ಬೆಂಗಳೂರು: ಅಧಿಕ ಇಳುವರಿ ಮತ್ತು ಗುಣಮಟ್ಟದ ಮಾವು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾವಿನ ಮರಗಳ ಪುನಃಶ್ಚೇತನಕ್ಕಾಗಿ ವೈಜ್ಞಾನಿಕ ತರಬೇತಿ ಮತ್ತು ಕಾರ್ಯಾಗಾರವನ್ನು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಡೆಸಲಿದೆ.
ಮಾವು ಬೆಳೆಗಾರರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ನಿಗಮ ಆಯೋಜಿಸುತ್ತಿದೆ. ರಾಜ್ಯದ ಸುಮಾರು ಶೇ.95ರಷ್ಟು ಮಳೆಯಾಶ್ರೀತ ಮಾವಿನ ತೋಟಗಳಿವೆ. ಪ್ರಸ್ತುತ ಹಳೆಯ ತೋಟಗಳು ಹೆಚ್ಚು ಇದ್ದು, ಪುನಃಶ್ವೇತನದ ಅವಶ್ಯಕತೆ ಇದೆ. ಈ ಕುರಿತು ಮಾವು ಬೆಳೆಗಾರರನ್ನು ಸಂಪರ್ಕಿಸಿ, ತರಬೇತಿ ಮತ್ತು ಕಾರ್ಯಗಾರ ನಡೆಸುತ್ತಿರುವುದಾಗಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿ, ಹಾವೇರಿ, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶ್ರೀನಿವಾಸಪುರ, ಮುಳಬಾಗಿಲು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಮಾವು ಬೆಳೆಗಾರರನ್ನು ಸಂಪರ್ಕಿಸಿ ಇಳುವರಿ ಹೆಚ್ಚಿಸಲು ಮಾಹಿತಿ ನೀಡಲಾಗುವುದು. ಹಳೆಯ ಮಾವಿನ ಮರಗಳಲ್ಲಿ ಅನಾವಶ್ಯಕವಾಗಿ ಬೆಳೆದ ರೆಂಬೆ-ಕೊಂಬೆಗಳನ್ನು ಕತ್ತರಿಸುವುದು. ಮಣ್ಣು ಮತ್ತು ನೀರಿನ ಸಂರಕ್ಷಣೆ ಹೆಚ್ಚಿಸುವುದು, ಕಾಂಡಕ್ಕೆ ರಕ್ಷಕ ಪೇಸ್ಟ್‌ನ್ನು ಬಳಸುವುದು ಹಾಗೂ ಕೀಟರೋಗ ನಿವಾರಣೆ ಮಾಡುವುದು ಪುನಶ್ಚೇತನ ಕಾರ್ಯಕ್ರಮದ ಪ್ರಮುಖ ವಿಷಯವಾಗಿದೆ ಎಂದು ಅವರು ಹೇಳಿದರು.
ಹೊಸ ತಳಿ ಕಸಿ: ಜೂನ್ ಅಂತ್ಯದ ವೇಳೆಗೆ ಈ ವರ್ಷದ ಮಾವು ಕೊಯ್ಲು ಮುಗಿದಿದ್ದು, ಜುಲೈನಿಂದಲೇ ಪುನಃಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. ಆಗಸ್ಟ್ ತಿಂಗಳ ಅಂತ್ಯದೊಳಗೆ ಪುನಃಶ್ಚೇತನ ಕಾರ್ಯ ಪೂರ್ಣಗೊಳಿಸಿದರೆ, ಅಕ್ಟೋಬರ್, ನವೆಂಬರ್ ವೇಳೆಗೆ ಮಾವು ಹೂವು ಬಿಡಲು ಪ್ರಾರಂಭಿಸುತ್ತದೆ. ಉಳಿಸಿಕೊಳ್ಳಲು ಸಾಧ್ಯವಿರುವ ಮರಗಳ ರೆಂಬೆಗಳನ್ನು ಸಂಪೂರ್ಣವಾಗಿ ಕತ್ತರಿಸಿ, ಅದೇ ತಳಿಯ ಮಾವು ಬೇಕಿದ್ದರೆ, ಅದನ್ನೇ ಚಿಗುರಲು ಬಿಡಬಹುದು. ಒಂದು ವೇಳ ಆ ತಳಿಯ ಮಾವು ಬೇಡವಾದರೆ ಕೊಂಬೆಗಳನ್ನು ಕತ್ತರಿಸಿ ಅದಕ್ಕೆ ಕಸಿ ಮಾಡಬಹುದು. ಮರಗಳು ಮುದಿಯಾಗಿದ್ದು, ಒಣಗಿದ್ದರೆ ಬುಡಸಮೇತ ತೆಗೆಸಿ, ಹೊಸ ಸಸಿಗಳನ್ನು ನೆಡಲಾಗುವುದು ಎಂದರು.
ನರೇಗಾ ನೆರವು: ಪ್ರಾರಂಭಿಕ ವರ್ಷದಲ್ಲಿ 10 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಆರ್‌ಕೆವಿವೈ ಮತ್ತು ನರೇಗಾದ ನೆರವಿನೊಂದಿಗೆ ಮಾವು ಪುನಃಶ್ಚೇತನ ಕಾರ್ಯ ನಡೆಯಲಿದೆ. ರೈತರು ಹಾಗೂ ಬೆಳೆ ಆಯ್ಕೆಯ ಕುರಿತು ಮಾರ್ಗಸೂಚಿ ತಯಾರಿಸಲಾಗುತ್ತಿದೆ. ಮಾವಿನ ಸಸಿ ನೆಟ್ಟು 15 ವರ್ಷ ಮೇಲ್ಪಟ್ಟಿರಬೇಕು. ಸರಿಯಾದ ಫಸಲು ಕೊಡದಿರಬೇಕು. ಅಂತಹ ಮಾವನ್ನು ಪುನಃಶ್ಚೇತನಗೊಳಿಸಲು ರೈತರಿಗೆ ಅಗತ್ಯ ಆರ್ಥಿಕ ನೆರವು ನೀಡಲಾಗುವುದು. ಈಗಾಗಲೇ ಬೆಳೆ ವ್ಯಾಪ್ತಿಯ ಪ್ರಮಾಣವನ್ನೂ ಗುರುತಿಸಲಾಗಿದೆ ಎಂದು ಗೋಪಾಲಕೃಷ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಿಗಮದ ಉಪಾಧ್ಯಕ್ಷ ರಾಜ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಇದ್ದರು.