ಉಡುಪಿ: ಕೋವಿಡ್-19 ವೈರಸ್‌ಗೆ ಜಗತ್ತು ತಲ್ಲಣಗೊಂಡಿದೆ. ಸೋಂಕು ತಡೆಗೆ ಲಾಕ್‌ಡೌನ್ ವಿಧಿಸಲಾಗಿದೆ. ಲಾಕ್‌ಡೌನ್‌ನಿಂದ ಸಮಸ್ಯೆಗೆ ಒಳಗಾದವರ ನೆರವಿಗೆ ಸರಕಾರ ಮುಂದಾಗಿದೆ. ಎಲ್ಲವನ್ನು ಸರಕಾರಕ್ಕೆ ಮಾಡುವುದು ಕಷ್ಟ. ಹಸಿವಿನಿಂದ ಯಾರು ಬಳಲುತ್ತಿದ್ದಾರೋ ಅವರಿಗೆ ಊಟ ಮುಟ್ಟಿಸುವಲ್ಲಿ ಸಮಾಜದ ಒಗ್ಗೂಡುವಿಕೆ ಈ ಹಂತದಲ್ಲಿ ಅಗತ್ಯ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಲಾಕ್‌ಡೌನ್ ಸಮಸ್ಯೆಗೊಳಗಾದ ನಗರದೊಳಗಿನ ಕಾರ್ಮಿಕರಿಗೆ ಪಾರ್ಸೆಲ್ ಊಟ ವಿತರಿಸುವ 26ನೇ ದಿನದ ಕಾರ್ಯಕ್ರಮಕ್ಕೆ ಕಡಿಯಾಳಿ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಸರಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ವಿತರಿಸುತ್ತಿದೆ. ಬಡತನ ರೇಖೆಗಿಂತ ಕೆಳಗೆ ಯಾವ ದಾಖಲೆ ಹೊಂದಿರದ ಬಡ ಕಾರ್ಮಿಕರು ನಮ್ಮ ಸುತ್ತಮುತ್ತಲು ಇದ್ದಾರೆ. ಅವರಿಗೆ ಅನ್ನ ನೀಡುವುದು ಬಹುಮುಖ್ಯ ಕಾರ್ಯ. ಅಂತಹ ಕಾರ್ಯವನ್ನು ಶ್ರೀ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ರಘುಪತಿ ಭಟ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪಾಂಗಳ ವಸಂತ ಭಟ್, ವ್ಯವಸ್ಥಾಪಕ ಮಂಜುನಾಥ ಹೆಬ್ಟಾರ್, ಕೋಶಾಧಿಕಾರಿ ಸತೀಶ್ ಕುಲಾಲ್, 26ನೇ ದಿನದ ಊಟದ ದಾನಿ ಗಳಾದ ಎಚ್. ರೋಹಿದಾಸ ಶೆಣೈ ಬುಡ್ನಾರು ಮತ್ತು ಸಹೋದರರು, ಗೀತಾ ಸದಾಶಿವ ನಾಯಕ್, ವರುಣ್ ಕಾಮತ್ ಶಿರಿಬೀಡು, ಶ್ರೀ ಗಣೇಶೋತ್ಸವ ಸಮಿತಿ, ಆಸರೆ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.