Advertisement
ಕಲೆಯು ವಿಶ್ವವ್ಯಾಪಿಯಾದ ಒಂದು ಚಟುವಟಿಕೆಯಾಗಿದೆ. ವಿಶ್ವ ಕಲಾ ದಿನವನ್ನು ನಾವು ಐದು ವಿಧಗಳಲ್ಲಿ ಆಚರಿಸಬಹುದು. ಮೊದಲನೆ ಯದಾಗಿ ವಿಶ್ವದ ಪ್ರಸಿದ್ಧ ಕಲಾತಾಣಗಳನ್ನು ಸಂದರ್ಶಿಸುವುದು ಮತ್ತು ಅವುಗಳ ಸಂರಕ್ಷಣೆಯ ಪ್ರತಿಜ್ಞೆ ಕೈಗೊಳ್ಳುವುದು. ಎರಡನೆಯದಾಗಿ ವಿಶ್ವದ ಪ್ರಸಿದ್ಧ ಕಲಾವಿದರ ಜೀವನ ಮತ್ತು ಅವರ ಕಲಾಕೃತಿಗಳ ಬಗ್ಗೆ ಅಭ್ಯಸಿಸುವುದು. ಮೂರನೆ ಯದಾಗಿ ವಿವಿಧ ಕಲಾಶೈಲಿಗಳ ಬಗ್ಗೆ ತಿಳಿದು ಕೊಳ್ಳುವುದು. ನಾಲ್ಕನೆಯದಾಗಿ ಸಮಕಾಲೀನ ಕಲೆ ಮತ್ತು ಕಲಾವಿದರ ಬಗ್ಗೆ ತಿಳಿದು ಕೊಳ್ಳುವುದು. ಐದನೆ ಯದಾಗಿ ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಗೌರವಿಸುವುದು.
Related Articles
Advertisement
ಕಲೆಯ ಪಂಥಗಳಾದ ಎಕ್ಸ್‌ಪ್ರೆಶನಿಸಂ, ರಿಯಲಿಸಂ, ಇಂಪ್ರಶನಿಸಂ, ಕ್ಯೂಬಿಸಂ, ಫಾವಿಸಂ, ಫ್ಯೂಚರಿಸಂ, ಅಬ್ ಸ್ಟ್ರಾಕ್ಟ್, ಬೈಜಾಂಟಿನ್, ಗೋಥಿಕ್ ಮುಂತಾದ ಶೈಲೀಕೃತ ಕಲಾಕೃತಿಗಳ ವೈಶಿಷ್ಟ್ಯಗಳನ್ನು ನಾವು ತಿಳಿದುಕೊಂಡಾಗ ವಿಶ್ವ ಕಲಾ ದಿನದ ಆಚರಣೆ ಪ್ರಾಮುಖ್ಯ ಪಡೆಯುತ್ತದೆ. ಅದೇರೀತಿ ಭಾರತೀಯ ಕಲೆಯ ಸೂಕ್ಷ್ಮ ಕಲಾ ಶೈಲಿಗಳಾದ ಕಾಂಗ್ರಾ ಶೈಲಿ, ತಂಜಾವೂರು ಶೈಲಿ, ಮೈಸೂರು ಶೈಲಿಯ ಉತ್ಕೃಷ್ಠ ಚಿತ್ರಗಳು, ಗ್ರಾಮೀಣ ಜನಪದರ ಶೈಲಿಗಳಾದ ಮಧುಬನಿ, ಪಟ್ಟಾ, ವಾರ್ಲಿ, ಕಾವಿ ಕಲೆ ಮುಂತಾದ ಚಿತ್ರಗಳ ಸೊಗಸನ್ನು ಕಾಣುವ ಮೂಲಕ ನಾವು ವಿಶ್ವ ಕಲಾ ದಿನವನ್ನು ಸಂಭ್ರಮಿಸಬಹುದು.
ಭಾರತ ಸಹಿತ ವಿಶ್ವದ ಪ್ರಸಿದ್ಧ ಕಲಾವಿದರ ಬಗ್ಗೆ ಮತ್ತು ಅವರ ಕಲಾಕೃತಿಗಳ ಬಗ್ಗೆ ನಾವು ಅಧ್ಯಯನ ಮಾಡಿಕೊಂಡಾಗ, ಅದಕ್ಕಾಗಿ ಗ್ಯಾಲರಿಗಳನ್ನು ತೆರೆದಾಗ ವಿಶ್ವದ ಕಲೆಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ. ಹಲವಾರು ಸಮಕಾಲೀನ ಕಲಾವಿದರ ಜತೆಯಲ್ಲಿ ಅನೇಕ ಸೃಜನಶೀಲ ಕಲಾವಿದರು ಕಲಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇವರೆಲ್ಲರ ಕಲಾ ಸೇವೆ ಮತ್ತು ಪ್ರತಿಭೆಗೆ ಒಂದಿಷ್ಟು ಪ್ರೋತ್ಸಾಹ, ಉತ್ತೇಜನ ನೀಡಿದಲ್ಲಿ ವಿಶ್ವ ಕಲಾ ದಿನಕ್ಕೆ ವಿಶೇಷ ಮೆರುಗು ಬರುತ್ತದೆ.
ಎಲೆ ಮರೆಯ ಕಾಯಿಯಂತೆ ಪ್ರಚಾರ ಬಯಸದೆ ತೆರೆಮರೆಯಲ್ಲಿ ದುಡಿಯುತ್ತಿರುವ ಅನೇಕ ಸೃಜನಶೀಲ ಕಲಾವಿದರು ನಮ್ಮ ನಡುವೆ ಇದ್ದಾರೆ. ಅವರನ್ನು ಗುರುತಿಸಿ ಗೌರವಿಸಿದಾಗ, ಅವರ ಕಲಾಕೃತಿಗಳ ಪ್ರದರ್ಶನ ನಡೆಸಿದಾಗ ಅವರ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಕಲಾಶಿಬಿರ, ಕಲಾಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಿ ಅಭಿನಂದಿಸುವ ಮೂಲಕ ಸ್ಥಳೀಯವಾಗಿ ನಾವು ವಿಶ್ವ ಕಲಾ ದಿನವನ್ನು ಆಚರಿಸಬಹುದಾಗಿದೆ. ಕಲಾಕೃತಿಗಳನ್ನು ಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ನಾವು ಸಾಗೋಣ.
ಡಾ| ಉಪಾಧ್ಯಾಯ ಮೂಡುಬೆಳ್ಳೆ
(ಲೇಖಕರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು )