ಪಡುಬಿದ್ರಿ: ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪುಟಾಣಿಗಳಿಗೆ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಟ್ಟಿರುವ ಸರಕಾರಿ ಶಾಲೆಯ ಸಮಗ್ರ ಅಭಿವೃದ್ಧಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ, ಉತ್ತಮ ಫಲಿತಾಂಶಗಳಿಗಾಗಿ ಎಲಿಮೆಂಟರಿ, ಪ್ರೌಢ ಹಾಗೂ ಪದವಿಪೂರ್ವ ವಿಭಾಗಗಳ ಎಲ್ಲ ಶಿಕ್ಷಕರು, ಪ್ರಾಧ್ಯಾಪಕರು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಮುಂದೆ ಸಮಗ್ರವಾಗಿ ಒಂದೇ ಅಭಿವೃದ್ಧಿ ಸಮಿತಿ ರಚಿಸಬೇಕು ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಅವರು ಜೂ. 19ರಂದು ಪಡುಬಿದ್ರಿಯ ಕೆಪಿಎಸ್‌ನಲ್ಲಿನ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸೇರ್ಪಡೆಯಲ್ಲಿನ ಕುಸಿತದ ವಿಚಾರದಲ್ಲಿ ಹತ್ತಿರದ ಬಾಲಕರ ಹಾಸ್ಟೆಲ್ನ ವಾರ್ಡನ್ ಬಸವರಾಜ್ ಅವರನ್ನು ಕರೆಸಿ ಶಾಸಕರು ಅವರಲ್ಲಿ ವಿಚಾರಿಸಿದರು.
ಸರಕಾರಿ ಕೆಪಿಎಸ್‌ನ ಅಭಿವೃದ್ದಿಗಾಗಿ ಈಗಾಗಲೇ 1ಕೋಟಿ ರೂ. ಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಸಹಭಾಗಿತ್ವವೂ ಅಗತ್ಯ ಎಂದು ಶಾಸಕ ಲಾಲಾಜಿ ಮೆಂಡನ್ ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಶಿಕ್ಷಕರಲ್ಲಿ ಪರಸ್ಪರ ಹೊಂದಾಣಿಕೆ ಅತ್ಯಗತ್ಯವೆಂದರು. ಸರಕಾರಿ ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಸರಿತಾ ಮಾತನಾಡಿದರು. ಕಾಲೇಜು ಖರ್ಚುವೆಚ್ಚದ ಲೆಕ್ಕಪತ್ರಗಳಿಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಪ್ರಾಥಮಿಕ, ಪ್ರೌಢ ಹಾಗೂ ಸರಕಾರಿ ಪ. ಪೂ. ಕಾಲೇಜಿನ ಅಧ್ಯಾಪಕರು, ಪ್ರಾಧ್ಯಾಪಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸರಕಾರಿ ಪ. ಪೂ. ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋದಾ ಸ್ವಾಗತಿಸಿದರು. ಪ್ರಾಧ್ಯಾಪಕಿ ಪ್ರಮೀಳಾ ವಂದಿಸಿದರು.