Advertisement

ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಾರ್ಯಾಗಾರ

11:10 AM Jul 24, 2018 | |

ಕಲಬುರಗಿ: ಸರ್ಕಾರಿ ಸಮಸ್ಯೆಗಳಿಗೆ ಅದರಲ್ಲೂ ಹಳೆಯ ಪಿಂಚಣಿ ಯೋಜನೆ ಪುನರ್‌ ಜಾರಿಗೆ ಆಗ್ರಹಿಸಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಬೆಂಗಳೂರಿನಲ್ಲಿ ಮುಂದಿನ ತಿಂಗಳು ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ. ರಾಮು ತಿಳಿಸಿದರು.

Advertisement

ಸೋಮವಾರ ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸರ್ಕಾರಿ ನೌಕರರ ಸಂಘವು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನೂತನ ಶಾಸಕರಿಗೆ ಸನ್ಮಾನ ಹಾಗೂ ಸಕಾಲ, ಆಡಳಿತದಲ್ಲಿ ದಕ್ಷತೆ, ಪ್ರಜಾಸ್ನೇಹಿ ಆಡಳಿತ ಹಾಗೂ ಗುಣಾತ್ಮಕ ಶಿಕ್ಷಣ ಕುರಿತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದ್ದು, ಪರಿಷ್ಕೃತ ವೇತನ ಶ್ರೇಣಿಯಲ್ಲಿ ಉಂಟಾಗಿರುವ ನೂನ್ಯತೆ ಸೇರಿದಂತೆ ಆಯೋಗದ ಅಂತಿಮ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದು.

ಕಾರ್ಯಾಗಾರವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಕಾರ್ಯಾಗಾರದಲ್ಲಿ ಎನ್‌ಪಿಎಸ್‌ ಯೋಜನೆಗೆ ಸಂಬಂಧಪಟ್ಟಂತಹ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಷಯ ತಜ್ಞರು ಭಾಗವಹಿಸಲಿದ್ದು, ಕಾರ್ಯಾಗಾರದಲ್ಲಿ ಹೊರಹೊಮ್ಮುವ ಅಭಿಪ್ರಾಯ ಕ್ರೋಢಿಕರಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ನೂತನ ಪಿಂಚಣಿ ಯೋಜನೆ ರದ್ದತಿ ಸಂಬಂಧ ಒತ್ತಡ ತರಲು ಹಂತ, ಹಂತವಾಗಿ ಹೋರಾಟ ಸಹ ರೂಪಿಸಲಾಗುವುದು ಎಂದು ಹೇಳಿದರು. ಶ್ರೀಶೈಲ ಸಾರಂಗ ಮಠದ ಡಾ| ಸಾರಂಗಧರೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.

ನೂತನ ಶಾಸಕರಾದ ಖನಿಜಾ ಫಾತಿಮಾ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ಡಾ| ಉಮೇಶ ಜಾಧವ, ಡಾ| ಚಂದ್ರಕಾಂತ ಪಾಟೀಲ ಹುಮ್ನಾಬಾದ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಮಾತನಾಡಿ, ಪ್ರತಿವರ್ಷದಂತೆ ಜುಲೈ 23ರಂದು ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ವೈ. ಅಣ್ಣಿಗೇರಿ, ಪದಾಧಿಕಾರಿಗಳಾದ ವಿ.ಎಂ. ನಾರಾಯಣಸ್ವಾಮಿ, ಮಾಲತೇಶ ವೈ. ಅಣ್ಣಿಗೇರಿ, ಸಿ.ಎಸ್‌. ಷಡಾಕ್ಷರಿ, ಆಂಜನೇಯಪ್ಪ ಜೆ.ಕೆ., ಎ. ಪುಟ್ಟಸ್ವಾಮಿ, ಆರ್‌. ಶ್ರೀನಿವಾಸ, ಜಗದೀಶ ಪಾಟೀಲ, ಚಂದ್ರಕಾಂತ ಏರಿ, ಮಲ್ಲಣ್ಣಾ ಮಡಿವಾಳ, ಶರಣಬಸಪ್ಪ ಪಾಟೀಲ, ಮಲ್ಲಿನಾಥ ಮಂಗಲಗಿ, ವಿಜಯಕುಮಾರ ಹಂಚನಾಳ ಮುಂತಾದವರಿದ್ದರು.

ಸಿಎಂ ಬಳಿಗೆ ನಿಯೋಗ ಕಲಬುರಗಿ: ವಿಶೇಷ ಸ್ಥಾನಮಾನದ ಸಂವಿಧಾನದ 371(ಜೆ) ಕಲಂ ಅಡಿ 10 ಜನ ಡಿವೈಎಸ್‌ಪಿಗಳಿಗೆ ಬಡ್ತಿ ನೀಡುವಲ್ಲಿ ಅನ್ಯಾಯವಾಗಿದೆ ಎಂಬ ದೂರು ಸೇರಿದಂತೆ ಹಾಗೂ 371ನೇ (ಜೆ) ವಿಧಿ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಳಿಗೆ ನಿಯೋಗ ಹೋಗುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್‌.ಕೆ. ರಾಮು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕ ಪೊಲೀಸ್‌ ಅಧಿಕಾರಿಗಳಿಗೆ ಮುಂಬಡ್ತಿ ಸಿಗದೆ ಹೊರಗಿನವರಿಗೆ ಬಡ್ತಿ ಸಿಕ್ಕು ಅನ್ಯಾಯ ಆಗಿರುವುದು ಗಮನಕ್ಕೆ ಬಂದಿದೆ. ಅನ್ಯಾಯ ಸರಿಪಡಿಸುವಂತೆ ಕೋರಿ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರನ್ನು ಒಳಗೊಂಡು ರಾಜ್ಯ ಸಮಿತಿ ಪದಾಧಿಕಾರಿಗಳ ನಿಯೋಗವು ಸಿಎಂ ಅವರನ್ನು ಭೇಟಿ ಮಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next