Advertisement

“ಟೈಗರ್‌’ಏರಿ, ಜಗವ ಸುತ್ತಿ…

06:00 AM Jul 10, 2018 | |

ಮ್ಯಾನ್ಮಾರ್‌, ಥಾಯ್ಲೆಂಡ್‌, ಚೀನಾ, ಉಜ್ಬೇಕಿಸ್ಥಾನ್‌, ಕಝಕಿಸ್ಥಾನ್‌, ಎಸ್ತೋನಿಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್‌… ನಕಾಶೆಯಲ್ಲಿರುವ ದೇಶಗಳ ಪಟ್ಟಿ ನೀಡುತ್ತಿದ್ದೇವೆ ಎಂದುಕೊಳ್ಳಬೇಡಿ. ಇವೆಲ್ಲಾ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಕ್ರಮಿಸಿರುವ ದೇಶಗಳು. ಇಷ್ಟು ದಿನ ಬೈಕ್‌ನಲ್ಲಿ ದೇಶಾಂತರ ಹೋಗುವ ಬೈಕರ್‌ಗಳ ರೋಮಾಂಚಕ ವಿವರವನ್ನು ವಿದೇಶಿ ಸುದ್ದಿ ವಿಭಾಗದಲ್ಲಿ ಓದುತ್ತಿದ್ದೆವು. ಇದೂ ಹಾಗೆಯೇ ಎಂದುಕೊಳ್ಳದಿರಿ. ಬೈಕ್‌ನಲ್ಲಿ 21 ದೇಶಗಳನ್ನು ಸುತ್ತಿ ಬಂದಿರುವ ಮಂಜುನಾಥ್‌ ಚಿಕ್ಕಯ್ಯ ಮತ್ತು ಕಿಂಗ್‌ ರಿಚರ್ಡ್‌ ಅಪ್ಪಟ ಕನ್ನಡಿಗರು!

Advertisement

ಸಿದ್ಧಗೊಂಡಿತು ಪ್ಲಾನ್‌…
ಗೆಳೆಯರಾದ ಮಂಜುನಾಥ್‌ ಮತ್ತು ರಿಚರ್ಡ್‌ ಇಬ್ಬರೂ ಉದ್ಯಮಿಗಳು. ಇಬ್ಬರೂ ಸಮಾನಮನಸ್ಕರು. ಬಿಡುವಿನ ವೇಳೆಯಲ್ಲಿ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ಹಾಗೆ ಮಂಜುನಾಥ್‌ ಒಮ್ಮೆ ಸಿಂಗಾಪುರಕ್ಕೆ ಹೋಗಿದ್ದಾಗ ಬೈಕ್‌ನಲ್ಲಿ ವಿಶ್ವಪರ್ಯಟನೆ ಮಾಡುತ್ತಿದ್ದ ಸ್ಪೇನ್‌ ದಂಪತಿ ಸಿಕ್ಕಿದ್ದರಂತೆ. ಅವರಾಗಲೇ 1 ಲಕ್ಷ ಕಿ.ಮೀ ಕ್ರಮಿಸಿದ್ದರು. ಬೈಕ್‌ನಲ್ಲಿ ದೇಶ ಸುತ್ತುವ ಯೋಚನೆ ಮಂಜುನಾಥ್‌ರಲ್ಲಿ ಮೂಡಿದ್ದು ಆಗಲೇ. ಅದನ್ನು ಗೆಳೆಯ ರಿಚರ್ಡ್‌ ಜೊತೆ ಇದನ್ನು ಹಂಚಿಕೊಂಡಾಗ ಅವರು ರೋಮಾಂಚಿತರಾಗಿದ್ದರು. ಇವರೊಳಗೆ ಬೈಕ್‌ ಪ್ರಯಾಣದ ಕಿಡಿ ಹೊತ್ತಿದ್ದು ಆಗಲೇ. ಇಬ್ಬರೂ ಆರಿಸಿಕೊಂಡ ಬೈಕ್‌ ಒಂದೇ ಮಾದರಿಯದ್ದು; ಟೈಗರ್‌ ಟ್ರಯಂಫ್. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅದು ನಿಜಕ್ಕೂ ದೈತ್ಯ! 210 ಕೆ.ಜಿ. ತೂಗುವ ಬೈಕ್‌ಗೆ ಸುಮಾರು 15 ಲಕ್ಷ ಬೆಲೆ. ಎಂಥಾ ಪ್ರತಿಕೂಲ ಹವಾಮಾನದಲ್ಲಿಯೂ ಜಗ್ಗದೆ, ಬಗ್ಗದೆ ನಿರಂತರವಾಗಿ ಅದು ಓಡಬಲ್ಲುದು.

ಗೈಡ್‌ ಬೇಕು…
ಇಲ್ಲಿ ನಾವು ಒಂದೂರಿನಿಂದ ಇನ್ನೊಂದೂರಿಗೆ ಹೋಗುವ ಹಾಗಲ್ಲ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸೋದು. ದೇಶದಿಂದ ದೇಶಕ್ಕೆ ಹೋಗುವಾಗ ಭೌಗೋಳಿಕ ಪ್ರದೇಶ ಬದಲಾಗುವಂತೆ, ದೇಶದ ಕಾನೂನು ಕೂಡಾ ಬದಲಾಗುತ್ತಾ ಹೋಗುತ್ತೆ. ಒಂದು ದೇಶದಲ್ಲಿ ಸಮ್ಮತವಾದದ್ದು ಇನ್ನೊಂದು ದೇಶದಲ್ಲಿ ಅಪರಾಧ ಎಂದು ಕರೆಸಿಕೊಳ್ಳಬಹುದು. ಅದರ ಕುರಿತು ಗಮನ ಹರಿಸಬೇಕಾದ್ದು ಅತ್ಯಗತ್ಯ. ಹಾಗೆಂದು ಅಷ್ಟೂ ದೇಶಗಳ ಸಂವಿಧಾನ ಓದಿ ತಿಳಿದುಕೊಳ್ಳಬೇಕಿಲ್ಲ. ಆಯಾ ಪ್ರದೇಶಗಳ ಗೈಡ್‌ ಅನ್ನು ನೇಮಿಸಿಕೊಂಡರೆ ಸಾಕು. ಅವರೇ ಅಗತ್ಯ ಮಾಹಿತಿಯನ್ನು ನೀಡಿ ಮಾರ್ಗದರ್ಶನ ಮಾಡುತ್ತಾರೆ. ಮಂಜುನಾಥ್‌ ಮತ್ತು ರಿಚರ್ಡ್‌ ಅವರು ನಾಲ್ಕು ದೇಶಗಳಲ್ಲಿ ಪ್ರಯಾಣಿಸುವಾಗ ಸ್ಥಳೀಯ ಗೈಡ್‌ಗಳ ನೆರವು ಪಡೆದಿದ್ದರು. 

ಹೊಟ್ಟೆಗೇನು? 
ಹೊರದೇಶಗಳಿಗೆ ಹೋಗ ಬೇಕಾಗಿ ಬಂದಾಗ ಎಲ್ಲರ ತಲೆಯಲ್ಲೂ ಮೂಡುವ ಮೊದಲ ಪ್ರಶ್ನೆ, “ಅಲ್ಲಿ ಊಟಕ್ಕೇನು ಮಾಡೋದು?’. ಹೋದ ಕಡೆಯೆಲ್ಲಾ ಭಾರತೀಯ ರೆಸ್ಟೋರೆಂಟುಗಳು ಇರುವುದಿಲ್ಲವಲ್ಲ. ಇದ್ದರೂ ರೈಡ್‌ ಮಾಡುವಾಗ ಅದನ್ನು ಹುಡುಕಿಕೊಂಡು ಹೋಗುವುದರಲ್ಲಿಯೇ ಸಮಯ ಕಳೆದುಹೋಗುತ್ತದೆ. ಈ ಕನ್ನಡಿಗ ರೈಡರ್‌ಗಳು ಅದಕ್ಕೊಂದು ಉಪಾಯ ಕಂಡುಕೊಂಡಿದ್ದರು. ಇಲ್ಲಿಂದ ಹೊರಡುವಾಗಲೇ ಉತ್ತರಕರ್ನಾಟಕದ ಕಡೆಯ ಚಟ್ನಿಪುಡಿ ಮತ್ತು ಬ್ರೆಡ್‌ ಅನ್ನು ಕೊಂಡೊಯ್ದಿದ್ದರು. ಬ್ರೆಡ್‌ ಖಾಲಿಯಾದರೂ ಎಲ್ಲಾ ಕಡೆ ಸಿಗುವುದರಿಂದ ತೊಂದರೆಯಾಗಿರಲಿಲ್ಲ. ವಿದೇಶದ ನಿರ್ದಿಷ್ಟ ಕ್ಯಾಲೋರಿಯುಕ್ತ, ದುಬಾರಿ ಆಹಾರ ಎಷ್ಟೇ ಸ್ವಾದಿಷ್ಟಕರವಾಗಿದ್ದರೂ ನಮ್ಮ ಚಟ್ನಿಪುಡಿಯ ಮುಂದೆ ಅಷ್ಟಕ್ಕಷ್ಟೆ!

ಕಝಕಿಸ್ತಾನದ ಬಳಿ ಹೋಗುವಾಗ ಏನೂ ಕಾಣದಷ್ಟು ಮಂಜಿತ್ತು. ಪುಣ್ಯಕ್ಕೆ ಅದೇ ಮಾರ್ಗವಾಗಿ ಬಂದ ಲಾರಿ ಚಾಲಕರೊಬ್ಬರಿಂದ ನಮ್ಮ ಪ್ರಾಣ ಉಳಿಯಿತು ಅಂತ ಹೇಳಬಹುದು. ಉಜ್ಬೇಕಿಸ್ತಾನದಲ್ಲಿ ರಸ್ತೆ ಬದಿ ಸಿಗುತ್ತಿದ್ದವರೆಲ್ಲರೂ ನಮ್ಮತ್ತ ಕೈಬೀಸಿ ವಿಶ್‌ ಮಾಡುತ್ತಿದ್ದರು. ಹಲವೆಡೆ “ಊಟ ಮಾಡಿದಿರಾ?’, “ಸಹಾಯ ಬೇಕಾ?’ ಆಪ್ತವಾಗಿ ನಾವು ನೆಂಟರೇನೋ ಎನ್ನುವಂತೆ ವಿಚಾರಿಸಿಕೊಳ್ಳುತ್ತಿದ್ದರು. 
ಮಂಜುನಾಥ್‌ 

Advertisement

ಎಲ್ಲಾ ದೇಶಗಳಲ್ಲೂ ನಾವು ಭಾರತೀಯರೆಂದು ತಿಳಿದಾಕ್ಷಣ, ನಮಗೆ ಗೌರವ, ಆದರಾತಿಥ್ಯ ನೀಡುತ್ತಿದ್ದುದನ್ನು ಕಂಡಾಗ ಹೆಮ್ಮೆಯಾಗುತ್ತಿತ್ತು.
– ಕಿಂಗ್‌ ರಿಚರ್ಡ್‌

ಜಯಪ್ರಕಾಶ್‌ ಬಿರಾದರ್‌

Advertisement

Udayavani is now on Telegram. Click here to join our channel and stay updated with the latest news.

Next