ಬೆಂಗಳೂರು: ಅನಾದಿ ಕಾಲದಿಂದ ವಿವಿಧ ಕಾರಣಗಳಿಂದ ರಕ್ತದಾನದಿಂದ ದೂರ ಉಳಿದ ಮಹಿಳೆಯರು ಇದೀಗ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುತ್ತಿದ್ದು, 2022-23ನೇ ಸಾಲಿನಲ್ಲಿ ರಾಜ್ಯದ ಮಹಿಳಾ ರಕ್ತದಾನಿಗಳ ಸಂಖ್ಯೆ ಶೇ.15ರಷ್ಟು ಏರಿಕೆಯಾಗಿದೆ.
ರಕ್ತದಾನ ಮಾಡುವವರಲ್ಲಿ ಪುರುಷ ದಾನಿಗಳು ಸಂಖ್ಯೆ ಹೆಚ್ಚಾಗಿತ್ತು. ದಶಕಗಳ ಹಿಂದೆ ಬಹಳ ಹಿಂದೆ ಕಡಿಮೆ ತೂಕ, ಹಿಮೋಗ್ಲೋಬಿನ ಕೊರತೆ, ಮಾಸಿಕ ಋತುಸ್ರಾವದಿನ ಸೇರಿದಂತೆ ವಿವಿಧ ಅನಾರೋಗ್ಯ, ಜಾಗೃತಿ ಕೊರತೆಯಿಂದ ರಕ್ತದಾನ ಪ್ರಕ್ರಿಯೆಯಿಂದ ಮಹಿಳೆಯರು ಬಹಳ ಹಿಂದೆ ಸರಿದಿದ್ದರು.
ಶೇ.40ರಷ್ಟು ಮಹಿಳಾ ದಾನಿಗಳು: ರಾಜ್ಯದಲ್ಲಿ ಮಹಿಳಾ ರಕ್ತದಾನಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಹಿಳಾ ದಾನಿಗಳ ಸಂಖ್ಯೆಯಲ್ಲಿ ಶೇ.15ರಷ್ಟು ಹೆಚ್ಚಳವಾಗಿದೆ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಂಗಳೂರು ಜಿಲ್ಲೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಶೇ.30ರಿಂದ 40ರಷ್ಟು ಮಹಿಳಾ ರಕ್ತದಾನಿಗಳಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಿ ರಕ್ತ ಸುರಕ್ಷತೆ ವಿಭಾಗ ದೃಢಪಡಿಸಿದೆ. ಇನ್ನು ಶಿಲ್ಪಾ ಫೌಂಡೇಷನ್ ಇತ್ತೀಚಿಗೆ ನಡೆಸಿದ ರಕ್ತದಾನದ ಶಿಬಿರದ ಪೂರ್ವ ಸಮೀಕ್ಷೆಯಲ್ಲಿ ಶೇ.40ರಷ್ಟು ಮಹಿಳೆಯರು ರಕ್ತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ ಎಂದು ಘೌಂಡೇಷನ್ ಯೋಜನಾಧಿಕಾರಿ ಹಂಝಾ ಕಿನ್ಯಾ ತಿಳಿಸಿದರು.
ಗುರಿ ಸಾಧನೆ: ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. 2022-23ರಲ್ಲಿ 8.8 ಲಕ್ಷ ಯೂನಿಟ್ ಸಂಗ್ರಹಿಸುವ ಗುರಿಯಲ್ಲಿ 9.22 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಶೇ.121ರಷ್ಟು ಪ್ರಗತಿ ಸಾಧಿಸಿದೆ. 43 ಸರ್ಕಾರಿ ರಕ್ತಕೇಂದ್ರಗಳ ಪೈಕಿ 38 ರಕ್ತ ಕೇಂದ್ರಗಳಲ್ಲಿ ರಕ್ತವಿಧಳನಾ ಘಟಕ ಸ್ಥಾಪಿಸಲಾಗಿದೆ. ಎಲ್ಲವೂ ಕಾರ್ಯಚರಿಸುತ್ತಿದ್ದು, ಈ ಘಟಕಗಳ ಮೂಲಕ ರಾಜ್ಯಾದ್ಯಂತ ರೋಗಿಗಳಿಗೆ ಅಗತ್ಯವಿರುವ ರಕ್ತ ಮತ್ತದರ ಅಂಗಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತಿದೆ.
ಯಾರು ಅರ್ಹ ದಾನಿಗಳು?: 18ರಿಂದ 65ವರ್ಷದೊಳಗಿನ ಕನಿಷ್ಠ 45 ಕೆ.ಜಿ. ತೂಕವಿರುವ ಆರೋಗ್ಯವಂತ ವ್ಯಕ್ತಿ, ಹಿಮೊಗ್ಲೋಬಿನ್ ಕನಿಷ್ಠ ಶೇ.12.5 ಇರುವ ಪುರುಷರು ವರ್ಷಕ್ಕೆ 4 ಬಾರಿ ಮತ್ತು ಮಹಿಳೆಯರು 3 ಬಾರಿಯಾದರೂ ರಕ್ತದಾನ ಮಾಡಬಹುದು ಆ ಮೂಲಕ ರಾಷ್ಟ್ರದಲ್ಲಿ ರಕ್ತದಾನ ಅವಶ್ಯಕತೆ ಇರುವ ಶೇ.100ರಷ್ಟು ಸುರಕ್ಷಿತ ರಕ್ತವನ್ನು ಒದಗಿಸಬಹುದಾಗಿದೆ. ಒಂದು ಯೂನಿಟ್ ರಕ್ತ ನಾಲ್ವರ ಜೀವ ಉಳಿಸಲು ಸಾಧ್ಯ.
ವರ್ಷದಿಂದ ವರ್ಷಕ್ಕೆ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮಹಿಳಾ ದಾನಿಗಳಲ್ಲಿ ಜಾಗೃತಿ ಮೂಡಿದ್ದು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಶೇ.15ರಷ್ಟು ಮಹಿಳಾ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ರಕ್ತದ ಕೊರತೆ ಇಲ್ಲ. ಎನ್‌ಜಿಒ, ಸಂಘ ಸಂಸ್ಥೆಗಳ ಮೂಲಕ ರಕ್ತದಾನ ಶಿಬಿರ ಆಯೋಜಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಜತೆಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಕಾಲೇಜು ಮಟ್ಟದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
● ಡಾ.ಜಯರಾಜು ಡಿ., ಉಪನಿರ್ದೇಶಕ, ಎಸ್‌ಟಿಐ ಮತ್ತು ರಕ್ತಸುರಕ್ಷತೆ, ಆರೋಗ್ಯ ಇಲಾಖೆ.
-ತೃಪ್ತಿ ಕುಮ್ರಗೋಡು