Advertisement

ಆಟಿಸಂ: ಕೌಶಲಗಳ ತರಬೇತಿಯಿಂದ ಪರಿಹಾರ

06:28 PM Apr 02, 2022 | Team Udayavani |

ಎ.2ರ ಶನಿವಾರ ವಿಶ್ವ ಆಟಿಸಂ ಜಾಗೃತಿ ದಿನ. ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುವ ಆಟಿಸಂ, ಮಕ್ಕಳು ಮಾತ್ರವಲ್ಲದೆ ಅವರ ಹೆತ್ತವರಿಗೂ ಬಲುದೊಡ್ಡ ಸವಾಲಾಗಿದೆ. ಆಟಿಸಂ ಸ್ಥಿತಿಯನ್ನು ಹೊಂದಿರುವ ಮಕ್ಕಳ ಪಾಲನೆ, ಆರೈಕೆ, ಅವರಿಗೆ ನೀಡಬೇಕಾದ ಕೌಶಲ ತರಬೇತಿ, ಥೆರಪಿ, ಪರಿಹಾರೋಪಾಯಗಳ ಕುರಿತಂತೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

Advertisement

“ಆಟಿಸಂ ಎಂಬುದು ಬುದ್ಧಿಮಾಂದ್ಯತೆ ಅಲ್ಲ. “ಆಟಿಸಂ’ ಸ್ಥಿತಿಯನ್ನು ಹೊಂದಿರುವ ಹಲವರು ವಿವಿಧ ಕ್ಷೇತ್ರಗಳಾದ ಸಂಗೀತ, ನೃತ್ಯ, ನಾಟಕ, ಕ್ರೀಡೆ, ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಪ್ರಾವೀಣ್ಯವನ್ನು ಹೊಂದಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೆ ಇನ್ನು ಕೆಲವರು ತೀವ್ರ ತರದ ಆಟಿಸಂ ಸ್ಥಿತಿಯಿಂದಾಗಿ ಹತ್ತು ಹಲವಾರು ವರ್ತನೆಗಳ ಸಮಸ್ಯೆಗಳನ್ನು ಪ್ರದರ್ಶಿ ಸುತ್ತಾ ಇರುವುದು ಮಾತ್ರವಲ್ಲ, ಅದನ್ನು ನಿಭಾಯಿಸುವುದೇ ಹೆತ್ತವರಿಗೆ-ಪಾಲಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಟಿಸಂ ಎನ್ನುವುದು, ತೀವ್ರವಾಗಿ ಕ್ಷೀಣ ಗೊಳಿಸುವ ಸಂಪೂರ್ಣ ಜೀವಿತಾವಧಿಯಲ್ಲಿ ಅನುಭವಿಸಬೇಕಾದ ವಿಕಲತೆಯ ವ್ಯವಸ್ಥೆ ಯಾಗಿದ್ದು, ಇದು ಜೀವನದ ಪ್ರಾರಂಭದ ಮೊದಲನೆಯ ಮೂರು ವರ್ಷಗಳಲ್ಲಿಯೇ ಕಂಡು ಬರುತ್ತದೆ. ಪ್ರತೀ 1,000 ಜನನಗಳಲ್ಲಿ ಸುಮಾರಾಗಿ 2-4 ಪ್ರಕರಣಗಳಲ್ಲಿ ಮಾತ್ರವೇ ತೀವ್ರವಾದ ಮಾನಸಿಕ ಅಂಗವಿಕಲತೆ ಅಥವಾ ಅದರ ಗುಣಲಕ್ಷಣಗಳು ಕಂಡುಬರುತ್ತವೆ. ಆಟಿಸಂ ಬಾಲಕಿಯರಿಗಿಂತ ಮೂರು ಪಟ್ಟು ಅಧಿಕವಾಗಿ ಬಾಲಕರಲ್ಲಿ ಉಂಟಾಗುತ್ತದೆ.

ಸಾಮಾನ್ಯ ಮಗು ಜೀವನದ ಮೊದ ಲನೆಯ ವರ್ಷದಲ್ಲಿ ನಡೆಯಲು, ಮಾತ ನಾಡಲು ಮತ್ತು ನಮ್ಮೊಂದಿಗೆ ಸ್ಪಂದಿಸಲು ಕಲಿಯುತ್ತದೆ. ನಿಧಾನಗತಿಯನ್ನು ಹೊಂದಿರುವ ಮಗು ಈ ಪ್ರತಿಭೆಗಳನ್ನು ನಿಧಾನ ವಾಗಿಯೇ ಕಲಿಯುತ್ತದೆ. ಆದರೆ ಆಟಿಸಂ ಹೊಂದಿರುವ ಮಗು ಇವುಗಳನ್ನು ಕಲಿಯುವುದೇ ಇಲ್ಲ. ಆತ/ ಆಕೆಯು ಸಾಮಾನ್ಯ ವಾಗಿಯೇ ಬೆಳೆಯುತ್ತಿದ್ದಾರೆ ಎಂದು ಕಂಡುಬರುತ್ತದೆ ಮತ್ತು ಕೊನೆಗೆ ಅದು ನಿಂತು ಹೋದಂತೆ ಕಂಡುಬರುತ್ತದೆ. ಮಾತನಾಡಲು ಆರಂಭಿಸಿದಂತೆ ಕಂಡು ಬರುತ್ತದೆ. ಆದರೆ ನಿಂತುಹೋಗುತ್ತದೆ. ಇಂತಹ ವ್ಯಕ್ತಿಗಳು ಕೆಲವೊಂದು ಕೌಶಲಗಳಲ್ಲಿ ಅತ್ಯಂತ ಪರಿಣತ ರಂತೆ ಕಂಡುಬರುತ್ತಾರೆ. ಆದರೆ ಇತರ ವಿಷಯಗಳಲ್ಲಿ ತೀರಾ ದುರ್ಬಲ ರಾಗಿರುತ್ತಾರೆ. ಇಂತಹ ಗುಣಲಕ್ಷಣಗಳೇ “ಆಟಿಸಂ’ ಇದೆ ಎಂಬುದನ್ನು ತೋರಿಸುತ್ತದೆ.

ಸಂಶೋಧನೆಗಳ ಪ್ರಕಾರ, ನರಮಂಡಲ ವ್ಯವಸ್ಥೆಯಲ್ಲಿ ಉಂಟಾಗುವ ಯಾವುದೇ ರಚನಾಕೃತಿಯ ಅಥವಾ ಕಾರ್ಯ ವೈಖರಿ ಯಲ್ಲಿನ ಹಾನಿಯಿಂದಾಗಿ ಆಟಿಸಂ ಬರು ತ್ತದೆ. ಕೆಲವೊಂದು ವೈರಸ್‌ಗಳು ಮತ್ತು ಆನುವಂಶಿಕ ಪರಿಸ್ಥಿತಿಗಳು “ಆಟಿಸಂ’ನ ಸ್ಥಿತಿಗೆ ಕಾರಣವಾಗಿವೆ. ಸದ್ಯದ ಸ್ಥಿತಿಯಲ್ಲಿ ಆಟಿಸಂ ಸುಮಾರು ಶೇ.10ರಷ್ಟು ಪ್ರಕರಣಗಳು ಆನು ವಂಶಿಕವಾಗಿ ಬಂದಿದೆ ಎಂದು ನಂಬಲಾಗಿದೆ.

Advertisement

ಪ್ರೇರಣೆ: ಆಟಿಸಂ ಹೊಂದಿರುವ ಮಕ್ಕಳನ್ನು ಯಾವುದೇ ಚಟುವಟಿಕೆಗೆ ತೊಡಗಿಸಿಕೊಳ್ಳುವ ಮೊದಲು ಆ ಚಟುವಟಿಕೆಗೆ ಪೂರಕವಾದ ಪ್ರೇರಣೆ ಅತೀ ಅಗತ್ಯ. ಇವರಲ್ಲಿ ಗೋಚರಿಸಲ್ಪಡುವ ಪ್ರಮುಖ ಸಮಸ್ಯೆಗಳೆನಿಸಿದ ಏಕಾಗ್ರತೆ, ಗ್ರಹಿಸುವ ಶಕ್ತಿ ಹಾಗೂ ನಿರ್ವಾಹಣ ಕೌಶಲಗಳನ್ನು ಹೆಚ್ಚಿಸುವ ಪ್ರಯತ್ನವನ್ನು ತರಬೇತುದಾರರು ವಿವಿಧ ಚಟುವಟಿಕೆಗಳ ಮುಖಾಂತರ ಸಾಧಿಸಬೇಕಾಗಿರುವುದು ಅತ್ಯವಶ್ಯಕವಾಗಿದೆ. ಆಟಿಸಂ ಮಕ್ಕಳು ತೋರ್ಪ ಡಿಸುವ ಸ್ವೀಕೃತವಲ್ಲದ ವರ್ತನೆಯ ಬಗ್ಗೆ ಹೆತ್ತವರು ವಿಶೇಷವಾಗಿ ಗಮನಹರಿಸಿ ಆ ವರ್ತನೆಗಳ ಪರಿವರ್ತನೆಗಾಗಿ ತಜ್ಞರ ಸಲಹೆ ಪಡೆದುಕೊಳ್ಳುವುದು ಸೂಕ್ತ.

ಥೆರಪಿ ಹಾಗೂ ತರಬೇತಿ: ಆಟಿಸಂ ಹೊಂದಿರುವ ಬಹಳಷ್ಟು ಮಕ್ಕಳಲ್ಲಿ ಮಾತಿನ ಸಮಸ್ಯೆಗಳು ಸಾಮಾನ್ಯ. ಇಲ್ಲಿ ವಾಕ್‌ಥೆರಪಿ ಅತೀ ಅಗತ್ಯವಾಗಿ ನೀಡಬೇಕು. ಮಕ್ಕಳಲ್ಲಿ ದೈಹಿಕ ಸಮಸ್ಯೆಗಳಿದ್ದಲ್ಲಿ ಫಿಸಿಯೋಥೆರಪಿ ನೀಡುವುದು ಸೂಕ್ತ. ಮಾತ್ರವಲ್ಲದೆ, “ಆಕ್ಯೂಪೇಶನಲ್‌ ಥೆರಪಿ’ ಮಕ್ಕಳ ದೈಹಿಕ, ಸಂವೇ ದನಶೀಲ ಹಾಗೂ ಅರಿವಿನ ಸಮಸ್ಯೆಗಳ ನಿವಾ ರಣೆಗೆ ಸಹಕಾರಿಯಾಗಿದೆ. ಸ್ನಾಯುಗಳ ಕೌಶಲ ಗಳ ವೃದ್ಧಿ ಹಾಗೂ ಕಣ್ಣು-ಕೈಗಳ ಸಮನ್ವಯತೆಗೆ ಸಹಕಾರಿಯಾಗಿದೆ. ಆಟಿಸಂಗೆ ಸಂಬಂಧಿಸಿದ ಇಂಥ ಸಮಸ್ಯೆಗಳ ನಿಯಂತ್ರಣಕ್ಕೆ ಮುಖ್ಯವಾಗಿ ಬಹು ಸಂವೇದನ ಪ್ರಚೋದನೆ ಅತೀ ಅಗತ್ಯ.

ಒಟ್ಟಿನಲ್ಲಿ ಆಟಿಸಂ ರೋಗವಲ್ಲ. ಅದೊಂದುಸ್ಥಿತಿ. ಆ ಸ್ಥಿತಿಯನ್ನು ನಿವಾರಿಸಲು ಬೇಕಾದ ಕೌಶಲಗಳ ತರಬೇತಿಯನ್ನು ಆದಷ್ಟು ಶೀಘ್ರ ವಾಗಿ ಪ್ರಾರಂಭಿಸಬೇಕು. ಮುಖ್ಯವಾಗಿ ಆಟಿಸಂ ಮಗುವಿನಲ್ಲಿರುವ ಸಮಸ್ಯೆಗಳನ್ನು ತೊಂದರೆಗಳನ್ನು ಎಳವೆಯಲ್ಲಿಯೇ ಪತ್ತೆಮಾಡಿ, ಅದಕ್ಕೆ ಸೂಕ್ತವಾದ ಪರಿಹಾರೋಪಾ ಯಗಳನ್ನು ಕಂಡುಕೊಂಡು ಪರಿಣಾಮ ಕಾರಿ ಯಾದ ತರಬೇತಿಗೆ ಹಾಗೂ ಥೆರಪಿಗೆ ಇವರನ್ನು ಒಳಪಡಿಸಿದಲ್ಲಿ ಇವರಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಆ ಬದಲಾವಣೆ ನೊಂದ ಹೆತ್ತವರ ಮೊಗದಲ್ಲಿ ಮಂದಹಾಸ
ವನ್ನು ಮೂಡಿಸದೆ ಇರಲಾರದು.

-ಡಾ| ವಸಂತ್‌ ಕುಮಾರ್‌ ಶೆಟ್ಟಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next