Advertisement

ಠಾಣೆ ಹೊರಗಡೆಯೇ ಕಾರ್ಯ ನಿರ್ವಹಣೆ

11:30 AM Jun 27, 2020 | Suhan S |

ಹುಬ್ಬಳ್ಳಿ: ಇಲ್ಲಿನ ಬೆಂಡಿಗೇರಿ ಪೊಲೀಸ್‌ ಠಾಣೆಗೆ ನಿಯೋಜನೆಗೊಂಡಿದ್ದ ಇಬ್ಬರು ಮಹಿಳಾ ಗೃಹರಕ್ಷಕರಿಗೆ (ಹೋಮ್‌ ಗಾರ್ಡ್‌) ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಕಟ್ಟಡಕ್ಕೆ ಔಷಧಿ ಸಿಂಪರಣೆ ಹಿನ್ನೆಲೆಯಲ್ಲಿ, ಶುಕ್ರವಾರ ಕಟ್ಟಡದ ಹೊರಗಡೆ ಕಾರ್ಯ ನಿರ್ವಹಣೆ ಮಾಡುವಂತಾಯಿತು.

Advertisement

ಶುಕ್ರವಾರ ಠಾಣೆಗೆ ಸಾರ್ವಜನಿಕರು ಆಗಮಿಸುವುದನ್ನು ನಿರ್ಬಂಧಿಸಲಾಗಿತ್ತು. ಠಾಣೆಯ ಕೆಲಸ-ಕಾರ್ಯಗಳನ್ನು ಆವರಣಕ್ಕೆ ಸ್ಥಳಾಂತರಿಸಿ ಹೊರ ಠಾಣೆಯಾಗಿ ಮಾರ್ಪಡಿಸಲಾಗಿತ್ತು. ಸಿಬ್ಬಂದಿಯು ಠಾಣೆಯ ಹೊರಗಡೆ ಆವರಣದಲ್ಲೇ ಕುಳಿತುಕೊಂಡು ತಮ್ಮ ಕೆಲಸ ಮಾಡುತ್ತಿದ್ದಾರೆ. ಠಾಣೆಯ ಮಹಿಳಾ ಪಿಎಸ್‌ಐ, ಎಎಸ್‌ಐ ಸೇರಿದಂತೆ ಎಲ್ಲಾ ಎಂಟು ಮಹಿಳಾ ಸಿಬ್ಬಂದಿ ಹೋಮ್‌ ಕ್ವಾರಂಟೈನ್‌ದಲ್ಲಿದ್ದು, ಕೇವಲ ಪುರುಷ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರ ಠಾಣೆಯ ಎಲ್ಲಾ 51 ಸಿಬ್ಬಂದಿಯನ್ನು ಕೋವಿಡ್‌-19 ತಪಾಸಣೆಗೆ ಒಳಪಡಿಸಲಾಗಿದ್ದು, ವರದಿಗೆ ಕಾಯುತ್ತಿದ್ದಾರೆ.

ಬೆಂಡಿಗೇರಿ ಠಾಣೆಯ ಮಹಿಳಾ ಸಿಬ್ಬಂದಿ ಕಳೆದ ತಿಂಗಳು ದಾವಣಗೆರೆ ಮೂಲದ ವೃದ್ಧೆಯನ್ನು ಘಂಟಿಕೇರಿಯ ನಿರ್ಗತಿಕ ಕೇಂದ್ರಕ್ಕೆ ಕರೆದೊಯ್ದು ಆಶ್ರಯ ಒದಗಿಸಿದ್ದರು. ಈ ಸಂದರ್ಭದಲ್ಲಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಗೃಹರಕ್ಷಕಿಯರು ವೃದ್ಧೆಗೆ ಸಹಾಯ ಮಾಡಿದ್ದರು. ವೃದ್ಧೆಯನ್ನು ಕೋವಿಡ್‌-19 ತಪಾಸಣೆಗೆ ಒಳಪಡಿಸಿದ್ದಾಗ ಸೋಂಕು ದೃಢಪಟ್ಟಿತ್ತು. ಹೀಗಾಗಿ ಠಾಣೆಯ ಸಿಬ್ಬಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗೃಹರಕ್ಷಕಿಯರಲ್ಲೂ ಬುಧವಾರ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಪೂರ್ಣ ಠಾಣೆಯನ್ನು ಸ್ಯಾನಿಟೈಸರ್‌ ಮಾಡಲಾಯಿತು. ಹು-ಧಾ ಮಹಾನಗರ ಪಾಲಿಕೆಯ ಆರೋಗ್ಯ ಸಿಬ್ಬಂದಿ ಠಾಣೆಯ ಒಳಗಡೆ ಹಾಗೂ ಆವರಣವನ್ನು ಸಂಪೂರ್ಣವಾಗಿ ಹೈಡ್ರೋಪ್ಲೋರೈಡ್‌ ದ್ರಾವಣದಿಂದ ಸ್ವತ್ಛಗೊಳಿಸಿದರು. ಶನಿವಾರದಿಂದ ಮತ್ತೆ ಠಾಣೆ ಒಳಗಡೆಯಿಂದಲೇ ಕೆಲಸ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next