ಗುಂಡ್ಲುಪೇಟೆ: ಆರಂಭದಲ್ಲಿ ಸ್ನೇಹಿತರು, ಸಂಬಂಧಿಗಳು, ಸಹಪಾಠಿಗಳೊಡನೆ ಇದ್ದಾಗ ಅಭ್ಯಾಸವಾಗುವ ತಂಬಾಕು ಸೇವನೆ ನಂತರದಲ್ಲಿ ಚಟವಾಗುತ್ತದೆ ಎಂದು ಹಿರಿಯ ದಂತ ವೈದ್ಯಾಧಿಕಾರಿ ಡಾ.ಸ್ಮಿತಾ ಹೇಳಿದರು.
ಪಟ್ಟಣದ ಪ್ಲೇಗ್‌ಮಾರಮ್ಮ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಆಗುವಂತಹ ಅನಾಹುತ ಗಳು ಹಂತ ಹಂತವಾಗಿ ಮನುಷ್ಯನ ದೇಹವನ್ನು ಸಾವಿನಂಚಿಗೆ ತಲುಪಿಸುತ್ತದೆ ಎಂದರು.
ತಂಬಾಕು ಸೇವನೆ ಅಕ್ಕಪಕ್ಕದಲ್ಲಿ ಇರುವಂತಹ ಜನರಿಗೂ ಸಹ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಚಟವಾಗಿರುವ ತಂಬಾಕು ಸೇವನೆಯನ್ನು ಹಂತ ಹಂತವಾಗಿ ಬಿಡುವ ಪ್ರಯತ್ನ ಮಾಡಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪರದಾಡುವಾಗ ಕೆಟ್ಟ ಅಭ್ಯಾಸ ಮಾಡಿಕೊಂಡು ಆರೋಗ್ಯ ಹಾಳು ಮಾಡಿ ಕೊಳ್ಳುವುದು ಸರಿಯಲ್ಲ. ಆದ್ದರಿಂದ ತಂಬಾಕು ಸೇವೆ ತ್ಯಜಿಸುವ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಅಪರಾಧ ವಿಭಾಗದ ಪಿಎಸ್‌ಐ ಸುಜಾತ ಮಾತನಾಡಿ, ದುಶ್ಚಟಗಳು ಮನುಷ್ಯ ಜೀವನದ ನಿಜವಾದ ಶತ್ರುಗಳು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಹುತೇಕ ಮಂದಿ ದುಶ್ಚಟಗಳಿಗೆ ಬಿದ್ದಿರುತ್ತಾರೆ. ಇದರಿಂದ ಆರೋಗ್ಯದ ಜತೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಿದ್ದು, ಅಭ್ಯಾಸ ಇರುವ ಎಲ್ಲರೂ ತಂಬಾಕು ಸೇವನೆ ಬಿಡುವ ಪ್ರತಿಜ್ಞೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಚ್. ಎಂ.ಪ್ರಸಾದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾ. ಯೋಜನಾಧಿಕಾರಿ ಶಿವಪ್ರಸಾದ್ ಇದ್ದರು.