇಷ್ಟೆನಾ ಅನ್ನಿಸಿತು. ಜತೆಗೆ ರಕ್ತದ ಅಗತ್ಯಇರುವ ವ್ಯಕ್ತಿಗೆ ನನ್ನ ರಕ್ತದಿಂದ ಜೀವ ಉಳಿಸಬಹುದು ಎಂಬ ಹೆಮ್ಮೆ ಜತೆಗೆ ಖುಷಿಯೂ ಆಗಿತ್ತು. ಎಷ್ಟೋ ಜನರು ಸರಿಯಾದ ಸಮಯಕ್ಕೆ ರಕ್ತ ಸಿಗದೇ ಜೀವ ಕಳೆದುಕೊಳ್ಳುತ್ತಿದ್ದರು. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ.
– ಸಂತೋಷ್ ಹೆಬ್ರಿ, ಉಡುಪಿ
*
ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ
ಹಸಿದವರಿಗೆ ಅನ್ನ ನೀಡುವುದು ಸಾವಿನೊಂದಿಗೆ ಹೋರಾಡುತ್ತಿರುವ ಜೀವಕ್ಕೆ ರಕ್ತ ನೀಡುವುದು ತುಂಬಾ ಮಹತ್ವದ ಕೆಲಸ. ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ರಕ್ತ ನೀಡುವ ಪ್ರತಿಯೊಬ್ಬ ವ್ಯಕ್ತಿಯೂ ಜೀವ ರಕ್ಷಕನೇ ಆಗಿರುತ್ತಾನೆ. ಒಬ್ಬ ತಾಯಿಯ ಕಣ್ಣೀರು ಮಗುವಿನ ಜೀವವನ್ನು ಉಳಿಸದಿರಬಹುದು. ಆದರೆ ನಾವು ನೀಡಿದ ಒಂದು ಹನಿ ರಕ್ತ ಒಂದು ಜೀವವನ್ನು ಉಳಿಸುತ್ತದೆ. ಒಂದು ಕುಟುಂಬದ ನಗುವನ್ನು ಉಳಿಸುತ್ತದೆ. ಈ ರೀತಿ ನಾವು ನೀಡಿದ ಒಂದು ಹನಿ ರಕ್ತ ಇಷ್ಟೆಲ್ಲಾ ಸಂತೋಷ ನೀಡುತ್ತದೆ ಎಂದರೆ ಯಾಕೆ ರಕ್ತದಾನ ಮಾಡಬಾರದು ಅಲ್ಲವೇ.
– ಸ್ಪರ್ಶ, ಎಂ., ನೆಲಮಂಗಲ
*
ತೇಜಸ್ವಿನಿ ಆಸ್ಪತ್ರೆಯ ನರ್ಸ್ ಆಗಿದ್ದ ಅಕ್ಕ ನನಗೆ ಕರೆ ಮಾಡಿ ರಕ್ತದ ತುರ್ತು ಅವಶ್ಯಕತೆಯ ಬಗ್ಗೆ ತಿಳಿಸಿದ್ದರಿಂದ ಬೇಗನೆ ಅಲ್ಲಿಗೆ ಹೋದೆ. ನನ್ನ ಬರುವಿಕೆಯನ್ನು ಎದುರು ನೋಡುತ್ತಿದ್ದ ಅಕ್ಕ ನಾನು ಹೋದ ಕೂಡಲೇ ರಕ್ತ ಪರೀಕ್ಷೆಯ ಕೊಠಡಿಯೊಳಗೆ ಕರೆದುಕೊಂಡು ಹೋದರು. ನನ್ನ ರಕ್ತ ಹೊಂದಾಣಿಕೆ ಆಗುವುದೇ ಎಂದು ಪರೀಕ್ಷಿಸಿದ ಅನಂತರ ಅಲ್ಲಿದ್ದ ಬೆಡ್ ಮೇಲೆ ಮಲಗಲು ತಿಳಿಸಿದರು. ಒಂದು ಬಾಟಲ್ ರಕ್ತ ತೆಗೆದ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದರು. ಸ್ವಲ್ಪ ಹೊತ್ತು ಮಲಗಿ ಮೊದಲ ಬಾರಿ ರಕ್ತ ನೀಡಿದ ಸಂತಸದ ಭಾವನೆಯಿಂದ ಅಲ್ಲಿಂದ ಹೊರಟೆ.
– ಚೇತನ್ ಕುಮಾರ್ ಕಮ್ಮಾರು, ವಿಟ್ಲ
*
ರಕ್ತದಾನ ಮಾಡಿದ ಹೆಮ್ಮೆ
ಫೆಬ್ರವರಿ 13, 2018ರ ಆ ದಿನವನ್ನು ಎಂದೂ ಮರೆಯಲಾಗದು. ಏಕೆಂದರೆ, ಅಂದೇ ನಾನು ಮೊದಲ ಬಾರಿಗೆ ರಕ್ತದಾನದ ಅನುಭವ ಪಡೆದಿದ್ದು. ಆ ದಿನ ಶಿವರಾತ್ರಿ ಹಬ್ಬ ಇದ್ದಿದ್ದರಿಂದ ನಮಗೆಲ್ಲ ರಜಾದಿನ. ಕಾಲೇಜು ವ್ಯಾಟ್ಸಪ್ ಗ್ರೂಪಿನಲ್ಲಿ “O+ ರಕ್ತದ ಗುಂಪಿನವರು ಯಾರಾದರೂ ಇದ್ದರೆ ತಿಳಿಸಿ’ ಎಂಬ ಮೆಸೇಜ್ ಬಂದಿತ್ತು. ಅದಕ್ಕೆ ನನ್ನ ಹೆಸರು ಕಳುಹಿಸಿದೆ. ತತ್‌ಕ್ಷಣ ಸ್ನೇಹಿತನೊಂದಿಗೆ 60 ವಯಸ್ಸಿನ ವ್ಯಕ್ತಿಯೂ ಹಾಸ್ಟೆಲ್‌ಗೆ ಬಂದರು. “ನಿನ್ನ ಮಗನಲ್ಲಿ ರಕ್ತ ಕಡಿಮೆ ಇದೆ. ಅವನಿಗೆ ಮೊದಲು ರಕ್ತವನ್ನೇರಿಸಿ ಅನಂತರ ಆಪರೇಷನ್ ಮಾಡುತ್ತೇವೆ’ ಎಂದು ವೈದ್ಯರು ಹೇಳುತ್ತಿದ್ದಾರೆ. ದಯವಿಟ್ಟು ರಕ್ತದಾನ ಮಾಡಿ ಎಂದು ಕೇಳಿಕೊಂಡರು. ನಾನು ಒಪ್ಪಿ ಸರಕಾರಿ ಆಸ್ಪತ್ರೆಗೆ ಹೋದೆ. ಅವನ ಮಗನೊಂದಿಗೆ ಮಾತನಾಡಿ, ರಕ್ತ ನೀಡಿದೆ. ಅದಕ್ಕೆ ಪ್ರತಿಯಾಗಿ ಅವರು 500 ರೂ. ನೋಟೊಂದನ್ನು ನನ್ನ ಜೇಬಲ್ಲಿ ಹಾಕಲು ಪ್ರಯತ್ನಿಸಿದರು. ಅದನ್ನು ತಿರಸ್ಕರಿಸಿ, ದುಡ್ಡಿನ ಅವಶ್ಯಕತೆ ನನಗಿಂತ ನಿಮಗೇ ಹೆಚ್ಚಿದೆ. ನಾನು ಇದನ್ನು ಸ್ವೀಕರಿಸಿದರೆ, ರಕ್ತದಾನ ಮಾಡಿದಂತಲ್ಲ, ಮಾರಿದಂತಾಗುತ್ತದೆ ಎಂದೆ. ಅದ್ಯಾವುದಕ್ಕೂ ಒಪ್ಪದೇ ಸೇಬು ಕೊಡಿಸಿ ಕಳಿಸಿದ್ದರು.
– ಉಮೇಶ ರೈತನಗರ, ತುಮಕೂರು ವಿಶ್ವವಿದ್ಯಾನಿಲಯ
*
ಮೊದಲ ರಕ್ತದಾನದ ನೆನಪು ಇನ್ನೂ ಇದೆ
ರಕ್ತದಾನ ಮಾಡೋದು ಅಂದ್ರೆ ಸಾಕು ನಾನ್ಯಾವಾಗಲೂ ಮುಂದು. ಈಗಾಗಲೇ 3 4 ಬಾರಿ ರಕ್ತದಾನ ಮಾಡಿದ್ದರೂ ಮೊದಲ ಬಾರಿಗೆ ರಕ್ತದಾನ ಮಾಡಿದ ನೆನಪು ಹಾಗೇ ಇದೆ. ಅದು ಎಂಸಿಜೆ ಕಲಿಯುತ್ತಿದ್ದಾಗ ನಡೆದ ಘಟನೆ. ಕ್ಲಾಸ್‌ನ ನಡುವೆ ರಕ್ತದಾನ ಶಿಬಿರದ ನೋಟಿಸ್ ಬರುತ್ತದೆ. ನಾವು ನಾಲ್ಕು ಹುಡುಗಿಯರು ಹಾಗೂ 5 ಜನ ಹುಡುಗರು ಹೋಗಿದ್ದೆವು. ಕ್ಯೂನಲ್ಲಿ ನಿಂತು ನಮ್ಮ ಸರದಿ ಬಂದಾಗ ಸಂತೋಷದಿಂದಲೇ ರಕ್ತದಾನ ಮಾಡಿದೆವು. ಅದರ ನೆನೆಪು ಇನ್ನೂ ಹಾಗೆ ಉಳಿದುಕೊಂಡಿದೆ.
– ರಕ್ಷಿತಾ ಕುಮಾರಿ ತೋಡಾರು , ಮೂಡಬಿದ್ರೆ
*
ಕಣ್ಮುಚ್ಚಿ ಕಣ್ಣುತೆರೆಯುವುದರಲ್ಲಿ ಕಾರ್ಯವಾಗಿತ್ತು
ರಕ್ತದಾನ ಕುರಿತು ಕೇಳಿದಾಗಲೆಲ್ಲ ನಾನೂ ರಕ್ತದಾನ ಮಾಡಬೇಕು ಎನಿಸುತ್ತಿತ್ತು. ಕೆಲವೊಂದು ಬಾರಿ ರಕ್ತದಾನಕ್ಕೆ ಅವಕಾಶ ಸಿಕ್ಕತ್ತಾದರೂ, ಅನಾರೋಗ್ಯ ಕಾಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಆತ್ಮೀಯ ಸ್ನೇಹಿತರೊಬ್ಬರು ಈ ವಿಷಯ ತಿಳಿಸಿದರು. ರಾಷ್ಟ್ರ ನಾಯಕನ ಹುಟ್ಟು ಹಬ್ಬದ ದಿನದಂದು ರಕ್ತದಾನ ಮಾಡಬೇಕು ಎಂದು ನಿರ್ಧರಿಸಿ ರಕ್ತದಾನಕ್ಕೆ ಹೆಸರುಕೊಟ್ಟೆ. ಆ ದಿನ ಮುಂಜಾನೆಯೇ ಬೆಳಗಿನ ತಿಂಡಿ ತಿಂದು ರಕ್ತದಾನ ಕೊಡಲು ಹೋದೆ. ಅದೊಂದು ಅದ್ಬುತ ಅನುಭವ. ಕಣ್ಮುಚ್ಚಿ ಕಣ್ಣುತೆರೆಯುವುದರಲ್ಲಿ 250 ಎಂ.ಎಲ್. ರಕ್ತದ ತೆಗೆದುಕೊಂಡಿದ್ದರು. ವಿಶ್ರಾಂತಿ ತೆಗೆದುಕೊಂಡು ಮನೆಗೆ ಬಂದೆ.
– ಶ್ರೀರಂಗ ಪುರಾಣಿಕ, ವಿಜಯಪುರ
Advertisement