ಬೆಂಗಳೂರು: ಕೆಲವರು ದೇಶಭಕ್ತಿ ಎಂದರೆ ರಾಷ್ಟ್ರಗೀತೆ ಹಾಡುವುದಷ್ಟೇ ಎಂದುಕೊಂಡಿದ್ದಾರೆ. ಆದರೆ ಅದಲ್ಲ. ದೈನಂದಿನ ಜೀವನದಲ್ಲಿ ಸಾಮಾಜದ ಒಳಿತಿಗಾಗಿ ಕೆಲಸ ಮಾಡುವುದು ದೇಶಭಕ್ತಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಸಮರ್ಥ ಭಾರತ ಸಂಸ್ಥೆ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಆರ್.ವಿ. ಟೀಚರ್ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಬಿ ಗುಡ್ ಡೂ ಗುಡ್’ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಕೆಲವು ವ್ಯಕ್ತಿಗಳಿದ್ದಾರೆ. ಅವರ ಹೆಸರು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಅಂಥವರ ಸಾಲಿನಲ್ಲಿ ವಿವೇಕಾನಂದರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಸ್ವಾಮಿ ವಿವೇಕಾನಂದರ ಜೀವನ, ವಿಚಾರ, ವ್ಯಕ್ತಿತ್ವ ಪ್ರತಿನಿತ್ಯ ಶಕ್ತಿ ಕೊಡುವ ಸಂಗತಿಗಳಾಗಿವೆ. ಅವುಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಸ್ವಾಮಿ ವಿವೇಕಾನಂದರು ಕಾರಣರಾಗಿದ್ದಾರೆ. ಮೈಸೂರಿನ ಮಹಾರಾಜರು ವಿವೇಕಾನಂದರಿಗೆ ಬೆಂಬಲವಾಗಿ ನಿಂತಿದ್ದರು ಎಂದು ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ವಿವೇಕಾನಂದರ ಹೆಸರಿನಲ್ಲಿಯೇ ವಿವೇಕ ಮತ್ತು ಆನಂದ ಇದೆ. ವಿವೇಕದಡಿ ನೀವು ಬದುಕಿದರೆ ನಿಮಗೂ ಆನಂದ ಸಿಗುತ್ತದೆ ಎಂಬುದನ್ನು ಜನತೆಗೆ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ಯಾವ ವ್ಯಕ್ತಿಯಲ್ಲಿ ಚಿಂತನೆ, ಕೃತಿ ಮತ್ತು ಉತ್ತಮ ಮಾತುಗಳ ಸಮ್ಮಿಶ್ರಣವಾಗಿರುತ್ತೋ ಅಂಥ ವ್ಯಕ್ತಿ ಮಹಾತ್ಮ ಎಂದು ಕರೆಸಿಕೊಳ್ಳುತ್ತಾನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾಗೋಣ ಎಂದು ತಿಳಿಸಿದರು.