ರಾಯಚೂರು: ಕೃಷಿ ಚಟುವಟಿಕೆ ಮುಗಿಯುತ್ತಿದ್ದಂತೆ ದುಡಿಯಲು ಬೆಂಗಳೂರು ಸೇರಿ ವಿವಿಧೆಡೆ ಸೇರಿಕೊಂಡ ಉತ್ತರ ಕರ್ನಾಟಕ ಭಾಗದ ಜನ ಈಗ ಅಲ್ಲೇ ಬಂಧಿಯಾಗಿದ್ದಾರೆ. ಊರಿಗೆ ಬರಬೇಕು ಎಂದರೂ ವಾಹನಗಳು ಸಿಗದೆ ಪರದಾಡುವಂತಾಗಿದೆ.
ಇದೇ ಕಾರಣಕ್ಕೆ ಊರುಗಳಿಗೆ ಕರೆ ಮಾಡಿ ಯಾವುದಾದರೂ ವಾಹನ ವ್ಯವಸ್ಥೆ ಮಾಡಿಕೊಂಡು ಬರುವಂತೆ ತಿಳಿಸುತ್ತಿದ್ದಾರೆ. ಆದರೆ, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿರುವ ಪೊಲೀಸರು ಅನಗತ್ಯ ಸಂಚಾರಕ್ಕೆ ಅವಕಾಶ ನೀಡದಿರುವುದು ಸಂಕಷ್ಟಕ್ಕೀಡು ಮಾಡಿದೆ.
ಇಂಥದ್ದೇ ಸಮಸ್ಯೆಗೆ ಸಿಲುಕಿದ ತಾಲೂಕಿನ ಗಂಜಳ್ಳಿ ಗ್ರಾಮದ ಕೂಲಿ ಕಾರ್ಮಿಕರನ್ನು ಎಂಎಲ್‌ಸಿ ಎನ್.ಎಸ್.ಬೋಸರಾಜ್ ಸ್ವಗ್ರಾಮಕ್ಕೆ ಬರಲು ನೆರವು ನೀಡಿದ್ದಾರೆ. ಬೆಂಗಳೂರಿಣ ಕಾಮಾಕ್ಷಿಪಾಳ್ಯದಲ್ಲಿ ಸಿಲುಕಿದವರನ್ನು ವಾಹನದ ವ್ಯವಸ್ಥೆ ಮಾಡಿ ಊರಿಗೆ ತಲುಪಲು ನೆರವಾಗಿದ್ದಾರೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ನಮ್ಮವರಿಗೂ ವಾಹನ ವ್ಯವಸ್ಥೆ ಮಾಡಿ ಕರೆ ತನ್ನಿ ಎಂದು ಕೇಳುವವರು ಹೆಚ್ಚಾಗಿದ್ದಾರೆ.
ಬೈಕ್‌ನಲ್ಲೇ ಬಂದ್ರು ಗುಳೆ ಹೋದವರು: ರಾಜಧಾನಿಗೆ ಗುಳೆ ಹೋಗಿದ್ದ ಈ ಭಾಗದ ಶುಕ್ರವಾರ 8-10 ಜನ ಬೈಕ್‌ಗಳಲ್ಲೇ ಆಗಮಿಸಿದ್ದು ಕಂಡು ಬಂತು. ಯಾದಗಿರಿ ಜಿಲ್ಲೆಯ ಸೈದಾಪುರ ಮೂಲದ ಯುವಕರುಕಳೆದ ಏಳೆಂಟು ವರ್ಷದಿಂದ ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದರು. ಗಾರೆ ಕೆಲಸ, ಕಟ್ಟಡ ನಿರ್ಮಾಣ ಸೇರಿ ನಾನಾ ಕೆಲಸಗಳಲ್ಲಿ ತೊಡಗಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಒಂದೆಡೆ ಕೆಲಸ ಸಿಗದಾಗಿದ್ದರೆ ಮತ್ತೂಂದೆಡೆ ಕಾಯಿಲೆ ಭೀತಿ ಕಾಡುತ್ತಿದೆ.
ಅಲ್ಲದೇ ಊಟಕ್ಕೂ ಸಮಸ್ಯೆ ಎದುರಾದ ಕಾರಣ ಎಲ್ಲರೂ ತಮ್ಮೂರಿಗೆ ಆಗಮಿಸುತ್ತಿದ್ದಾರೆ. ಶುಕ್ರವಾರ ಬೆಂಗಳೂರು ಬಿಟ್ಟಿದ್ದು, ಶನಿವಾರ ಮಧ್ಯಾಹ್ನ ಸಮೀಪದ ಸಾಥಮೈಲ್ ಬಳಿ ಆಗಮಿಸಿದ್ದರು. ಅವರನ್ನು ತಡೆದು ತಪಾಸಣೆ ಮಾಡಿದ ಪೊಲೀಸರು. ನಿಮ್ಮ ನಿಮ್ಮಲ್ಲಿ ಅಂತ ಕಾಯ್ದುಕೊಳ್ಳಬೇಕು. ಊರಿಗೆ ಹೋದ ಬಳಿಕ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿ ಹೇಳಿ ಕಳುಹಿಸಿದರು.
-ಸಿದ್ದಯ್ಯಸ್ವಾಮಿ ಕುಕನೂರು